Monday, 16th September 2024

ಕರೋನಾ ವೈರಸ್‌ ಮೌಂಟ್ ಎವರೆಸ್ಟ್ ಏರಿತ್ತಾ ?

ವಿಶ್ವದ ಎತ್ತರದ ಶಿಖರಗಳಂದು ಮೌಂಟ್ ಎವರೆಸ್ಟ್. ಪ್ರತಿ ಪರ್ವತಾರೋಹಿಗೂ ಜೀವನದಲ್ಲಿ ಒಂದೇ ಒಂದು ಸಲ ಆದರೂ ಮೌಂಟ್ ಎವರೆ ಏರಬೇಕು ಅನ್ನೋದೇ ದೊಡ್ಡ ಕನಸಾಗಿರುತ್ತದೆ. ಆ ಕನಸು ಸಂಪನ್ನಗೊಳಿಸುವುದಕ್ಕಾಗಿ ಹಗಲಿರುಳೆನ್ನದೆ ಸತತ ಪ್ರಯತ್ನವನ್ನೂ ನಡೆಸುತ್ತಿರುತ್ತಾರೆ.

ಅಂತಹ ಪರ್ವತಾರೋಹಿಗಳ ಕನಸನ್ನು ಈಗ ಮಣ್ಣು ಪಾಲು ಮಾಡುತ್ತಿರುವುದು ಕರೋನಾ ವೈರಸ್..! ಹೌದು, ಕರೋನಾ ವೈರಸ್ ಮಹಾಮಾರಿಯಾಗಿದೆ. ಡೆಡ್ಲಿ ವೈರಸ್ ವಿಶ್ವದೆಡೆ ರಣಕೇಕೆ ಹಾಕಿ ಅಬ್ಬರಿಸುತ್ತಿದೆ. ಮೊದಲ ಅಲೆಗಿಂತಲೂ ಎರಡನೇ
ಅಲೆಯ ಅಬ್ಬರವೇ ಜೋರಾಗಿದ್ದು ಆತಂಕಕ್ಕೆ ಕಾರಣವಾಗಿದೆ. ವಿಶೇಷವೆಂದರೆ ವೈರಸ್ ಈಗ ಎವರೆ ಶಿಖರವನ್ನೂ ಏರಿದೆ. ಪರ್ವತಾರೋಹಿಗಳನ್ನು ತೀವ್ರ ಆತಂಕಕ್ಕೆ ಸಿಲುಕಿಸಿದೆ.

ಒಂದು ಕಡೆ ಕರೋನಾ ವೈರಸ್ ಪರ್ವತಾರೋಹಿಗಳ ದೇಹದೊಳಕ್ಕೆ ಸದ್ದಿಲ್ಲದೆ ನುಗ್ಗಿ ಆತಂಕ ಸೃಷ್ಟಿಸುತ್ತಿದ್ದರೆ, ಮತ್ತೊಂದು ಕಡೆ ನೇಪಾಳ ಪ್ರವಾಸೋದ್ಯಮ ಇಲಾಖೆ ನಮ್ಮಲ್ಲಿ ಕರೋನಾ ಪ್ರಕರಣವೇ ಇಲ್ಲ ಅಂತ ಹೇಳಿಕೆ ನೀಡುತ್ತಿದೆ. ಹಣಕ್ಕಾಗಿ ಸೋಂಕನ್ನೇ
ಮುಚ್ಚಿಟ್ಟಿತೇ ನೇಪಾಳ ಸರಕಾರ? ಅನ್ನುವ ಅನುಮಾನಗಳು ಈಗ ಕಾಡ ತೊಡಗಿದೆ.

*ಪರ್ವತಾರೋಹಿಗಳಿಗೆ ನೇಪಾಳ ವೆಲ್‌ಕಮ: ಕರೋನಾ ವೈರಸ್ ಕಾರಣಕ್ಕೆ ಕಳೆದ ಒಂದು ವರ್ಷ ಸಂಪೂರ್ಣವಾಗಿ ಪರ್ವತಾ ರೋಹಣವನ್ನು ನಿಷೇಧಿಸಲಾಗಿತ್ತು. ಈಗ ನಿಧಾನವಾಗಿ ನೇಪಾಳ ಪ್ರವಾಸೋದ್ಯಮ ಇಲಾಖೆ ಪರ್ವತಾರೋಹಿಗಳಿಗೆ ಎವರೆಸ್ಟ್ ಏರಲು ಮತ್ತೆ ಅವಕಾಶ ನೀಡುತ್ತಿದೆ. ಕರೋನಾ ಸೋಂಕಿನ ಅಪಾಯದ ನಡುವೆಯೂ ನೂರಾರು ಪರ್ವತಾರೋಹಿಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿ ಬೇಸ್ ಕ್ಯಾಂಪ್ ನಲ್ಲಿ ತರಬೇತಿ ಪಡೆದಿದ್ದಾರೆ.

*ಕ್ಷಿಪ್ರವಾಗಿ ನುಗ್ಗುತ್ತಿದೆ ವೈರಸ್: ನೇಪಾಳದಲ್ಲಿ ಸದ್ಯ ದಿನವೊಂದಕ್ಕೆ ಎಂಟು ಸಾವಿರಕ್ಕೂ ಅಧಿಕ ಕರೋನಾ ಪ್ರಕರಣಗಳು ಕಂಡು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಎವರೆ ಪರ್ವತಾರೋಹಿ ಗಳಿಗೆ ಅವಕಾಶ ಕಲ್ಪಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಬೇಸ್ ಕ್ಯಾಂಪ್‌ನಲ್ಲಿ ತಂಗಿರುವ ಪರ್ವತಾರೋಹಿಗಳಲ್ಲಿ ವೈರಸ್ ಕ್ಷಿಪ್ರವಾಗಿ ಹಬ್ಬುತ್ತಿದೆ, ಇದು ಎಲ್ಲರಲ್ಲೂ ಒಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.

*ಆತಂಕಕಾರಿ ಮಾಹಿತಿ: ಬೇಸ್ ಕ್ಯಾಂಪ್‌ನಲ್ಲಿರುವ ಹಿಮಾಲಯನ್ ರಕ್ಷಣಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಕಳೆದೆರಡು
ವಾರಗಳಲ್ಲಿ ಪರ್ವತಾರೋಹಿಗಳಲ್ಲಿ ಒಟ್ಟು 17 ಮಂದಿಗೆ ಸೋಂಕು ತಗುಲಿದೆ. ಅವರನ್ನೆಲ್ಲ ಕಠ್ಮಂಡುವಿನ ಆಸ್ಪತ್ರೆಗೆ
ದಾಖಲಿಸಲಾಗಿದೆ. ಇದು ಕೇವಲ ಒಂದು ಸ್ಯಾಂಪಲ್ ಅಷ್ಟೇ. ಆದರೆ ಪರ್ವತಾರೋಹಿಗಳು ಹೇಳುತ್ತಿರುವುದೇ ಬೇರೆ. ಅವರ
ಪ್ತಕಾರ ಬೇಸ್ ಕ್ಯಾಂಪ್‌ನಲ್ಲಿ ತೀವ್ರಗತಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಹೀಗಿದ್ದರೂ ನೇಪಾಳ ಪ್ರವಾಸೋದ್ಯಮ ಇಲಾಖೆ ವಾಸ್ತವವನ್ನು ಮುಚ್ಚಿಟ್ಟು ಪರ್ವತಾರೋಹಿಗಳಿಗೆ ಅವಕಾಶ ಮಾಡಿಕೊಟ್ಟಿದೆ ಎನ್ನುವ ಆರೋಪ ಕೇಳಿ ಬಂದಿದೆ.

*ಆರ್‌ಟಿಪಿಸಿಆರ್ ಪರೀಕ್ಷೆಯೇ ಇಲ್ಲ: ವಿದೇಶಿ ಪರ್ವತಾರೋಹಿಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಸಂಬಂಧಪಟ್ಟ
ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಮಾಡಲೇಬೇಕು. ಆದರೆ ಈ ನಿಯಮಕ್ಕೆ ಇಲ್ಲಿ ಕಿಂಚಿತ್ತೂ ಬೆಲೆ ಇಲ್ಲದಂತಾಗಿದೆ. ಯಾರು
ಹೇಗೆ ಬೇಕಾದರೂ ಬರಬಹುದು, ಹೋಗಬಹುದು ಎನ್ನುವಂತಾಗಿದೆ. ನಿಯಮ ಮೀರಿ ಸಿಬ್ಬಂದಿ ಪರ್ವತಾರೋಹಿಗಳೊಂದಿಗೆ ನಡೆದುಕೊಳ್ಳುತ್ತಿದ್ದಾರೆ, ಬೇಸ್ ಕ್ಯಾಂಪ್‌ನಲ್ಲಿ ಪರ್ವತಾರೋಹಿಗಳು ಹಾಗೂ ಸಿಬ್ಬಂದಿ ಸಾಮಾಜಿಕ ಅಂತರವನ್ನು ಮರೆತಿzರೆ. ಇದರಿಂದಲೇ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ ಎನ್ನಲಾಗಿದೆ.

*ಹಿಂದಕ್ಕೆ ಸರಿದ ಪರ್ವತಾರೋಹಿಗಳು: ಕರೋನಾ ಬೇಸ್ ಕ್ಯಾಂಪ್ ನಲ್ಲಿ ತಾಂಡವಾಡುತ್ತಿದ್ದಂತೆ ಒಂದಷ್ಟು ಪರ್ವತಾರೋಹಿ ಗಳು ಹಿಂದೆ ಸರಿದಿದ್ದಾರೆ. ಮುಂಬೈನ ಕೇವಲ್ ಕಾಕಾ ಹಾಗೂ ಪುಣೆಯ ಭಗವಾನ್ ಚಾವ್ಲೆ ತಮ್ಮ ಕನಸಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿಕೊಂಡು ಈಗ ಮನೆಗೆ ವಾಪಸ್ ಆಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಇವರಿಬ್ಬರೂ ತಮ್ಮೊಂದಿಗಿದ್ದ 70 ಪರ್ವತಾರೋಹಿಗಳ ಜತೆಗೂಡಿ ಅನ್ನಪೂರ್ಣ ಬೇಸ್ ಕ್ಯಾಂಪ್ ನಿಂದ ಶಿಖರ ಏರಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕರೋನಾ ಕಾರಣಕ್ಕೆ ಹಲವು ಸಲ ವಿಳಂಬವಾಗಿತ್ತು. ಇದೇ ವೇಳೆ ನೇಪಾಳದಲ್ಲಿ ಎಂಟು ಸಾವಿರಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿತ್ತು.

ಮಾತ್ರವಲ್ಲ ಪರ್ವತಾರೋಹಣದ ಅರ್ಧ ಭಾಗದಲ್ಲಿ ಶೆರ್ಪಾಸ್ (ಪರ್ವತಾರೋಹಿಗಳಿಗೆ ಗೈಡಿಂಗ್ ಮಾಡುವವರು) ಹಾಗೂ ಕೆಲವು ಮಂದಿ ಪರ್ವತಾರೋಹಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನೆಲ್ಲ ಏರ್ ಲಿಫ್ಟ್ ಮಾಡಿ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು.

*ಲಕ್ಷಾಂತರ ರು. ನಷ್ಟದ ಭಯ: ಪರ್ವತಾರೋಹಿಗಳು ಎವರೆಸ್ಟ್ ಏರುವುದಕ್ಕಾಗಿ ಕನಿಷ್ಟ ಎಂದರೂ ಒಂದು ವರ್ಷಕ್ಕೆ 55 ಲಕ್ಷ ರು. ಖರ್ಚು ಮಾಡುತ್ತಾರೆ. ಹೀಗಾಗಿ ಎವರೆ ಏರುವ ಅವಕಾಶವನ್ನು ಕಳೆದುಕೊಳ್ಳುವುದಕ್ಕೆ ಅವರು ಸಿದ್ಧರಿರುವುದಿಲ್ಲ. ಈ ಬಗ್ಗೆ ಮಾತನಾಡಿದ ಮುಂಬೈನ ಪರ್ವತಾರೋಹಿ ಹರ್ಷವರ್ಧನ ಜೋಶಿ, ’ತಮ್ಮ ವೈದ್ಯರ ತಂಡದೊಂದಿಗೆ ಹಾಗೂ ಪರೀಕ್ಷಾ ಕಿಟ್‌ಗಳೊಂದಿಗೆ ಬಂದ ತಂಡಗಳ ಸದಸ್ಯರು ಮಾತ್ರ ಕರೋನಾ ಪರೀಕ್ಷೆಗೆ ಒಳಗಾಗಲು ಸಾಧ್ಯ. ನಾವು ಮೇ 23ರಂದು ಎವರೆ ಏರಿದೆವು. ಈ ವೇಳೆ ಆತಂಕ ಹೆಚ್ಚಿತ್ತು.

ಕೋವಿಡ್ ಟೈಮ್ ಬಾಂಬ್ ಮೇಲೆ ಕುಳಿತಿದ್ದೇವೆ ಅನ್ನಿಸುತ್ತಿತ್ತು. ಅದೇನೇ ಇದ್ದರೂ ವರ್ಷಗಳ ಕಾಲ ತರಬೇತಿ ಹಾಗೂ ಒಟ್ಟು
55 ಲಕ್ಷ ರು. ವೆಚ್ಚ ಮಾಡಿದ್ದೇವೆ. ಹೀಗಾಗಿ ರಿಸ್ಕ್ ತೆಗೆದುಕೊಂಡೆವು’ ಎಂದು ತಿಳಿಸಿದರು.

*ನೋ ಟೆಸ್ಟಿಂಗ್ ದೂರು: ಅನ್ನಪೂರ್ಣ ಬೇಸ್ ಕ್ಯಾಂಪ್‌ನಿಂದ ಧೌಲಗಿರಿ ಬೇಸ್ ಕ್ಯಾಂಪ್‌ಗೆ ತೆರಳುವ ಮಾರ್ಗದಲ್ಲಿ ಯಾವುದೇ
ಕರೋನಾ ತಪಾಸಣೆಯನ್ನು ನಡೆಸುತ್ತಿಲ್ಲ ಎಂದು ಸ್ವತಃ ಪರ್ವತಾರೋಹಿಗಳೇ ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ
ಪರ್ವತಾರೋಹಿಗಳಾದ ಕಾಕಾ ಮತ್ತು ಚಾವ್ಲೆ, ನಾವು ಧೌಲಗಿರಿನಲ್ಲಿ ಕ್ಯಾಂಪ್‌ಗೆ ಹೋಗುವ ಹಾದಿಯಲ್ಲಿ ಟಾಟೋಪಾನಿಯ ಹಳ್ಳಿಯಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾಗ ಶೆರ್ಪಾಸ್ ತಂಡದಲ್ಲಿ ಸೋಂಕು ಕಾಣಿಸಿಕೊಂಡಿತು.

ಬಳಿಕ ನಮ್ಮ ಜತೆ ಇದ್ದ ಸ್ಪೇನ್‌ನ ಪರ್ವತಾರೋಹಿ ಕಾರ್ಲೋಸ್ ಸೊರಿಯಾ ಫಾಂಟನ್ ಕೆಲವು ಕ್ಷಿಪ್ರ ಪ್ರತಿಜನಕ ಕಿಟ್‌ಗಳನ್ನು ತಂದಿದ್ದರು. ಇದರ ಸಹಾಯದ ಮೂಲಕ ಅವರು ಧೌಲಗಿರಿ ಬೇಸ್ ಕ್ಯಾಂಪ್‌ನಲ್ಲಿದ್ದವರನ್ನು ಪರೀಕ್ಷಿಸಲು ಆರಂಭಿಸಿದರು. ಈ ವೇಳೆ 80 ಮಂದಿಯಲ್ಲಿ 50 ಮಂದಿಗೆ ಕರೋನಾ ಪಾಸಿಟಿವ್ ಬಂದಿತ್ತು. ಸರಿಯಾದ ರೀತಿಯಲ್ಲಿ ಬೇಸ್ ಕ್ಯಾಂಪ್‌ನಲ್ಲಿ ತಪಾಸಣೆ ನಡೆಸದೇ ಇರುವುದರಿಂದ ಇಂತಹ ಅವಾಂತರ ಸಂಭವಿಸುತ್ತಿದೆ.

ಜತೆಗೆ ಕ್ಯಾಂಪ್‌ನಲ್ಲಿ ಶೆರ್ಪಾಸ್ ಹಾಗೂ ಪರ್ವತಾರೋಹಿಗಳು ಮುಕ್ತವಾಗಿ ಬೆರೆಯುತ್ತಿದ್ದಾರೆ. ಅಡುಗೆ ಮನೆ ಆಹಾರ ಸಾಮಾಗ್ರಿ ಗಳನ್ನು ಮುಟ್ಟುತ್ತಿದ್ದಾರೆ. ಇದರಿಂದ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಕರೋನಾ ಹಬ್ಬುತ್ತಿದೆ ಎಂದು ತಿಳಿಸಿದರು.

*ರೆಡ್ ಝೋನ್ ಎವರೆಸ್ಟ್: ಎವರೆ ರೆಡ್ ಝೋನ್ ಆಗಿ ಬದಲಾಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ನೇಪಾಳ
ಪ್ರವಾಸೋದ್ಯಮ ಇಲಾಖೆ (ಡಿಒಟಿ) ಈ ಋತುವಿನಲ್ಲಿ ಒಟ್ಟು ದಾಖಲೆಯ ೪೦೮ ಪರವಾನಗಿಗಳನ್ನು ನೀಡಿದೆ. ನೆರೆಯ ಪರ್ವತ ಲೋಟ್ಸ ಆರೋಹಣಕ್ಕೆ 125 ಪರವಾನಗಿಯನ್ನು ನೀಡಲಾಗಿದೆ. ಒಟ್ಟಾರೆ ಎಲ್ಲರೂ ಒಂದೇ ಬೇಸ್ ಕ್ಯಾಂಪ್ ಬಳಸಬೇಕಿದೆ. ಇದರಿಂದ ಸೋಂಕು ಹರಡುವ ಅಪಾಯವೇ ಹೆಚ್ಚಾಗಿದೆ.

ಕೆಲವು ಪರ್ವತಾರೋಹಿಗಳು ತಮ್ಮ ತಂಡದೊಂದಿಗೆ ವೈದ್ಯರು ಹಾಗೂ ಕಿಟ್‌ಗಳನ್ನು ತೆಗೆದುಕೊಂಡು ಬಂದಿರುತ್ತಾರೆ. ಹೀಗಿ ದ್ದರೂ ಎಷ್ಟು ಮಂದಿ ಇದುವರೆಗೆ ಕೋವಿಡ್ ಪರೀಕ್ಷೆ ನಡೆಸಿದ್ದಾರೆ, ಮತ್ತು ಎಷ್ಟು ಮಂದಿಗೆ ಪಾಸಿಟಿವ್ ಬಂದಿದೆ ಎನ್ನುವ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಅಹಮದಾಬಾದ್‌ನ ವೈದ್ಯ ಮತ್ತು ಶಸ್ತ್ರಚಿಕಿತ್ಸಕ ಡಾ.ಹೇಮಂತ್ ಲ್ಯುವಾ ಹೇಳಿದ್ದಾರೆ.

ಸೋಂಕು ಮುಚ್ಚಿಟ್ಟಿತಾ ನೇಪಾಳ ಸರಕಾರ?
ವಿದೇಶಿ ಪರ್ವತಾರೋಹಿಗಳು ಸಹಿತ ಹಲವು ತಂಡಗಳು ಎವರೆ ಏರುವ ಸಾಹಸವನ್ನು ಕೈ ಬಿಟ್ಟು ಮನೆಗೆ ವಾಪಸ್ ಆಗಿವೆ. ಇದು ಸಹಜವಾಗಿಯೇ ನೇಪಾಳ ಸರಕಾರಕ್ಕೆ ದೊಡ್ಡ ಆರ್ಥಿಕ ಹಿನ್ನಡೆಯಾಗಿದೆ. ಕಳೆದ ವರ್ಷವೇ ನೇಪಾಳ ಪ್ರವಾಸೋದ್ಯಮ ಇಲಾಖೆಗೆ ಎವರೆ ಪರ್ವತಾರೋಹಿಗಳಿಲ್ಲದೆ ದೊಡ್ಡ ನಷ್ಟವಾಗಿತ್ತು. ಆದರೆ ಈ ಸಲ ಕರೋನಾ ಪಾಸಿಟಿವ್ ವರದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರೂ ನೇಪಾಳ ಸರಕಾರ ಮಾತ್ರ ಕರೋನಾ ಕೇಸ್ ಗಳೇ ಇಲ್ಲ ಅಂತ ಉಡಾಫೆಯ ಉತ್ತರ ನೀಡುತ್ತಿದೆ.

ಮೂಲಗಳ ಪ್ರಕಾರ ಪ್ರವಾಸೋದ್ಯಮ ಇಲಾಖೆಗೆ ಕೋಟ್ಯಂತರ ರು. ನಷ್ಟ ತಪ್ಪಿಸಲು ಇಂತಹ ಸುಳ್ಳನ್ನು ಹೇಳುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಒಟಿಯ ನಿರ್ದೇಶಕಿ ಮೀರಾ ಆಚಾರ್ಯ, ನಮ್ಮಲ್ಲಿ ಯಾವುದೇ ಭಯಾನಕ ಪರಿಸ್ಥಿತಿ ಇಲ್ಲ, ಬೇಸ್ ಕ್ಯಾಂಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ವೈದ್ಯರು ಪರಿಸ್ಥಿತಿ ತಿಳಿಯಾಗಿದೆ ಎಂದು ವರದಿ ನೀಡಿದ್ದಾರೆ. ಹೀಗಾಗಿ ಭಯಪಡುವ ಅಗತ್ಯ ಇಲ್ಲ, ಗಾಳಿ ಸುದ್ದಿಗಳು ಹರಡಿವೆಯಷ್ಟೇ ಎಂದು ತಿಳಿಸಿದ್ದಾರೆ.

*ಬೇಸ್ ಕ್ಯಾಂಪ್‌ನಲ್ಲಿ ಕರೋನಾ ವೈರಸ್ ರಣಕೇಕೆ
*ಸೋಂಕಿನ ಸುಳಿಯಲ್ಲೀಗ ಎವರೆಸ್ಟ್ ಪರ್ವತಾರೋಹಿಗಳು
*ಹಣಕ್ಕಾಗಿ ಸೋಂಕನ್ನೇ ಮುಚ್ಚಿಟ್ಟಿತೇ ನೇಪಾಳ ಸರಕಾರ?

Leave a Reply

Your email address will not be published. Required fields are marked *