ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್‌

ಸಿರಿಯಾ ರಾಜಧಾನಿ ಡೆಮಾಸ್ಕಸ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಪ್ರವೇಶದ್ವಾರವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿದೆ. ಈ ದಾಳಿಯಲ್ಲಿ ದೇಶದ ರಕ್ಷಣಾ ಸಚಿವಾಲಯದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸಿರಿಯಾದ ಭದ್ರತಾ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಿರಿಯಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ

Profile Ramesh B Jul 16, 2025 5:41 PM

ಡೆಮಾಸ್ಕಸ್‌: ಇಸ್ರೇಲ್‌ ಸೇನೆಯು (Israeli military) ಸಿರಿಯಾ ಮೇಲೆ ದಾಳಿ ನಡೆಸಿದೆ. ಸಿರಿಯಾ ರಾಜಧಾನಿ ಡೆಮಾಸ್ಕಸ್‌ (Damascus)ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಪ್ರವೇಶದ್ವಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಈ ದಾಳಿಯಲ್ಲಿ ದೇಶದ ರಕ್ಷಣಾ ಸಚಿವಾಲಯದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸಿರಿಯಾದ ಭದ್ರತಾ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. "ಸಿರಿಯಾದ ಡಮಾಸ್ಕಸ್ ಪ್ರದೇಶದಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯ ಪ್ರವೇಶದ್ವಾರದ ಮೇಲೆ ದಾಳಿ ನಡೆಸಿದ್ದೇವೆ" ಎಂದು ಇಸ್ರೇಲಿ ಸೇನೆ ಹೇಳಿಕೆಯಲ್ಲಿ ದೃಢಪಡಿಸಿದೆ. ಈ ಬಗ್ಗೆ ಇಸ್ರೇಲ್‌ ಡಿಫೆನ್ಸ್‌ ಫೋರ್ಸಸ್‌ (IDF) ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಇಸ್ರೇಲ್‌ ಸೇನೆ ತಿಳಿಸಿದೆ. "ದಕ್ಷಿಣ ಸಿರಿಯಾದಲ್ಲಿ ಡ್ರೂಝ್ (Druze) ನಾಗರಿಕರ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಆಡಳಿತದ ಕ್ರಮಗಳನ್ನು ಐಡಿಎಫ್ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ" ಎಂದು ಅದು ಹೇಳಿದೆ.



ದಕ್ಷಿಣ ಸಿರಿಯಾದ ಡ್ರೂಝ್ ಬಹುಸಂಖ್ಯಾತ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಪಡೆಗಳು ಮತ್ತು ಸ್ಥಳೀಯ ಡ್ರೂಝ್ ಬಣಗಳ ನಡುವಿನ ಕದನ ವಿರಾಮ ಮುರಿದುಬಿದ್ದಿರುವ ನಡುವೆಯೇ ಈ ವೈಮಾನಿಕ ದಾಳಿ ನಡೆದಿದೆ. ಡ್ರೂಝ್ ಸಮುದಾಯವನ್ನು ರಕ್ಷಿಸಲು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Israel-Iran Conflict: ಟ್ರಂಪ್‌ ಕದನ ವಿರಾಮ ವಿಫಲ; ಇರಾನ್‌ನಿಂದ ಮತ್ತೆ ದಾಳಿ; ಪ್ರತೀಕಾರ ಬೇಕೆಂದ ಇಸ್ರೇಲ್‌

ಡ್ರೂಝ್ ಎನ್ನುವುದು 10ನೇ ಶತಮಾನದಲ್ಲಿ ಶಿಯಾ ಇಸ್ಲಾಂನಿಂದ ಹೊರಹೊಮ್ಮಿದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ. ವಿಶ್ವಾದ್ಯಂತ ಅಂದಾಜು ಒಂದು ಮಿಲಿಯನ್ ಡ್ರೂಝ್‌ಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಜನರು ಸಿರಿಯಾದಲ್ಲಿ ವಾಸಿಸುತ್ತಿದ್ದಾರೆ. ಲೆಬನಾನ್ ಮತ್ತು ಇಸ್ರೇಲ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮುದಾಯದ ಜನರಿದ್ದಾರೆ.

ಈ ವಾರದ ಆರಂಭದಲ್ಲಿ ಸಿರಿಯಾ ಸರ್ಕಾರವು ಸ್ಥಳೀಯ ಡ್ರೂಝ್‌ ಹೋರಾಟಗಾರರ ವಶದಲ್ಲಿರುವ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಸ್ವೀಡಾದಲ್ಲಿ ಪಡೆಗಳನ್ನು ನಿಯೋಜಿಸಿತ್ತು. ಜು. 13ರಂದು ಡ್ರೂಝ್‌ ಗುಂಪುಗಳು ಮತ್ತು ಸುನ್ನಿ ಮುಸ್ಲಿಂ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವೆ ಭೀಕರ ಸಂಘರ್ಷ ನಡೆದು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸಿರಿಯನ್ ಪಡೆಗಳನ್ನು ಆ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಸರ್ಕಾರದ ಹೇಳಿದೆ.

ಸರ್ಕಾರಿ ಪಡೆಗಳು ಮತ್ತು ಡ್ರೂಝ್‌ ಸಶಸ್ತ್ರ ಗುಂಪುಗಳ ನಡುವಿನ ಕದನ ವಿರಾಮ ಒಪ್ಪಂದ ಮುರಿದ ನಂತರ ದಕ್ಷಿಣ ಸಿರಿಯಾದ ಸ್ವೀಡಾ ನಗರದಲ್ಲಿ ಘರ್ಷಣೆಗಳು ತೀವ್ರಗೊಂಡಿವೆ. ಇದೀಗ ಡ್ರೂಝ್‌ ಅಲ್ಪಸಂಖ್ಯಾತರನ್ನು ಬೆಂಬಲಿಸಿ ಇಸ್ರೇಲ್ ರಂಗಕ್ಕಿಳಿದಿದೆ.