ಕೇರಳ ನರ್ಸ್ ನಿಮಿಷ ಪ್ರಿಯಾಗೆ ಆಗಬೇಕಿದ್ದ ಗಲ್ಲುಶಿಕ್ಷೆ ಮುಂದೂಡಿಕೆ ಆಗಿದ್ದು ಹೇಗೆ? ಇಲ್ಲಿದೆ ಕಾರಣ
ಯೆಮೆನ್‌ನಲ್ಲಿ ಕೊಲೆ ಆರೋಪದಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಕೊನೆಯ ಕ್ಷಣದಲ್ಲಿ ಗಲ್ಲು ಶಿಕ್ಷೆ ತಡೆಹಿಡಿಯಲಾಗಿದೆ. ಜುಲೈ 16ರಂದು ಗಲ್ಲಿಗೇರಿಸಲು ನಿಗದಿಯಾಗಿದ್ದ ಶಿಕ್ಷೆಯನ್ನು ಕೊನೆಯ ಕ್ಷಣದಲ್ಲಿ ತಡೆಹಿಡಿಯಲಾಗಿದ್ದು, ಒಡಂಬಡಿಕೆಯಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ನಿಮಿಷಾ ಪ್ರಿಯಾ

ಸನಾ: ಯೆಮೆನ್‌ನಲ್ಲಿ (Yemen) ಕೊಲೆ ಆರೋಪದಡಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ (Kerala) ನರ್ಸ್ (Nurse) ನಿಮಿಷಾ ಪ್ರಿಯಾ (Nimisha Priya) ಅವರಿಗೆ ಕೊನೆಯ ಕ್ಷಣದಲ್ಲಿ ಗಲ್ಲು ಶಿಕ್ಷೆ ತಡೆಹಿಡಿಯಲಾಗಿದೆ. ಜುಲೈ 16ರಂದು ಗಲ್ಲಿಗೇರಿಸಲು ನಿಗದಿಯಾಗಿದ್ದ ಶಿಕ್ಷೆಯನ್ನು ಕೊನೆಯ ಕ್ಷಣದಲ್ಲಿ ತಡೆ ಹಿಡಿಯಲಾಗಿದ್ದು, ಒಡಂಬಡಿಕೆಯಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
‘ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್’ನ ಕೋರ್ ಸದಸ್ಯ ಮತ್ತು ವಕೀಲ ಸುಭಾಷ್ ಚಂದ್ರನ್ ಪ್ರಕಾರ, “ಕೊಲೆಯಾದ ವ್ಯಕ್ತಿಯ ಸಹೋದರ ಮೊದಲ ಬಾರಿಗೆ ಸಂಪರ್ಕಕ್ಕೆ ದೊರೆತಿದ್ದು, ರಾತ್ರಿಯಿಡೀ ಚರ್ಚೆ, ಮಾತುಕತೆ ನಡೆಸಿದ ಬಳಿಕ, ಗಲ್ಲು ಶಿಕ್ಷೆಯನ್ನು ಮುಂದೂಡಲಾಯಿತು. ಸದ್ಯ ಕುಟುಂಬವನ್ನು ಮನವೊಲಿಸಲು ಸಮಯ ಸಿಕ್ಕಿದೆ” ಎಂದು ಚಂದ್ರನ್ ಹೇಳಿದ್ದಾರೆ.
ನಿಮಿಷಾ 2008ರಲ್ಲಿ ಕೆಲಸಕ್ಕಾಗಿ ಯೆಮೆನ್‌ಗೆ ತೆರಳಿದ್ದರು. ಆಕೆಯ ಯೆಮೆನ್ ಬ್ಯುಸಿನೆಸ್ ಸಹಾಯಕ ತಲಾಲ್ ಅಬ್ದೊ ಮಹದಿ ದುರ್ವರ್ತನೆ ತೋರಿ ಆಕೆಯ ಪಾಸ್‌ಪೋರ್ಟ್ ಪಡೆದಿಟ್ಟುಕೊಂಡಿದ್ದ. ತನ್ನ ಪಾಸ್‌ಪೋರ್ಟ್ ವಾಪಸ್ ಪಡೆಯಲು 2017ರಲ್ಲಿ ಆತನಿಗೆ ಸೆಡೇಟಿವ್ ಔಷಧ ನೀಡಿದ್ದರು. ಆದರೆ ಅತಿಯಾದ ಔಷಧದಿಂದ ಆತ ಸಾವನ್ನಪ್ಪಿದ. ಆತಂಕದಿಂದ ಶವವನ್ನು ತುಂಡರಿಸಿ ಅಪರಾಧ ಮುಚ್ಚಿಡಲು ಯತ್ನಿಸಿದ್ದ ಆಕೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಯೆಮೆನ್‌ನ ಶರಿಯಾ ಕಾನೂನಿನಡಿ, ಸಂತ್ರಸ್ತರ ಕುಟುಂಬವು ‘ದಿಯಾ’ (ಬ್ಲಡ್ ಮನಿ) ಸ್ವೀಕರಿಸಿ ಕ್ಷಮಾದಾನ ನೀಡಿದರೆ ಶಿಕ್ಷೆಯನ್ನು ರದ್ದುಗೊಳಿಸಬಹುದು. ನಿಮಿಷಾ ಬೆಂಬಲಿಗರು 1 ಮಿಲಿಯನ್ ಡಾಲರ್‌ವರೆಗೆ ಪರಿಹಾರ ಪ್ರಸ್ತಾಪಿಸಿದ್ದಾರೆ. ಆದರೆ ಈವರೆಗೆ ಕುಟುಂಬವು ಒಪ್ಪಿಗೆ ನೀಡಿರಲಿಲ್ಲ.
“ರಾಜತಾಂತ್ರಿಕತೆಗೆ ಮಿತಿಗಳಿವೆ. ಆದರೆ ಕೇರಳದಿಂದ ಯೆಮೆನ್‌ಗೆ ನಂಬಿಕೆಯ ಮೂಲಕ ಸಂಪರ್ಕ ಸಾಧಿಸಲಾಯಿತು” ಎಂದು ಚಂದ್ರನ್ ಹೇಳಿದ್ದಾರೆ. ಕೇರಳದ ಮಾರ್ಕಜ್ ಮೂಲಕ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಸ್ಥಿಕೆಯಿಂದ ಯೆಮೆನ್‌ನ ರಾಜಕೀಯ ಮತ್ತು ಧಾರ್ಮಿಕ ನಾಯಕರೊಂದಿಗೆ ಸಂವಾದ ಸಾಧ್ಯವಾಯಿತು. ಇದು ಸಂತ್ರಸ್ತರ ಕುಟುಂಬದ ಸದಸ್ಯರನ್ನು ಚರ್ಚೆಗೆ ಕರೆತಂದಿತು.
“ಇನ್ನು ಕಾನೂನು ಮಾರ್ಗವಿಲ್ಲ. ಕ್ಷಮಾದಾನವೇ ಏಕೈಕ ದಾರಿ” ಎಂದು ಚಂದ್ರನ್ ತಿಳಿಸಿದ್ದಾರೆ. “ಯೆಮೆನ್ ನ್ಯಾಯವ್ಯವಸ್ಥೆಯು ಸಮಯ ನೀಡಿದ್ದಕ್ಕೆ ಕೃತಜ್ಞರಾಗಿದ್ದೇವೆ. ಈ ಒಡಂಬಡಿಕೆಯ ಅವಕಾಶವನ್ನು ಬಳಸಿಕೊಳ್ಳಲು ಸಹಾಯ ಮಾಡಿʼʼ ಎಂದು ಭಾರತ ಸರ್ಕಾರ, ಧಾರ್ಮಿಕ ನಾಯಕರು ಮತ್ತು ಜನರಿಗೆ ಮನವಿ ಮಾಡಿದ್ದಾರೆ.