Friday, 22nd November 2024

ಇಂಡೋನೇಷ್ಯಾ ರಾಜಧಾನಿಯಾಗಿ ನುಸಂತರಾ ಆಯ್ಕೆ

ಜಕಾರ್ತ: ಇಂಡೋನೇಷ್ಯಾ ಸರ್ಕಾರ ತನ್ನ ನೂತನ ರಾಜಧಾನಿಯಾಗಿ ನುಸಂತರಾವನ್ನು ಆಯ್ಕೆ ಮಾಡಿದೆ. ಹಾಲಿ ರಾಜಧಾನಿ ಜಕಾರ್ತ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಇಂಡೊನೇಷ್ಯಾ ಜನಪ್ರತಿನಿಧಿಗಳು ನುಸಂತರಾವನ್ನು ನೂತನ ರಾಜಧಾನಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಅನುಮೋದನೆ ನೀಡಿದ್ದಾರೆ. ಇಂಡೋನೇಷ್ಯಾ ಶಾಸಕರು ಜಕಾರ್ತದಿಂದ ಕಾಲಿಮಂಟನ್‌ಗೆ ಸ್ಥಳಾಂತರವನ್ನು ಅನುಮೋದಿಸಿದ್ದಾರೆ.

ಹವಾಮಾನ ಬದಲಾವಣೆಯ ಮಧ್ಯೆ ಜಕಾರ್ತಾ ಪ್ರವಾಹಕ್ಕೆ ಗುರಿಯಾಗಿ, ಸಮುದ್ರದ ನೀರಿನಲ್ಲಿ ಮುಳುಗಡೆಯಾಗುತ್ತಿದೆ. ಈ ನುಸಂತರಾ ಬೋರ್ನಿಯೊ ದ್ವೀಪದ ಪೂರ್ವದಲ್ಲಿರುವ ಕಾಡು-ಆವೃತ ಪ್ರದೇಶವಾಗಿದ್ದು. ನುಸಂತರಾ ಎಂದರೆ ಇಂಡೋನೇಷಿಯನ್ ಭಾಷೆಯಲ್ಲಿ “ದ್ವೀಪಸಮೂಹ” ಎಂದು ಹೇಳಲಾಗಿದೆ.

ಜಕಾರ್ತದ ದಟ್ಟಣೆಯಿಂದ ಕೂಡಿದ ಮತ್ತು ವೇಗವಾಗಿ ಮುಳುಗುತ್ತಿರುವ ರಾಜಕೀಯ ಕೇಂದ್ರದ ಸುಸ್ಥಿರತೆಯ ಬಗೆಗಿನ ಕಾಳಜಿಯು ಹೊಸ ರಾಜಧಾನಿಯ ಅಗತ್ಯವನ್ನು ಪ್ರೇರೇಪಿಸಿತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಥಳಾಂತರಕ್ಕೆ ಸಂಬಂಧಿಸಿದ ಮಸೂದೆಯನ್ನು ಅಧಿಕೃತವಾಗಿ ಅಂಗೀಕರಿಸಿದೆ.

ಸಚಿವ ಸುಹಾರ್ಸೊ ಮೊನೊಆರ್ಫಾ ಅವರು, ‘ರಾಜಧಾನಿ ನಗರವನ್ನು ಕಾಲಿಮಂಟನ್‌ಗೆ ಸ್ಥಳಾಂತರಿಸುವುದು ಹಲವಾರು ಪರಿಗಣನೆಗಳು, ಪ್ರಾದೇಶಿಕ ಅನುಕೂಲಗಳು ಮತ್ತು ಅಭಿವೃದ್ಧಿಯನ್ನು ಆಧರಿಸಿದೆ ಎಂದು ಹೇಳಿದರು.

ಇಂಡೋನೇಷ್ಯಾದ ಹಣಕಾಸು ಸಚಿವ ಶ್ರೀ ಮುಲ್ಯಾನಿ, ಹೊಸ ರಾಜಧಾನಿಯಲ್ಲಿ ಐದು ಹಂತಗಳ ಅಭಿವೃದ್ಧಿ ಇರುತ್ತದೆ. ಮೊದಲ ಹಂತವು 2022 ರಲ್ಲಿ ಪ್ರಾರಂಭ ವಾಗುವ ನಿರೀಕ್ಷೆಯಿದ್ದು, ಇದು 2024 ರವರೆಗೆ ನಡೆಯುತ್ತದೆ, ಅಭಿವೃದ್ಧಿ ಕಾಮಗಾರಿ 2045 ರವರೆಗೆ ಇರುತ್ತದೆ. ಯೋಜನೆಗೆ ಸುಮಾರು 466 ಟ್ರಿಲಿಯನ್ ರೂಪಾಯಿಗಳು (USD 32 ಬಿಲಿಯನ್) ವೆಚ್ಚವಾಗಬಹುದು ಎಂದು ಇಂಡೋನೇಷ್ಯಾ ವರದಿ ಮಾಡಿದೆ.