Monday, 16th September 2024

ನ್ಯೂಯಾರ್ಕ್’ನಲ್ಲಿ ಭಾರೀ ಮಳೆ: ತುರ್ತು ಪರಿಸ್ಥಿತಿ ಘೋಷಣೆ

ನ್ಯೂಯಾರ್ಕ್: ಇಡಾ ಚಂಡಮಾರುತದ ಪ್ರಭಾವದಿಂದಾಗಿ ನ್ಯೂಯಾರ್ಕ್ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಹೀಗಾಗಿ ನ್ಯೂಯಾರ್ಕ್ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಬುಧವಾರ ರಾತ್ರಿ ನಗರದಾದ್ಯಂತ ಭಾರೀ ಪ್ರಮಾಣದ ಮಳೆ ಸುರಿದಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ನದಿ ಯಂತಾಗಿದ್ದು, ನ್ಯೂಯಾರ್ಕ್ ನಗರ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಬಿಲ್ ಡಿ ಬ್ಲಿಸಿಯೊ, ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ‘ಇದು ನ್ಯೂಯಾರ್ಕ್‌ನಲ್ಲಿ ಐತಿಹಾಸಿಕ ಹವಾಮಾನ ದುರಂತ’ ಎಂದು ಹೇಳಿದ್ದಾರೆ.

ಪ್ರವಾಹ ಕಾರಣವಾಗಿ ಸಬ್ ವೇ ರೈಲು ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಣೆ ಮಾಡ ಲಾಗಿದೆ. ಭಾರೀ ಹವಾಮಾನ ವೈಪರೀತ್ಯ ದಿಂದಾಗಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ರಸ್ತೆಗಳಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಇಡಾ ಚಂಡಮಾರುತ ಈಶಾನ್ಯ ಅಮೆರಿಕಕ್ಕೆ ಅಪ್ಪಳಿಸಿದ್ದು, ಇದ್ದಕ್ಕಿದ್ದಂತೆ ಭಾರೀ ಮಳೆ ಉಂಟಾಗಿದೆ. ಲೂಸಿಯಾನಾದಲ್ಲಿ ಚಂಡಮಾರುತ ಪ್ರಭಾವ ಜೋರಾಗಿದ್ದು, ಭಾರೀ ಹಾನಿಯುಂಟಾಗಿರುವುದಾಗಿ ತಿಳಿದುಬಂದಿದೆ.

‘ಎಲ್ಲರೂ ಸೂಕ್ತ ಆಶ್ರಯ ಪಡೆಯಿರಿ. ಬಿರುಗಾಳಿ ಅಪ್ಪಳಿಸಿದ್ದು, ವಸ್ತುಗಳು ಗಾಳಿಯಲ್ಲಿ ಹಾರಾಡುತ್ತಿವೆ. ಅಪಾಯಕಾರಿ ಸನ್ನಿವೇಶ ಎದುರಾಗಿದ್ದು, ಸೂಕ್ತ ಆಶ್ರಯ ಪಡೆದುಕೊಳ್ಳಿ. ಹೊರಗೆ ಬರಬೇಡಿ. ಕಿಟಕಿಗಳ ಸಮೀಪ ನಿಲ್ಲದಿರಿ’ ಎಂದು ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

Leave a Reply

Your email address will not be published. Required fields are marked *