Monday, 23rd December 2024

Sriram Krishnan: ಶ್ವೇತ ಭವನದ ಎಐ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ ಕೃಷ್ಣನ್ ನೇಮಕ

Sriram Krishnan 

ವಾಷಿಂಗ್ಟನ್‌: ಅಮೆರಿಕದಲ್ಲಿ ಟ್ರಂಪ್‌ (Donald Trump) ಆಡಳಿತ ಶುರುವಾಗುತ್ತಿದ್ದಂತೆ ಟ್ರಂಪ್‌ ಸಂಪುಟಕ್ಕೆ ಭಾರತೀಯರು ಸೇರ್ಪಡೆಗೊಳ್ಳುತ್ತಲೇ ಇದ್ದಾರೆ. ಇದೀಗ ಭಾರತೀಯ ಮೂಲದ ಅಮೆರಿಕನ್ ವಾಣಿಜ್ಯೋದ್ಯಮಿ, ಸಾಹಸೋದ್ಯಮ ಬಂಡವಾಳಶಾಹಿ ಮತ್ತು ಲೇಖಕ ಶ್ರೀರಾಮ ಕೃಷ್ಣನ್ (Sriram Krishnan) ಅವರನ್ನು ಕೃತಕ ಬುದ್ಧಿಮತ್ತೆಯ ಹಿರಿಯ ಶ್ವೇತಭವನದ (White House) ನೀತಿ ಸಲಹೆಗಾರರಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನೇಮಿಸಿದ್ದಾರೆ.

ಈ ಬಗ್ಗೆ ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಿರುವ ಡೊನಾಲ್ಡ್‌ ಟ್ರಂಪ್‌ ಶ್ರೀರಾಮ ಕೃಷ್ಣನ್‌ ಅವರು ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ಕಚೇರಿಯಲ್ಲಿ ಕೃತಕ ಬುದ್ಧಿ ಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನೇಮಕಾತಿಗೆ ಪ್ರತಿಕ್ರಿಯಿಸಿದ ಕೃಷ್ಣನ್, “ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಡೇವಿಡ್ ಸ್ಯಾಕ್ಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಅವಕಾಶ ಒದಗಿಸಿದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಶ್ರೀರಾಮ ಕೃಷ್ಣನ್ ಯಾರು?

ರಾಮ ಕೃಷ್ಣನ್ ಅವರು ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ನ್ಯಾಪ್‌ನಲ್ಲಿ ಉತ್ಪನ್ನ ತಂಡಗಳನ್ನು ಮುನ್ನಡೆಸಿದ್ದಾರೆ. ಅವರು ವೈಟ್ ಹೌಸ್ AI ಮತ್ತು ಕ್ರಿಪ್ಟೋ ಝಾರ್ ಆಗಿರುವ ಡೇವಿಡ್ ಒ ಸ್ಯಾಕ್ಸ್ ಜೊತೆಗೆ ಕೆಲಸ ಮಾಡುತ್ತಾರೆ. ಕೃಷ್ಣನ್ ಅವರ ನೇಮಕವನ್ನು ಭಾರತೀಯ ಅಮೆರಿಕನ್ ಸಮುದಾಯವೂ ಸ್ವಾಗತಿಸಿದೆ.

“ನಾವು ಶ್ರೀರಾಮ ಕೃಷ್ಣನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಮತ್ತು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯಲ್ಲಿ ಹಿರಿಯ ನೀತಿ ಸಲಹೆಗಾರರಾಗಿ ನೇಮಿಸಿರುವುದಕ್ಕೆ ಸಂತೋಷಪಡುತ್ತೇವೆ” ಎಂದು ಇಂಡಿಯಾಸ್ಪೋರಾದ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಜೋಶಿಪುರ ಹೇಳಿದ್ದಾರೆ.

ಮತ್ತೊಬ್ಬ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರಿಗೆ ಟ್ರಂಪ್‌ ಸರ್ಕಾರದಲ್ಲಿ ಸರಕಾರದ ದಕ್ಷತಾ ಇಲಾಖೆಯ ನೇತೃತ್ವ ನೀಡಲಾಗಿದೆ. ಎಲಾನ್‌ ಮಸ್ಕ್‌ ಹಾಗೂ ರಾಮಸ್ವಾಮಿ ಅವರಿಗೆ ಖರ್ಚು ವೆಚ್ಚವನ್ನ ಕಡಿತಗೊಳಿಸಲು ಟಾಸ್ಕ್‌ ನೀಡಲಾಗಿದೆ. ಇನ್ನು ಅಮೆರಿಕದ ಗುಪ್ತಚರ ಇಲಾಖೆಯ ನಿರ್ದೇಶಕರನ್ನಾಗಿ ಟ್ರಂಪ್ ಮತ್ತೊಬ್ಬ ಭಾರತದ ಮೂಲದ ತುಳಸಿ ಗಬಾರ್ಡ್​ರನ್ನು ನೇಮಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Donald Trump: ಯುದ್ಧ ನಿಲ್ಲಿಸುವುದೇ ನಮ್ಮ ಗುರಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ