ವಾಷಿಂಗ್ಟನ್: ಲಾಸ್ ವೇಗಾಸ್‌ನಲ್ಲಿ (Las Vegas) ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್ ಟ್ರಕ್ ಒಂದು ಸ್ಫೋಟಗೊಂಡ (Tesla Cybertruck Explode) ಘಟನೆ ವರದಿಯಾಗಿದೆ. ಇಲ್ಲಿರುವ ಟ್ರಂಪ್ ಇಂಟರ್ನ್ಯಾಷನಲ್ ಹೊಟೇಲ್ ಮುಂಭಾಗ ಈ ಟ್ರಕ್ ಡಿಕ್ಕಿ ಹೊಡೆಯುತ್ತಿರುವ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳಾಗಿರುವ ಕುರಿತು ಇದುವರೆಗೆ ವರದಿಯಾಗಿಲ್ಲ.
ಟೆಸ್ಲಾ ಸೈಬರ್ ಟ್ರಕ್ ಸ್ಫೋಟಕ್ಕೂ ಮೊದಲು ಟ್ರಂಪ್ ಅವರ ಇಂಟರ್ನ್ಯಾಷನಲ್ ಹೋಟೆಲ್ ಗೇಟ್ ಬಳಿ ಬಂದಿದೆ. ಹೋಟೆಲ್ ಗೇಟ್ ಮುಂದೆಯೇ ಸೈಬರ್ ಟ್ರಕ್ ನಿಲ್ಲಿಸಲಾಗಿತ್ತು. ಈ ಟ್ರಕ್ಗೆ ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಹೊಟೇಲ್ ಒಳಭಾಗದಿಂದ ರೆಕಾರ್ಡ್ ಆಗಿರುವ ವಿಡಿಯೋದಲ್ಲಿ ವಾಹನಕ್ಕೆ ಬೆಂಕಿ ಹತ್ತಿಕೊಂಡಿರುವ ದೃಶ್ಯಗಳು ರೆಕಾರ್ಡ್ ಆಗಿದ್ದು ಅದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಸ್ಫೋಟವು ಭಯೋತ್ಪಾದಕ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ತಿಳಿಸಿದೆ. ನ್ಯೂ ಓರ್ಲಿಯನ್ಸ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಜನಸಂದಣಿಯ ಮೇಲೆ ವ್ಯಕ್ತಿಯೊಬ್ಬ ಟ್ರಕ್ ಅನ್ನು ಚಲಾಯಿಸಿ, ಗುಂಡು ಹಾರಿಸಿ 15 ಜನರನ್ನು ಕೊಂದ ಕೆಲವೇ ಗಂಟೆಗಳ ನಂತರ ಈ ಘಟನೆ ಸಂಭವಿಸಿದೆ.
ಈ ಸುದ್ದಿಯನ್ನೂ ಓದಿ: America Shootout: ಅಮೆರಿಕದಲ್ಲಿ ಮತ್ತೊಂದು ಡೆಡ್ಲಿ ಅಟ್ಯಾಕ್! ನ್ಯೂಯಾರ್ಕ್‌ನ ಕ್ಲಬ್‌ನಲ್ಲಿ ಗುಂಡಿನ ಮಳೆ- ಶಾಕಿಂಗ್ ವಿಡಿಯೊ ಇದೆ
ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಅವರು ಸೈಬರ್‌ಟ್ರಕ್ ಸ್ಫೋಟ ಮತ್ತು ನ್ಯೂ ಓರ್ಲಿಯನ್ಸ್ (New Orleans) ದಾಳಿಯನ್ನು ಭಯೋತ್ಪಾದನಾ ಕೃತ್ಯ ಎಂದು ಆರೋಪಿಸಿದ್ದು, ಎರಡೂ ವಾಹನಗಳನ್ನು ಒಂದೇ ಕಾರು ಬಾಡಿಗೆ ಸೈಟ್‌ನಿಂದ ಬಾಡಿಗೆಗೆ ಪಡೆಯಲಾಗಿದೆ. ಇದು ಭಯೋತ್ಪಾದನೆಯ ಕೃತ್ಯವಾಗಿರಬಹುದು ಎಂದು ತೋರುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸ್ಫೋಟಗೊಂಡ ಸೈಬರ್ ಟ್ರಕ್ ಬುಧವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 8.40 ಕ್ಕೆ ಡೊನಾಲ್ಡ್ ಟ್ರಂಪ್ ಅವರ ಲಾಸ್ ವೇಗಾಸ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಶನಲ್ ಹೋಟೆಲ್‌ನ ಹೊರಗೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದೆ. ಹೋಟೆಲ್ ಒಳಗೆ ಮತ್ತು ಹೊರಗೆ ಪ್ರತ್ಯಕ್ಷದರ್ಶಿಗಳು ಸ್ಫೋಟದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಬೆಂಕಿಯಿಂದ ಜ್ವಾಲೆ ಆವರಿಸಿಕೊಂಡಿರುವುದನ್ನು ತೋರಿಸಿದೆ.