Wednesday, 6th November 2024

Donald Trump: ರಿಯಲ್‌ ಎಸ್ಟೇಟ್‌ ಉದ್ಯಮದಿಂದ ನಟನೆವರೆಗೆ.. ಇಲ್ಲಿವೆ ಟ್ರಂಪ್‌ ಕುರಿತ ಇಂಟ್ರೆಸ್ಟಿಂಗ್‌ ಸಂಗತಿ

Donald Trump

ವಾಷಿಂಗ್ಟನ್: ಇಡೀ ಜಗತ್ತೇ ಕಾತುರದಿಂದ ನಿರೀಕ್ಷಿಸು‌ತ್ತಿದ್ದ ಅಮೆರಿಕ(America) ಅಧ್ಯಕ್ಷೀಯ ಚುನಾವಣೆ(President Election) ಫಲಿತಾಂಶ(Result) ಹೊರಬಿದ್ದಿದ್ದು, ಅಮೆರಿಕದ 47ನೇ ಅಧ್ಯಕ್ಷರಾಗಿ(President) ಡೊನಾಲ್ಡ್ ಜಾನ್ ಟ್ರಂಪ್(Donald Trump) ಆಯ್ಕೆಯಾಗಿದ್ದಾರೆ. ಆ ಮೂಲಕ ವಿಶ್ವದ ದೊಡ್ಡಣ್ಣನ ಆಡಳಿತ ಯಾರ ಕೈಯಲ್ಲಿರಲಿದೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದ್ದು, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಬರೋಬ್ಬರಿ 270ಕ್ಕೂ ಮತಗಳು ಪಡೆಯುವ ಮೂಲಕ ಗೆದ್ದು ಬೀಗಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಬಿರುಸಿನಿಂದ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು, ಆರಂಭಿಕ ಹಂತದಿಂದಲೇ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್​ ಅವರು ಮುನ್ನಡೆ ಪಡೆದುಕೊಂಡು 2ನೇ ಬಾರಿಗೆ ಟ್ರಂಪ್ ಅಧಿಕಾರಕ್ಕೆ ಬಂದಿದ್ದಾರೆ. ಇನ್ನು ಮುಂದಿನ 4 ವರ್ಷಗಳ ಕಾಲ ಅಮೆರಿಕಾ ಅಧ್ಯಕ್ಷರಾಗಲಿದ್ದಾರೆ. ಅಮೆರಿಕಾದ ಪ್ರತಿಷ್ಠಿತ ಶ್ವೇತಭವನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ನಡೆಸಲ್ಲಿದ್ದಾರೆ.

ಡೊನಾಲ್ಡ್ ಟ್ರಂಪ್ ರಾಜಕೀಯದಲ್ಲಿದ್ದ ಬಲಿಷ್ಠ ನಾಯಕ ಅನ್ನೋದು ಹಲವರಿಗೆ ಗೊತ್ತಿರುವ ವಿಷಯ. ಇದರ ಹೊರತಾಗಿ ಡೊನಾಲ್ಡ್ ಟ್ರಂಪ್ ನ ಬಗ್ಗೆ ಹೆಚ್ಚಿನವರಿಗೆ ತಿಳಿಯದ ಕೆಲ ಕೂತುಹಲಕಾರಿ ವಿಷಯ ಇಲ್ಲಿದೆ.
ಹುಟ್ಟು: ಜೂನ್ 14, 1946

ಜನ್ಮ ಸ್ಥಳ: ನ್ಯೂಯಾರ್ಕ್

ಜನ್ಮ ನಾಮ: ಡೊನಾಲ್ಡ್ ಜಾನ್ ಟ್ರಂಪ್

ಪೋಷಕರು: ಫ್ರೆಡ್ ಟ್ರಂಪ್ ಹಾಗೂ ಮೇರಿ ಟ್ರಂಪ್ ದಂಪತಿಯ ಪುತ್ರ. ಟ್ರಂಪ್​ ತಂದೆ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರು.

ಪತ್ನಿಯರು:

ಟ್ರಂಪ್​ ಈವರೆಗೂ ಮೂರು ಬಾರಿ ಮದುವೆಯಾಗಿದ್ದಾರೆ. 1977 ಇವಾನಾ ಟ್ರಂಪ್ ಅವರೊಂದಿಗೆ ದಾಂಪತ್ಯ ಜೀವನ ನಡೆಸಿ 1990ರ ವೇಳೆಗೆ ವಿಚ್ಛೇದನ ನೀಡಿದರು. 1993-ಜೂನ್ ನಲ್ಲಿ ಮಾರ್ಲಾ ಟ್ರಂಪ್ ರನ್ನು ಮದುವೆಯಾಗಿ 1999ರಲ್ಲಿ ಬೇರೆಯಾದರು. ಜನವರಿ 22, 2005 ರಂದು ಮೆಲಾನಿಯಾ ಟ್ರಂಪ್ ಅವರನ್ನು ವರಿಸಿದ್ದರು.

ಟ್ರಂಪ್​ಗೆ ಒಟ್ಟು ಐವರು ಮಕ್ಕಳು:

ಟ್ರಂಪ್ ಅವರಿಗೆ ಐವರು ಮಕ್ಕಳಿದ್ದು, ಮೆಲಾನಿಯಾ ಟ್ರಂಪ್ ಅವರೊಂದಿಗೆ ಬ್ಯಾರನ್ ಎಂಬ ಮಗ, ಮಾರ್ಲಾ ಮ್ಯಾಪಲ್ಸ್ ಅವರೊಂದಿಗೆ ಟಿಫಾನಿ ಎಂಬ ಮಗಳು ಹಾಗೂ ಇವಾನಾ ಟ್ರಂಪ್ ಅವರೊಂದಿಗೆ ಎರಿಕ್, ಇವಾಂಕಾ, ಡೊನಾಲ್ಡ್ ಜೂನಿಯರ್ ಎಂಬ ಮೂರು ಮಕ್ಕಳಿದ್ದಾರೆ.

ಅಮೆರಿಕ ಅಧ್ಯಕ್ಷರ ವಿದ್ಯಾಭ್ಯಾಸ:

ಅದ್ಯಕ್ಷರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಫೋರ್ಡ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಅನಂತರ ವಾರ್ಟನ್ ಸ್ಕೂಲ್ ಆಫ್ ಫಿನಾನ್ಸ್ ನಲ್ಲಿ ಹಣಕಾಸು ವ್ಯವಹಾರ (ಫಿನಾನ್ಸ್ ಮ್ಯಾನೇಜ್ ಮೆಂಟ್) ಓದಿದ ಅವರು, 1968ರಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎಸ್ ಮುಗಿಸಿದರು.

ಮಿಲಿಟರಿ ಶಾಲೆಯಲ್ಲಿ ಶಿಕ್ಷಣ:

ಎಳವೆಯಲ್ಲಿ ಟ್ರಂಪ್ ಬಹಳ ತುಂಟತನದ ಸ್ವಭಾವದಾವರಾಗಿದ್ದು, ಅವರಲ್ಲಿದ್ದ ಅಶಿಸ್ತು ಹಾಗೂ ಅನುಚಿತ ವರ್ತನೆಯ ಕಾರಣಕ್ಕೆ ಕೇವಲ 13 ವರ್ಷದ ಟ್ರಂಪ್ ಅವರನ್ನು ಅವರ ತಂದೆ ನ್ಯೂಯಾರ್ಕ್ ಮಿಲಿಟರಿ ಅಕಾಡೆಮಿಗೆ ಕಳುಹಿಸಿದ್ದರು.

ವೃತ್ತಿಯ ಹಾದಿ:

ಟ್ರಂಪ್ ಮೊದಲಿಗೆ ರಿಯಲ್ ಎಸ್ಟೇಟ್ ಡೆವಲಪರ್‌ ಆಗಿ ತನ್ನ ತಂದೆಯ ದಾರಿಯಲ್ಲಿ ನಡೆದರು. ನಂತರ ರಿಯಾಲಿಟಿ ಟೆಲಿವಿಷನ್ ತಾರೆಯಾಗಿ ಮಿಂಚಿದರು. ಹೊರ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಂಡು ಏಳಿಗೆ ಕಾಣುತ್ತಿದ್ದಂತೆ ಅವರು ತಮ್ಮ ಹೆಸರನ್ನು ಬ್ರಾಂಡ್ ಆಗಿ ಪರಿವರ್ತಿಸಿದರು. ಅನಂತರ ಪರವಾನಗಿ ಪಡೆದು ಉತ್ಪನ್ನಗಳಲ್ಲಿ ಟ್ರಂಪ್ ಹೆಸರು ರಾರಾಜಿಸಿತು. ಅವುಗಳಲ್ಲಿ ಬೋರ್ಡ್ ಆಟಗಳು, ಸ್ಟೀಕ್ಸ್, ಕಲೋನ್, ವೋಡ್ಕಾ, ಪೀಠೋಪಕರಣಗಳು ಮತ್ತು ಪುರುಷರ ಉಡುಪುಗಳು ಸೇರಿದ್ದು, 1976 ರಿಂದ, ಡೊನಾಲ್ಡ್ ಟ್ರಂಪ್ ಅವರು ಟ್ರಂಪ್ ಸಂಘಟನೆಯ ಅಡಿಯಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ಇತರ ಉದ್ಯಮಗಳ ಮೂಲಕ ತಮ್ಮ ಪಿತ್ರಾರ್ಜಿತ ಸಂಪತ್ತನ್ನು ಬೆಳೆಸಿದ್ದಾರೆ. ಟ್ರಂಪ್ ಅವರ ಸಂಪತ್ತಿನ ಹೆಚ್ಚಿನ ಭಾಗವು ಸಾಮಾಜಿಕ ಮಾಧ್ಯಮ ಕಂಪನಿಯಾದ ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್‌ನಲ್ಲಿನ ಅವರ ಷೇರುಗಳಿಂದ ಬಂದಿದೆ.

ನಟನೆಗೂ ಸೈ ಎಂದಿದ್ದ ದೊಡ್ಡಣ್ಣ ಅಧ್ಯಕ್ಷ:

ಕ್ಯಾಮೆರಾ ಮುಂದೆ ಬಂದ ಟ್ರಂಪ್​ ​, ” ಝೂಲಾಂಡರ್,” “ಸೆಕ್ಸ್ ಅಂಡ್ ದಿ ಸಿಟಿ” ಮತ್ತು “ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್” ಸೇರಿದಂತೆ ಇತರ ಚಲನಚಿತ್ರಗಳಲ್ಲಿ ಮತ್ತು ದೂರದರ್ಶನದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಭಾರಿ ಪ್ರಸಿದ್ಧಿ ಪಡೆದಿರುವ ಡಬ್ಲ್ಯೂ ಡಬ್ಲ್ಯೂ ಎಫ್ ರೆಸಲಿಂಗ್‌ನಲ್ಲಿಯೂ ಅವರು ಕಾಣಿಸಿಕೊಂಡಿದ್ದರು.

ಮೊದಲ ಪುಸ್ತಕ:
ಟ್ರಂಪ್ ಇಲ್ಲಿಯವರೆಗೂ ಹಲವಾರು ಪುಸ್ತಕಗಳನ್ನು ಬರೆದಿದ್ದು ಅವರ ಮೊದಲ, “ದಿ ಆರ್ಟ್ ಆಫ್ ದಿ ಡೀಲ್” ಅನ್ನು 1987 ರಲ್ಲಿ ಪ್ರಕಟಗೊಂಡಿತ್ತು.

ಈ ಸುದ್ದಿಯನ್ನೂ ಓದಿ: US Presidential Election 2024: ಪ್ರಚಂಡ ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌; ಎರಡನೇ ಬಾರಿ ಅಧ್ಯಕ್ಷ ಪಟ್ಟ ಫಿಕ್ಸ್‌!