ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ (Republican candidate) ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದು, ಇದು ಸಾಕಷ್ಟು ವೈರಲ್ (Viral News) ಆಗಿ 3.75 ಕೋಟಿ ವೀಕ್ಷಣೆಯನ್ನು ಗಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಾಹ್ನ ಡೋನಾಲ್ಡ್ ಟ್ರಂಪ್ ಅವರ ವಿಜಯಕ್ಕೆ ಅಭಿನಂದನೆ ಸಲ್ಲಿಸಿದರು. ಇದು ಭಾರತ ಮತ್ತು ಯುಎಸ್ ನಡುವಿನ ಸಂಬಂಧ ಬಲಗೊಳ್ಳುವ ಮತ್ತು ಸಮಗ್ರ ಕ್ಷೇತ್ರದಲ್ಲಿ ಜಾಗತಿಕವಾಗಿ ವಿವಿಧ ಕಾರ್ಯಕ್ರಮದಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದರು. ಇದರೊಂದಿಗೆ ಇಬ್ಬರು ನಾಯಕರ ನಡುವಿನ ಸೌಹಾರ್ದತೆಯನ್ನು ಎತ್ತಿ ತೋರಿಸುವ ತಮ್ಮ ಹಿಂದಿನ ಭೇಟಿಯ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದರು.
ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ ಈ ಪೋಸ್ಟ್ ಕೆಲವೇ ಗಂಟೆಗಳ ಅನಂತರ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. 3.75 ಕೋಟಿ ಮಂದಿ ಇದನ್ನು ವೀಕ್ಷಿಸಿದ್ದು, ಲಕ್ಷಾಂತರ ಪ್ರತಿಕ್ರಿಯೆಗಳು ಬಂದಿವೆ. ಸುಮಾರು 2,85,000 ಲೈಕ್ಸ್, 48,000 ರೀಟ್ವೀಟ್‌ಗಳನ್ನು ಗಳಿಸಿದ್ದು, ಸುಮಾರು 7,400 ಕಾಮೆಂಟ್‌ಗಳನ್ನು ಪಡೆದಿದೆ.
Heartiest congratulations my friend @realDonaldTrump on your historic election victory. As you build on the successes of your previous term, I look forward to renewing our collaboration to further strengthen the India-US Comprehensive Global and Strategic Partnership. Together,… pic.twitter.com/u5hKPeJ3SY
— Narendra Modi (@narendramodi) November 6, 2024
ಟ್ವಿಟ್ ನಲ್ಲಿ ಏನಿದೆ?
ಪ್ರಧಾನಿ ಮೋದಿ ಬುಧವಾರ ಮಧ್ಯಾಹ್ನ ಟ್ರಂಪ್ ಅವರ ವಿಜಯಕ್ಕೆ ಅಭಿನಂದನೆ ಸಲ್ಲಿಸಿ ಭಾರತ ಮತ್ತು ಯುಎಸ್ ನಡುವೆ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಸುಭದ್ರಗೊಳಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
“ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್, ನಿಮ್ಮ ಐತಿಹಾಸಿಕ ಚುನಾವಣಾ ವಿಜಯಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಹಿಂದಿನ ಅವಧಿಯ ಯಶಸ್ಸನ್ನು ನೀವು ನಿರ್ಮಿಸುತ್ತಿರುವಾಗ ಭಾರತ- ಯುಎಸ್ ನಡುವೆ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ. ಒಟ್ಟಾಗಿ, ನಾವು ನಮ್ಮ ಜನರ ಸುಧಾರಣೆ, ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡೋಣ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪಿಎಂ ಮೋದಿಯವರ ಈ ಪೋಸ್ಟ್ ಜಾಲತಾಣದಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ ಇಬ್ಬರು ನಾಯಕರ ನಡುವಿನ ಸಂಬಂಧವನ್ನು “ಬೆಸ್ಟ್ ಫ್ರೆಂಡ್ಸ್” ಎಂದು ಹೇಳಿದ್ದಾರೆ. ಮತ್ತೊಬ್ಬರು, ಎರಡು ಮಹಾನ್ ದೇಶಗಳ ನಡುವಿನ ಅದ್ಭುತ ನಾಲ್ಕು ವರ್ಷಗಳ ಸ್ನೇಹಕ್ಕಾಗಿ ಎದುರು ನೋಡುತ್ತಿದ್ದೇನೆ.. ಎಂದು ಬರೆದರೆ, ಇನ್ನು ಕೆಲವರು, “ಅಬ್ಕಿ ಬಾರ್, ಟ್ರಂಪ್ ಸರ್ಕಾರ್” ಎಂಬ ಘೋಷಣೆಯನ್ನು ಹೇಳಿದ್ದಾರೆ.
ಒಬ್ಬ ಬಳಕೆದಾರ, ಪಿಎಂ ಮೋದಿ ಮತ್ತು ಟ್ರಂಪ್ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿರುವ ಚಿತ್ರವನ್ನು ಹಂಚಿಕೊಂಡು, ಇಬ್ಬರು ರಾಷ್ಟ್ರೀಯವಾದಿ ಸ್ನೇಹಿತರು. ಈಗ ಎರಡು ಶ್ರೇಷ್ಠ ಪ್ರಜಾಪ್ರಭುತ್ವಗಳ ಮುಖ್ಯಸ್ಥರಾಗಿದ್ದಾರೆ ಎನ್ನುವ ಶೀರ್ಷಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಸಂಬಂಧ
ಪಿಎಂ ಮೋದಿ ಮತ್ತು ಟ್ರಂಪ್ ಬಹಳ ಹಿಂದಿನಿಂದಲೂ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ. ಕ್ವಾಡ್ ಶೃಂಗಸಭೆ ಮತ್ತು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಭಾಗವಹಿಸಿದ್ದ ಪಿಎಂ ಮೋದಿ ಅವರನ್ನು ಟ್ರಂಪ್ ಹೊಗಳಿ “ಅದ್ಭುತ ವ್ಯಕ್ತಿ” ಎಂದು ಉಲ್ಲೇಖಿಸಿದ್ದರು.
Donald Trump: ಹಲವರೊಂದಿಗೆ ಡೇಟಿಂಗ್, ಮೂವರೊಂದಿಗೆ ಮದುವೆ! ಟ್ರಂಪ್ ಬದುಕಿನಲ್ಲಿ ಬಂದು ಹೋದವರ ಪಟ್ಟಿ ಇಲ್ಲಿದೆ!
ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಟ್ರಂಪ್, “ಮೋದಿ ಗ್ರೇಟ್, ಅವರು ನನ್ನ ಸ್ನೇಹಿತ… ಎಂದು ಹೇಳಿ ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದರು. ಟ್ರಂಪ್ ಅವರ ಸಹಾಯದ ಆಶ್ವಾಸನೆಗೆ ಅಭಿನಂದನೆ ಸಲ್ಲಿಸಿದ್ದ ಪ್ರಧಾನಿ ಮೋದಿ ಅವರು ಅವರ ಸಹಾಯವನ್ನು ನಯವಾಗಿ ನಿರಾಕರಿಸಿ, ನಮಗೆ ಬೇಕಾದ್ದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದರು.