ಗೆಣಸಿನ ಸೊಗಸನ್ನು ತಿಂದವನೇ ಬಲ್ಲ. ಚಳಿಗಾಲದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿಫುಲವಾಗಿ ಕಾಣುವ ಗಡ್ಡೆಯಿದು. ನೋಡುವುದಕ್ಕೆ ಅಂಕು-ಡೊಂಕಾಗಿ, ಮೋಟು-ಮುರುಟಾಗಿ ತಿಳಿಗುಲಾಬಿ, ಕಂದು, ತಿಳಿ ಹಳದಿ, ನೇರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳೂ ಆರೋಗ್ಯಕ್ಕೆ ಒಳ್ಳೆಯವೆ. ಇದರ ಬಣ್ಣ ಗಾಢವಾದಷ್ಟೂ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು, ಆರೋಗ್ಯಕ್ಕೆ ಇನ್ನಷ್ಟು ಪೂರಕ ಎಂದು ತಿಳಿಯಬಹುದು(Health Tips).
ಗಡ್ಡೆ-ಗೆಣಸುಗಳು ಪೂರ್ವೀಕರ ಕಾಲದಿಂದಲೇ ನಮ್ಮ ಆಹಾರವಾಗಿ ಬಳಕೆಯಾಗುತ್ತಿವೆ. ಅದರಲ್ಲೂ ಮರಗೆಣಸಿಗಿಂತಲೂ ಸಿಹಿ ಗೆಣಸು ಎಲ್ಲರಿಗೂ ಇಷ್ಟವಾಗುವಂಥ ಗಡ್ಡೆ. ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು, ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಬಹುದು, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಬಹುದು. ಪೋಡಿ, ಬಜ್ಜಿಗಳ ರೀತಿಯಲ್ಲಿ ಸವಿಯುವವರಿಗೂ ಬರವಿಲ್ಲ. ಇಂಥ ರುಚಿಕರ ಗಡ್ಡೆಯನ್ನು ತಿನ್ನುವುದರಿಂದ ಆಗುವ ಲಾಭಗಳೇನು?
ನಾರಿನಂಶ ಹೇರಳ: ಗೆಣಸಿನಲ್ಲಿ ನಾರಿನ ಅಂಶ ವಿಫುಲವಾಗಿದೆ. ಹೆಚ್ಚು ನಾರು ಇರುವಂಥ ಆಹಾರಗಳು ನಮಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಲ್ಲವು. ಅದರಲ್ಲೂ ಕಳ್ಳ ಹಸಿವನ್ನು ಮಟ್ಟ ಹಾಕುವಲ್ಲಿ ಇದರ ನೆರವು ಅಗತ್ಯವಾಗಿ ಬೇಕಾಗುತ್ತದೆ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು, ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನಂಶವನ್ನು ಕರಗಿಸಿದರೆ, ಕರಗದಿರುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ.
ಸತ್ವಯುತ: ಇದರಲ್ಲಿ ಪಿಷ್ಟ ಮತ್ತು ನಾರಿನ ಹೊರತಾಗಿ ವಿಟಮಿನ್ ಎ, ಸಿ ಮತ್ತು ಬಿ೬ ವಿಫುಲವಾಗಿವೆ. ಜೊತೆಗೆ ಪೊಟಾಶಿಯಂ, ಮ್ಯಾಂಗನೀಸ್‌ನಂಥ ಖನಿಜಗಳು ತುಂಬಿವೆ. ಇವುಗಳೊಂದಿಗೆ ಉತ್ಕರ್ಷಣ ನಿರೋಧಕಗಳು ಸೇರಿಕೊಂಡು ಸತ್ವಯುತ ಆಹಾರವೊಂದು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಚರ್ಮದ ಹೊಳಪಿಗೆ, ದೃಷ್ಟಿಯ ಪೋಷಣೆಗೆ ಅಗತ್ಯವಾದ ಸತ್ವಗಳು ಇದರಲ್ಲಿವೆ. ಗೆಣಸು ತಿನ್ನುವಾಗ ಅದರ ಸಿಪ್ಪೆ ಸಮೇತ ತಿನ್ನಿ. ಇದರಿಂದ ವಿಟಮಿನ್ ಎ ಅಂಶ ಸಮೃದ್ಧವಾಗಿ ದೇಹಕ್ಕೆ ದೊರೆಯುತ್ತದೆ. ಕಡಿಮೆ ಕ್ಯಾಲರಿಯಲ್ಲಿ, ರುಚಿಕಟ್ಟಾದ ಸತ್ವಯುತ ಆಹಾರ ದೊರೆತರೆ ಬೇಡ ಎನ್ನುವವರಾರು?
ತೂಕ ಇಳಿಕೆಗೆ ಸೈ: ಇದರಲ್ಲಿರುವ ಪೊಟಾಶಿಯಂ ಅಂಶವು ಡೈಯುರೇಟಿಕ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಹೆಚ್ಚುವರಿ ನೀರಿನಂಶ ದೇಹದಲ್ಲಿ ಉಳಿಯದಂತೆ, ಹೊಟ್ಟೆ ಉಬ್ಬರಿಸದಂತೆಯೂ ಪರಿಣಾಮ ಬೀರುತ್ತದೆ. ತೂಕ ಇಳಿಸುವವರಿಗೆ ಇದು ಇಂಥ ಹಲವು ವಿಷಯಗಳಲ್ಲಿ ಉಪಯುಕ್ತ ಎನಿಸಬಹುದು. ಅಂದರೆ, ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ಆಗಾಗ ತಿನ್ನುವ ಬೇಡಿಕೆಯನ್ನು ಮಟ್ಟ ಹಾಕಬಹುದು ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಸಪೂರ ಆದಂತೆ ಕಾಣಿಸುತ್ತದೆ.
ಮಧುಮೇಹಿಗಳಿಗೆ ಬೇಡವೇ?: ಇದರ ರುಚಿ ಸಿಹಿಯೇ ಆದರೂ ಗ್ಲೈಸೆಮಿಕ್ ಸೂಚಿ (ಜಿಐ) ತೀರಾ ಹೆಚ್ಚೇನಿಲ್ಲ. ಹಾಗಾಗಿ ಜಿಐ ಹೆಚ್ಚಿರುವ ಆಹಾರಗಳಿಗೆ ಹೋಲಿಸಿದಲ್ಲಿ, ಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯಂಶ ದಿಢೀರ್ ಏರಿಕೆಯಾಗದಂತೆ ನಿರ್ವಹಿಸಬಹುದು. ಇದರಿಂದ ರಕ್ತದಲ್ಲಿ ಇನ್‌ಸುಲಿನ್ ಮಟ್ಟವನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ. ಇದರಿಂದ ತಿನ್ನುವ ಬಯಕೆಯನ್ನು ನಿಯಂತ್ರಿಸಬಹುದು. ಈ ಮೂಲಕ ಚಯಾಪಚಯ ಕೆಡದಂತೆ ಕಾಪಾಡಿಕೊಂಡು, ಹೊಟ್ಟೆಯಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆಯಬಹುದು.
ಹೊಂದುತ್ತದೆ: ತರಹೇವಾರಿ ಅಡುಗೆಗಳಿಗೆ ಇದನ್ನು ಕಷ್ಟವಿಲ್ಲದೆ ಹೊಂದಿಸಿಕೊಳ್ಳಬಹುದು. ಚಪಾತಿಯೊಂದಿಗೆ ಗೆಣಸಿನ ಭಾಜಿ ಮಾಡಿದರೆ ರುಚಿ ಹೆಚ್ಚು. ಊಟಕ್ಕೆ ಜೊತೆಯಾಗಿ ಪಲ್ಯ ಮಾಡಿದರೆ ಒಲ್ಲೆ ಎನ್ನುವವರಿಲ್ಲ. ಬರೀ ಸಲಾಡ್ ಮಾಡುವ ಯೋಚನೆಯಿದ್ದರೆ ಗೆಣಸನ್ನು ಬೇಯಿಸಿ ಸೇರಿಸಿಕೊಳ್ಳಬಹುದು. ಸೂಪ್ ಜೊತೆಗೆ ಬೇಯಿಸಿದ ಗೆಣಸು ಬೇಗ ಹೊಟ್ಟೆ ತುಂಬಿಸಿ, ನಿಮ್ಮ ಡಯೆಟ್ ಯೋಜನೆಯನ್ನು ಕಾಪಾಡುತ್ತದೆ. ಪಾಸ್ತಾ ಮಾಡುವ ಯೋಚನೆಯಿದ್ದರೆ, ಯಾವುದಾದರೂ ಒಂದಿಷ್ಟು ನಟ್‌ಗಳನ್ನು ನೆನೆಸಿ, ಬೇಯಿಸಿದ ಗೆಣಸಿನೊಂಸಿಗೆ ಪೇಸ್ಟ್ ಮಾಡಿ ಸಾಸ್ ಮಾಡಿದರೆ ಮಕ್ಕಳು ಚಪ್ಪರಿಸಿಕೊಂಡು ತಿನ್ನುತ್ತವೆ. ಮಳೆಗಾಲದಲ್ಲಿ, ಚಳಿಗಾಲದಲ್ಲಿ ಸುಮ್ಮನೆ ಕೆಂಡದಲ್ಲಿ ಸುಟ್ಟು ಅಥವಾ ಬೇಯಿಸಿಕೊಂಡು ಸಿಪ್ಪೆ ಸಮೇತ ತಿಂದರೆ, ಬೇರೆ ಸ್ವರ್ಗವೇ ಬೇಡ!
ಈ ಸುದ್ದಿಯನ್ನೂ ಓದಿ: Health Tips: ಊಟ ಮಾಡಿದ ನಂತರ ಏನು ಮಾಡಬೇಕು? ಏನು ಮಾಡಬಾರದು?