Amarnatha Yatra: ರಾಂಬನ್‌ನಲ್ಲಿ ಅಮರನಾಥ ಯಾತ್ರೆಯ ಬಸ್‌ಗಳು ಪರಸ್ಪರ ಡಿಕ್ಕಿ ; 6 ಜನರಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಚಂದರ್‌ಕೋಟ್ ಲಂಗರ್ ಸ್ಥಳದ ಬಳಿ ಶ್ರೀ ಅಮರನಾಥ ಜಿ ಯಾತ್ರೆಗಾಗಿ ಪಹಲ್ಗಾಮ್‌ಗೆ ತೆರಳುತ್ತಿದ್ದ ಐದು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಆರು ಭಕ್ತರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಚಂದರ್‌ಕೋಟ್ ಲಂಗರ್ ಸ್ಥಳದ ಬಳಿ ಶ್ರೀ ಅಮರನಾಥ ಯಾತ್ರೆಗಾಗಿ (Amarnatha Yatra) ಪಹಲ್ಗಾಮ್‌ಗೆ ತೆರಳುತ್ತಿದ್ದ ಐದು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಆರು ಭಕ್ತರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಯಾತ್ರಾ ಬೆಂಗಾವಲು ಪಡೆಯ ಭಾಗವಾಗಿದ್ದ ವಾಹನಗಳು ಬ್ರೇಕ್ ವೈಫಲ್ಯದಿಂದಾಗಿ ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಯಾತ್ರಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಂಬನ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ವರ್ಷದ ಜುಲೈ 3 ರಂದು ಅಮರನಾಥ ಯಾತ್ರೆ ಪ್ರಾರಂಭವಾಗಿದ್ದು, ಆಗಸ್ಟ್ 9 ರವರೆಗೆ ನಡೆಯಲಿದೆ. ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಪವಿತ್ರ ಗುಹಾ ದೇವಾಲಯವನ್ನು ಯಾತ್ರಿಕರು ಎರಡು ಮಾರ್ಗಗಳ ಮೂಲಕ ತಲುಪುತ್ತಾರೆ - ಒಂದು ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗ ಅಥವಾ ಇನ್ನೊಂದು ಚಿಕ್ಕ ಬಾಲ್ಟಾಲ್ ಮಾರ್ಗ.
ಪಹಲ್ಗಾಮ್ ಮಾರ್ಗವನ್ನು ಬಳಸುವವರು ಚಂದನ್ವಾರಿ, ಶೇಷನಾಗ್ ಮತ್ತು ಪಂಚತರ್ನಿ ಮೂಲಕ ದೇವಾಲಯವನ್ನು ತಲುಪಬೇಕು ಮತ್ತು 46 ಕಿ.ಮೀ.ಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕು. 6,979 ಅಮರನಾಥ ಯಾತ್ರಿಕರ ಮತ್ತೊಂದು ಗುಂಪು ಶನಿವಾರ ಜಮ್ಮುವಿನಿಂದ ಕಾಶ್ಮೀರಕ್ಕೆ ಬಿಗಿ ಭದ್ರತೆಯಲ್ಲಿ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 3 ರಂದು 38 ದಿನಗಳ ಸುದೀರ್ಘ ಯಾತ್ರೆ ಪ್ರಾರಂಭವಾದಾಗಿನಿಂದ ಕಳೆದ ಎರಡು ದಿನಗಳಲ್ಲಿ 26,800 ಕ್ಕೂ ಹೆಚ್ಚು ಭಕ್ತರು ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ 'ದರ್ಶನ' ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Amarnath Yatra: ಅಮರನಾಥ ಯಾತ್ರೆಗೆ ಭಯೋತ್ಪಾದಕರ ಬೆದರಿಕೆ? ದಾಳಿಯ ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!
ಯಾತ್ರೆ ಪ್ರಾರಂಭವಾದಿನಿಂದಲೂ ಜಮ್ಮು ಕಾಶ್ಮೀರದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲು ಜುಲೈ 1 ರಿಂದ ಆಗಸ್ಟ್ 10 ರವರೆಗೆ ಎಲ್ಲ ಅಮರನಾಥ ಯಾತ್ರೆ ಮಾರ್ಗಗಳನ್ನು ‘ನೋ ಫ್ಲೈ ಝೋನ್’ (No Fly Zones) ಎಂದು ಘೋಷಿಸಿದೆ. ಈ ಕ್ರಮವು ಯಾತ್ರೆಯ ಸುಗಮ ಮತ್ತು ಸುರಕ್ಷಿತ ನಡೆಗೆ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ನಿರ್ಬಂಧವು ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡೂ ಮಾರ್ಗಗಳನ್ನು ಒಳಗೊಂಡಿದ್ದು, ಯುಎವಿಗಳು, ಡ್ರೋನ್‌ಗಳು, ಬಲೂನ್‌ಗಳು ಸೇರಿದಂತೆ ಯಾವುದೇ ವೈಮಾನಿಕ ಸಾಧನಗಳ ಚಲನೆಯನ್ನು ನಿಷೇಧಿಸಲಾಗಿದೆ. ಆದರೆ, ವೈದ್ಯಕೀಯ ತುರ್ತು ಸ್ಥಿತಿ, ವಿಪತ್ತು ನಿರ್ವಹಣೆ, ಮತ್ತು ಭದ್ರತಾ ಪಡೆಗಳಿಂದ ನಿಗಾವಣೆಗೆ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ. ಇಂತಹ ವಿನಾಯಿತಿಗಳಿಗೆ ಸಂಬಂಧಿಸಿದ ವಿವರವಾದ ಕಾರ್ಯವಿಧಾನವನ್ನು (SOP) ಮುಂದೆ ಬಿಡುಗಡೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.