Janamejaya Umarji Column: ಅಭಿಮಾನ ಬಿಟ್ಟು ಹಾಡಿದಾಗಲೇ ದೇವರಿಗೆ ಕಳಿಸುವುದು
ಸನಾತನ ಹಿಂದೂ ಸಂಪ್ರದಾಯವನ್ನು ಜಗತ್ತಿನೆಲ್ಲೆಡೆ ಹರಡಲು ಪ್ರಯತ್ನಪಡುತ್ತಿರುವ ಕೆಲವೇ ಸಂಸ್ಥೆ ಗಳಲ್ಲಿ ಇಸ್ಕಾನ್ ಕೂಡ ಒಂದು. ಎಲ್ಲ ತೆರನಾದ ಹಿಂಜರಿಕೆಗಳನ್ನು ತೊರೆದು, ಅಭಿಮಾನ ಬಿಟ್ಟು ಜನನಿಬಿಡ ರಸ್ತೆಗಳಲ್ಲಿ ‘ಹರೇ ಕೃಷ್ಣ’ ಭಜನೆಯಲ್ಲಿ ಮಗ್ನರಾಗುವ ‘ಇಸ್ಕಾನ್’ ಭಕ್ತರ ತಂಡವನ್ನು ನಾವು ನೋಡಬಹುದು. ವಾರಕರಿಯಲ್ಲಿಯೂ ಇದೇ ರೀತಿ. ಇದು ಭಕ್ತಿಪಂಥಗಳ ವಿಶಿಷ್ಟತೆ.


ಅನುಸಂಧಾನ
ಜನಮೇಜಯ ಉಮರ್ಜಿ
ಕಾರ್ಪೊರೇಟ್ ಕಂಪನಿಯ ಮೀಟಿಂಗ್ ಒಂದಕ್ಕೆ ಹೋಗಿದ್ದೆ. ಅಲ್ಲಿಯ ಮುಖ್ಯಸ್ಥರು, “ಪ್ರಾರ್ಥನೆಯ ಮೂಲಕ ಮೀಟಿಂಗ್ ಪ್ರಾರಂಭಿಸೋಣ" ಎಂದಾಗ ಎಲ್ಲರೂ ಹುಬ್ಬೇರಿಸಿದರು. ಮುಂದುವರಿದ ಮುಖ್ಯಸ್ಥರು, “ನಿಮ್ಮನ್ನು ಯಾರೂ ನೋಡುತ್ತಿಲ್ಲ ಎಂಬ ಭಾವದಲ್ಲಿ ಹಾಡಿ ಅಥವಾ ದೇವರಿಗೆ ಕೇಳಿಸುವಂತೆ ಹಾಡಿ" ಎಂದರು. ಆದರೆ ಎಲ್ಲರಿಗೂ ಸಂಕೋಚವಿದ್ದುದರಿಂದ ಅವರೇ ಹಾಡಿಗೆ ಶುರುವಿಟ್ಟುಕೊಂಡರು. ನಂತರ ಶುರುವಾದ ಸರದಿ ಎರಡೆರಡು ಬಾರಿಯಾದರೂ ಹುಮ್ಮಸ್ಸು ಹೆಚ್ಚುತ್ತಿತ್ತು.
ಒಂದೊಳ್ಳೆ ವಾತಾವರಣ ನಿರ್ಮಾಣವಾಗಿ ಇಡೀ ದಿನ ಸಕಾರಾತ್ಮಕವಾಗಿಯೇ ಇತ್ತು. ಭಜನೆಯು ಅಂತರಾತ್ಮಕ್ಕೆ ಆನಂದ ನೀಡುತ್ತದೆ. ಸಂಗೀತವೂ ಹಾಗೆಯೇ, ಒಳಗಿನ ಶ್ರೋತೃ ತಣಿದರೆ, ಹೊರಗಿನ ರಸಿಕರೂ ತಣಿದಾರು. ಇಷ್ಟೆಲ್ಲಾ ನೆನಪಾಗಲಿಕ್ಕೂ ಕಾರಣವಿದೆ. “ಇಸ್ಕಾನ್ ಮತವು ಯಾಕೆ ಸರಿಯಾದದ್ದು ಅಲ್ಲ" ಎಂಬುದಾಗಿ ಬಾಂಬೆಯ ವಿದ್ವಾಂಸರೊಬ್ಬರು ಹೇಳಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಪುರಂದರದಾಸರು ನೆನಪಾದರು. ‘ನವಕೋಟಿ ನಾರಾಯಣ’ರೇ ಆಗಿದ್ದ ಅವರು, ‘ಮಾಧವ, ಕೇಶವ’ ಎನ್ನುವ ಮಧುಕರ ವೃತ್ತಿಯನ್ನು ನಾಚದೆ ಕೈಗೊಂಡರು. ‘ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆಯ ಜತೆಗೆ ವಿಠಲನಾಮ ತುಪ್ಪ’ವ ಬೆರೆಸಿ ಹಂಚಿದವರು. ‘ಮುತ್ತು ಬಂದಿದೆ ಕೊಳ್ಳಿರೋ’ ಎಂದು ಬೀದಿಬೀದಿ ಅಲೆದು ಪ್ರಚಾರ ಮಾಡಿದರು.
ಇದನ್ನೂ ಓದಿ: Roopa Gururaj Column: ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು
ಸೇನಾತುಕಡಿಯ ನಾಯಕರಾದ ಕನಕದಾಸರು ಮನವ ತಾಳಿಸಿಕೊಂಡು ತಲ್ಲಣಿಸದೇ, ಭವರೋಗಕ್ಕೆ ಔಷಧಿಯಾದ ‘ಹರಿ ಭಕ್ತಿಸಾರ’ವನ್ನು ಓಣಿ ಓಣಿಗೆ ಹೋಗಿ ಸಾರಿದರು. ‘ಮುಂದಕ್ಕೆ ಹೋಗೋ ದಾಸಯ್ಯ’ ಎಂದರೂ ಅವಮಾನಪಡಲಿಲ್ಲ. ಇಸ್ಕಾನ್ನವರದೂ ಇದೇ ಪರಂಪರೆ. ಸನಾತನ ಹಿಂದೂ ಸಂಪ್ರದಾಯವನ್ನು ಜಗತ್ತಿನೆಲ್ಲೆಡೆ ಹರಡಲು ಪ್ರಯತ್ನಪಡುತ್ತಿರುವ ಕೆಲವೇ ಸಂಸ್ಥೆಗಳಲ್ಲಿ ಇಸ್ಕಾನ್ ಕೂಡ ಒಂದು. ಎಲ್ಲ ತೆರನಾದ ಹಿಂಜರಿಕೆಗಳನ್ನು ತೊರೆದು, ಅಭಿಮಾನ ಬಿಟ್ಟು ಜನನಿಬಿಡ ರಸ್ತೆಗಳಲ್ಲಿ ‘ಹರೇ ಕೃಷ್ಣ’ ಭಜನೆಯಲ್ಲಿ ಮಗ್ನರಾಗುವ ‘ಇಸ್ಕಾನ್’ ಭಕ್ತರ ತಂಡವನ್ನು ನಾವು ನೋಡಬಹುದು.
ವಾರಕರಿಯಲ್ಲಿಯೂ ಇದೇ ರೀತಿ. ಇದು ಭಕ್ತಿಪಂಥಗಳ ವಿಶಿಷ್ಟತೆ. ಭಜನೆಯ ಗುರಿಯು ಮತಶಾಸ್ತ್ರ ಗಳ ವಿಜಯವಲ್ಲ, ಅದು ಅಧ್ಯಾತ್ಮವನ್ನು ಜನಸಾಮಾನ್ಯರವರೆಗೂ ಒಯ್ಯುವ ಪರಿ. ವೇದಿಕೆಯಿಂದ ಇಳಿದು, ಕಾಲಿಗೆ ಗೆಜ್ಜೆ ಕಟ್ಟಿ, ಕನಕ-ಪುರಂದರರಂತೆ ಒಂದು ಬಾರಿ ಸಂಕೀರ್ತನೆಗೆ ಬೀದಿಗಿಳಿದು, ಜ್ಞಾನ-ಭಕ್ತಿ- ವೈರಾಗ್ಯಗಳ ವಿಮರ್ಶೆಮಾಡಿ ಮಾತನಾಡಿದರೆ ಅದರ ತೂಕವೇ ಬೇರೆ. ಆದರೆ ನಾವೆಷ್ಟು ಮಂದಿ ಹೀಗೆ ಮಾಡಲು ತಯಾರಿದ್ದೇವೆ? ‘ಶಿವಶರಣ’ ಮತ್ತು ‘ಹರಿದಾಸ’ ಇವು ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಎರಡು ಭಕ್ತಿ ಪರಂಪರೆಗಳು. ಇವುಗಳ ಅನುಯಾಯಿಗಳು ತಮ್ಮನ್ನು ಕರೆದುಕೊಳ್ಳಲು ಬಳಸಿಕೊಂಡ ‘ಶರಣ’ ಮತ್ತು ‘ದಾಸ’ ಎಂಬ ಶಬ್ದಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿ ತಾವಿದ್ದುಕೊಂಡು, ಸಮಾಜದ ಮೂಲೆ ಮೂಲೆಗೂ ಭಗವತ್-ತತ್ವವನ್ನು ಕೊಂಡೊಯ್ಯುವ ಬದ್ಧತೆಯನ್ನು ತೋರಿದಂಥವು.

‘ಭಕ್ತಿಯಿಲ್ಲದ ಬಡವ ನಾನು, ಎನಗಿಂತ ಕಿರಿಯರಿಲ್ಲ’ ಎಂದು ಶರಣರು ಹೇಳಿದರೆ, ‘ಬಾಗಿಲಲಿ ಬಿದ್ದಿಹ ಭಜಕನು ನಾನು’ ಎಂದು ದಾಸರು ಹೇಳಿದ್ದಾರೆ. ದಾಸನಾಗುವುದು ಅಥವಾ ಶರಣ ನಾಗುವುದು ಎಂದರೆ ಭಗವಂತನಿಗೆ ತನ್ನನ್ನೇ ಅರ್ಪಿಸಿಕೊಳ್ಳುವುದು. ಸಂಪೂರ್ಣ ಶರಣಾಗತಿಭಾವ. ಆದರೆ, ಹೀಗೆ ಅಭಿಮಾನ ತೊರೆದು ಕಟ್ಟಕಡೆಯ ನೆಲೆಯನ್ನು ಮುಟ್ಟುವ ‘ತಥಾಕಥಿತರು’ ಈಗ ಯಾರಿದ್ದಾರೆ? ದಾಸನಾಗಲು ಎಷ್ಟೊಂದು ಜನ್ಮದ ಸುಕೃತ ಬೇಕು.
“ಬಹೂನಾಂ ಜನ್ಮನಾಮಂತೇ eನವಾನ್ ಮಾಂ ಪ್ರಪದ್ಯತೆ" (ಭಗವದ್ಗೀತೆ ೭.೧೯)- ಅನೇಕ ಜನ್ಮಗಳ ನಂತರ ಜ್ಞಾನಿಯು ನನ್ನಲ್ಲಿ ಶರಣಾಗುತ್ತಾನೆ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ. ಭಕ್ತಿಯ ಒಂದು ಶ್ರೇಷ್ಠ ರೂಪ- ‘ದಾಸ್ಯಭಾವ’. ರಾವಣನ ಎದುರಿಗೆ ಹನುಮಂತ ತನ್ನನ್ನು ಪರಿಚಯ ಮಾಡಿಕೊಂಡದ್ದೇ ‘ದಾಸೋಹಂ ಕೋಸಲೇಂದ್ರಸ್ಯ’ ಎಂದು.
‘ಪತ್ರಂ ಪುಷ್ಪಂ ಫಲಂ ತೋಯಂ’ ಎಂಬುದಕ್ಕೆ ಹಿಂದಿನ ಪೇಜಾವರ ಶ್ರೀಗಳ ದೀರ್ಘ ವಿಡಿಯೋ ಯೂಟ್ಯೂಬ್ನಲ್ಲಿದೆ. ಅಭಿಮಾನದಿಂದ ಮಾಡಿದ ಗಾಯನ ದೇವರನ್ನು ತಲುಪುವುದಿಲ್ಲ. ‘ಮಾನಾಭಿಮಾನವು ನಿನ್ನದು ಎನಗೇನು’ ಎಂದು ದೇಹಾಭಿಮಾನ, ಅಹಂಕಾರವಿಲ್ಲದೆ ಶುದ್ಧಭಕ್ತಿ ಯಿಂದ ಹಾಡಿದಾಗ ಅದು ದೇವರಿಗೆ ತಲುಪುತ್ತದೆ ಎಂದು ಪುರಂದರ ದಾಸರು ಹೇಳಿದ್ದಾರೆ.
ಪುರಂದರರ ಬಗ್ಗೆ ವೇದಿಕೆಯಲ್ಲಿ ಪುಂಖಾನುಪುಂಖವಾಗಿ ಮಾತನಾಡುವ ಎಷ್ಟು ಮಂದಿ ಈ ಅಭಿಮಾನ ತೊರೆದು ಭಕ್ತಾಭಿಮಾನಿಯನ್ನು ಭಜಿಸಿದ್ದಿದೆ? ಮುಕ್ತಿಗೆ ಹಲವು ದಾರಿಗಳಿವೆ, ಈ ದಾರಿಯನ್ನು ತಿಳಿಹೇಳಲು ಹಲವು ಮತ-ಸಿದ್ಧಾಂತಗಳಿವೆ. ಯಾವುದೇ ದಾರಿಯಲ್ಲಿ ಹೋದರೂ ಗಮ್ಯವೊಂದೇ. ಎಲ್ಲ ಮತಗಳೂ ಈ ಅಭಿಮಾನದ ತೊರೆಯುವಿಕೆಯನ್ನೇ ಹೇಳುತ್ತವೆ. ಸೆಮೆಟಿಕ್ ರಿಲಿಜನ್ನುಗಳನ್ನು ಹೊರತುಪಡಿಸಿ ‘ಹಿಂದೂ’ ಎಂದು ಕರೆಸಿಕೊಳ್ಳುವ ಮತಗಳಿಗೆ ತಳಹದಿ ಯೊಂದೇ.
‘ಸತ್ಯ ಒಂದೇ, ತಿಳಿದವರು ಬೇರೆ ರೀತಿಯಲ್ಲಿ ಹೇಳುತ್ತಾರೆ’. ಈ ಮತಗಳು ಸಾರಾಸಗಟಾಗಿ ಪರಸ್ಪರರ ವಿರುದ್ಧವಲ್ಲ. ಹಲವು ವಿಷಯಗಳಲ್ಲಿ ಸಹಮತವಿದೆ, ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಗಳಿವೆ. ಹೀಗಾಗಿ ನಮ್ಮಲ್ಲಿ ವಾಗ್ಯುದ್ಧದ ಪದ್ಧತಿಯಿಲ್ಲ, ಬದಲಾಗಿ ವಾಕ್ಯರ್ಥವಿದೆ. ನಮ್ಮಲ್ಲಿ ಟೀಕೆ, ವಿಮರ್ಶೆಗೆ ವಿಶಾಲಾರ್ಥವಿದೆ, ವೈಚಾರಿಕವಾಗಿ ಮತಗಳನ್ನು ಖಂಡಿಸಲೂ ಸ್ವಾತಂತ್ರ್ಯವಿದೆ, ವೇದಿಕೆಗಳೂ ಇವೆ.
ಆದರೆ ಸಾಮರಸ್ಯದ ವೆಚ್ಚದಲ್ಲಿ ಇದು ಬೇಕೇ? ಇಂದು ಸಾಮಾಜಿಕ ಜಾಲತಾಣವನ್ನು ಒಮ್ಮೆ ಪ್ರವೇಶಿಸಿದರೆ ಸಾಕು, ಪರ-ವಿರೋಧಗಳ ಬರಹ, ವಿಡಿಯೋಗಳದ್ದೇ ಕಿರಿಕಿರಿ. ದ್ವೈತ-ಅದ್ವೈತ, ಲಿಂಗಾಯತ-ವೀರಶೈವ ಮುಂತಾದ ಚರ್ಚೆಗಳು ಸೈದ್ಧಾಂತಿಕ ಗಡಿಯನ್ನು ದಾಟಿ ವೈಯಕ್ತಿಕವೂ ಆಗಿ, ಉಚಿತವಲ್ಲದ ಶಬ್ದಗಳವರೆಗೆ ತಲುಪಿ, ಮಹಾಸಭಾಗಳ ಲೆಟರ್ ಹೆಡ್ಡಿನ ಪ್ರಕಟಣೆಗಳು ಸಹ ಜಾಲತಾಣಗಳಲ್ಲಿ ಹರಿದಾಡಿದ್ದೂ ಇದೆ. ಇದು ಸಾಮಾನ್ಯ ಅನ್ವೇಷಕನನ್ನು ಗೊಂದಲಗೊಳಿಸುವು ದಲ್ಲದೆ, ಹಿಂದೂ ಧರ್ಮದ ಅಂತರ್ಗತ ಆಧ್ಯಾತ್ಮಿಕ ಶ್ರೀಮಂತಿಕೆಯಿಂದ ಅನೇಕರನ್ನು ದೂರ ವಿಡುತ್ತದೆ ಅಲ್ಲವೇ? ಅನಾಮಧೇಯ ಪರಿಸರದಲ್ಲಿ ವ್ಯಕ್ತಿಯ ನಡವಳಿಕೆಯು ಗುಂಪಿನೊಳಗಿನ ದಕ್ಕಿಂತ ಮತ್ತು ಗುಂಪಿನ ಹೊರಗೆ ತೀವ್ರವಾಗಿರುತ್ತದೆ ಎಂದು ಸಾಮಾಜಿಕ ಮನೋವಿಜ್ಞಾನದ ಅಧ್ಯಯನಗಳು ಹೇಳುತ್ತವೆ.
ಸಾಮಾಜಿಕ ಮಾಧ್ಯಮವು ಪರ ಅಥವಾ ವಿರೋಧ ಇರಬೇಕಾದ ಅನಿವಾರ್ಯತೆಯನ್ನು ತಂದೊ ಡ್ಡುತ್ತದೆ, ತರ್ಕದ ಬದಲು ಭಾವನೆಗೆ ಬೆಲೆ ಕೊಡುವಂತೆ ಮಾಡುತ್ತದೆ, ಸತ್ಯ ಮತ್ತು ಹರಡುವ ಶಕ್ತಿಯ ನಡುವೆ ಹರಡುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದಕ್ಕೆ ನಿಕಟವಾಗಿ ಹೊಂದಿಕೊಂಡ ಧಾರ್ಮಿಕ ಗುಂಪುಗಳು, ಒಂದೇ ಸಿದ್ಧಾಂತವನ್ನು ಒಪ್ಪುವ ಹಲವು ಕವಲುಗಳ ನಡುವೆ ‘ಸಹ-ಪಂಥೀಯ’ ಸಂಘರ್ಷಕ್ಕೆ ಕಾರಣವಾಗುತ್ತದೆ.
ಆಧ್ಯಾತ್ಮಿಕ ತತ್ವಶಾಸ್ತ್ರವು ‘ಗುರುತಿನ ರಾಜಕೀಯ’ಕ್ಕೆ ಬಲಿಯಾಗುತ್ತಿರುವುದೇ ವಿಪರ್ಯಾಸ. ವಿವೇಚನೆಯಿಲ್ಲದೆ ಬಳಸಿದರೆ, ನಮ್ಮ ಉದಾತ್ತ ಸಂಸ್ಕೃತಿಯು ಅದರ ಬೆಲೆಯನ್ನು ತೆರಬೇಕಾಗು ತ್ತದೆ. ಇಂದು ಸಂಕೀರ್ಣ ಸಂಪ್ರದಾಯಗಳು ಬೌದ್ಧಿಕತೆಯ ಆಳಕ್ಕಿಳಿಯದೇ ‘ಮೀಮ್ ’ಗಳಿಗೆ ಸೀಮಿತವಾಗಿವೆ. ಆಧ್ಯಾತ್ಮಿಕ ಚಿಂತನೆಯ ಬದಲು ಅಹಮ್ಮಿನ ಘರ್ಷಣೆಗಳನ್ನು ಮಾತ್ರ ನೋಡುವಂತಾಗಿದೆ.
ಅಲ್ಲಲ್ಲಿ ಇಣುಕುವ ಉತ್ತರ-ದಕ್ಷಿಣ, ಆರ್ಯ-ದ್ರಾವಿಡ, ಶಿವ-ವಿಷ್ಣು, ‘ಹಿಂದೂ ವರ್ಸಸ್ ಹಿಂದೂ’ ಎಂಬ ಕಥನಗಳು ಸಮಗ್ರ ಭಾರತದ ಕಲ್ಪನೆಯನ್ನು ನಿಧಾನವಾಗಿ ದೂರವಿಡುತ್ತವೆ, ರಾಷ್ಟ್ರೀಯ ಏಕತೆಯನ್ನು ನಿರ್ಮೂಲನೆ ಮಾಡುತ್ತವೆ. ಹಾಗಂತ, ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದು ಎಂಬುದು ನಡೆಯುತ್ತಲೇ ಇಲ್ಲ ಅಂತಿಲ್ಲ. ಆದರೆ ಇಂಥ ಒಳ್ಳೆಯದು ಹೊಗಳಿಕೆಯಿಂದ ಅನಾಥ, ಪಾಪ! ನಾವಿಂದು ‘ಭೇದ’ ಮತ್ತು ‘ಭೇದಬುದ್ಧಿ’ಯ ನಡುವಿನ ವ್ಯತ್ಯಾಸವನ್ನು ಅರಿಯಬೇಕಾಗಿದೆ. ‘ವಾದ’ ಯಾವುದು, ‘ವಿತಂಡವಾದ’ ಯಾವುದು ಎಂಬುದನ್ನು ತಿಳಿಯಬೇಕಿದೆ.
ಸಾಮಾಜಿಕ ಜಾಲತಾಣಗಳನ್ನು ಸಂಘರ್ಷದ ಬದಲು ಸತ್ಸಂಗಕ್ಕೆ ಬಳಸಬೇಕಾಗಿದೆ. ಸಾಮಾಜಿಕ ಮಾಧ್ಯಮವು ವಿಚಾರಗಳ ಯಜ್ಞವಾಗಿರಬೇಕೋ ಅಥವಾ ಅಹಂಕಾರದ ಯುದ್ಧಭೂಮಿ ಯಾಗಿರಬೇಕೋ? ಆಯ್ಕೆ ನಮ್ಮದು. ನಿಜವಾಗಿಯೂ ನಿಷ್ಠಾವಂತರಾಗಿದ್ದರೆ, ನಾವು ಕಡಿಮೆ ವಾದಿಸಬೇಕು ಮತ್ತು ಹೆಚ್ಚು ತಿಳಿದುಕೊಳ್ಳಬೇಕು, ಕಡಿಮೆ ಟೀಕಿಸಬೇಕು ಮತ್ತು ಹೆಚ್ಚು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಆಧ್ಯಾತ್ಮಿಕ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಜವಾಬ್ದಾರಿಯುತ ಭಾಷಣಗಳನ್ನು ಉತ್ತೇಜಿಸಬೇಕು. ವಿವಿಧ ಸಂಪ್ರದಾಯಗಳ ನಾಯಕರು ಒಗ್ಗಟ್ಟನ್ನು ರೂಪಿಸಬೇಕೇ ವಿನಾ, ಸ್ಪರ್ಧೆಯನ್ನಲ್ಲ. ಅಂತರಪಂಥೀಯ ಭೇಟಿ, ಸಂವಾದಗಳು ನಡೆಯಬೇಕು. ರಾಮಾನಂದರಿಂದ ಬಸವಣ್ಣನವರವರೆಗೆ ಮತ್ತು ಚೈತನ್ಯರಿಂದ ಶರೀಫರವರೆಗಿನ ಸಂತರು ಬೋಧಿಸಿದಂತೆ- ‘ಸತ್ಯ ಒಂದೇ, ಮಾರ್ಗಗಳು ಹಲವು’. ಸಾಮಾಜಿಕ ಮಾಧ್ಯಮ ವೇದಿಕೆಗಳು ಸೈದ್ಧಾಂತಿಕ ಒಲವನ್ನು ಲೆಕ್ಕಿಸದೆ, ಭಿನ್ನ ಭಾಷಣ, ತಪ್ಪು ಮಾಹಿತಿ ಮತ್ತು ನಂಬಿಕೆಗಳ ಅಪಹಾಸ್ಯ ವನ್ನು ಸಕ್ರಿಯವಾಗಿ ತೆಗೆದುಹಾಕಬೇಕು. ಕೂಡಿಮಾಡುವ ಹಬ್ಬಗಳು, ಪಾದಯಾತ್ರೆ, ತೀರ್ಥ ಯಾತ್ರೆಗಳು ಮತ್ತು ವಿವಿಧ ವರ್ಗದ ಸಾತ್ವಿಕ-ತಾತ್ವಿಕ ಚರ್ಚೆಗಳ ಕಥೆಗಳನ್ನು, ಸಕಾರಾತ್ಮಕ ಕಥನಗಳನ್ನು ಉತ್ತೇಜಿಸಬೇಕು. (ಲೇಖಕರು ಸಂಸ್ಕೃತಿ ಚಿಂತಕರು)