Karnataka Rains: ಬಾಗೇಪಲ್ಲಿಯಲ್ಲಿ ಭಾರಿ ಮಳೆಯಿಂದ ಅವಾಂತರ; ಸಂಚಾರ, ಜನಜೀವನ ಅಸ್ತವ್ಯಸ್ತ
Karnataka Rains: ಬಾಗೇಪಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಅವ್ಯವಸ್ಥೆ ಕಾರಣ ಮಳೆ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ನೀರು ನಿಂತು, ಪ್ರಯಾಣಿಕರಿಗೆ ಬಾರಿ ತೊಂದರೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಇಳೆ ತಂಪಾದರೂ, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.


ಬಾಗೇಪಲ್ಲಿ: ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ಪಟ್ಟಣದ ವಾಸಿಗಳಿಗೆ ಭಾರಿ ಮಳೆಯ ಸ್ಪರ್ಶ ತಂಪು ನೀಡಿದೆ. ಆದರೆ, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಅವ್ಯವಸ್ಥೆ ಕಾರಣ ಮಳೆ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ನೀರು ನಿಂತು ಪ್ರಯಾಣಿಕರಿಗೆ ಬಾರಿ ತೊಂದರೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಇಳೆ ತಂಪಾದರೂ, ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು ಮಹಿಳೆಯರು ಹಾಗೂ ಮಕ್ಕಳು ಕಿರಿಕಿರಿ ಅನುಭವಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದಂತ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳು ಸಂಭವಿಸಿವೆ. ಪಟ್ಟಣದ ಎಚ್. ನರಸಿಂಹಯ್ಯ ವೃತ್ತದಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಚರಂಡಿಗಳಿಂದ ಕೊಳಚೆ ನೀರು ರಸ್ತೆ ಮೇಲೆ ಬಂದು ಅವಾಂತರ ಸೃಷ್ಟಿಸಿದೆ. ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಸೇರಿದಂತೆ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಪದೇ ಪದೇ ಮಳೆ ಬಂದಾಗ ಈ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದರೂ ಸಂಬಂಧಪಟ್ಟವರು ಕಣ್ಣಿದ್ದು ಕುರುಡರಂತಾಗಿದ್ದಾರೆ. ಇಂತಹ ಗಂಭೀರ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಶಪಿಸುತ್ತಿದಾರೆ.

ಪಟ್ಟಣದ 13ನೇ ವಾರ್ಡ್ ಸೇರಿದಂತೆ ಹಲವು ವಾರ್ಡುಗಳಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ಮತ್ತು ಚರಂಡಿಯ ನೀರು ನುಗ್ಗಿ ಜನರು ನೀರನ್ನು ಹೊರ ಹಾಕುವಲ್ಲಿ ಹರಸಾಹಸ ಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Rain: ರಾಜ್ಯಾದ್ಯಂತ ಪ್ರತಾಪ ತೋರಿಸಿದ ಮಳೆ, ವಿವಿಧಡೆ 8 ಮಂದಿ ಸಾವು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಳೆಯೂ ಭಾರಿ ಮಳೆ ನಿರೀಕ್ಷೆ
ಬೆಂಗಳೂರು: ಮೇ 15ರಂದು ಕೂಡ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ, ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರ್ ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರಿ ಮಳೆ ಅಥವಾ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ.
ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 50-60 ಕಿಮೀ ತಲುಪುವ ಸಾಧ್ಯತೆಯಿದ್ದು, ಭಾರಿ ಮಳೆಯಾಗುವ (64.5mm - 115.5mm) ಸಾಧ್ಯತೆಯಿದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ.
ಇನ್ನು ಮುಂದಿನ 5 ದಿನಗಳವರೆಗೆ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ಇಳಿಕೆಯ ಪ್ರವೃತ್ತಿಯೊಂದಿಗೆ ದೊಡ್ಡ ಬದಲಾವಣೆಗಳಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದ್ದು, ಸಂಜೆಯ ವೇಳೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಾಗುತ್ತದೆ. ಬಿರುಗಾಳಿ ಸಹಿತ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31°C ಮತ್ತು 20°C ಇರಲಿದೆ.