ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಪಾಕ್‌ ಡ್ರೋನ್‌ಗಳನ್ನು ಪುಡಿಗಟ್ಟಿದ ಆಕಾಶ್‌ ಕ್ಷಿಪಣಿ ವ್ಯವಸ್ಥೆಯ ರೂವಾರಿ ಬೆಂಗಳೂರು ವಿಜ್ಞಾನಿ!

ಭಾರತವನ್ನು ಪಾಕ್‌ ಡ್ರೋನ್‌ಗಳಿಂದ ರಕ್ಷಿಸುತ್ತಿರುವ (Operation Sindoor) ಆಕಾಶ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಹಿಂದೆ ಬೆಂಗಳೂರಿನ ವಿಜ್ಞಾನಿ ಡಾ. ಪ್ರಹ್ಲಾದ್‌ ರಾಮರಾವ್‌ ಅವರು ಇದ್ದಾರೆ. ಆಕಾಶ್‌ ಕಾರ್ಯ ನಿರ್ವಹಿಸುತ್ತಿರುವ ರೀತಿ ಕಂಡು ಅವರ ಹೆಮ್ಮೆಯಿಂದ ಎದೆಯುಬ್ಬಿಸಿದ್ದಾರೆ.

ಪಾಕ್‌ ಡ್ರೋನ್‌ಗಳ ಪುಡಿಗಟ್ಟಿದ ಕ್ಷಿಪಣಿ ರೂವಾರಿ ಬೆಂಗಳೂರು ವಿಜ್ಞಾನಿ!

ಡಾ. ಪ್ರಹ್ಲಾದ್‌ ರಾಮರಾವ್

ಹರೀಶ್‌ ಕೇರ ಹರೀಶ್‌ ಕೇರ May 10, 2025 1:34 PM

ನವದೆಹಲಿ: ಭಾರತ- ಪಾಕಿಸ್ತಾನ ನಡುವಿನ (India- pak war) ಆಪರೇಷನ್‌ ಸಿಂದೂರ (Operation sindoor) ತೀವ್ರತೆ ಹೆಚ್ಚಿಸಿಕೊಳ್ಳುತ್ತಿದೆ. ಇದರಲ್ಲಿ ಮಹತ್ವದ ಪಾತ್ರ ವಹಿಸಿರುವ ಎರಡು ಅಸ್ತ್ರಗಳಿಗೆ ಬೆಂಗಳೂರಿನ ಹಿನ್ನೆಲೆ ಇದೆ. ಬೆಂಗಳೂರಿನಲ್ಲಿ ಉತ್ಪಾದಿಸಲಾದ ‘ಸ್ಕೈ ಸ್ಟ್ರೈಕರ್‌’ ಆತ್ಮಾಹುತಿ ಡ್ರೋನ್‌ಗಳು ಪಾಕಿಸ್ತಾನದ (Pakistan) ಮೇಲೆರಗಿ ಉಗ್ರರ ನೆಲೆಗಳನ್ನು ಆಹುತಿ ಪಡೆಯುತ್ತಿವೆ. ಮತ್ತೊಂದೆಡೆ ಪಾಕಿಸ್ತಾನದ ಕಡೆಯಿಂದ ಹಾರಿ ಬರುತ್ತಿರುವ ಕ್ಷಿಪಣಿಗಳನ್ನು ಸ್ವದೇಶಿ ಆಕಾಶ್‌ ವಾಯು ರಕ್ಷಣಾ ವ್ಯವಸ್ಥೆ (akash missile defence system) ಪುಡಿ ಪುಡಿ ಮಾಡುತ್ತಿದೆ. ಇದು ಕೂಡ ಬೆಂಗಳೂರಿನಲ್ಲೇ ತಯಾರಾಗಿದ್ದು, ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.

ಡಾ. ಪ್ರಹ್ಲಾದ್‌ ರಾಮರಾವ್‌ (78) ಅವರು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಆಕಾಶ್‌ ಯೋಜನೆಯ ಅತಿ ಕಿರಿಯ ಯೋಜನಾ ನಿರ್ದೇಶಕರಾಗಿದ್ದರು. ಇವರಿಗೆ ಭಾರತದ ಕ್ಷಿಪಣಿ ಮನುಷ್ಯ ಎಂದೇ ಖ್ಯಾತರಾಗಿರುವ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್‌ ಕಲಾಂ ಅವರೇ ಈ ಜವಾಬ್ದಾರಿ ವಹಿಸಿದ್ದರು. ಹೈದರಾಬಾದ್‌ನಲ್ಲಿರುವ ಭಾರತ್ ಡೈನಾಮಿಕ್ಸ್ ಲಿ.ನಲ್ಲಿ ಉತ್ಪಾದನೆಯಾಗುತ್ತಿರುವ ಆಕಾಶ್‌ ವ್ಯವಸ್ಥೆಯನ್ನು 15 ವರ್ಷದ ಸತತ ಪರಿಶ್ರಮದಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರಹ್ಲಾದ್‌ ರಾಮರಾವ್‌ ಅವರು ಪದ್ಮಶ್ರೀ ಪುರಸ್ಕೃತರೂ ಹೌದು.

ಆಕಾಶ್‌ ಕಾರ್ಯಕ್ಷಮತೆ ಬಗೆಗೆ ಪ್ರಹ್ಲಾದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನನ್ನ ಮಗು ನಿಖರವಾಗಿ ಕೆಲಸ ಮಾಡುತ್ತ ವೈರಿಯ ವೈಮಾನಿಕ ಗುರಿಗಳನ್ನು ಹೊಡೆದುರುಳಿಸುತ್ತಿರುವುದನ್ನು ನೋಡುತ್ತಿದ್ದರೆ, ಇದು ಜೀವನದಲ್ಲೇ ನನ್ನ ಪಾಲಿಗೆ ಸಂತಸದ ದಿನ ಎನಿಸುತ್ತಿದೆ. ಅದು ನಿರೀಕ್ಷೆಗೂ ಮೀರಿ ಅದ್ಭುತವಾಗಿ ಕೆಲಸ ಮಾಡುತ್ತಿದೆ" ಎಂದು ಭಾವುಕವಾಗಿ ನುಡಿದಿದ್ದಾರೆ. ಡ್ರೋನ್‌ಗಳು, ಕ್ಷಿಪಣಿಗಳು, ಹೆಲಿಕಾಪ್ಟರ್‌ ಅಷ್ಟೇ ಅಲ್ಲದೆ, ಅಮೆರಿಕದ ಎಫ್‌-16 ಯುದ್ಧವಿಮಾನಗಳನ್ನೂ ತಡೆಹಿಡಿಯಬಲ್ಲ ಆಕಾಶ್‌ ವ್ಯವಸ್ಥೆಯನ್ನು ದೇಶರಕ್ಷಣೆಗೆ ಬಳಸಲು ಸೇನೆ ಹಿಂದೇಟು ಹಾಕುತ್ತಿದ್ದುದನ್ನೂ ಅವರು ನೆನೆದಿದ್ದಾರೆ.

1947ರಲ್ಲಿ ಬೆಂಗಳೂರಿನಲ್ಲಿ (ಅಂದಿನ ಮದ್ರಾಸ್‌ ಸಂಸ್ಥಾನ) ಜನಿಸಿದ ಪ್ರಹ್ಲಾದ್‌ ಅವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೆಕಾನಿಕಲ್‌ ಪದವಿ, ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ಏರೋನಾಟಿಕಲ್‌ ಮತ್ತು ಆಸ್ಟ್ರಾನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. 1971ರಲ್ಲಿ ಡಿಆರ್‌ಡಿಒದ ವಿಜ್ಞಾನಿಯಾಗಿ ವೃತ್ತಿ ಆರಂಭಿಸಿದ ರಾಮರಾವ್‌, ಬಳಿಕ 1997ರಲ್ಲಿ ಅದರ ನಿರ್ದೇಶಕರಾಗಿ ಬಡ್ತಿ ಪಡೆದರು. ಇವರು ಪುಣೆಯ ಡಿಐಡಟಿಯ ಹಾಗೂ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಾಧನಾ ಸಂಸ್ಥಾನದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಆಕಾಶ್‌ ಹೆಗ್ಗಳಿಕೆ ಏನು?

"ಭಾರತೀಯ ಗುರಿಗಳ ಕಡೆಗೆ ಪಾಕಿಸ್ತಾನ ಮಾಡಿದ ದಾಳಿಯನ್ನು ವಿಫಲಗೊಳಿಸುವಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಮೇಡ್ ಇನ್ ಇಂಡಿಯಾ ಆಕಾಶ್ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿವೆ. ಭಾರತೀಯ ಸೇನೆ ಮತ್ತು ವಾಯುಪಡೆ ಎರಡೂ ಪಾಕಿಸ್ತಾನದ ಗಡಿಯುದ್ದಕ್ಕೂ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿವೆ" ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

- ಇದು ಭೂಮಿಯಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ. ಸಮಗ್ರ ವೈಮಾನಿಕ ರಕ್ಷಣೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಮಧ್ಯಮ-ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯಿದು. ಗಾಳಿಯಲ್ಲಿ ಬರುವ ಬೆದರಿಕೆಗಳಿಂದ ಇದು ಪರಿಣಾಮಕಾರಿಯಾಗಿ ರಕ್ಷಿಸಬಲ್ಲದು. ಚಲಿಸುವ ಮತ್ತು ಸ್ಥಿರ ನೆಲೆಗಳನ್ನು ರಕ್ಷಿಸುತ್ತದೆ.

- ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ವಿವಿಧ ಭೂಪ್ರದೇಶಗಳಲ್ಲಿ ಸುಲಭವಾಗಿ ಇದನ್ನು ಕೊಂಡೊಯ್ಯಬಹುದು.

- ಈ ದೇಸಿ ಕ್ಷಿಪಣಿಯ ಪ್ರಾಥಮಿಕ ಪಾತ್ರವೆಂದರೆ ಶತ್ರು ವಿಮಾನಗಳು, ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳಿಂದ ಸ್ವಂತ ನೆಲೆಗಳನ್ನು ರಕ್ಷಿಸುವುದು.

- ಈ ವ್ಯವಸ್ಥೆಯು ಗುಂಪಾಗಿ ಅಥವಾ ಒಂದೇ ಆಗಿ ಏಕಕಾಲದಲ್ಲಿ ಬಹು ಬೆದರಿಕೆಗಳನ್ನು ಎದುರಿಸಬಹುದು. ಇದರ ರಿಯಲ್‌ ಟೈಮ್‌ ಮಲ್ಟಿ ಸೆನ್ಸರ್‌ ಡೇಟಾ ಸಂಸ್ಕರಣೆ ಮತ್ತು ಥ್ರೆಟ್‌ ಇವ್ಯಾಲ್ಯುಯೇಶನ್‌, ಯಾವುದೇ ದಿಕ್ಕಿನಿಂದ ಬರುವ ಆತಂಕಗಳನ್ನು ಎದುರಿಸಲು ಅನುವು ಮಾಡಿಕೊಡುತ್ತದೆ.

- ವ್ಯಾಪ್ತಿ: ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು 4.5 ಕಿಮೀನಿಂದ 25 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವೈಮಾನಿಕ ಬೆದರಿಕೆಗಳಿಂದ ಪಡೆಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಮಧ್ಯಮ-ಶ್ರೇಣಿಯ ವ್ಯವಸ್ಥೆಯಾಗಿದೆ.

- ಎತ್ತರ: 100 ಮೀಟರ್‌ಗಳಷ್ಟು ಕಡಿಮೆ ದೂರದಿಂದ 20 ಕಿಲೋಮೀಟರ್‌ಗಳವರೆಗಿನ ದೂರದ ಗುರಿಯನ್ನೂ ಕೆಡಹುತ್ತದೆ.

- ಈ ವ್ಯವಸ್ಥೆಯು ಅಡ್ಜಸ್ಟಬಲ್‌ ಹಾಗೂ ಅಪ್‌ಗ್ರೇಡಬಲ್ ಎರಡೂ ಆಗಿದೆ. ಗುಂಪು ಅಥವಾ ಸ್ವಾಯತ್ತ ಮೋಡ್‌ಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕಮಾಂಡ್ ಮಾರ್ಗದರ್ಶನವನ್ನು ಬಳಸಿಕೊಳ್ಳುತ್ತದೆ. ಕ್ಷಿಪಣಿಯನ್ನು ಪ್ರತಿಬಂಧಿಸುವವರೆಗೆ ಮಾರ್ಗದರ್ಶನ ಮಾಡಲು ಹಂತ ಹಂತದ ಮಾರ್ಗದರ್ಶನ ರಾಡಾರ್ ಅನ್ನು ಅವಲಂಬಿಸಿದೆ.

- ಗಾತ್ರ: ಆಕಾಶ್ ಕ್ಷಿಪಣಿ 5.87 ಮೀಟರ್ ಉದ್ದ, 350 ಮಿಲಿಮೀಟರ್ ವ್ಯಾಸ ಮತ್ತು ಸುಮಾರು 710 ಕಿಲೋಗ್ರಾಂಗಳಷ್ಟು ತೂಕವಿದೆ.

- ಇದರ ಸಂಪೂರ್ಣ ವ್ಯವಸ್ಥೆಯನ್ನು ಚಲಿಸಬಹುದಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಅಳವಡಿಸಲಾಗಿದೆ. ರಸ್ತೆ ಮತ್ತು ರೈಲು ಮೂಲಕ ಸಾಗಿಸಬಹುದಾದ ತ್ವರಿತ ನಿಯೋಜನಾ ಸಾಮರ್ಥ್ಯ ಇದೆ.

- ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ತ್ವರಿತ ಡಿಟೆಕ್ಷನ್-‌ ಕಿಲ್‌ ಸಾಮರ್ಥ್ಯವನ್ನು ಹೊಂದಿದೆ. ವೈರಿಗಳು ಇದನ್ನು ಜಾಮ್‌ ಮಾಡದಂತೆ ವಿರೋಧಿಸಲು ಎಲೆಕ್ಟ್ರಾನಿಕ್ ಕೌಂಟರ್ ವ್ಯವಸ್ಥೆ ಇದೆ.

- ಭವಿಷ್ಯದ ವಾಯು ರಕ್ಷಣಾ ಜಾಲಗಳಲ್ಲಿಯೂ ಇದನ್ನು ಸುಧಾರಿಸಿಕೊಂಡು ಬಳಸಲು ಸಾಧ್ಯವಿದೆ.

ಇದನ್ನೂ ಓದಿ: Operation Sindoor: ನಮ್ಮ ಬಳಿ ಕೇವಲ 6 ಲಕ್ಷ ಸೈನಿಕರಿದ್ದಾರೆ, ಭಾರತದ ಜೊತೆ ಯುದ್ಧ ಮಾಡಿದರೆ ನಾಶ ಆಗೋದು ಫಿಕ್ಸ್‌; ಪಾಕ್‌ ಮಾಜಿ ಸೇನಾಧಿಕಾರಿ