Stock Market: ಸೆನ್ಸೆಕ್ಸ್ 1,508 ಅಂಕ ಜಿಗಿತ, ನಿಫ್ಟಿ 23,851ಕ್ಕೆ ಏರಿಕೆ, ಕಾರಣವೇನು?
Share Market: ಅಮೆರಿಕದ ಟಾರಿಫ್ ನೀತಿಯು ಭಾರತದ ಪರವಾಗಿರುವುದು, ಮುಕ್ತ ವ್ಯಾಪಾರ ಮಾತುಕತೆಗಳು ನಡೆಯುತ್ತಿರುವುದು, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ದುರ್ಬಲವಾಗಿರುವುದು, ಕಚ್ಚಾ ತೈಲ ದರ ಇಳಿಕೆಯು ಸಕಾರಾತ್ಮಕ ಪರಿಣಾಮ ಬೀರಿದ್ದು, ಮುಂಬೈ ಮಾರುಕಟ್ಟೆ ಚೇತರಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ.

ಮುಂಬೈ: ಮುಂಬೈ ಷೇರು ಮಾರುಕಟ್ಟೆ (Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಗುರುವಾರ 1,508 ಅಂಕ ಏರಿಕೆ ದಾಖಲಿಸಿ 78,553ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 414 ಅಂಕ ಏರಿಕೆಯಾಗಿ 23,851ಕ್ಕೆ ಸ್ಥಿರವಾಯಿತು. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಸೂಚ್ಯಂಕಗಳು ಗಣನೀಯವಾಗಿ ಜಿಗಿಯಿತು. ಹಣಕಾಸು ವಲಯದ ಷೇರುಗಳು ಎತ್ತರಕ್ಕೇರಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಉತ್ಸಾಹದಿಂದ ಷೇರುಗಳನ್ನು ಖರೀದಿಸಿದರು. ಅಮೆರಿಕದ ಟಾರಿಫ್ ನೀತಿಯು ಭಾರತದ ಪರವಾಗಿರುವುದು, ಮುಕ್ತ ವ್ಯಾಪಾರ ಮಾತುಕತೆಗಳು ನಡೆಯುತ್ತಿರುವುದು, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ದುರ್ಬಲವಾಗಿರುವುದು, ಕಚ್ಚಾ ತೈಲ ದರ ಇಳಿಕೆಯು ಸಕಾರಾತ್ಮಕ ಪ್ರಭಾವ ಬೀರಿತು.
ಐಟಿ ದಿಗ್ಗಜ ಇನ್ಫೋಸಿಸ್ ಗುರುವಾರ ತನ್ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದೆ. 7,033 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಲಾಭದಲ್ಲಿ 12 ಪರ್ಸೆಂಟ್ ಹೆಚ್ಚಳವಾಗಿದೆ. ಇನ್ಫೋಸಿಸ್ ಆದಾಯವು 40,925 ಕೋಟಿ ರೂ.ಗೆ ಹೆಚ್ಚಳವಾಗಿದೆ. ಇನ್ಫೋಸಿಸ್ ಪ್ರತಿ ಷೇರಿಗೆ ಪ್ರಸಕ್ತ ಸಾಲಿನಲ್ಲಿ 22 ರೂ.ಗಳ ಅಂತಿಮ ಡಿವಿಡೆಂಡ್ ಅನ್ನು ನೀಡಿದೆ. ಮೇ 30 ರೆಕಾರ್ಡ್ ಡೇಟ್ ಆಗಿದ್ದು, ಜೂ. 30ಕ್ಕೆ ವಿತರಣೆಯಾಗಲಿದೆ. ಅಂದರೆ ಮೇ 30ರೊಳಗೆ ಇನ್ಫೋಸಿಸ್ ಷೇರು ಖರೀದಿಸುವವರಿಗೆ 22 ರೂ. ಡಿವಿಡೆಂಡ್ ಸಿಗಲಿದೆ.
ಈ ಸುದ್ದಿಯನ್ನೂ ಓದಿ: Stock Market: ಜಿಗಿಯುತ್ತಿದೆ ಸೆನ್ಸೆಕ್ಸ್, ನಿಫ್ಟಿ; ಯಾವ ಸ್ಟಾಕ್ಸ್ ಖರೀದಿಸಿದ್ರೆ ಲಾಭ?
ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸನ್ ಫಾರ್ಮಾ ಷೇರುಗಳು ಲಾಭ ಗಳಿಸಿತು. ವಿಪ್ರೊ, ಹೀರೊಮೊಟೊ ಕಾರ್ಪ್, ಟೆಕ್ ಮಹೀಂದ್ರಾ, ಕೋಲ್ ಇಂಡಿಯಾ ಷೇರು ನಷ್ಟಕ್ಕೀಡಾಯಿತು.
ಟೆಲಿಕಾಂ, ಪಿಎಸ್ಯು ಬ್ಯಾಂಕ್, ತೈಲ ಮತ್ತು ಅನಿಲ, ಫಾರ್ಮಾ, ಆಟೊಮೊಬೈಲ್, ಇಂಧನ ವಲಯದ ಷೇರುಗಳು ಚೇತರಿಸಿತು. ಈ ನಡುವೆ ಪಿಎಸ್ಯು ಬ್ಯಾಂಕ್ಗಳ ಷೇರುಗಳು ಲಾಭ ಗಳಿಸಿತು. ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳು ಲಾಭ ಗಳಿಸಿತು. ಆರ್ಬಿಐ ರೆಪೊ ದರ ಕಡಿತ ಸಕಾರಾತ್ಮಕ ಪ್ರಭಾವ ಬೀರಿದೆ.