Vinayak V Bhat Column: ಈ ನೆತ್ತರಿಗೆ ಉತ್ತರಿಸುವ ದಾಯಿತ್ವ ನಮ್ಮ ಮೇಲಿದೆ
ಭಾರತೀಯ ಸೈನ್ಯದ ಮೇಲೆ ನನಗೆ ನಂಬಿಕೆಯಿದೆ, ಆದರೆ ನಮ್ಮ ಮನಸ್ಥಿತಿ ಬದಲಾಗಬೇಕಿದೆ. ತಂದೆ ಯನ್ನು ಕಣ್ಣೆದುರಿಗೇ ಕಳೆದುಕೊಂಡ ವಿವರಿಸಲಾಗದ ನೋವಿದ್ದರೂ, ಇಷ್ಟೊಂದು ಜನ ಸೇರಿರುವುದು ನೋಡಿದರೆ ಸಮಾಧಾನವಾಗುತ್ತದೆ" ಎಂದು ತಂದೆಯ ಅಂತ್ಯಕ್ರಿಯೆಯ ವೇಳೆಯಲ್ಲಿ ಕಣ್ಣೀರೊರೆಸಿ ಕೊಳ್ಳುತ್ತಾ ಅವರ ಮಗ ಆಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.


ವಿದ್ಯಮಾನ
ಕಳೆದ ಎರಡು ದಿನಗಳಿಂದ ಟಿವಿ ನೋಡುವುದೇ ಬೇಡ ಅನಿಸುತ್ತಿದೆ. ಅದರಲ್ಲೂ, ವಾರ್ತಾ ವಾಹಿನಿ ಗಳನ್ನು ನೋಡಲು ಹಿಂಜರಿಕೆಯಾಗುತ್ತಿದೆ. ಐಪಿಎಲ್ ನೋಡುತ್ತಿದ್ದರೂ, ಮನಸ್ಸು ಬೇರೆಲ್ಲಿಗೋ ಹೋಗಿ ಬರುತ್ತಿದೆ. ಬೆಂಗಳೂರಿನಲ್ಲಿ ಆರ್ಸಿಬಿ ಗೆದ್ದರೂ ಖುಷಿ ಮಾತ್ರ ಕಾಣುತ್ತಿಲ್ಲ. ದೂರದ ಕಾಶ್ಮೀರದಲ್ಲಿ ಏನೋ ಆದರೆ ನಾವೇನು ಮಾಡಲಿಕ್ಕಾಗುತ್ತದೆ ಎನ್ನುವ ಭಾವನೆ ಯಾರಿಗೂ ಇದ್ದಂ ತಿಲ್ಲ. ನಮ್ಮ ಮನೆಯಲ್ಲೇ ಏನೋ ಆದವರಂತೆ ಸೂತಕದ ಛಾಯೆಯಡಿ ದಿನದೂಡುತ್ತಿದ್ದೇವೆ. ಮಲಗಿದರೆ ನಿದ್ರೆ ಬರುತ್ತಿಲ್ಲ. ಕೈಯಲ್ಲಿದ್ದ ಮಗುವನ್ನು ಕೆಳಗಿಳಿಸಿ ತಂದೆಯ ತಲೆಗೆ ಗುಂಡಿಕ್ಕಿದ ಪಿಶಾಚಿಗಳೇ ಕಣ್ಣ ಮುಂದೆ ಬರುವಂತಾಗಿದೆ. ಭಾರತೀಯರ ಮನಸ್ಸು ನಿಜವಾಗಿಯೂ ಭಾರ ವಾಗಿವೆ, ನೋವು ಮಡುಗಟ್ಟಿದೆ. ವಿನಾಕಾರಣ ಹರಿದ ಈ ನೆತ್ತರುಧಾರೆಗೆ ಉತ್ತರದಾಯಿತ್ವ ವನ್ನು ಹೊರುವ ತವಕದಲ್ಲಿ ಭಾರತೀಯ ಮನಸ್ಸುಗಳಿವೆ.
“ಭಾರತೀಯ ಸೈನ್ಯದ ಮೇಲೆ ನನಗೆ ನಂಬಿಕೆಯಿದೆ, ಆದರೆ ನಮ್ಮ ಮನಸ್ಥಿತಿ ಬದಲಾಗಬೇಕಿದೆ. ತಂದೆಯನ್ನು ಕಣ್ಣೆದುರಿಗೇ ಕಳೆದುಕೊಂಡ ವಿವರಿಸಲಾಗದ ನೋವಿದ್ದರೂ, ಇಷ್ಟೊಂದು ಜನ ಸೇರಿರುವುದು ನೋಡಿದರೆ ಸಮಾಧಾನವಾಗುತ್ತದೆ" ಎಂದು ತಂದೆಯ ಅಂತ್ಯಕ್ರಿಯೆಯ ವೇಳೆಯಲ್ಲಿ ಕಣ್ಣೀರೊರೆಸಿಕೊಳ್ಳುತ್ತಾ ಅವರ ಮಗ ಆಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಅನುರಣಿಸು ತ್ತಿವೆ.
“ನನ್ನ ಗಂಡನನ್ನು ಮಾತ್ರ ಏಕೆ ಕೊಂದಿರಿ? ನನ್ನನ್ನೂ, ನನ್ನ ಮಗನನ್ನೂ ಕೊಂದುಬಿಡಿ ಎಂದರೆ, ‘ನಹೀ, ಮೋದಿ ಕೊ ಬೋಲೋ’ ಎನ್ನುತ್ತಾ ಹೇಡಿ ರಾಕ್ಷಸರು ಹೊರಟುಹೋದರು. ನಮ್ಮ ದೇಶದಲ್ಲಿ ಇಂಥ ಭಯೋತ್ಪಾದಕರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ, ಆದರೆ ನಾವು ಬಹು ಸಂಖ್ಯಾತ ನಾಗರಿಕರು ಮಾತ್ರ ನಾಯಿಗಳ ತರಹ ಜೀವನ ಮಾಡುತ್ತಿದ್ದೇವೆ" ಎಂದು ಅವರ ಪತ್ನಿ ಹೇಳಿದ್ದನ್ನು ಕೇಳಿದಾಗ, ನಮಗೂ ಆಕೆ ಹೇಳುತ್ತಿರುವುದು ನಿಜ ಅನ್ನಿಸಿದರೆ ತಪ್ಪಲ್ಲ.
ಇದನ್ನೂ ಓದಿ: Vinayak V Bhat Column: ಸದಾ ವತ್ಸಲೆಯ ಸೇವೆಯಲ್ಲಿ ಸವೆದ ನೂರು ವರ್ಷ
“ಈ ಘಟನೆಯ ಮಧ್ಯೆಯೂ ನನ್ನ ಮಗ, ಬಂದೂಕು ಹಿಡಿದಿದ್ದ ಆ ಹೇಡಿಗಳಿಗೆ ‘ಕುತ್ತೇ’ ಎಂದು ಬೈದ" ಎನ್ನುವ ಸಮಾಧಾನ ಆ ತಾಯಿಗೆ. ಹುಲ್ಲುಹಾಸಿನ ಮೇಲೆ ಸುಮ್ಮನೆ ಮಲಗಿರುವಂತೆ ಕಂಡುಬರುವ ಹರಿಯಾಣದ ಲೆಫ್ಟಿನೆಂಟ್ ವಿನಯ್ ನರವಾಲ್, ಪತಿಯ ಪಾರ್ಥಿವ ದೇಹದ ಪಕ್ಕದಲ್ಲಿ ನಿರ್ಲಿಪ್ತವಾಗಿ ಕುಳಿತ ಪತ್ನಿ ಹಿಮಾಂಶಿ- ಈ ಚಿತ್ರವಂತೂ ಕಣ್ಣು-ಮನಸ್ಸುಗಳಿಂದ ಮಾಸಲು ಸಾಧ್ಯವೇ ಇಲ್ಲ.
ಭವ್ಯ ಭವಿತವ್ಯದ ಕನಸು ಕಂಡಿದ್ದ 26 ಕುಟುಂಬಗಳ ಭವಿಷ್ಯವು, ಕಣ್ಣು ಮುಚ್ಚಿ ತೆರೆಯುವು ದರೊಳಗಾಗಿ ದುಷ್ಟ ರಕ್ಕಸರ ಹುಚ್ಚಾಟಕ್ಕೆ ನುಚ್ಚುನೂರಾಗಿ ಹೋದುದನ್ನು ಅರಗಿಸಿಕೊಳ್ಳ ಲಾಗುತ್ತಿಲ್ಲ. ಹಾಗೇ ಒಮ್ಮೆ ಆಲೋಚಿಸಿ- “ಅಪ್ಪಾ, ನಾನು ಪಿಯುಸಿಯಲ್ಲಿ ನೀನು ಹೇಳಿದಷ್ಟು ಅಂಕ ತೆಗೆದಿರುವೆ, ನೀನು ಮಾತು ಕೊಟ್ಟಂತೆ ನಮ್ಮನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋಗು" ಎಂದು ಹಠಮಾಡಿ ಅಪ್ಪ-ಅಮ್ಮನನ್ನು ಅಲ್ಲಿಗೆ ಕರೆದುಕೊಂಡು ಹೋದ ಮಗ, ತನ್ನ ನಿರ್ಧಾರ ದಿಂದಾಗಿಯೇ ತಂದೆಯನ್ನು ಕಳೆದುಕೊಂಡಂತಾಯಿತು ಎಂಬ ನೋವನ್ನು ಜೀವನದಲ್ಲಿ ಮರೆಯಲಾದೀತೇ? ಅವನ ಅಪರಾಧಿ ಭಾವವನ್ನು ಅಳಿಸುವುದು ಹೇಗೆ? ‘ನಮ್ಮ ಮದುವೆಯಾದ ಮೇಲೆ ಮಧುಚಂದ್ರಕ್ಕೆ ಕಾಶ್ಮೀರಕ್ಕೇ ಹೋಗಬೇಕು’ ಎಂದು ಹಠ ಹಿಡಿದ ಮಡದಿ, ತನ್ನಿಂದಾಗಿ ಗಂಡನ ಸಾವಾಗುವಂತಾಯ್ತಲ್ಲಾ ಎಂಬ ಅಪರಾಧಿ ಭಾವದಿಂದ ಆಚೆ ಬರುವುದು ಹೇಗೆ? ‘ನಿನ್ನಿಂದಾಗಿಯೇ ಹೀಗಾಯ್ತು’ ಎಂದು ಅವಳ ಸಂಬಂಧಿಕರು ಒಂದೊಮ್ಮೆ ಹಳಿದರೆ, ಅವಳೇನು ಉತ್ತರ ಕೊಟ್ಟಾಳು? ಮೃತರ ಹೆಂಡತಿ/ಮಕ್ಕಳು ಜೀವನಪೂರ್ತಿ ಅನುಭವಿಸಬೇಕಾದ ಈ ನೋವಿಗೆಲ್ಲಾ ಯಾರನ್ನು ಹೊಣೆಮಾಡುವುದು? ಭಾರತದಲ್ಲಿನ ಹಿಂದೂಗಳ ಇಂದಿನ ದುರ್ದೆಸೆಗೆ ಹಿಂದೂಗಳಾದ ನಾವೇ ಕಾರಣರಾಗಿದ್ದೇವೆ ಎನ್ನುವುದಕ್ಕೆ, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಮಾಜದ ನರಮೇಧದ ಘಟನೆಗಳು, ಪಶ್ಚಿಮ ಬಂಗಾಳದ ಹಿಂಸಾಚಾರ ಮತ್ತು ಪಹಲ್ಗಾಮ್ನ ಮೊನ್ನಿನ ದುರ್ಘಟನೆಗಳು ಪ್ರತ್ಯಕ್ಷ ಸಾಕ್ಷಿ ಎಂದು ಒಬ್ಬ ಸಾಮಾಜಿಕ ಜಾಲತಾಣ ದಲ್ಲಿ ಹೇಳುತ್ತಾನೆ.

ಆತ ಅದಕ್ಕೆ ಸರಿಯಾದ ಕಾರಣವನ್ನೂ ಕೊಡುತ್ತಾನೆ- ಸಾಮಾನ್ಯವಾಗಿ ನಾವು ಹಿಂದೂಗಳು ಕೈ ಯಲ್ಲಿ ಸ್ವಲ್ಪ ಕಾಸು ಕಂಡೊಡನೆ ಆಸ್ತಿ-ಪಾಸ್ತಿ, ಬೆಳ್ಳಿ-ಬಂಗಾರ, ಅದಲ್ಲದಿದ್ದರೆ ದೊಡ್ಡ ಟವಿ, ಬೈಕ್ ಮುಂತಾದ ಭೋಗವಸ್ತುಗಳನ್ನು ಖರೀದಿಸುತ್ತೇವೆಯೇ ಹೊರತು, ಆತ್ಮರಕ್ಷಣೆಗಾಗಿ ಒಂದು ಪಿಸ್ತೂಲ ನ್ನು ಖರೀದಿಸುವ ಗೋಜಿಗೇ ಹೋಗುವುದಿಲ್ಲ ಎನ್ನುತ್ತಾನೆ ಆತ.
ಅವನ ಮಾತಿನಲ್ಲಿ ಅರ್ಥವಿದೆ ಎನಿಸಿತು. ತೋಟಕ್ಕೆ ಬರುವ ಮಂಗನನ್ನು ಓಡಿಸಲೂ ನಾವು ಸಣ್ಣ ಪಟಾಕಿಗಳನ್ನು ತಂದಿಟ್ಟುಕೊಳ್ಳುತ್ತೇವೆಯೇ ಹೊರತು ಆಯುಧಗಳನ್ನಲ್ಲ. ಬಂದೂಕು, ಪಿಸ್ತೂಲು ಗಳನ್ನು ಬಿಡಿ, ಅದೆಷ್ಟು ಮನೆಗಳಲ್ಲಿ ಬಿದಿರಿನ ಲಾಠಿ ಇದೆ ಹೇಳಿ? ಕೇವಲ ಧರ್ಮದ ಆಧಾರದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರಿಂದ ಅತ್ಯಾಧುನಿಕ ಆಯುಧಗಳಿಂದ ಬರ್ಬರ ದಾಳಿಯಾದಾಗ ಎಲ್ಲರೂ ಒಟ್ಟಿಗೆ ಕೂತು ಅಳುತ್ತೇವೆ, ಅಷ್ಟೇ! ಬದುಕನ್ನು ಕುರಿತ ನಮ್ಮ ಧೋರಣೆ ಬದಲಾಗದಿದ್ದರೆ, ಈ ಅಳುವು ಅವಿರತವಾಗಲಿದೆ.
ನಮ್ಮ ರಕ್ಷಣೆ ಬಗ್ಗೆ ನಮಗೆ ಗೊತ್ತಿಲ್ಲದಿದ್ದರೆ, ನಾವು ಸಂಗ್ರಹಿಸುವ ಬೆಳ್ಳಿ-ಬಂಗಾರ, ಆಸ್ತಿ-ಪಾಸ್ತಿ, ಜತೆಗೆ ಮನೆಯ ಹೆಂಗಸು-ಮಕ್ಕಳು ಕೂಡ ಒಂದು ದಿನ ಇಂಥ ರಾಕ್ಷಸ ಸಂತತಿಯ ಪಾಲಾಗುವುದರಲ್ಲಿ ಸಂದೇಹವಿಲ್ಲ. ಇದು ಈ ದೇಶದಲ್ಲಿ ಹಿಂದೂಗಳು ಐತಿಹಾಸಿಕವಾಗಿ ಮಾಡುತ್ತಾ ಬಂದಿರುವ ಸ್ವಯಂಕೃತಾಪರಾಧ ಎನ್ನಬಹುದು.
ಹಿಂದೆ ನಮ್ಮ ದೇಶದ ಮತ್ತು ಧರ್ಮದ ಮೇಲೆ ಬಾಬರ್, ಘಜನಿಗಳಂಥವರ ದಾಳಿಯಾದ ಕಾಲ ದಿಂದಲೂ ನಡೆದದ್ದು ಇದೇ ತಾನೆ? ಹಾಗಾಗಿ, ಬದಲಾಗಬೇಕಾದದ್ದು ನಾವು. ಬಾಹ್ಯಶಕ್ತಿಗಳು ಬದಲಾಗುತ್ತವೆ ಎಂದರೆ ಅದು ಸರ್ವಥಾ ಸಾಧ್ಯವಿಲ್ಲ. ನಾವು, ನಮ್ಮ ಮಕ್ಕಳು ಮತ್ತು ಮನೆಯ ಮಹಿಳೆಯರು ಎಲ್ಲರೂ ಇಸ್ರೇಲ್ ಮುಂತಾದ ದೇಶಗಳಲ್ಲಿರುವಂತೆ ಸರ್ವಸ್ತರದಲ್ಲೂ ಶಕ್ತಿವರ್ಧಿಸಿ ಕೊಂಡು, ಅಪಾಯಗಳಿಗೆ ಸದಾ ಪ್ರತಿರೋಧ ಒಡ್ಡುವುದನ್ನು ಕಲಿಯಬೇಕಿದೆ.
ಕೊಡಗಿನಲ್ಲಿರುವ ಕೊಡವರು ಹಳ್ಳಿ-ಪಟ್ಟಣವೆನ್ನದೇ ಪ್ರತಿಯೊಂದು ಮನೆಯಲ್ಲೂ ಆತ್ಮರಕ್ಷಣೆ ಗೆಂದು ಕನಿಷ್ಠ 3 ಆಯುಧಗಳನ್ನು ಇಟ್ಟುಕೊಂಡಿರುತ್ತಾರೆ. ಇದಕ್ಕಾಗಿ ಅವರಿಗೆ ಯಾವುದೇ ಅನುಮತಿಯ ಅಗತ್ಯವೂ ಇಲ್ಲ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹರಡಿರುವ ಸಿಖ್ಖರಂತೂ ಬಹಳ ಕಾಲದಿಂದ ಆಯುಧಗಳನ್ನು ಹೊಂದಿಯೇ ಇದ್ದಾರೆ. ಆತ್ಮರಕ್ಷಣೆಗಾಗಿ ಸಣ್ಣ ಆಯುಧವೊಂದನ್ನು ಸದಾ ಜತೆಗಿಟ್ಟುಕೊಳ್ಳಲು ನಮಗೇನು ಧಾಡಿ? ಒಂದು ಕಾಲದಲ್ಲಿ, ‘ಆತ್ಮರಕ್ಷಣೆ ಗೆಂದು ಮಹಿಳೆಯರಿಗೆ-ಮಕ್ಕಳಿಗೆ ಲಾಠಿ ಚಲಾಯಿಸುವುದನ್ನು ಕಲಿಸುತ್ತೇವೆ’ ಎಂದ ಆರೆಸ್ಸೆಸ್ನಂಥ ಸಂಘಟನೆಗಳನ್ನು ಕಂಡು ಕೆಲವರು ಅಪಹಾಸ್ಯ ಮಾಡಿದ್ದಿದೆ.
ಕೇರಳದಂಥ ಪ್ರದೇಶದಲ್ಲಿ ರೂಢಿಯಲ್ಲಿದ್ದ ಕಳರಿಪಯಟ್ಟು ಮುಂತಾದ ಯುದ್ಧ ಮತ್ತು ಆತ್ಮ ರಕ್ಷಣಾ ಕಲೆಗಳು ಇಂದು ಪ್ರದರ್ಶಕ ಕಲೆಯಾಗಿ ಮಾತ್ರ ಉಳಿದುಕೊಂಡಿವೆ. ಇನ್ನು ಸಾರ್ವಜನಿಕರು ಬಂದೂಕಿನ ತರಬೇತಿ ಪಡೆದಾರೆಯೇ? ಇಲ್ಲವೇ ಇಲ್ಲ. ಒಂದು ಮಾತಂತೂ ಸತ್ಯ- ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕೇ ವಿನಾ, ಪ್ರತಿಯೊಬ್ಬರ ಹಿಂದೆ ಸೈನಿಕನನ್ನು ನಿಲ್ಲಿಸಲು ಯಾವ ಸರಕಾರಕ್ಕೂ ಸಾಧ್ಯವಾಗುವುದಿಲ್ಲ.
ಇದನ್ನು ನಾವು ಅರಿಯಬೇಕಿದೆ. ಎಷ್ಟೇ ಶಾಂತಿ-ಸೌಹಾರ್ದವಿರಲಿ, ಇನ್ನು ಮುಂದೆ ಅಮರನಾಥ ಅಥವಾ ಕಾಶ್ಮೀರದಂಥ ಸೂಕ್ಷ್ಮ ಪ್ರದೇಶಕ್ಕೆ ಹೋಗುವ ಪ್ರವಾಸಿಗರಿಗೆ, ಸರಕಾರವೇ ಒಂದು ಮಟ್ಟದ ಆತ್ಮರಕ್ಷಣೆಯ ತರಬೇತಿ ವ್ಯವಸ್ಥೆಯನ್ನು ಒದಗಿಸಬೇಕಿದೆ ಮತ್ತು ಆಯುಧಗಳನ್ನು ಒಯ್ಯಲೂ ಅನುಮತಿಸಬೇಕಿದೆ. ಇಲ್ಲವಾದಲ್ಲಿ, ಭವಿಷ್ಯದ ಇಂಥ ನೂರಾರು ಘಟನೆಗಳಿಗೆ ಭಾರತ ಸಾಕ್ಷಿ ಯಾಗಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಮೊನ್ನಿನ ದುರ್ಘಟನೆಯಲ್ಲಿ ಅಲ್ಲಿದ್ದ ಪ್ರವಾಸಿಗರಲ್ಲಿ ಒಬ್ಬರಲ್ಲಿ ಸಣ್ಣ ಚೂರಿ ಇದ್ದರೂ ಒಬ್ಬಿಬ್ಬ ರನ್ನು ಉಳಿಸಬಹುದಿತ್ತೇನೋ ಅಥವಾ ಒಬ್ಬಿಬ್ಬ ಭಯೋತ್ಪಾದಕನನ್ನಾದರೂ ಮುಗಿಸಬಹು ದಿತ್ತೇನೋ? ಪಹಲ್ಗಾಮಿನ ಹುಲ್ಲುಹಾಸಿನ ಮೇಲೆ 26 ಜನರ ರಕ್ತ ಸುರಿಯುವಂತೆ ಮಾಡಿರುವುದರ ಜತೆಗೆ, ಭಯೋತ್ಪಾದಕರು ಒಂದಿಷ್ಟು ಸ್ಪಷ್ಟ ಸಂದೇಶಗಳನ್ನು ಕೊಟ್ಟು ಹೋಗಿದ್ದಾರೆ.
‘ನೀನು ಹಿಂದುವಾ?’ ಎಂದು ಕೇಳಿ ಕೊಲೆಗೈದಿದ್ದಾರೆ. ತಮ್ಮ ಯುದ್ಧ ಭಾರತದ ಮೇಲಲ್ಲ, ಭಾರ ತೀಯ ಹಿಂದೂಗಳ ಮೇಲೆ ಎನ್ನುವುದನ್ನು ಅವರು ಬಹಿರಂಗವಾಗಿ ಸಾರಿದ್ದಾರೆ. ಎರಡನೆ ಯದಾಗಿ, ‘ಮೋದಿಗೆ ಹೋಗಿ ಹೇಳಲು ನಿಮ್ಮನ್ನು ಕೊಲ್ಲದೇ ಬಿಟ್ಟಿದ್ದೇವೆ’ ಎಂದು ಮಹಿಳೆಯರಿಗೆ ತಿಳಿಸುವ ಮೂಲಕ ನಮ್ಮ ದೇಶದ ಪ್ರಧಾನಿಗೆ, ಆ ಮೂಲಕ ದೇಶಕ್ಕೆ ಸವಾಲೆಸೆದಿದ್ದಾರೆ. ದ್ವೇಷ ಯಾರ ಮೇಲೆ? ಮೋದಿಯವರ ಮೇಲೆ ಮತ್ತು ಹಿಂದೂಗಳ ಮೇಲೆ ಎನ್ನುವುದರಲ್ಲಿ ಇನ್ನೂ ಸಂಶಯಕ್ಕೆ ಆಸ್ಪದವಿದೆಯಾ? ಈ ದುರ್ಘಟನೆ ನಡೆಯುವಾಗ ಪ್ರಧಾನಿ ಮೋದಿಯವರು ಸೌದಿ ಪ್ರವಾಸ ದಲ್ಲಿದ್ದರು ಮತ್ತು ಘಟನೆಯ ವಿವರವನ್ನು ಅಲ್ಲಿನ ನಾಯಕತ್ವಕ್ಕೆ ನೀಡಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ತುರ್ತಾಗಿ ದೇಶಕ್ಕೆ ವಾಪಸ್ಸಾದರು.
ಈ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷರು ಭಾರತದಲ್ಲೇ ಇದ್ದು, ಈ ಹೇಯಕೃತ್ಯ ಅವರ ಕಣ್ಣ ಮುಂದೆಯೇ ನಡೆದಿರುವುದರಿಂದ, ಮುಂದಿನ ನಮ್ಮ ಪಾಕಿಸ್ತಾನ-ವಿರೋಧಿ ನಡೆಗಳಿಗೆ ಅಮೆರಿಕ ನೆರವಾಗದಿದ್ದರೂ ಅಡ್ಡಬರಲಾರದು ಎಂದುಕೊಳ್ಳಬಹುದು. ಈ ಹಿಂದೆ ಬಿಲ್ ಕ್ಲಿಂಟನ್ ಅವರು ಭಾರತಕ್ಕೆ ಬಂದಾಗಲೂ ಇಂಥದೇ ಘಟನೆ ಭಾರತದಲ್ಲಿ ನಡೆದಿತ್ತು.
ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದಾಗಲೂ ದೆಹಲಿಯಲ್ಲಿ ಹಿಂಸಾ ಚಾರವಾಗಿದ್ದನ್ನು ನೆನಪಿಸಿಕೊಳ್ಳಬಹುದು. ಅಮೆರಿಕ ಮತ್ತು ಸೌದಿ ದೇಶಗಳೊಂದಿಗೆ ಭಾರತದ ಸ್ನೇಹ-ಸಂಬಂಧ ಬೆಳೆಯುತ್ತಿರುವುದನ್ನು ಕೆಲವರು ಸಹಿಸುವುದಿಲ್ಲ ಎಂಬ ಸಂದೇಶವೂ ಈ ಘಟನೆಯಿಂದ ವ್ಯಕ್ತವಾಗುತ್ತಿದೆ. ಅಮೆರಿಕವು ಇವನ್ನೆಲ್ಲಾ ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡರ ದೇಶವಂತೂ ಅಲ್ಲ.
ಜಗತ್ತಿನ ಅನೇಕ ನಾಯಕರುಗಳು ಈ ಘಟನೆಗೆ ಪಾಕಿಸ್ತಾನವನ್ನು ನೇರ ಹೊಣೆಗಾರನನ್ನಾಗಿಸುತ್ತಾ ಭಾರತಕ್ಕೆ ಬೆಂಬಲದ ಮಾತನ್ನಾಡುತ್ತಿದ್ದಾರೆ. ನೆಟ್ಟಿಗರಂತೂ ವಿವಿಧ ರೀತಿಯಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ ಮತ್ತು ಅದು ಇಡೀ ಭಾರತದ ಸಂವೇದನೆಯಾಗಿ ಹೊಮ್ಮುತ್ತಿದೆ- “ಮೋದಿ ಯವರೇ, ರಮ್ಜಾನ್ ಹಬ್ಬದ ಸಂದರ್ಭದಲ್ಲಿ ನೀವು ಬಡ ಮುಸಲ್ಮಾನರಿಗೆ ಸಹೃದಯತೆಯಿಂದ ನೀಡಿದ ಲಕ್ಷಾಂತರ ಉಡುಗೊರೆಗಳ ಗಂಟಿನ ಬದಲಿಗೆ, ಅವರು ನಿಮಗೆ ನೀಡಿದ ಉಡುಗೊರೆ ಯಿದು" ಎನ್ನುತ್ತಿದ್ದಾರೆ.
“ಕೊಲ್ಲುವವರು ಜಾತಿ-ಮತ-ಭಾಷೆ ಅಥವಾ ರಾಜಕೀಯ ವಿಚಾರಧಾರೆಯನ್ನು ವಿಚಾರಿಸದೆ, ‘ಹಿಂದೂಗಳು’ ಎಂಬುದನ್ನು ಮಾತ್ರ ಖಾತ್ರಿಪಡಿಸಿಕೊಂಡು ಕೊಲೆಗೈದಿದ್ದಾರೆ. ಹಾಗಾಗಿ, ನಮ್ಮೊಳ ಗಿನ ವೈರುದ್ಧ್ಯಗಳನ್ನು ಬದಿಗಿಟ್ಟು ಒಟ್ಟಿಗಿರುವ ಕುರಿತು ಯೋಚಿಸಿ" ಎನ್ನುವ ಸಂದೇಶವನ್ನು ಕೆಲವರು ನೀಡುತ್ತಿದ್ದಾರೆ. ಇನ್ನು ರಾಬರ್ಟ್ ವಾದ್ರಾರನ್ನೊಳಗೊಂಡಂತೆ ಅನೇಕ ವಿಪಕ್ಷ ನಾಯಕರು ನಿರೀಕ್ಷೆಯಂತೆ, ಗುಪ್ತಚರ ವ್ಯವಸ್ಥೆಯ ವೈಫಲ್ಯ, ಮೋದಿ ಸರಕಾರದ ಧೋರಣೆ ಗಳ ಸರಿ-ತಪ್ಪುಗಳ ತುಲನೆ ಮಾಡುತ್ತಾ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮುಂದು ವರಿಸಿದ್ದಾರೆ.
ಭಾರತೀಯರ ನಿರೀಕ್ಷೆಯಂತೆ ಕೇಂದ್ರ ಸರಕಾರವು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡುವ ಕೆಲ ನಿರ್ಧಾರಗಳನ್ನು ವಿಳಂಬವಿಲ್ಲದೆ ತೆಗೆದುಕೊಂಡಿದೆ. ಕೂಡಲೇ ಜಾಗ ಖಾಲಿ ಮಾಡುವಂತೆ ಭಾರತ ದಲ್ಲಿರುವ ಪಾಕಿಸ್ತಾನೀಯರಿಗೆ ಆದೇಶಿಸಲಾಗಿದೆ ಮತ್ತು ಅಟಾರಿ-ವಾಘಾ ಗಡಿಗಳನ್ನು ಮುಚ್ಚ ಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಸಿಂಧೂ ನದಿಯ ನೀರು ಹಂಚಿಕೆಯ ಒಪ್ಪಂದದಿಂದ ಭಾರತ ಹಿಂದೆ ಸರಿದಿದೆ. ಇದರಿಂದಾಗಿ, ಈಗಾಗಲೇ ಆರ್ಥಿಕ ಕುಸಿತದಿಂದ ನಲುಗಿರುವ ಪಾಕಿಸ್ತಾನಕ್ಕೆ ತಡೆದುಕೊಳ್ಳ ಲಾಗದ ಪೆಟ್ಟು ನೀಡಿದಂತಾಗಿದೆ. ಜತೆಗೆ, “ಉಗ್ರರು ನಮ್ಮ ನೆಲದ ಯಾವ ಮೂಲೆಯಲ್ಲಿದ್ದರೂ ಹುಡುಕಿ ಹೆಕ್ಕಿ ತೆಗೆದು, ಅವರು ಮತ್ತು ಅವರ ಬೆಂಬಲಿಗರು ಊಹಿಸಲಿಕ್ಕೂ ಆಗದ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತೇವೆ" ಎಂದು ಬಿಹಾರದಲ್ಲಿ ಗುಡುಗಿದ್ದಾರೆ ನಮ್ಮ ಹೆಮ್ಮೆಯ ಪ್ರಧಾನಿ.
2023ರಲ್ಲಿ ಹಮಾಸ್ ಉಗ್ರರು ಇಸ್ರೇಲ್ ಗಡಿಯನ್ನು ಪ್ಯಾರಾಶೂಟ್ ಮೂಲಕ ಪ್ರವೇಶಿಸಿ ಅಲ್ಲಿ ನಡೆಯುತ್ತಿದ್ದ ‘ಮ್ಯೂಸಿಕ್ ಫೆಸ್ಟಿವಲ್’ ಮೇಲೆ ಗುಂಡಿನ ಮಳೆಗರೆದಿದ್ದಕ್ಕೆ 1400ಕ್ಕೂ ಅಧಿಕ ಇಸ್ರೇಲಿ ಗರು ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನ ಸೇನಾಪಡೆಯನ್ನು ಗಾಜಾಪಟ್ಟಿಯಲ್ಲಿ ನುಗ್ಗಿಸಿ ಸಾವಿರಾರು ಹಮಾಸ್ ಉಗ್ರರನ್ನು ಮತ್ತು ಅದರ ನಾಯಕರನ್ನು ನಿರ್ದಯವಾಗಿ ಹತ್ಯೆಮಾಡಿತು.
ಇಸ್ರೇಲ್ ಪಡೆಗಳು ಗಾಜಾದ ಮೇಲೆ ನಡೆಸಿದ ದಾಳಿಯಿಂದಾಗಿ ಈವರೆಗೆ 42 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವಿಗೀಡಾಗಿ ಅಲ್ಲಿನ ಉಗ್ರರು ಸಾಕ್ಷಾತ್ ನರಕವನ್ನೇ ನೋಡುವಂತಾಯಿತು. ಇಂಥದೇ ನಿಷ್ಠುರ ಕ್ರಮವನ್ನು ಇಂದು ಭಾರತ ಸರಕಾರದಿಂದ, ಅದರಲ್ಲೂ ಪ್ರಧಾನಿ ಮೋದಿ ಯವರಿಂದ ಜನರು ನಿರೀಕ್ಷಿಸುತ್ತಿದ್ದಾರೆ. ‘ನಾವು ಭಾರತದ ಅಭಿವೃದ್ಧಿಯಲ್ಲಿನ ವಿಳಂಬವನ್ನು ಸ್ವೀಕರಿಸಲು ಸಿದ್ಧರಿದ್ದೇವೆ, ಆದರೆ ಪಾಕಿಸ್ತಾನಕ್ಕೆ ಮಾತ್ರ ಮೇಲಕ್ಕೇಳಲಾಗದಂಥ ತಿರುಗೇಟು ನೀಡಬೇಕು’ ಎಂದು ಜನರು ಸರಕಾರವನ್ನು ಆಗ್ರಹಿಸುತ್ತಿದ್ದಾರೆ.
ಮೋದಿಯವರ ‘ಪೂರ್ವಾಚಾರ’ಗಳನ್ನು ನೋಡಿರುವ ನಮಗೆ, ‘ಭಾರತದ ಭಾವನೆಗಳಿಗೆ ಧಕ್ಕೆ ಯಾದಾಗ ಯಾವುದೇ ಕಾರಣಕ್ಕೂ ಸುಮ್ಮನಿರುವ ಮನುಷ್ಯನಲ್ಲ ಆತ’ ಎಂಬುದು ತಿಳಿದೇ ಇದೆ. ಈ ಬಾರಿಯೂ ನಮ್ಮ ನಿರೀಕ್ಷೆಗಳು ಹುಸಿಯಾಗಲಿಕ್ಕಿಲ್ಲ. ಕಾದುನೋಡೋಣ...!