Mann Ki Baat: ಬಿಸಿಲ ನಾಡಿನಲ್ಲಿ ಸೇಬು ಕೃಷಿ; ಮುಧೋಳ ರೈತನನ್ನು ಹೊಗಳಿದ ಪ್ರಧಾನಿ ಮೋದಿ
Mann Ki Baat: ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು ಎಂಬ ಕಲ್ಪನೆಯಿದೆ. ಆದರೆ, ಬಿಸಿಲ ನಾಡಿನಲ್ಲಿ ಸೇಬು ಬೆಳೆಯುವ ಮೂಲಕ ಅಚ್ಚರಿ ಮೂಡಿಸಿರುವ ಮುಧೋಳದ ರೈತ ಶ್ರೀಶೈಲ ತೇಲಿ ಅವರು, ಕಳೆದ ಎರಡೂವರೆ ವರ್ಷದಲ್ಲಿ ಸೇಬು ಬೆಳೆದು 15 ಲಕ್ಷ ರೂ.ಗಳ ಲಾಭ ಮಾಡಿದ್ದಾರೆ.


ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ʼಮನ್ ಕಿ ಬಾತ್ʼ ಕಾರ್ಯಕ್ರಮದಲ್ಲಿ ಭಾನುವಾರ ಹಲವು ಮಹತ್ವದ ವಿಷಯಳನ್ನು ಹಂಚಿಕೊಂಡಿದ್ದು, ಬಿಸಿಲ ನಾಡಿನಲ್ಲಿ ಭರಪೂರ ಸೇಬು ಬೆಳೆದಿರುವ ಜಿಲ್ಲೆಯ ರೈತನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಸೇಬು ಬೆಳೆದ ಸಾಧನೆ ಮಾಡಿದ ರೈತ ಶ್ರೀಶೈಲ ತೇಲಿ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು (Apple cultivation) ಎಂಬ ಕಲ್ಪನೆಯಿದೆ. ಆದರೆ, ಬಿಸಿಲ ನಾಡಿನಲ್ಲಿ ಸೇಬು ಬೆಳೆಯುವ ಮೂಲಕ ಅಚ್ಚರಿ ಮೂಡಿಸಿರುವ ಶ್ರೀಶೈಲ ತೇಲಿ ಅವರು, ಕಳೆದ ಎರಡೂವರೆ ವರ್ಷದಲ್ಲಿ ಸೇಬು ಬೆಳೆದು 15 ಲಕ್ಷ ರೂ.ಗಳ ಲಾಭ ಮಾಡಿದ್ದಾರೆ.

ಕುಳಲಿ ಗ್ರಾಮದಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ರೈತ ಶ್ರೀಶೈಲ್ ತೇಲಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ತೇಲಿ ಅವರು ಬಯಲು ಸೀಮೆ ಪ್ರದೇಶದಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ರೀತಿ ಮೆಚ್ಚುವಂತದ್ದು. ಸೇಬನ್ನು ಅತಿ ಹೆಚ್ಚಾಗಿ ಬೆಟ್ಟಗುಡ್ಡದಲ್ಲಿ ಬೆಳೆಯುತ್ತಾರೆ. ಆದರೆ, ಶ್ರೀಶೈಲ್ ಅವರು ಸೇಬು ಬೆಳೆಯಲು ಯೋಗ್ಯವಲ್ಲದ ಪ್ರದೇಶದಲ್ಲಿ ಬೆಳೆದು, ಸಾಧಿಸಿ, ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಈ ರೈತ ಸೇಬು ಬೆಳೆದಿರುವುದನ್ನು ನೋಡಿದರೆ ನೀವೆಲ್ಲರೂ ಒಮ್ಮೆ ಅಚ್ಚರಿ ಪಡುತ್ತೀರಿ. 35 ಡಿಗ್ರಿ ತಾಪಮಾನಕ್ಕಿಂತಲೂ ಅಧಿಕವಿರುವ ಏಳು ಎಕರೆ ಪ್ರದೇಶದಲ್ಲಿ ಶ್ರೀಶೈಲ್ ಸೇಬು ಬೆಳೆದಿದ್ದಾರೆ. ಮೊದಲಿಂದಲೂ ಕೃಷಿ ಬಗ್ಗೆ ಅವರಿಗೆ ಆಸಕ್ತಿಯಿತ್ತು. ಸೇಬು ಬೆಳೆಯುವುದರ ಜೊತೆ ಜೊತೆಯಲ್ಲೇ ಒಳ್ಳೆಯ ಆದಾಯ ಕೂಡ ಪಡೆಯುತ್ತಿದ್ದಾರೆ. ಎಕರೆಗೆ ಖರ್ಚುವೆಚ್ಚ ತೆಗೆದು ಮೂರು ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ ಎಂದು ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Most Wanted Terrorists: ಪಹಲ್ಗಾಮ್ ದಾಳಿ: ಲಷ್ಕರ್, ಜೈಶ್, ಹಿಜ್ಬುಲ್ ಭಯೋತ್ಪಾದಕರ ಹೆಸರು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆ