Rashmika Mandanna: ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಚಿತ್ರಕ್ಕೆ ರಶ್ಮಿಕಾ ಎಂಟ್ರಿ; ಯಾವ ಪಾತ್ರ?
NTRNeel: ಸದ್ಯ ದೇಶಾದ್ಯಂತ ಕುತೂಹಲ ಕೆರಳಿಸಿರುವ ಚಿತ್ರಗಳಲ್ಲಿ ʼಎನ್‌ಟಿಆರ್‌ನೀಲ್ʼ ಕೂಡ ಒಂದು. ಪ್ರಶಾಂತ್ ನೀಲ್ ಮತ್ತು ಜೂ.ಎನ್‌ಟಿಆರ್ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿಯಾಗಿದ್ದಾರೆ. ಹಾಗಾದರೆ ಯಾವ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.


ಹೈದರಾಬಾದ್: 'ಕೆಜಿಎಫ್ʼ (KGF) ಸರಣಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಭಾಷ್ಯ ಬರೆದ ಪ್ರಶಾಂತ್ ನೀಲ್ (Prashanth Neel) ಸದ್ಯ ಟಾಲಿವುಡ್‌ನಲ್ಲಿಯೂ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಜತೆ ʼಸಲಾರ್ʼ ಚಿತ್ರ ಮಾಡಿದ್ದ ಅವರು ಇದೀಗ ತೆಲುಗಿನ ಮತ್ತೊಬ್ಬ ಸೂಪರ್ ಸ್ಟಾರ್ ಜೂ.ಎನ್‌ಟಿಆರ್ (Jr NTR) ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಸಿನಿಮಾಕ್ಕೆ ʼಎನ್‌ಟಿಆರ್‌ನೀಲ್ʼ (NTRNeel) ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ (Rukmini Vasanth) ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಮತ್ತೊಬ್ಬ ಕನ್ನಡತಿ ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ ಸದ್ಯ ಟಾಲಿವುಡ್, ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾದ ಭಾಗವಾಗುತ್ತಿದ್ದಾರೆ ಎಂದು ಫಿಲ್ಮ್‌ಫೇರ್ ವೆಬ್‌ಸೈಟ್ ವರದಿ ಮಾಡಿದೆ. ಹಾಗಾದರೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರ?
ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಕಾಂಬಿನೇಷನ್‌ನ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಕೆಲವರು ಇದಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿದೆ ಎನ್ನುತ್ತಿದ್ದರೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ವರದಿಯ ಪ್ರಕಾರ ಈ ಚಿತ್ರದಲ್ಲಿ ನಾಯಕಿ ಒಬ್ಬರೇ ಇರಲಿದ್ದು, ರಶ್ಮಿಕಾ ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಲಿದ್ದಾರಂತೆ.
ಈ ಸುದ್ದಿಯನ್ನೂ ಓದಿ: NTRNeel Update: ಪ್ರಶಾಂತ್ ನೀಲ್, ಜೂ. ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ʼಎನ್‌ಟಿಆರ್‌ನೀಲ್ʼ ಚಿತ್ರದಿಂದ ಹೊರಬಂತು ಎಕ್ಸೈಟಿಂಗ್ ಅಪ್‌ಡೇಟ್
ರಶ್ಮಿಕಾ ಚಿತ್ರರಂಗಕ್ಕೆ ಪ್ರವೇಶಿಸಿ 9 ವರ್ಷ ಕಳೆದಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ನಟಿಸಿದ್ದಾರೆ. ಆದರೆ ಇದುವರೆಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಇದು ಅವರ ಮೊದಲ ಐಟಂ ಸಾಂಗ್ ಎನಿಸಿಕೊಳ್ಳಲಿದೆ. ಅದಾಗ್ಯೂ ಅವರು ʼಪುಷ್ಪʼ ಮತ್ತು ʼಪುಷ್ಪ 2ʼ ಸಿನಿಮಾದ ಹಾಡುಗಳಲ್ಲಿ ತುಂಬಾ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದು, ಮಾದಕವಾಗಿ ಹೆಜ್ಜೆ ಹಾಕಿದ್ದಾರೆ.
ಚಿತ್ರತಂಡ ಈ ಹಾಡನ್ನು ವಿಶೇಷವಾಗಿ ಕಟ್ಟಿಕೊಡಲು ಮುಂದಾಗಿದೆ. ಹೀಗಾಗಿ ಅದ್ಧೂರಿಯಾಗಿ ಚಿತ್ರೀಕರಣ ನಡೆಸಲಿದೆ. ಇದಕ್ಕಾಗಿ ಟಾಪ್ ನಾಯಕಿಯನ್ನೇ ಕರೆತರಲು ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.
ಹಾಗೆ ನೋಡಿದರೆ ಈ ಹಿಂದೆಯೂ ಟಾಪ್ ನಟಿಯರೆಲ್ಲ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಇಂತಹದ್ದೊಂದು ಟ್ರಂಡ್ ಈಗಲೂ ಇದೆ. ಸಮಂತಾ ರುತ್ ಪ್ರಭು, ಶ್ರೀಯಾ, ಪೂಜಾ ಹೆಗ್ಡೆ, ಶ್ರೀಲೀಲಾ ಸೇರಿದಂತೆ ಅನೇಕ ನಾಯಕಿಯರು ಈಗಾಗಲೇ ಸ್ಪೆಷಲ್ ಸಾಂಗ್‌ಗೆ ಮೈಬಳುಕಿಸಿ ಯಶಸ್ವಿಯೂ ಆಗಿದ್ದಾರೆ. ಆ ಸಾಲಿಗೆ ಇದೀಗ ರಶ್ಮಿಕಾ ಮಂದಣ್ಣ ಕೂಡ ಸೇರುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ರಿಲೀಸ್ ಯಾವಾಗ?
ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಜತೆಯಾಗಿ ನಿರ್ಮಿಸುತ್ತಿರುವ ʼಎನ್‌ಟಿಆರ್‌ನೀಲ್ʼ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಏ. 22ರಿಂದ ಜೂ.ಎನ್‌ಟಿಆರ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ʼಕೆಜಿಎಫ್ʼ ಸರಣಿ ಚಿತ್ರಗಳಂತೆ ಇದು ಕೂಡ ಪಕ್ಕಾ ಕಮರ್ಷಿಯಲ್ಲಿ ರೀತಿಯಲ್ಲೇ ಮೂಡಿ ಬರಲಿದ್ದು, ಭರಪೂರ ಆ್ಯಕ್ಷನ್ ದೃಶ್ಯಗಳಿವೆ ಎಂದು ಮೂಲಗಳು ತಿಳಿಸಿವೆ. ತೆಲುಗಿನ ಜತೆಗೆ ಬಹು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇದು ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.