India-Pakistan ceasefire: ಇಂಡೋ-ಪಾಕ್ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮೇ 19ರಂದು ಸ್ಥಾಯಿ ಸಮಿತಿಗೆ ಮಿಸ್ರಿ ಮಾಹಿತಿ
ಮೇ 10ರಂದು ಎರಡೂ ದೇಶಗಳು ಕದನ ವಿರಾಮ ಘೋಷಣೆಯ ಮೂಲಕ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿಗೆ ಸೂಚಿಸಿತ್ತು. ಆ ನಂತರ ನಡೆದ ಬೆಳವಣಿಗೆಗಳ ಕುರಿತು ಮಿಸ್ರಿ ಅವರು ಸಮಿತಿಗೆ ಸಂಪೂರ್ಣ ವಿವರಣೆ ನೀಡಲಿದ್ದಾರೆ ಎಂದು ಶಶಿ ತರೂರ್ ತಿಳಿಸಿದ್ದಾರೆ.


ನವದೆಹಲಿ: ಆಪರೇಷನ್ ಸಿಂದೂರದ ಬಗ್ಗೆ ನಿತ್ಯವೂ ದೇಶಕ್ಕೆ ಮಾಹಿತಿ ನೀಡುತ್ತಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ(vikram misri) ಅವರು ಮೇ 19 ರಂದು ಪಾಕಿಸ್ತಾನದೊಂದಿಗಿನ ಪ್ರಸ್ತುತ ಪರಿಸ್ಥಿತಿಯ(India-Pakistan ceasefire) ಕುರಿತು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಮಾಹಿತಿ ನೀಡಲಿದ್ದಾರೆ. ಈ ವಿಚಾರವನ್ನು ಸಮಿತಿಯ ಅಧ್ಯಕ್ಷ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್(shashi tharoor) ಖಚಿತಪಡಿಸಿದ್ದಾರೆ.
ಮೇ 10ರಂದು ಎರಡೂ ದೇಶಗಳು ಕದನ ವಿರಾಮ ಘೋಷಣೆಯ ಮೂಲಕ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿಗೆ ಸೂಚಿಸಿತ್ತು. ಆ ನಂತರ ನಡೆದ ಬೆಳವಣಿಗೆಗಳ ಕುರಿತು ಮಿಸ್ರಿ ಅವರು ಸಮಿತಿಗೆ ಸಂಪೂರ್ಣ ವಿವರಣೆ ನೀಡಲಿದ್ದಾರೆ ಎಂದು ಶಶಿ ತರೂರ್ ತಿಳಿಸಿದ್ದಾರೆ.
ಈಗಾಗಲೇ ಬಾಂಗ್ಲಾದೇಶ ಸೇರಿ ನೆರೆಹೊರೆಯ ದೇಶಗಳಲ್ಲಿನ ಬೆಳವಣಿಗೆಗಳು ಸೇರಿದಂತೆ ವಿದೇಶಾಂಗ ವ್ಯವಹಾರಗಳ ಹಲವಾರು ವಿಷಯಗಳ ಕುರಿತು ಮಿಸ್ರಿ ನಿಯಮಿತವಾಗಿ ಈ ಸಮಿತಿಗೆ ವಿವರಿಸಿದ್ದಾರೆ.
ಮಿಸ್ರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯ ಟೀಕೆ
ಭಾರತ - ಪಾಕ್ ನಡುವಿನ ಕದನವಿರಾಮದ ಬಗ್ಗೆ ಮಿಸ್ರಿ ಶನಿವಾರ ಘೋಷಿಸಿದ್ದರು. ಅದರ ಬೆನ್ನಲ್ಲೇ, ಅವರನ್ನು ಕೆಲ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಜತೆಗೆ ಅವರ ಮತ್ತು ಮಗಳ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದ್ದರು. ಮಿಸ್ರಿಯವರನ್ನು ‘ದೇಶದ್ರೋಹಿ’ ಎಂದು ಕರೆಯಲಾಗಿತ್ತು. ಹೀಗೆ ಹಲವು ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕೆಲ ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಮಿಸ್ರಿ ಬೆನ್ನಿಗೆ ನಿಂತಿದ್ದಾರೆ.
ಮಿಸ್ರಿಯವರನ್ನು ‘ರಾಷ್ಟ್ರಕ್ಕಾಗಿ ಅವಿಶ್ರಾಂತವಾಗಿ ದುಡಿಯುವ ಸಭ್ಯ, ಪ್ರಾಮಾಣಿಕ ರಾಜತಾಂತ್ರಿಕ ಅಧಿಕಾರಿ’ ಎಂದು ಕರೆದಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಅವರ ವಿರುದ್ಧದ ಟೀಕೆಗಳನ್ನು ಖಂಡಿಸಿದ್ದಾರೆ.
ಇದನ್ನೂ ಓದಿ Operation Sindoor: ಮತ್ತೆ ಬಾಲ ಬಿಚ್ಚಿದ ಪಾಕ್; ಜಮ್ಮು ಕಾಶ್ಮೀರದಲ್ಲಿ ಡ್ರೋನ್ ದಾಳಿ, ಭಾರತೀಯ ಸೇನೆ ಹೇಳಿದ್ದೇನು?
ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ಪ್ರತಿಕ್ರಿಯಿಸಿ, ‘ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಭ್ಯತೆಯ ಎಲ್ಲಾ ಗೆರೆಗಳನ್ನು ಮೀರಿದ ನಡವಳಿಕೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.