ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಎಲ್ಲಿಯೂ ಸಲ್ಲದ ಬಾವಲಿಗಳು

ಹಕ್ಕಿಗಳು ಗೆಲ್ಲುವ ಸ್ಥಿತಿ ಕಂಡು ಬಂದಾಗ, ಬಾವಲಿಗಳು ಅವುಗಳ ಪರ ಸೇರುತ್ತಿದ್ದವು, ಪ್ರಾಣಿಗಳು ಗೆಲ್ಲು ವಂತೆ ಕಂಡಾಗ, ಅವುಗಳೊಂದಿಗೆ ಸೇರಿಕೊಳ್ಳುತ್ತಿದ್ದವು. ಹೀಗೆ ಅನೇಕ ದಿನ ಹೋರಾಟ ನಡೆದರೂ ಯಾವ ಪಕ್ಷಕ್ಕೂ ಜಯ ಮಾತ್ರ ಲಭಿಸಲಿಲ್ಲ. ಪ್ರಾಣಿ ಪಕ್ಷಿಗಳು ಹೋರಾಟ ನಡೆಸಿ, ಮಡಸಿ, ಬಹಳವಾಗಿ ಬಳಲಿ, ಸಂಧಿ ಮಾಡಿಕೊಳ್ಳಲು ಮುಂದಾದವು. ಪಕ್ಷಿಗಳ ರಾಜ, ಹಾಗೂ ಪ್ರಾಣಿಗಳ ರಾಜ ಎರಡೂ ಒಟ್ಟಿಗೆ ಕುಳಿತು ಮಾತನಾಡಿ, ಶಾಶ್ವತ ಶಾಂತಿಗಾಗಿ, ಚರ್ಚೆ ನಡೆಸಿ, ತಮ್ಮ ಹಳೆಯ ದ್ವೇಷವನ್ನು ಮರೆತು, ಎರಡೂ ಪಕ್ಷದವರು ಇನ್ನು ಮುಂದೆ ಸ್ನೇಹಿತರಾಗಿರಬೇಕೆಂದು ತೀರ್ಮಾನಿಸಿದವು.

ಎಲ್ಲಿಯೂ ಸಲ್ಲದ ಬಾವಲಿಗಳು

ಒಂದೊಳ್ಳೆ ಮಾತು

rgururaj628@gmail.com

ಒಂದು ಸಲ ಕಾಡು ಮೃಗಗಳಿಗೂ ಹಾಗೂ ಪಕ್ಷಿಗಳಿಗೂ ದೊಡ್ಡ ಕದನ ನಡೆಯಿತು. ಹಕ್ಕಿಗಳು ತಮ್ಮ ಕೊಕ್ಕುಗಳಿಂದ ಕಾಡುಪ್ರಾಣಿಗಳನ್ನು ಕುಕ್ಕಿ, ಕುಕ್ಕಿ ಅವುಗಳ ಹಿಡಿತಕ್ಕೆ ಸಿಗದೇ ಹಾರಿ ಹೋಗುತ್ತಿದ್ದವು. ಹಾಗಾಗಿ ಕಾಡುಪ್ರಾಣಿಗಳಿಗೆ ಏನು ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಇನ್ನೇನು ಹಕ್ಕಿಗಳು ಸಿಕ್ಕೇ ಬಿಟ್ಟವು ಎನ್ನುವಾಗ ಕೈಗೆ ಸಿಗದಂತೆ, ಮೇಲೆ ಹಾರಿಕೊಂಡು ಹೋಗುತ್ತಿದ್ದವು. ಹೀಗೆ ಇವುಗಳ ಯುದ್ಧ ಬಹಳ ದಿನಗಳವರೆಗೆ ನಡೆಯುತ್ತಲೇ ಇತ್ತು. ಆದರೆ ಬಾವಲಿಗಳು ಮಾತ್ರ ಯಾರ ಪರವಾಗಿಯೂ ಇರದೇ, ತಮ್ಮ ಪಾಡಿಗೆ ತಾವಿದ್ಧವು. ಅವು ಪ್ರಾಣಿಗಳ ಜೊತೆಗೂ ಸೇರಲಿಲ್ಲ, ಪಕ್ಷಿಗಳ ಜೊತೆಗೂ ಕೈಜೋಡಿಸಲಿಲ್ಲ.

ಯಾರು ಗೆಲ್ಲುತ್ತಾರೊ, ಅವರೊಡನೆ ಸೇರಿಕೊಳ್ಳುವುದೆಂದು ಅವುಗಳ ಲೆಕ್ಕಾಚಾರವಾಗಿತ್ತು. ಅವುಗಳಿಗೆ ತಾವು, ಹಕ್ಕಿಗಳಂತೆ ಹಾರಬಲ್ಲೆವು, ಹಾಗಾಗಿ ತಾವು ಹಕ್ಕಿಗಳ ಗುಂಪಿಗೂ ಸೇರುತ್ತೇವೆ, ಮರಿ ಹಾಕುವುದರಿಂದ ತಾವು ಪ್ರಾಣಿಗಳ ವರ್ಗಕ್ಕೂ ಸೇರುತ್ತೇವೆ, ಎಂದು ತಮ್ಮ ಬಗ್ಗೆ ಬಹಳ ಹೆಮ್ಮೆ ಎನಿಸಿ ತಾವು ಎಲ್ಲರಂತಲ್ಲದೇ ಬಹಳ ವಿಶೇಷ ರೀತಿಯವರು ಎಂಬ ಅಹಂಕಾರ ಇತ್ತು.

ಅವು ಕದನದಲ್ಲಿ ಯಾರ ಜೊತೆಗೂ ಸೇರದೇ, ಅವೆರಡರ ಕಾದಾಟವನ್ನು ಸುಮ್ಮನೆ ನೋಡುತ್ತಿದ್ದವು. ಹೋರಾಟ ಮುಂದುವರೆಯಿತು, ಹಕ್ಕಿಗಳು ಗೆಲ್ಲುವ ಸ್ಥಿತಿ ಕಂಡು ಬಂದಾಗ, ಬಾವಲಿಗಳು ಅವುಗಳ ಪರ ಸೇರುತ್ತಿದ್ದವು, ಪ್ರಾಣಿಗಳು ಗೆಲ್ಲುವಂತೆ ಕಂಡಾಗ, ಅವುಗಳೊಂದಿಗೆ ಸೇರಿಕೊಳ್ಳುತ್ತಿದ್ದವು. ಹೀಗೆ ಅನೇಕ ದಿನ ಹೋರಾಟ ನಡೆದರೂ ಯಾವ ಪಕ್ಷಕ್ಕೂ ಜಯ ಮಾತ್ರ ಲಭಿಸಲಿಲ್ಲ. ಪ್ರಾಣಿ ಪಕ್ಷಿಗಳು ಹೋರಾಟ ನಡೆಸಿ, ಮಡಸಿ, ಬಹಳವಾಗಿ ಬಳಲಿ, ಸಂಧಿ ಮಾಡಿಕೊಳ್ಳಲು ಮುಂದಾದವು. ಪಕ್ಷಿಗಳ ರಾಜ, ಹಾಗೂ ಪ್ರಾಣಿಗಳ ರಾಜ ಎರಡೂ ಒಟ್ಟಿಗೆ ಕುಳಿತು ಮಾತನಾಡಿ, ಶಾಶ್ವತ ಶಾಂತಿಗಾಗಿ, ಚರ್ಚೆ ನಡೆಸಿ, ತಮ್ಮ ಹಳೆಯ ದ್ವೇಷವನ್ನು ಮರೆತು, ಎರಡೂ ಪಕ್ಷದವರು ಇನ್ನು ಮುಂದೆ ಸ್ನೇಹಿತರಾಗಿರಬೇಕೆಂದು ತೀರ್ಮಾನಿಸಿದವು.

ಸಂದರ್ಭ ಸಾಧಕರಾದ ಬಾವಲಿಗಳನ್ನು ಮಾತ್ರ, ಯಾವ ಪಕ್ಷಕ್ಕೂ ಸೇರಿಸಿಕೊಳ್ಳಬಾರದೆಂದು ಪ್ರಾಣಿ ಪಕ್ಷಿಗಳು ಒಮ್ಮತದಿಂದ ತೀರ್ಮಾನಿಸಿದವು. ಹೀಗಾಗಿ ಬಾವಲಿಗಳು ಪ್ರತ್ಯೇಕವಾಗಿಯೇ ಉಳಿದವು. ಅವುಗಳಿಗೆ ತಮ್ಮ ಸ್ವಭಾವದ ಬಗ್ಗೆ ಬಹಳ ನಾಚಿಕೆ ಉಂಟಾಯಿತು. ಅದಕ್ಕೇ ಅವು ಯಾರಿಗೂ ತಮ್ಮ ಮುಖ ತೋರಿಸದಂತೆ, ಕತ್ತಲ ಗವಿಗಳಲ್ಲಿ, ಕಣಿವೆಗಳಲ್ಲಿ ಅಡಗಿಕೊಳ್ಳತೊಡಗಿದವು.

ಇದನ್ನೂ ಓದಿ: Roopa Gururaj Column: ರಾಮೇಶ್ವರಂನ ಲಿಂಗಗಳ ಕಥೆ

ಹಕ್ಕಿಗಳು ತಮ್ಮ ಗೂಡಿಗೆ ಹಿಂತಿರುಗುವ ಸಮಯದಲ್ಲಿ, ಹಾಗೂ ಮೃಗಗಳು, ತಮ್ಮ ಬೇಟೆಯಲ್ಲ ಮುಗಿಸಿ ತಮ್ಮ ನೆಲೆಗೆ ಮರಳುವಷ್ಟರಲ್ಲಿ ಕತ್ತಲೆ ಸಮಯದಲ್ಲಿ, ತಮ್ಮ ಅಡಗುತಾಣಗಳಿಂದ ಹೊರಬರ ತೊಡಗಿದವು. ತಮ್ಮ ವ್ಯವಹಾರವನ್ನು ಕತ್ತಲೆಯಲ್ಲಿ ಮಾಡಿಕೊಳ್ಳತೊಡಗಿದವು.

ಕಥೆ ಕಾಲ್ಪನಿಕವಾಗಿರಬಹುದು. ಆದರೆ ಮನುಷ್ಯರಲ್ಲಿ ಇಂತಹ ನಡವಳಿಕೆಯುಳ್ಳ ಅನೇಕರನ್ನು ನಮ್ಮ ಮಧ್ಯೆ ಕಾಣುತ್ತೇವೆ. ಅನುಕೂಲ ಸಿಂಧು ಗುಣದವರಾದ ಇವರು ಯಾರನ್ನೂ ಹೆಚ್ಚಿಗೆ ಹಚ್ಚಿಕೊಳ್ಳುವುದಿಲ್ಲ. ಇವರಿಗೆ ಯಾವುದೇ ಬಣ ಎಂದಿರುವುದಿಲ್ಲ. ಸ್ವಂತ ನಿಲುವಿರುವುದಿಲ್ಲ, ಇವರು ಯಾರನ್ನೂ ಪೂರ್ತಿಯಾಗಿ ನಂಬುವುದಿಲ್ಲ. ನಂಬುವುದಿರಲಿ, ಯಾರೇ ಕಷ್ಟದಲ್ಲಿದ್ದರೂ, ಇವರು ಎಲ್ಲಿ ಲಾಭವಿರುತ್ತದೆ ಅಲ್ಲಿ ಇವರಿರುತ್ತಾರೆ.

ಅತಿ ವಿನಯವನ್ನು ಪ್ರದರ್ಶಿಸುತ್ತಾ, ಸಹಾಯ ಮಾಡುವಂತೆ ತೋರಿಸಿಕೊಳ್ಳುತ್ತಾ ಸದಾ ಜನರ ಮಧ್ಯೆ ಇರುತ್ತಾರೆ. ಆದರೆ ಇವರಿಂದ ಯಾರಿಗೂ ಕಾಸಿನ ಪ್ರಯೋಜನವಾಗುವುದಿಲ್ಲ. ನಿಜವಾಗಿ ಇವರ ಯೋಗ್ಯತೆ ಗೊತ್ತಾಗುವುದು ಯಾರಾದರೂ ಕಷ್ಟಕ್ಕೆ ಸಿಲುಕಿದಾಗ. ಅದೇನೇ ಆದರೂ ಇವರಿಂದ ಒಂದಿಷ್ಟೂ ಸಹಾಯ ಸಿಗುವುದಿಲ್ಲ. ಆದರೆ ಇವರು ಕಷ್ಟದಲ್ಲಿದ್ದಾಗ ಮಾತ್ರ ಊರಿಗಿಲ್ಲದ ಲೆಕ್ಕ ಹೇಳಿ ಎಲ್ಲರನ್ನೂ ಭಾವನಾತ್ಮಕವಾಗಿ ಸೆಳೆಯುವ ಸರ್ಕಸ್ಸು ಮಾಡುತ್ತಾರೆ.

ಇಂತಹ ಆಷಾಢಭೂತಿಗಳನ್ನು ಅಲ್ಲಲ್ಲೇ ಗುರುತಿಸಿ ಅವರನ್ನು ದೂರವಿಟ್ಟಿರಬೇಕು. ಇವರುಗಳು ಯಾರಿಗೂ ಸ್ವಂತದವರಲ್ಲ. ಅಲ್ಲಿಯ ವಿಷಯ ಇಲ್ಲಿಗೆ ಇಲ್ಲಿಯ ವಿಷಯ ಅಲ್ಲಿಗೆ ಹರಡುತ್ತಾ ತಮ್ಮ ಸ್ವಂತ ಬೇಳೆ ಬೇಯಿಸಿಕೊಳ್ಳುತ್ತಾ ಇರುತ್ತಾರೆ. ಕಷ್ಟ ಬಂದಾಗ ಮೊದಲು ಪಲಾಯನ ಮಾಡುವುದು ಇವರೇ. ಇಂತಹವರಿಂದ ಆದಷ್ಟು ದೂರವಿರಿ. ಇವರಿಗೆ ಅದೆಷ್ಟೇ ಸಹಾಯ ಮಾಡಿದರು ಅವಕಾಶ ಗಳನ್ನು ಕೊಟ್ಟರೂ ಇವರು ಯಾರಿಗೂ ಸ್ವಂತದವರಲ್ಲ ನೆನಪಿರಲಿ.