Bengal Violence: ನಿಮ್ಮ ದೇಶದೊಳಗಿನ ಅಲ್ಪಸಂಖ್ಯಾತರನ್ನು ರಕ್ಷಿಸಿ; ಬಾಂಗ್ಲಾಕ್ಕೆ ಭಾರತ ತಿರುಗೇಟು
ವಕ್ಫ್ ಮಸೂದೆ ತಿದ್ದುಪಡಿ ಬಗ್ಗೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೆ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಬಾಂಗ್ಲಾದೇಶ ಪ್ರಯತ್ನಿಸಿದೆ. ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ವೇಳೆ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಹೇಳಿಕೆಯನ್ನು ತಿರಸ್ಕರಿಸಿರುವ ಭಾರತ, ಬಾಂಗ್ಲಾದೇಶ ತನ್ನ ಗಡಿಯೊಳಗಿನ ಅಲ್ಪಸಂಖ್ಯಾತರನ್ನು ರಕ್ಷಿಸುವತ್ತ ಗಮನ ಹರಿಸುವಂತೆ ಸಲಹೆ ನೀಡಿದೆ.


ನವದೆಹಲಿ: ವಕ್ಫ್ ಮಸೂದೆ ತಿದ್ದುಪಡಿ (Waqf Bill) ಬಗ್ಗೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೆ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಬಾಂಗ್ಲಾದೇಶ (Bangladesh) ಪ್ರಯತ್ನಿಸಿದೆ. ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ವೇಳೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ಹಿಂಸಾಚಾರದ (Bengal violence) ಕುರಿತು ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಹೇಳಿಕೆಯನ್ನು ತಿರಸ್ಕರಿಸಿರುವ ಭಾರತ (Ministry of Home Affairs), ಬಾಂಗ್ಲಾದೇಶ ತನ್ನ ಗಡಿಯೊಳಗಿನ ಅಲ್ಪಸಂಖ್ಯಾತರನ್ನು ರಕ್ಷಿಸುವತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಗುರುವಾರ ಬಾಂಗ್ಲಾದೇಶವು ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಜನರನ್ನು ರಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನು ಒತ್ತಾಯಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಬಾಂಗ್ಲಾದೇಶ ನೀಡಿರುವ ಸಲಹೆಯನ್ನು ನಾವು ತಿರಸ್ಕರಿಸುತ್ತೇವೆ ಎಂದು ಹೇಳಿರುವ ವಿದೇಶಾಂಗ ಸಚಿವಾಲಯ ಬಾಂಗ್ಲಾದೇಶ ತನ್ನ ಗಡಿಯೊಳಗಿನ ಅಲ್ಪಸಂಖ್ಯಾತರನ್ನು ರಕ್ಷಿಸುವತ್ತ ಗಮನಹರಿಸಲಿ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಪಸಂಖ್ಯಾತರ ಮೇಲೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ಅಲ್ಲಿ ನಡೆಯುತ್ತಿರುವಂತೆಯೇ ಇಲ್ಲಿಯೂ ಆಗುತ್ತಿದೆ ಎನ್ನುವಂತೆ ಚಿತ್ರಿಸುವ ಪ್ರಯತ್ನ ಮಾಡಿದೆ. ಅಲ್ಲಿ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಮುರ್ಷಿದಾಬಾದ್ ಮತ್ತು ಭಾಂಗರ್‌ನಂತಹ ಪ್ರದೇಶಗಳಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗಿ ರೂಪ ಪಡೆದಿತ್ತು. ಈ ವೇಳೆ ಪ್ರತಿಭಟನಾಕಾರರು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ.
ಮುರ್ಷಿದಾಬಾದ್‌ನಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಹೋಲಿಸುವ ಪ್ರಯತ್ನ ಮಾಡಿರುವ ಬಾಂಗ್ಲಾದೇಶದ ಮೊಹಮ್ಮದ್ ಯೂಸುಫ್ ನೇತೃತ್ವದ ಮಧ್ಯಂತರ ಸರ್ಕಾರ, ಇಲ್ಲಿನ ಅಲ್ಪಸಂಖ್ಯಾತ ಮುಸ್ಲಿಂ ಜನರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿತ್ತು.
ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ಅನಗತ್ಯ ಹೇಳಿಕೆಗಳನ್ನು ನೀಡುವ ಬದಲು, ಬಾಂಗ್ಲಾದೇಶವು ತನ್ನದೇ ಆದ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವತ್ತ ಗಮನಹರಿಸುವುದು ಉತ್ತಮ ಎಂದು ತಿಳಿಸಿದೆ.
ಇದನ್ನೂ ಓದಿ: Dilip Ghosh: 60ನೇ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಬಿಜೆಪಿ ನಾಯಕ ದಿಲೀಪ್ ಘೋಷ್; ವಧು ಯಾರು?
ಹಿಂಸಾಚಾರದ ಹಿಂದೆ ನುಸುಳುಕೋರರು ?
ಮುರ್ಷಿದಾಬಾದ್‌ನ ಮೂರು ಗಡಿ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತದ ಗೃಹ ಸಚಿವಾಲಯ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ.
ಈ ಹಿಂಸಾಚಾರದಲ್ಲಿ ಬಾಂಗ್ಲಾದೇಶದ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ, ಅವರನ್ನು ಸ್ಥಳೀಯ ಟಿಎಂಸಿ ನಾಯಕರು ಬೆಂಬಲಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.