Friday, 1st November 2024

ಹೆದ್ದಾರಿಯಲ್ಲಿ ತಪ್ಪದ ವನ್ಯಜೀವಿಗಳ ಸಾವು

ನಂದಗುಡಿಯ ಚಿಂತಾಮಣಿ- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಅಪರೂಪದ ಪ್ರಾಣಿ ಸಂತತಿ ಬಲಿ

ವಿಶೇಷ ವರದಿ: ಸಿ.ಎಸ್.ನಾರಾಯಣಸ್ವಾಮಿ, ಚಿಕ್ಕಕೋಲಿಗ

ಹೊಸಕೋಟೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಾಮಣಿ-ಬೆಂಗಳೂರು ರಸ್ತೆಯ ಚೊಕ್ಕ ಸಂದ್ರ ಗೇಟ್ ಬಳಿ ವಾಹನ ಡಿಕ್ಕಿ ಹೊಡೆದ ಪರಿಣಾಮ ನರಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನರಿಯೊಂದು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಪೆಟ್ಟಾಗಿ ರಕ್ತ ಮಡುವಿನಲ್ಲಿ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ವಾಹನ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಅಪಘಾತ ನಡೆದು ಸ್ಥಳ ದಲ್ಲೆ ನರಿ ಸತ್ತು ಬಿದ್ದಿದ್ದರೂ ಸ್ಥಳಕ್ಕೆೆ ಬಾರದ ಅರಣ್ಯಾಧಿಕಾರಿಗಳು, ನರಿ ಸಂತತಿ ಉಳಿವಿನ ಬಗ್ಗೆ ಅರಣ್ಯ ಇಲಾಖೆ ಕಾಳಜಿ
ವಹಿಸದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಂದಗುಡಿ ವಲಯದಲ್ಲಿ ಸುಮಾರು 1,500ಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶವಿದ್ದು, ರೈತರ ಸಾವಿರಾರು ಎಕರೆ ಮಾವು, ತೆಂಗು, ಸೀಬೆ, ಗೋಡಂಬಿ, ನೀಲಗಿರಿ, ಹುಣಸೆ ಸೇರಿದಂತೆ ಹಲವು ತೋಪುಗಳು ಅರಣ್ಯ ಪ್ರದೇಶವನ್ನು ಸುತ್ತುವರಿದಿದೆ. ಹೊಸಕೋಟೆ ತಾಲೂಕಿನಲ್ಲಿ ಸುಮಾರು 8,600 ಕ್ಕೂ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದ್ದು, ಪ್ರತಿ ವರ್ಷ ನೂರಾರು ನವಿಲು, ಜಿಂಕೆ, ಕೃಷ್ಣಮೃಗ, ನರಿ, ಕಾಡುಹಂದಿ, ಮೊಲ, ಕೋತಿಗಳು ಅರಣ್ಯ ಇಲಾಖೆ, ತಾಲೂಕು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ
ವಾಹನ ಗಳಿಗೆ ಬಲಿಯಾಗುತ್ತಿವೆ.

ನೂರಾರು ಪ್ರಾಣಿಗಳ ಸಾವು: ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ವಾಹನ ಚಾಲಕರು ವೇಗ ಮಿತಿ ನಿಯಮ ಪಾಲನೆ ಮಾಡದೆ, ವನ್ಯಜೀವಿಗಳ ಸಾವು ನಿತ್ಯ ನಡೆಯುತ್ತಿದೆ. ಹೆಚ್ಚುತ್ತಿರುವ ವಾಹನ ಸಂಚಾರದಿಂದಾಗಿ ಹಗಲು, ರಾತ್ರಿ ಎನ್ನದೆ ಮೂಕ ಕಾಡು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಪ್ರತಿ ರಸ್ತೆಗೂ ಇಂತಿಷ್ಟು ವೇಗ ಎಂಬ ಮಿತಿಯನ್ನು ವಿಧಿಸಲಾಗಿರುತ್ತದೆ. ಆ ನಿಯಮ ನಾಮಫಲಕಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ. ಬಹುತೇಕ ವಾಹನ ಚಾಲಕರಿಗೆ ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿ ಅಥವಾ ಅರಣ್ಯ ಪ್ರದೇಶದಲ್ಲಿನ ರಸ್ತೆಗೂ ವ್ಯತ್ಯಾಸವೇ ಇಲ್ಲದಂತಾಗಿದೆ.

ದಂಡ ವಿಧಿಸುವುದು ಅಗತ್ಯ: ಅರಣ್ಯ ಭಾಗದಲ್ಲಿನ ರಸ್ತೆಗಳಲ್ಲಿ ಇಲಾಖೆ ಸಿಬ್ಬಂದಿ ಗಸ್ತು ನಿರಂತರವಾಗಿರಬೇಕು. ಇದರಿಂದ ಅರಣ್ಯ ಪ್ರದೇಶದಲ್ಲಿ ವಾಹನ ಗಳನ್ನು ನಿಲ್ಲಿಸಿ, ಪ್ರಾಣಿಗಳ ಫೋಟೊ ಸೆರೆ ಹಿಡಿಯುವುದು, ಕೆಲ ವೇಳೆ ಅಪಾಯಕ್ಕೆ ಸಿಲುಕುವುದನ್ನು ತಡೆ ಯಲು ಸಾಧ್ಯವಾಗುತ್ತದೆ. ಅರಣ್ಯ ಭಾಗದ ರಸ್ತೆಗಳಲ್ಲಿ ಹಂಪ್ (ಸ್ಪೀಡ್ ಬ್ರೇಕರ್) ಅಳವಡಿಸಲು ಕ್ರಮ ಜರುಗಿಸಬೇಕು. ವೇಗ ಮಿತಿ ಬಗ್ಗೆ ಅರಿವು ಮೂಡಿಸಲು ನಾ ಮಫಲಕಗಳನ್ನು ಅಳವಡಿಸಬೇಕು. ಮಿತಿ ಮೀರಿ ವೇಗವಾಗಿ ಚಲಿಸುವ
ಚಾಲಕರಿಗೆ ದುಬಾರಿ ದಂಡ ವಿಧಿಸಬೇಕು.

ಇನ್ನಾದರೂ ವನ್ಯಜೀವಿಗಳ ಮಾರಣ ಹೋಮ ತಪ್ಪಿಸಲು ಅರಣ್ಯ ಇಲಾಖೆಯೊಂದಿಗೆ ರಾಜ್ಯ ಹೆದ್ದಾರಿ ಅಥವಾ ಪಿಡಬ್ಲ್ಯೂಡಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ವನ್ಯಜೀವಿ ಪ್ರಿಯರ ಆಗ್ರಹ.

ನರಿ ಮೃತಪಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ, ಅರಣ್ಯ ಪ್ರದೇಶದ ರಸ್ತೆಯಲ್ಲಿ ನಿಧಾನಕ್ಕೆ ಚಲಿಸಿ, ಇದು ಪ್ರಾಣಿಗಳ
ಸಂಚಾರ ವಲಯ, ಎಂಬಿತ್ಯಾದಿ ನಾಮಫಲಕಗಳನ್ನು ಹಾಕಿ ಅರಿವು ಮೂಡಿಸಿದ್ದೇವೆ. ಆದರೂ ಕೆಲವರು ವೇಗವಾಗಿ ಚಲಿಸಿ, ಪ್ರಾಣಿಗಳ ಸಾವಿಗೆ ಕಾರಣರಾಗುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮತ್ತಷ್ಟು ಬಿಗಿ ಕ್ರಮ
ವಹಿಸಲಾಗುವುದು.

– ವರುಣ್ ಕುಮಾರ್. ಆರ್‌ಎಫ್‌ಒ ಹೊಸಕೋಟೆ ವಲಯ