ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಜಿಸಿದ ನಟನಿಗೆ ಚಲನಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿ
ಪ್ರಶಾಂತ್ ಟಿ.ಆರ್. ಬೆಂಗಳೂರು
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆಗಾಗಿ ಕೇಂದ್ರ ಸರಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. 2020ನೇ ಸಾಲಿನ 51ನೇ ಫಾಲ್ಕೆ ಪ್ರಶಸ್ತಿ ಇದಾಗಿದೆ.
ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಜಿಸಿ, ಸ್ಫೂರ್ತಿ ತುಂಬಿರುವ ತಲೈವಾ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರು ವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ನಟನೆಯ ಮೂಲಕ ತೆರೆಯಲ್ಲಿ ಮನರಂಜನೆಯನ್ನೇ ಹರಿಸಿದ ನಿಜವಾದ ಸಾಧಕನಿಗೆ ಸಂದ ಗೌರವ ಇದಾಗಿದೆ.
ಸಿನಿಮಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಜೀವಮಾನ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಿಲ್ಲಿ ಭಾರತ ಸರಕಾರದಿಂದ 1969ರಿಂದ ಪ್ರಶಸ್ತಿ ನೀಡಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯ ದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಸ್ವರ್ಣ ಕಮಲ ಪದಕ, ಶಾಲು ಮತ್ತು 10 ಲಕ್ಷ ನಗದು ಬಹುಮಾನ ಒಳಗೊಂಡಿರುತ್ತದೆ.
ಅಂದುಕೊಂಡದ್ದನ್ನು ಸಾಧಿಸಿದ ಛಲಗಾರ: ರಜನಿಕಾಂತ್ ನಮಗೆಲ್ಲರಿಗೂ ಸ್ಫೂರ್ತಿಯಾಗಿ ನಿಲ್ಲುತ್ತಾರೆ. ಅವರು ಸಾಧನೆಯ
ಶಿಖರವೇರಿದ್ದಾರೆ ಎಂದರೆ ಸಾಗಿದ ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಸುಗಮವೂ ಆಗಿರಲಿಲ್ಲ. ಬಂದ ಕಷ್ಟವನ್ನೆಲ್ಲ
ಮೆಟ್ಟಿ ನಿಂತು ಅಂದುಕೊಂಡಿದ್ದನ್ನು ಸಾಧಿಸಿದ ಛಲಗಾರ ಈ ರಜನಿಕಾಂತ್.
ರಜನಿಯ ಮೂಲ ಹೆಸರು ಶಿವಾಜಿರಾವ್ ಗಾಯಕ್ವಾಡ್. ಹುಟ್ಟಿದ್ದು ಬಡ ಕುಟುಂಬದಲ್ಲಿ, ಬಾಲ್ಯದಲ್ಲೇ ತಾಯಿಯನ್ನು
ಕಳೆದುಕೊಂಡ ಶಿವಾಜಿರಾವ್ಗೆ ಅಣ್ಣನೇ ಆಧಾರವಾಗಿದ್ದರು. ಗವಿಪುರಂ ಸರಕಾರಿ ಪ್ರಾಥಮಿಕ ಶಾಲೆಗೆ ಸೇರಿಸಿದರು. ಅಲ್ಲಿಂದ
ರಾಮಕೃಷ್ಣ ಮಠದಲ್ಲಿ ವೇದ, ಇತಿಹಾಸ ಅಧ್ಯಯನ ಮಾಡಿದರು. ಆ ದಿನಗಳಲ್ಲಿಯೇ ಶಿವಾಜಿರಾವ್ ಪ್ರತಿಭಾವಂತನಾಗಿದ್ದ,
ನಟನೆಯಲ್ಲೂ ಆಸಕ್ತಿ ತಾಳಿದ್ದ. ಒಂದು ದಿನ ಮಠದಲ್ಲಿ ಏಕಲವ್ಯ ನಾಟಕದಲ್ಲಿ ಪ್ರದರ್ಶನವಿತ್ತು. ಈ ನಾಟಕದಲ್ಲಿ ಏಕಲವ್ಯನ
ಸ್ನೇಹಿತನ ಪಾತ್ರದಲ್ಲಿ ಶಿವಾಜಿ ಬಣ್ಣ ಹಚ್ಚಿದ್ದರು. ಈ ನಾಟಕವನ್ನು ನೋಡಿದ ಪ್ರಸಿದ್ಧ ಕವಿ ದ.ರಾ ಬೇಂದ್ರೆಯವರು ಶಿವಾಜಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಠದಲ್ಲಿ ಶಿಕ್ಷಣ ಮುಗಿಸಿದ ಶಿವಾಜಿ ರಾವ್, ಹೊಟ್ಟೆ ಪಾಡಿಗಾಗಿ ಕಾರ್ಪೆಂಟರ್ ಕೆಲಕ್ಕೆ ಸೇರಿದರು. ಅಲ್ಲಿ ಕೆಲಸ ಮಾಡುತ್ತಿರು ವಾಗಲೇ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ನೌಕರಿ ಸಿಕ್ಕಿತು. ಬಸ್ ನಿರ್ವಾಹಕರಾಗಿ ನೌಕರಿಗೆ ಸೇರಿದ ಶಿವಾಜಿ ರಾವ್ಗೆ ಎಲ್ಲಿಲ್ಲದ ಆನಂದ. ಬಸ್ನಲ್ಲಿ ಎಷ್ಟೇ ಜನರಿದ್ದರೂ ಕೊಂಚವೂ ಬೇರಸ ಮಾಡಿಕೊಳ್ಳದೇ, ಒತ್ತಡಕ್ಕೂ ಒಳಗಾಗದೆ ಎಲ್ಲರಿಗೂ ಪಟ ಪಟನೇ ಟಿಕೆಟ್ ನೀಡುತ್ತಿದ್ದರು.
ಅದೂ ಅವರದ್ದೇ ಸ್ಟೈಲ್ನಲ್ಲಿ. ಈ ಬಸ್ಸಿಗೆ ಸಾರಥಿಯಾಗಿ ರಾಜ್ ಬಹದ್ದೂರ್ ಇದ್ದರು. ಶಿವಾಜಿ ರಾವ್ ಹಾಗೂ ರಾಜ್ಬಹದ್ದೂರ್
ಇಬ್ಬರೂ ಸಹೋದರರಂತಿದ್ದರು. ಶಿವಾಜಿಯ ಸಂಕಷ್ಟಕ್ಕೆ ಬಹದ್ದೂರ್ ಸದಾ ಸಹಾಯ ಮಾಡುತ್ತಿದ್ದರು. ಶಿವಾಜಿರಾವ್ ಕಂಡಕ್ಟರ್ ಆಗಿದ್ದ ಬಸ್ನಲ್ಲಿ ನಿರ್ಮಲಾ ಎನ್ನುವ ವೈದ್ಯೆೆಯೊಬ್ಬರು ಪ್ರತಿದಿನ ಪ್ರಯಾಣಿಸುತ್ತಿದ್ದರು. ಅವರಿಗೆ ಶಿವಾಜಿಯ ಸ್ಟೈಲಿಶ್ನೆಸ್ ಇಷ್ಟವಾಗಿತ್ತು. ನೀವೇಕೆ ನಟಿಸಲು ಪ್ರಯತ್ನ ಪಡಬಾರದು ಎಂದು ಅಂದೇ ಸಲಹೆ ಕೊಟ್ಟಿದ್ದರು.
ರಾಜ್ಬಹದ್ದೂರ್ ಕೂಡ ಇದನ್ನೇ ಹೇಳಿದ್ದರು. ಅಂತೆಯೇ ಒಂದು ದಿನ ರಜನಿ ಇವರಿಬ್ಬರನ್ನು ನಾಟಕ ನೋಡಲು ಆಹ್ವಾನಿಸಿ
ದರು. ಆ ನಾಟಕದಲ್ಲಿ ರಜನಿ ದುರ್ಯೋಧನ ಪಾತ್ರದಲ್ಲಿ ನಟಿಸಿ ಅಬ್ಬರಿಸಿದರು. ಇವರ ನಟನಾ ಕೌಶಲ್ಯವನ್ನು ಕಂಡ ನಿರ್ಮಲಾ,
ಅವರಿಗೆ ಗೊತ್ತಿಲ್ಲದಂತೆ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ಗೆ ಅರ್ಜಿ ಸಲ್ಲಿಸಿದ್ದರು.
ಅಲ್ಲಿಗೆ ಬರುವಂತೆ ಶಿವಾಜಿಗೆ ಪತ್ರವೊಂದು ಬಂದಿತು. ಇದನ್ನು ನೋಡಿ ಶಿವಾಜಿಗೆ ಅಚ್ಚರಿ. ಅಯ್ಯೋ ನಾನು ಅರ್ಜಿಯೇ ಹಾಕಿಲ್ಲ, ಆದರೂ ಪತ್ರ ಬಂದಿದೆ ಎಂದು. ಆಗ ನಿರ್ಮಲಾ ಎಲ್ಲವನ್ನೂ ವಿವರಿಸಿದರು. ‘ನಾನು ಅಲ್ಲಿಗೆ ಹೋದರೆ ನನ್ನ ಕೆಲಸದ ಪಾಡೇನು?’ ಎಂದು ಶಿವಾಜಿ ಚಿಂತಿಸಿದರು. ನಿರ್ಮಲಾ ಹಾಗೂ ರಾಜ್ಬಹದ್ದೂರ್ ಇಬ್ಬರೂ ಧೈರ್ಯತುಂಬಿ 500 ರು. ನೀಡಿ ಮದ್ರಾಸ್ಗೆ ಹೋಗುವಂತೆ ತಿಳಿಸಿದರು.
ಮದ್ರಾಸ್ಗೆ ಹೋದ ಶಿವಾಜಿ ರಾವ್ ಮರಳಿ ಬೆಂಗಳೂರಿಗೆ ಬಂದು ನಿರ್ಮಲಾ ಅವರನ್ನು ಭೇಟಿಯಾಗಲು ತೆರಳಿದರು. ಅದಾಗಲೇ ನಿರ್ಮಲಾ ಮನೆ ಖಾಲಿ ಮಾಡಿ ಬೇರೆಡೆ ತೆರಳಿದ್ದರು. ಇದೇ ಸಂದರ್ಭದಲ್ಲಿ ರಜನಿ ಅವರನ್ನು ಕಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಕಂಗಾಲಾದ ರಜನಿ ದಿಕ್ಕು ತೋಚದಾದರು. ಆ ವೇಳೆ ಇವರ ನೆರವಿಗೆ ಧಾವಿಸಿದ್ದು ಇವರ ಗೆಳೆಯ ರಾಜ್ಬಹದ್ಧೂರ್.
ಶಿವಾಜಿ ರಾವ್ ರಜನಿಕಾಂತ್ ಆದ ಕಥೆ: ಕೆಲ ದಿನಗಳ ಬಳಿಕ ಶಿವಾಜಿ ರಾವ್ ಮತ್ತೆ ಮದ್ರಾಸ್ಗೆ ಮರಳಿದರು. ಅಲ್ಲಿ ಕೆಲವು
ಸಣ್ಣಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಈ ವೇಳೆ ಪ್ರಸಿದ್ಧ ನಿರ್ದೇಶಕ ಬಾಲಚಂದರ್ ಅವರ ಕಣ್ಣಿಗೆ ಬಿದ್ದರು. ಶಿವಾಜಿಯ ನಟನೆಯನ್ನು ಕಂಡ ಬಾಲಚಂದರ್ ಮರುದಿನ ಬಂದು ನನ್ನನ್ನು ಕಾಣುವಂತೆ ತಿಳಿಸಿದರು. ಬಾಲಚಂದರ್ ಭೇಟಿಗೆ ಹೋದ ಶಿವಾಜಿಗೆ ಒಂದು ಪಾತ್ರದಲ್ಲಿ ನಟಿಸುವಂತೆ ತಿಳಿಸುತ್ತಾರೆ. ಈ ವೇಳೆ ಶಿವಾಜಿ ‘ತುಘಲಕ್’ ನಾಟಕದ ತುಣಕೊಂದನ್ನು ನಟಿಸಿ ತೋರಿಸುತ್ತಾರೆ.
ನಟನೆ ನೋಡಿ ಮೆಚ್ಚಿದ ಬಾಲಚಂದರ್, ತಮಿಳು ಕಲಿತು ಬಾ ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುತ್ತೇನೆ ಎನ್ನುತ್ತಾರೆ. ಅದರಂತೆ ಶಿವಾಜಿ ರಾವ್ ತಮಿಳು ಕಲಿತು ನಿರ್ದೇಶಕರ ಬಳಿ ತೆರಳುತ್ತಾರೆ. ಇದೇ ಸಮಯದಲ್ಲಿ ‘ಅಪೂರ್ವ ರಾಯಂಗಳ್’ ಚಿತ್ರ ಸೆಟ್ಟೇರಿರುತ್ತದೆ. ಈ ಚಿತ್ರದಲ್ಲಿ ಶಿವಾಜಿ ಕುಡುಕನ ಪಾತ್ರದಲ್ಲಿ ಬಣ್ಣ ಹಚ್ಚುತ್ತಾರೆ. ‘ಮೊದಲ ಚಿತ್ರ ತೆರೆಯಲ್ಲಿ ನಿನ್ನ ಹೆಸರು ಏನೆಂದು ಬರಬೇಕೆಂದು ಬಯಸುತ್ತೀಯ’ ಎಂದು ನಿರ್ದೇಶಕರು ಕೇಳಿದಾಗ ಶಿವಾಜಿರಾವ್ ಗಾಯಕ್ ವಾಡ್ ಎಂದು ಹೇಳುತ್ತಾರೆ.
ಈಗಾಗಲೇ ಆ ಹೆಸರಿನ ನಟರಿದ್ದಾರೆ. ಇನ್ನು ಮುಂದೆ ನೀನು ರಜನಿಕಾಂತ್ ಎಂದು ಹೆಸರು ಬದಲಿಸಿಕೋ ಎನ್ನುತ್ತಾರೆ. ಅಂದಿ ನಿಂದ ಶಿವಾಜಿ , ರಜನಿಕಾಂತ್ ಆಗಿ ಮನೆ ಮಾತಾದರು. ಅವಮಾನಕ್ಕೆ ಪ್ರತ್ಯುತ್ತರ ಕೊಟ್ಟ ಹಠಗಾರ: ‘60 ವಯೋದಿನಿಲೆ’ ಎಂಬ ಚಿತ್ರದ ಚಿತ್ರೀರಣ ಇನ್ನೇನು ಆರಂಭವಾಗಬೇಕಿತ್ತು. ಆ ಚಿತ್ರದಲ್ಲಿ ಪಾತ್ರ ಮಾಡುವಂತೆ ನಿರ್ಮಾಪಕರು ರಜನಿ ಅವರಿಗೆ ತಿಳಿಸಿದ್ದರು. ಅದಕ್ಕಾಗಿ 600 ರು. ಸಂಭಾನೆ ನೀಡುವುದಾಗಿಯೂ ಹೇಳಿದ್ದರು.
ಪಾತ್ರ ಮಾಡಲು ಒಪ್ಪಿಕೊಂಡ ರಜನಿ ಮೊದಲು ಮುಂಗಡ ಹಣವನ್ನು ನೀಡುವಂತೆ ಕೇಳುತ್ತಾರೆ. ಈಗಿಲ್ಲ ಬದಲಾಗಿ ನೀನು ಚಿತ್ರೀಕರಣಕ್ಕೆ ಬಾ, ಅಲ್ಲೇ ನೀಡುತ್ತೇನೆ ಎಂದು ಹೇಳುತ್ತಾರೆ. ಅಂತೆಯೇ ಚಿತ್ರೀಕರಣಕ್ಕೆ ತೆರಳಿದ ರಜನಿಗೆ ಮರುದಿನವೂ
ಮುಂಗಡ ಸಿಗುವುದಿಲ್ಲ. ಮತ್ತೆ ಮರು ದಿನ ನೀಡುವುದಾಗಿ ಮ್ಯಾನೇಜರ್ ಹೇಳುತ್ತಾರೆ. ಸರಿ ಎಂದು ಮರುದಿನ ಚಿತ್ರೀಕರಣಕ್ಕೆ ಬಂದ ರಜನಿಕಾಂತ್ ಅವರಿಗೆ ಮುಂಗಡ ಸಿಗುವುದೇ ಇಲ್ಲ. ಬದಲಾಗಿ ರಜನಿ ಅವರನ್ನು ಅವಮಾನ ಮಾಡಿ ಅಲ್ಲಿಂದ ಹೊರಗೆ ಕಳುಹಿಸುತ್ತಾರೆ.
ಅವಮಾನದಿಂದ ಹಿಂತಿರುಗಿದ ರಜನಿ ಹೋಗುವಾಗ ರಸ್ತೆಯನ್ನು ನೋಡಿ ಮುಂದೊಂದು ದಿನ ಇದೇ ರಸ್ತೆಯಲ್ಲಿ ವಿದೇಶಿ ಕಾರಿನಲ್ಲಿ ಬಂದೇ ಬರುತ್ತೇನೆ. ಅವಮಾನ ಮಾಡಿದವರ ಮುಂದೆಯೇ ಕಾಲು ಮೇಲೆ ಕಾಲು ಹಾಕಿ ಕೂರುತ್ತೇನೆ ಎಂದು ಶಪಥ
ಮಾಡುತ್ತಾರೆ. ಇದೇ ಸಮಯದಲ್ಲಿ ಚಿತ್ರೀಕರಣ ಆರಂಭಿಸಿದ್ದ ‘ಭೈರವಿ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುವ
ಅವಕಾಶ ಸಿಗುತ್ತದೆ. ‘ಭೈರವಿ’ ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತದೆ. ಈ ಚಿತ್ರ ರಜನಿ ಅವರ ಜೀವನಕ್ಕೆ ಹೊಸ
ತಿರುವು ನೀಡಿತು. ಮುಂದಿನ ಎರಡು ವರ್ಷಗಳ ವರೆಗೆ ರಜನಿಕಾಂತ್ ಫುಲ್ ಬ್ಯುಸಿಯಾಗುತ್ತಾರೆ.
ತಾವು ಒಪ್ಪಿಕೊಂಡ ಚಿತ್ರಗಳಲ್ಲಿ ಮೆಚ್ಚುವಂತೆ ನಟಿಸುತ್ತಾರೆ. ಇದಾದ ಬಳಿಕ ರಜನಿ ಗಮನಹರಿದಿದ್ದು ಕಾರು ಕೊಳ್ಳುವತ್ತ. ಅಂದೇ ಇಟಾಲಿಯನ್ ಫಿಯೆಟ್ ಕಾರನ್ನು 4.15 ಲಕ್ಷ ರು. ನೀಡಿ ಖರೀದಿಸುತ್ತಾರೆ. ಅದಕ್ಕೆ ರಾಬಿನ್ಸನ್ ಎಂಬ ಡ್ರೇವರ್ನನ್ನು ನೇಮಕ ಮಾಡಿಕೊಳ್ಳುತ್ತಾರೆ.
ಕಾರು ಕೊಂಡ ಕ್ಷಣದಲ್ಲೇ ಡ್ರೈವರ್ಗೆ ಎವಿಎಂ ಸ್ಟುಡಿಯೋಗೆ ಹೊರಡಲು ಸೂಚಿಸುತ್ತಾರೆ. ಅಲ್ಲಿಗೆ ತೆರಳಿದ ರಜನಿಕಾಂತ್
ಅವಮಾನ ಮಾಡಿದ ನಿರ್ಮಾಪಕನ ಮುಂದೆಯೇ ಕಾಲು ಮೇಲೆ ಕಾಲು ಹಾಕಿ ಸಿಗರೇಟು ಸೇದುತ್ತಾರೆ. ತಮಗಾದ ಅವಮಾನಕ್ಕೆ
ನೋಟದಲ್ಲೇ ತಕ್ಕ ಉತ್ತರ ನೀಡುತ್ತಾರೆ.
160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ: ರಜನಿಕಾಂತ್ ನಾಲ್ಕು ದಶಕಗಳಲ್ಲಿ ಸುಮಾರು 160 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಅಣ್ಣಾಮಲೈ’, ‘ಭಾಷಾ’, ‘ಶಿವಾಜಿ’, ‘ಪಡೆಯಪ್ಪ’ .. ಹೀಗೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 4 ದಶಕಗಳಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ರಜನಿಕಾಂತ್ ಅವರಿಗೆ ಅಮಿತಾಬ್ ಬಚ್ಚನ್ ಅವರೇ ಸ್ಫೂರ್ತಿ, ಅವರನ್ನು ಆರಾಧಿಸುತ್ತಿದ್ದ ರಜನಿಕಾಂತ್, ಹಿಂದಿಯಲ್ಲಿ ಅವರು ನಟಿಸಿದ್ದ ಹಲವು ಚಿತ್ರಗಳನ್ನು ಡಬ್ ಮಾಡಿದ್ದಾರೆ.
2002 ರಲ್ಲಿ ‘ಬಾ ಬಾ’ ಸಿನಿಮಾ ಸೋತಾಗ ಡಿಸ್ಟ್ರಿಬ್ಯೂಟರ್ಗೆ ನೆರವಾದರು. ಕೆಲ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ರಜನಿ, ‘ಚಂದ್ರಮುಖಿ’ ಚಿತ್ರದ ಮೂಲಕ ಮರಳಿ ಬಂದರು. ಈ ಚಿತ್ರ ಹೆಚ್ಚು ಪ್ರದರ್ಶನ ಕಂಡು ದಾಖಲೆಯನ್ನೇ ಬರೆಯಿತು. ‘ಬ್ಲೆಡ್ ಸ್ಟೋನ್’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಹಾಲಿವುಡ್ಗೂ ಎಂಟ್ರಿ ಕೊಟ್ಟರು. ವಿಶೇಷ ಎಂದರೆ ರಜನಿಕಾಂತ್ ಅಭಿನಯದ ‘ಮುತ್ತು’ ಸಿನಿಮಾ ಜಪಾನ್ ಭಾಷೆಗೂ ಡಬ್ ಆಗಿ ಪ್ರದರ್ಶನ ಕಂಡಿತು. ವರನಟ ಡಾ.ರಾಜ್ ಕುಮಾರ್ ಅಭಿಮಾನಿಯಾದ ರಜನಿಕಾಂತ್ ಕನ್ನಡದ ಕಥಾ ಸಂಗಮ, ಬಾಳು ಜೀನು, ಒಂದು ಪ್ರೇಮದ ಕಥೆ, ಸಹೋದರರ ಸವಾಲು , ಕುಂಕುಮ ರಕ್ಷೆ, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ , ತಪ್ಪಿದ ತಾಳ, ಪ್ರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಧಾನಿ ಅಭಿನಂದನೆ
‘ಹಲವು ತಲೆಮಾರುಗಳಲ್ಲಿ ಜನಪ್ರಿಯರಾಗಿರುವ, ತಮ್ಮ ಕೆಲಸದ ಬಗ್ಗೆ ಹೆಮ್ಮೆಪಡುವಂತೆ ಮಾಡಿರುವ, ವೈವಿಧ್ಯಮಯ ಪಾತ್ರ ಮತ್ತು ಪ್ರೀತಿಯ ವ್ಯಕ್ತಿತ್ವ ಹೊಂದಿರುವ ನಟ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ಅಪಾರ
ಸಂತಸ ತರುವ ಸಂಗತಿಯಾಗಿದೆ. ಅವರಿಗೆ ನನ್ನ ಅಭಿನಂದನೆಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ಚಿತ್ರರಂಗದ ಘಟಾನುಘಟಿ ಕಲಾವಿದರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಈ ಪ್ರಶಸ್ತಿ ಪಡೆದವರು
1982-ಎಲ್.ವಿ.ಪ್ರಸಾದ್, 1986-ಬಿ. ನಾಗಿರೆಡ್ಡಿ, 1990-ಅಕ್ಕಿನೇನಿ ನಾಗೇಶ್ವರ ರಾವ್, 1995-ಡಾ.ರಾಜ್ಕುಮಾರ್, 1996-ಶಿವಾಜಿ ಗಣೇಶನ್, 2004-ಅಡೂರ್ ಗೋಪಾಲಕೃಷ್ಣನ್, 2009-ಡಿ.ರಾಮಾನಾಯ್ಡು, 2010-ಕೆ.ಬಾಲಚಂದರ್, 2016-ಕೆ.ವಿಶ್ವನಾಥ್
2019-ರಜನಿಕಾಂತ್.