Friday, 1st November 2024

ಹಂಪಿಯ ಸ್ಮಾರಕ ರಕ್ಷಣೆಗೆ ಸೂಚನಾ ಫಲಕ

ಭಾರಿ ವಾಹನಗಳ ಓಡಾಟಕ್ಕೆ ಬ್ರೇಕ್ 385 ಕಡೆಗಳಲ್ಲಿ ಸೂಚನಾಫಲಕ ಅಳವಡಿಕೆ

ವಿಶೇಷ ವರದಿ: ಅನಂತ ಪದ್ಮನಾಭ ರಾವ್

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿನ ಸ್ಮಾರಕಗಳನ್ನು ರಕ್ಷಿಸಲು ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳು ಮುಂದಾಗಿವೆ. ಸ್ಮಾರಕಗಳ ಸಂರಕ್ಷಣೆಗೆ ಸುಮಾರು 300 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಹನ ಗಳು ಹಾಗೂ ಭಾರಿ ಗಾತ್ರದ ವಾಹನ ನಿರ್ಬಂಧ ಸೂಚನಾ ಫಲಕ, ಕಬ್ಬಿಣ ಸಲಾಕೆಗಳನ್ನು ಅಳಪಡಿಸಲು ತಯಾರಿ ನಡೆಸಿವೆ.

ಸೂಚನಾಫಲಕ ಅಳವಡಿಕೆ: ವಿಶ್ವ ಪ್ರಸಿದ್ಧ ಹಂಪಿಗೆ ನೂರಾರು ವರ್ಷಗಳ ಇತಿಹಾಸ ವಿದ್ದು ಅನೇಕ ಸ್ಮಾರಕ ಹಾಗೂ ಮಂಟಪ ಗಳಿವೆ. ವಾಹನಗಳ ಓಡಾಟದಿಂದ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತಿತ್ತು. ಸ್ಮಾರಕಗಳಿಗೆ ಧಕ್ಕೆ ಆದ ಸಂದರ್ಭಗಳಲ್ಲಿ ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಸ್ಮಾರಕ ಪ್ರಿಯರಿಂದ, ಪ್ರವಾಸಿಗರಿಂದ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಹಂಪಿಯ 385 ಪ್ರದೇಶಗಳಲ್ಲಿ ವಾಹನಗಳು, ಭಾರಿ ಗಾತ್ರದ ವಾಹನ ನಿರ್ಬಂಧ ಸೂಚನಾ ಫಲಕದೊಂದಿಗೆ ಕಬ್ಬಿಣ ಸಲಾಕೆಗಳನ್ನು ಅಳಪಡಿಸಲು ತಯಾರಿ ನಡೆಸಿವೆ.

ಎಲ್ಲಲ್ಲಿ ಧಕ್ಕೆ? ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹಂಪಿಯ ವಿಜಯ ವಿಠಲ ದೇವಸ್ಥಾನಕ್ಕೆ ತೆರಳುವ ಮಾರ್ಗದ ಹರಿಶಂಕರ
ಗಿರಿ ಮಂಟಪಕ್ಕೆ ಎರಡ್ಮೂರು ಬಾರಿ ಧಕ್ಕೆ ಆಗಿತ್ತು. ಅಲ್ಲದೇ ಈ ಭಾಗದಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟದಿಂದಲೂ ಮಂಟಪದ ಮೇಲ್ಭಾಗದ ಕಂಬ ಕುಸಿದಿತ್ತಿತ್ತು. ಅಲ್ಲದೇ ಉಗ್ರ ನರಸಿಂಹ, ಬಡವಲಿಂಗ ಸ್ಮಾರಕಗಳಿಂದ ಕೃಷ್ಣ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿನ ಮಂಟಪಕ್ಕೂ ಪ್ರವಾಸಿಗರ ಭಾರಿ ವಾಹನ ಓಡಾಟದಿಂದ ಮಂಟಪಕ್ಕೆ ಧಕ್ಕೆ ಆಗಿತ್ತು.

ಜೊತೆಗೆ ಕಮಲ್ ಮಹಾಲ್ ಕೋಟೆ ಗೋಡೆ ಇದೇ ಮಾರ್ಗದಿಂದ ಸಾಗಿದರೆ ಮುಂದೆ ಸಿಗುವ ವಿಷ್ಣು ದೇಗುಲಕ್ಕೂ ಕಿಡಿಗೇಡಿಗಳಿಂದ ಧಕ್ಕೆಯಾಗಿತ್ತು. ಇಂತಹ ಘಟನೆ ಮೇಲಿಂದ ಮೇಲೆ ನಡೆದ ಪ್ರತಿ ಸಂದರ್ಭದಲ್ಲಿಯೂ ಸ್ಮಾರಕಗಳ ಸಂರಕ್ಷಣೆ ಕೂಗು ಕೇಳಿ ಬರುತ್ತದೆ. ಭಾರಿ ಗಾತ್ರದ ವಾಹನಗಳ ಸಂಚಾರ ನಿರ್ಬಂಧಿಸುವ ನಾಮಫಲಕ, ಮಂಟಪಗಳ ಬಳಿ ಕಬ್ಬಿಣದ ಸರಪಳಿ ಅಳವಡಿಸ ಲಾಗಿದೆ.

ಒಂದಲ್ಲ ಒಂದು ಕಾರಣದಿಂದ ಸ್ಮಾರಕ ಧಕ್ಕೆ ಹಂಪಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿದೆ. ಪ್ರಪಂಚದಲ್ಲಿ ನೋಡನೇ ಬೇಕಾದ ಪ್ರವಾಸಿ ತಾಣದ ಪೈಕಿಹಂಪಿ 2ನೇ ಸ್ಥಾನದಲ್ಲಿದೆ. ಹಂಪಿಗೆ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಸ್ಮಾರಕ ರಕ್ಷಣೆ ಆದ್ಯತೆ ನೀಡಬೇಕು. ಒಂದಲ್ಲ ಒಂದುಕಾರಣದಿಂದ ಸ್ಮಾರಕ ಧಕ್ಕೆಯಾಗುತ್ತಿದೆ. ಇದನ್ನು ಹೋಗಲಾಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯಕ್ರಮ ಕೈಗೊಂಡಿದ್ದಾರೆ. ಆದರೂ ಸ್ಮಾರಕಗಳ ರಕ್ಷಣೆ ಜೊತೆಗೆ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಬೇಕು ಎಂಬುದು ಇತಿಹಾಸ, ಸ್ಮಾರಕ ಪ್ರಿಯರ ಆಗ್ರಹವಾಗಿದೆ.

ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರವು
ಮಾರ್ಗದ ತಾಳಾರಿಘಟ್‌ದ ಹರಿಶಂಕರ ಮಂಟಪ, ಕೃಷ್ಣ ದೇವಸ್ಥಾನ, ಉಗ್ರನರಸಿಂಹ, ಬಡವಿಲಿಂಗ ಸೇರಿದಂತೆ ಭಾರಿ ಗಾತ್ರದ ವಾಹನಗಳು ಓಡಾಡುವ ಸುಮಾರು 385 ಕಡೆ ಸೂಚನಾ ಫಲಕ, ಅಗತ್ಯವಿರುವಲ್ಲಿ ಕಬ್ಬಿಣ ಸಲಾಕೆಗಳು ಅಳವಡಿಸಲಾಗುತ್ತಿದೆ.
ಇನ್ನು 70 ರಿಂದ 80 ಸೂಚನಾ ಫಲಕ ಅಳವಡಿಸಿದರೆ ಈ ಕಾರ್ಯ ಪೂರ್ಣಗೊಳ್ಳಲಿದೆ.
-ಸಿದ್ದರಾಮೇಶ್ವರ ಆಯುಕ್ತ ವಿಶ್ವ ಪರಂಪರೆ, ಪ್ರದೇಶ ನಿರ್ವಹಣಾ ಪ್ರಾಧಿಕಾರ