ಗ್ರಾಮ ಸೇವಕನಿಂದ ಸಚಿವನಾದ ಮಲ್ಲಪ್ಪ
ಎಂಟು ವರ್ಷದ ಆಡಳಿತಕ್ಕೆ ಹೆಸರಾದರು
ವಿಶೇಷ ವರದಿ: ರವಿ ಮಲ್ಲೇದ
ಸಿಂದಗಿ: ಆರಂಭಿಸುವ ಹೋರಾಟಗಳಿಗೆ ಅಂತ್ಯ ಕಾಣಿಸುವ ಛಲಗಾರಿಕೆ ಜನಪ್ರತಿನಿಧಿಗೆ ಅತ್ಯವಶ್ಯಕ ಎಂಬ ಮಾತಿನಂತೆ ಮಾಜಿ ಸಚಿವ ಹಾಗು ಶಾಸಕ ಎಂ.ಸಿ.ಮನಗೂಳಿ ಒಬ್ಬ ದಿಟ್ಟ ಹೋರಾಟಗಾರ.
ಗ್ರಾಮ ಸೇವಕ ಹುದ್ದೆಯಿಂದ ಅದೇ ಇಲಾಖೆಯ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಸಾಗಿ ಬಂದ ಮನಗೂಳಿ ಅವರ ಜನಸೇವಕನಾದ ಗ್ರಾಮಸೇವಕ ರಾಜಕೀಯ ಹೋರಾಟದ ಇತಿಹಾಸ ಒಬ್ಬ ಹೋರಾಟಗಾರನ ತೀಕ್ಷಣತೆಯನ್ನು ಬಿಂಬಿಸುತ್ತದೆ. ಅಲ್ಲದೇ ಬರ ಪೀಡಿತವಾದ ಸಿಂದಗಿ ಮತಕ್ಷೇತ್ರದ ಜನರಿಗೆ, ರೈತರಿಗೆ ನೀರಾವರಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅವರು
ಬರೆಗಾಲಿನ ಶಪಥ ಮಾಡಿ, ಅದನ್ನು ಗೆದ್ದು ತೀರಿದ ಮನಗೂಳಿ ಬಗ್ಗೆ ಜನರಲ್ಲಿ ಮನೆ ಮಾಡಿದ ಆಧುನಿಕ ಭಗೀರಥನ ಗೌರವ ಅಳಿಯದು.
ತಾಯಿ ಬಂಗಾರೆಮ್ಮಳನ್ನು ಕಳೆದುಕೊಂಡು ಅನಾಥವಾಗಿದ್ದ ಮನಗೂಳಿ ಹುಟ್ಟಿದ್ದು 29-09-1937ರಲ್ಲಿ. ಹಾಸುಹೊಕ್ಕಾಗಿದ್ದ ಬಡತನದಲ್ಲಿ ವಿದ್ಯೆ ಕಲಿಯುವುದು ಸಣ್ಣ ಸಂಗತಿಯಾಗಿರಲಿಲ್ಲ. ತಂದೆ ಚನ್ನವೀರಪ್ಪರಿಗೆ ಹಾಗು ಅಣ್ಣ ಚನ್ನಪ್ಪರಿಗೆ ಮಲ್ಲಪ್ಪ ಕಲಿಯಲಿ ಎಂದು 1943ರಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸುತ್ತಾರೆ. 4ನೇ ತರಗತಿಗೆ ಕಾಲಿಡುವ ವೇಳೆ ಸ್ಕಾಲರ್‌ಶಿಫ್ ಪಡೆದ ಕೀರ್ತಿ ಈ
ಮಲ್ಲಪ್ಪರದ್ದು.
ಸ್ಕಾಲರ್‌ಶಿಫ್ ಪರೀಕ್ಷೆ ಬರೆದವರಿಗೆ ನೇರವಾಗಿ ಪ್ರೌಢ ಹಂತಕ್ಕೆ ದಾಖಲಿಸಲು ಅವಕಾಶವಿದ್ದ ಹಿನ್ನಲೆ ಮನಗೂಳಿ ಅವರು 1956 ರಲ್ಲಿ ಎಸ್ಸೆಸ್ಸಿ ಪರೀಕ್ಷೆ ಬರೆದು ಕಾಲೇಜು ಕಲಿಯುವ ಆಶೆ ಹೊಂದಿದ್ದರು. ಆದರೆ ಬಡತನ ಅವರ ಕನಸಿಗೆ ತಣ್ಣೀರು ಹಾಕುತ್ತಲೇ ಇತ್ತು. ತಾಯಿ ಇಲ್ಲದ ಮನೆಯಲ್ಲಿ ಹೊತ್ತಿನ ಗಂಜಿಗೂ ನೆರೆಯವರ ಆಸರೆ ಬೇಕಿತ್ತು. ಒಮ್ಮೊಮ್ಮೆ ಮಲ್ಲಪ್ಪನವರು ತಾಟಿನಲ್ಲಿ ಹಿಟ್ಟನ್ನು ಹಾಕಿಕೊಂಡು ರೊಟ್ಟಿ ಮಾಡಿ ಕೊಡಿ ಎಂದು ಮನೆ ಮನೆ ಅಲೆಯುವ ಸ್ಥಿತಿಯಿತ್ತು.
ಶಿಕ್ಷಣ ಒಂದು ಹಂತಕ್ಕೆೆ ಬರದೇ ಬಡತನ ನೀಗಿಸುವ ಕನಸು ಹೊದ್ದುಕೊಂಡಿದ್ದ ಮಲ್ಲಪ್ಪನವರು ತನ್ನ ತಂದೆಯವರು ದುಡಿಯು ತ್ತಿದ್ದ ದಿ.ಗುರುರಾವ್ ಕುಲಕರ್ಣಿ ಅವರ ಅಂಗಡಿಯಲ್ಲಿ ವಾರಕ್ಕೆ 8 ರೂಪಾಯಿ ಸಂಬಳಕ್ಕೆ ಗುಮಾಸ್ತರಾಗಿ ದುಡಿಯಲು ಆರಂಭಿಸಿ ದರು. ಎರಡು ವರ್ಷಗಳ ಕಾಲ ಗುಮಾಸ್ತ ಕೆಲಸ ಮಾಡುತ್ತಿದ್ದ ಮನಗೂಳಿ ಅವರಿಗೆ ಅದೃಷ್ಟವೆಂಬಂತೆ ಗ್ರಾಮ ಸೇವಕ ತರಬೇತಿಗೆ ಕರೆ ಬಂತು. 1958ರಲ್ಲಿ ದೇವಿ ಹೊಸೂರ ಎಂಬ ಗ್ರಾಮಕ್ಕೆ ತರಬೇತಿಗೆ ಹೋಗಿದ್ದ ವೇಳೆಯಲ್ಲಿ ವೃತ್ತಿಗೆ ಬಂದ ಸಂಬಳ ಕೇವಲ ಊಟಕ್ಕೆ ಬಳಕೆಯಾಗುತ್ತಿತ್ತು.
ಉಳಿಯುತ್ತಿದ್ದ ಅಲ್ಪ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. ತರಬೇತಿಯ ನಂತರ 1960ರಲ್ಲಿ ಗ್ರಾಮ ಸೇವಕರಾಗಿ ಕೆಲಸ ಆರಂಭಿಸಿ, ಆ ಗ್ರಾಮದಲ್ಲಿನ ಜನರ ಕಷ್ಟಗಳಿಗೆ ಸ್ಪಂಧಿಸಿ, ಸರಕಾರಿ ಸವಲತ್ತುಗಳನ್ನು ಜಾಗೃತಿ ಮೂಲಕ ಜನರಿಗೆ ತಿಳಿಸಿ ಅಲ್ಲಿನ ಜನರ ಮನ ಮೆಚ್ಚಿಸಿದ್ದರು. ಕನ್ನೂರ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಸರಕಾರ 1968 ಹಾಗು 69ನೇ ಸಾಲಿನ ಉತ್ತಮ ಗ್ರಾಮಸೇವಕ ಗೌರವ ಅವರನ್ನು ಹುಡುಕಿಕೊಂಡು ಬರುತ್ತದೆ. ಅಲ್ಲದೇ ಕನ್ನೂರ ಗ್ರಾಮಕ್ಕೂ ಮೊದಲ ಹೆಸರು ತಂದು ಸುಮಾರು 15 ವರ್ಷಗಳ ಕಾಲ ಕನ್ನೊಳ್ಳಿ, ಚಾಂದಕವಠೆ, ಜೇವರ್ಗಿ, ಯಡ್ರಾಮಿ ಭಾಗಗಳಲ್ಲಿ ಗ್ರಾಮ ಸೇವಕರಾಗಿ ಉತ್ತಮ ಹೆಸರು ಮಾಡಿದ್ದರು.
ಈ ವೇಳೆಯಲ್ಲಿ ಬೆಳೆದ ಜನ ಸಂಪರ್ಕದಿಂದ ಮನಗೂಳಿ ಹೆಸರು ಪ್ರಚಾರಕ್ಕೆ ಬರುತ್ತದೆ. ಸಿಂದಗಿಯಲ್ಲಿ ಒಂದು ಮಶೀನರಿ ಅಂಗಡಿ ಆರಂಭಿಸಿ, ರೈತರ ಕೃಷಿ ಬಳಕೆಗೆ ಅವಶ್ಯಕವಾಗುವ ವ್ಯಾಪಾರದಿಂದ ಆರ್ಥಿಕ ಅಭಿವೃದ್ಧಿ ಕಂಡು, ಆಗಾಗ ಕಚೇರಿ ಕೆಲಸಕ್ಕಾಗಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಂಪರ್ಕ ಮತ್ತು ಉತ್ತಮವಾದ ಒಡನಾಟ ಹೊಂದಿ, 1974ರಲ್ಲಿ ಗ್ರಾಮ ಸೇವಕ ಹುದ್ದೆಗೆ ರಾಜಿನಾಮೆ ನೀಡಿ, ಮಾಜಿ ಶಾಸಕ ದಿ.ಶಂಕರಗೌಡ ಪಾಟೀಲ (ಪಡಗಾನೂರ), ಬಿ.ಕೆ.ಗುಡದಿನ್ನಿ ಹಾಗೂ ಆರ್. ಆರ್.ಕಲ್ಲೂರ ಅವರ ರಾಜಕಾರಣದಿಂದ ಪ್ರೇರಣೆಗೊಂಡು ರಾಜಕೀಯದ ಹಾದಿ ತುಳಿಯುತ್ತಾರೆ.
ಪಟ್ಟಣದ ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ ಸ್ಪರ್ಧಿಸುವ ಮೂಲಕ ಆರಂಭಗೊಳ್ಳುವ ಇವರ ಸಾಮಾಜಿಕ ಬದುಕು ಅಧ್ಯಕ್ಷಗಿರಿಗೆ ಕರೆ ತರುತ್ತದೆ. ನಂತರ ಹಂತ ಹಂತವಾಗಿ 1976ರಲ್ಲಿ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಆಡಳಿತ ಮಂಡಳಿ ಚುನಾವಣೆ ಎದುರಿಸಿ ಅಲ್ಲಿಯೂ ನಿರ್ದೇಶಕರಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಸಾವಿರಾರು ಬಡ
ವಿದ್ಯಾರ್ಥಿಗಳ ಶಿಕ್ಷಣಕ್ಕೆೆ ನೆರವಾದರು. ನಂತರ 1978ರಲ್ಲಿ ಸಿಂದಗಿ ಪುರಸಭೆ ಚುನಾವಣೆ ಎದುರಿಸಿ ಸೋಲು ಕಾಣುತ್ತಾರೆ.
1983 ಹಾಗು 85ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಬಾಳದ ಮಲ್ಲನಗೌಡ ಬಿರಾದಾರ ಅವರ ಪರವಾಗಿ ಪ್ರಚಾರ ಕಾರ್ಯ ಮಾಡಿ ಅವರ ಗೆಲುವಿನಲ್ಲಿ ತಮ್ಮ ಪಾಲನ್ನು ದಾಖಲಿಸುವ ಮನಗೂಳಿ ಅವರು 1989ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಆರ್.ಬಿ.ಚೌಧರಿ ವಿರುದ್ಧ ಸೋಲು ಕಂಡು, ಪುನಃ 1994ರಲ್ಲಿ ಅದೇ ಚೌಧರಿ ವಿರುದ್ಧ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನ
ಸಭೆ ನಡೆಯುತ್ತಾರೆ. ಅಂದು ಜೆ.ಎಚ್.ಪಟೇಲ ಅವರ ಮಂತ್ರಿ ಮಂಡಲದಲ್ಲಿ ಅದೃಷ್ಟವೆಂಬಂತೆ ಗ್ರಾಮೀಣ ಪಂಚಾಯತ್ ರಾಜ ಇಲಾಖೆಯ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿ ಜನಮನ್ನಣೆಯ ಜೊತೆಗೆ ತಾವು ಕಟ್ಟಿಕೊಂಡಿದ್ದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆೆ ಯೋಜನೆ ರೂಪಿಸಿ ಯಶಸ್ವಿಯಾಗುತ್ತಾರೆ.
ನಂತರದ 1999, 2004, 2008, 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲಿನ ರುಚಿ ಕಾಣುತ್ತಾರೆ. ಕಳೆದ 2018ರಲ್ಲಿ ನಡೆದ
ವಿಧಾನಸಭೆಯಲ್ಲಿ ಪ್ರತಿಸ್ಪರ್ಧಿ ರಮೇಶ ಭೂಸನೂರ ವಿರುದ್ಧ ಜಯಗಳಿಸಿ ಎರಡನೇ ಬಾರಿ ಗೆದ್ದು, ಅಂದಿನ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಸಮ್ಮಿಶ್ರ ಸರಕಾರದಲ್ಲಿಯೂ ಪಕ್ಷದ ನಿಷ್ಠೆ ಮತ್ತು ಹಿರಿತನಕ್ಕೆ ಮತ್ತೆ ತೋಟಗಾರಿಕೆ ಸಚಿವರಾಗಿ ಪ್ರಮಾಣ ವಚನ
ಸ್ವೀಕರಿಸುತ್ತಾರೆ.
1994ರಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದಾಗ ಗುತ್ತಿ ಬಸವಣ್ಣ ಏತ ನೀರಾವರಿ ಮೂಲಕ ಮತಕ್ಷೇತ್ರದ 42 ಹಳ್ಳಿಗಳಿಗೆ ನೀರು ಒದಗಿಸುವ 480 ಕೋಟಿ ವೆಚ್ಚದ ಬೃಹತ್ ಯೋಜನೆಯೊಂದಕ್ಕೆ ಅಂದಿನ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರಿಗೆ ಪ್ರಸ್ತಾವನೆ ಸಲ್ಲಿಸಿ, ಸುಮಾರು 96 ಕಿಮೀ ವ್ಯಾಪ್ತಿಯವರೆಗೆ ಕಾಲುವೆ ನಿರ್ಮಿಸುವ ಮೂಲಕ ಬರ ಪೀಡಿತ ರೈತರ ನೆರವಿಗೆ ಬರುವಂತೆ ಒತ್ತಾಯಿಸಿ ಯೋಜನೆ ಮಂಜೂರಿ ಸಿಕ್ಕ ನಂತರ ಪಟ್ಟಣಕ್ಕೆ ಮಾಜಿ ಪ್ರಧಾನಿ ದೇವೆಗೌಡ, ಸಿಎಂ ಜೆ.ಹೆಚ್.ಪಟೇಲ ಹಾಗು ಡಿಸಿಎಂ
ಸಿದ್ಧರಾಮಯ್ಯರನ್ನು ಕರೆಯಿಸಿ ಶಂಕು ಸ್ಥಾಪನೆ ಮಾಡಿಸುವ ಮೂಲಕ ತಮ್ಮ ಹೋರಾಟಕ್ಕೆ ಫಲ ಕಂಡಿದ್ದರು.
ಮನಗೂಳಿ ಹೋರಾಟದ ಫಲವಾಗಿ ಯಶಸ್ವಿಯಾದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ನೆನಪಿಗಾಗಿ ಗೋಲಗೇರಿ ಗ್ರಾಮದಲ್ಲಿ ಹೋರಾಟ ಸಮಿತಿ ಹಾಗು ಯೋಜನೆಯ ಫಲಾನುಭವಿ ರೈತರು ದೇವೆಗೌಡ ಹಾಗು ಮನಗೂಳಿ ಮಾತನಾಡುತ್ತಿರುವ ಸಂದರ್ಭದ ಚಿತ್ರ ಬಳಸಿ ಅದೇ ರೂಪದ ಪುತ್ಥಳಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಅನಾವರಣಗೊಳಿಸಿದ್ದು
ಒಂದು ಐತಿಹಾಸಿಕ ಹೋರಾಟವೇ ಸರಿ.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಸಾರಥಿಯಾಗಿ ಪಕ್ಷ ಕಟ್ಟುವಲ್ಲಿ ಶ್ರಮಿಸಿರುವ ಮಲ್ಲಪ್ಪ ಮನಗೂಳಿ ಅವರು ಹೆಚ್.ಡಿ.ದೇವೆಗೌಡ ಅವರ ಮಾನಸ ಪುತ್ರರಾಗಿ, ಸಂಭಾವಿತ ಸಜ್ಜನ ಮತ್ತು ಚಾಣಾಕ್ಷ ರಾಜಕಾರಣಿಯಾಗಿ ನೆಲೆ ನಿಂತು ಇಂದು ಮರೆಯಾಗಿರುವುದು
ಕ್ಷೇತ್ರದ ಜನರ ದುರ್ದೈವ.
ಕೋಟ್ಸ್
ಬಡತನದಲ್ಲಿ ಬೆಳೆದು ಬಂದ ಮನಗೂಳಿ ಅವರು ಗ್ರಾಮಸೇವಕರಾಗಿ ಹೋರಾಟದ ಮೂಲಕ ಬೆಳೆದು ಬಂದ ಧೀಮಂತ ನಾಯಕ. ಸಿಂದಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರು. ಅವರ ಕಾರ್ಯ ಕ್ಷಮತೆ ಯುವಕರನ್ನು ಮೆಚ್ಚಿಸುವಂತಹ ದ್ದಾಗಿತ್ತು. ಎರಡು ಬಾರಿ ಸಚಿವರಾಗಿದ್ದು ಅಭಿಮಾನದ ಸಂಗತಿ. ಶಿಕ್ಷಣ ಕ್ಷೇತ್ರದಲ್ಲಿಯೂ ಅವರ ಸಾಧನೆ ಮಹತ್ವದ್ದು, ಮುಂದಾ ಲೋಚನೆಯ ವ್ಯಕ್ತಿತ್ವ ಹೊಂದಿದ್ ಚಾಣಾಕ್ಷ ರಾಜಕಾರಣಿ ಇನ್ನಿಲ್ಲ ಎನ್ನುವುದು ತುಂಬಲಾಗದ ನಷ್ಟ. ಅವರ ಆತ್ಮಕ್ಕೆ ಭಗವಂತ
ಚಿರ ಶಾಂತಿಯನ್ನು ಅನುಗ್ರಹಿಸಲಿ.
-ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗಮಠ ಸಿಂದಗಿ
ಹಿರಿಯ ಶಾಸಕರಾಗಿದ್ದ ಮನಗೂಳಿ ಅವರ ಚಾಣಾಕ್ಷ ರಾಜಕಾರಣ ಎಂಥವರನ್ನು ಬೆರಗುಗೊಳಿಸುತ್ತಿತ್ತು. ಅವರ ಮುಂದಾ ಲೋಚನೆಯ ವ್ಯಕ್ತಿತ್ವದಿಂದ ಎರಡನೇ ಬಾರಿ ಶಾಸಕರಾಗಿ, ಸಚಿವರಾಗಿ ನಮ್ಮ ಭಾಗದ ನೀರಾವರಿಗೆ ಒತ್ತು ನೀಡುವ ಮೂಲಕ ಆಧುನಿಕ ಭಗೀರಥ ಎಂಬ ಬಿರುದು ಅಕ್ಷರಶಃ ಅವರಿಗೆ ಸಲ್ಲುತ್ತದೆ. ಅವರ ಹೋರಾಟದ ಹಾದಿ ಪೀಳಿಗೆಯ ರಾಜಕಾರಣಿಗಳಿಗೆ
ಹೋರಾಟಗಾರರಿಗೆ ಕಾರ್ಯ ಬದ್ಧತೆಯ ಜೊತೆಗೆ ಛಲಗಾರಿಕೆಯನ್ನು ಮೂಡಿಸುತ್ತದೆ. ಅವರ ಸಾವು ನಮ್ಮೆಲ್ಲರ ದೌರ್ಭಾಗ್ಯವೇ ಸರಿ.
-ಅರುಣ ಶಹಾಪೂರ ವಿಧಾನಪರಿಷತ್, ಸದಸ್ಯರು