Thursday, 19th September 2024

ಏಕತೆಯ ಪ್ರತಿಪಾದಕ ಪಟೇಲ್‌

ತನ್ನಿಮಿತ್ತ

ರಾಜು ಭೂಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ, ಉಪ ಪ್ರಧಾನಿ, ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಹುಟ್ಟಿದ್ದು 1875ರ ಅಕ್ಟೋಬರ್-31ರಂದು. ಗುಜರಾತಿನ ನಡಿಯಾದಲ್ಲಿ.

ಇವರ ತಂದೆಯ ಹೆಸರು ಜವೇರ್ ಭಾಯಿ, ತಾಯಿ ಲಾಡಬಾಯಿ. ಸ್ವಾತಂತ್ರ್ಯ ಸಿಕ್ಕಿದ ಮೇಲೂ ಕೆಲವೊಂದು ಭೂ ಪ್ರದೇಶಗಳು ರಾಜರುಗಳ ವಶದಲ್ಲಿದ್ದವು. ಇವನ್ನೆಲ್ಲ ವಶಪಡಿಸಿಕೊಂಡು ಭವ್ಯ ಭಾರತದ ನಿರ್ಮಾಣಕ್ಕೆ ಕಾರಣವಾದವರು ಪಟೇಲರು. ಭವ್ಯ ಭಾರತದ ನಿರ್ಮಾಣಕ್ಕೆ ಇವರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತೀ ವರ್ಷ ಇವರ ಜನ್ಮ ದಿನವಾದ ಅಕ್ಟೋಬರ್-31ನ್ನು ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ನಡಿಯಾ ಪ್ರೌಢಶಾಲೆಯಿಂದ 1897ರಲ್ಲಿ  ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಸಾಮಾನ್ಯ ವಕೀಲಿ ಪರೀಕ್ಷೆಯನ್ನು ಮುಗಿಸಿ ಗೋಧ್ರಾದಲ್ಲಿ (1900) ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಮುಂದೆ 1910ರಲ್ಲಿ ಬ್ಯಾರಿಸ್ಟರ್ ಪದವಿ ಪಡೆಯಲು ಇಂಗ್ಲೆಂಡಿಗೆ ತೆರಳಿದರು. ಅವರು ಎಷ್ಟೊಂದು ಪ್ರತಿಭಾಶಾಲಿಯಾಗಿದ್ದರೆಂದರೆ ಮೂರು ವರ್ಷಗಳಲ್ಲಿ ಓದಿ ಪಡೆಯಬೇಕಿದ್ದ ಬ್ಯಾರಿಸ್ಟರ್ ಪದವಿಯನ್ನು ಕೇವಲ ಎರಡೇ ವರ್ಷಗಳಲ್ಲೇ ಓದಿ ಮುಗಿಸಿದರು. ಭಾರತಕ್ಕೆ ಹಿಂದಿರುಗಿದ ನಂತರ ಅಹಮದಾಬಾದಿನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಕಾನೂನು ಹೋರಾಟದಲ್ಲಿ ಇವರಿಗೆ ಸೋಲೆಂಬುದೇ ಇರಲಿಲ್ಲ. ಸಾಕಷ್ಟು ಪೂರ್ವ ತಯಾರಿಯೊಂದಿಗೆ ವಾದ ಮಂಡಿಸುತ್ತಿದ್ದರು. ಹೀಗಾಗಿ ಬಹಳಷ್ಟು ಕಡಿಮೆ
ಅವಧಿಯಲ್ಲೇ ಸುಪ್ರಸಿದ್ಧ ವಕೀಲರೆಂಬ ಕೀರ್ತಿಗೆ ಪಾತ್ರರಾದರು.

ಅಹಮದಾಬಾದಿನಲ್ಲಿ ತೀವ್ರವಾದ ಪ್ಲೇಗ್ ಆವರಿಸಿ ಜನ ಕಂಗಾಲಾದಂಥ ಸಂದರ್ಭದಲ್ಲಿ ಪಟೇಲರು ಜನರ ಪ್ರಾಣವನ್ನು ರಕ್ಷಿಸಲು ನಿರಂತರವಾಗಿ ಶ್ರಮಿಸಿದರು. ಇಂತಹ ನೋವಿನ ಸಂದರ್ಭದಲ್ಲೇ ಸರಕಾರವು ಬಲವಂತವಾಗಿ ಕಂದಾಯ ವಸೂಲಿ ಯಲ್ಲಿ ತೊಡಗಿದ್ದು , ಸರಕಾರಕ್ಕೆ ಕಂದಾಯ ಕೊಡದ ರೈತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತೊಡಗಿದಾಗ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ರೈತರನ್ನು ಸಂಘಟಿಸಿ ಪಟೇಲರು ಉಗ್ರವಾದ ಚಳುವಳಿಯನ್ನು ಆರಂಭಿಸಿದರು. ಇದರಿಂದ ಕಂಗಾಲಾದ ಸರಕಾರವು ಕಂದಾಯ ವಸೂಲಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಸ್ವಾತಂತ್ರ್ಯ ಹೋರಾಟದ ಪ್ರಮುಖ ಭಾಗವಾಗಿದ್ದ ದೇಶಿ ವಸ್ತುಗಳ ದಹನ, ಬಹಿಷ್ಕಾರದಂಥ ಚಳುವಳಿಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿ ಕೊಂಡರು. ಸ್ವದೇಶಿ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಕರೆ ನೀಡಿದರು. ಬಾರ್ದೋಲಿಯ ಕಂದಾಯ ನಿರಾಕರಣೆ ಚಳುವಳಿಯು ದೇಶಾದ್ಯಂತ ವ್ಯಾಪಿಸಿ ಕಂದಾಯ ನಿರಾಕರಣೆ ಚಳುವಳಿಯೂ ಸರ್ವೇ ಸಾಮಾನ್ಯ ಎಂಬಂತೆ ದೇಶದ ಹಳ್ಳಿ ಹಳ್ಳಿಗೂ ವಿಸ್ತರಿಸಲ್ಪಟ್ಟಿತು.

ಪಟೇಲರು ಕೈಗೊಂಡ ಈ ಚಳುವಳಿಯ ನೇತೃತ್ವದಿಂದ, ಸರಕಾರವು ಕಂದಾಯ ವಿಧಿಸಿದ್ದನ್ನು ಮುಂದೂಡಿತು. ಇದರಿಂದಾಗಿ ಲಕ್ಷಾಂತರ ಜನರು ನೆಮ್ಮದಿಯನ್ನು ಕಂಡುಕೊಂಡರು. ಪಟೇಲರ ಈ ಕಾರ್ಯವನ್ನು ಶ್ಲಾಸಿ ಇವರನ್ನು ಬಾರ್ದೋಲಿ ಸರ್ದಾರ್ ಎಂದು ಕರೆಯಲಾರಂಭಿಸಿದರು. ಮುಂದೆ ಇವರು ಸರ್ದಾರ್ ಪಟೇಲ್ ಎಂದು ಖ್ಯಾತರಾದರು. ಹೀಗೆ ಗುಜರಾತ್ ಪ್ರಾಂತದ ಸರ್ದಾರರಾಗಿದ್ದ ವಲ್ಲಭಭಾಯ್ ಪಟೇಲರು ಇಡೀ ಭಾರತದ ಸರ್ದಾರರಾದರು. 1923ರಲ್ಲಿ ಗಾಂಧಿಜಿ ಸೆರೆಮನೆಯಲ್ಲಿದ್ದಾಗ ನಾಗ್ಪುರದಲ್ಲಿ  ಕಾಂಗ್ರೆಸ್ ಸಂಘಟಿಸಿದ್ದ ಸತ್ಯಾಗ್ರಹದಲ್ಲಿ ಪಟೇಲರ ಪಾತ್ರ ತುಂಬಾ ಮಹತ್ವದ್ದಾಗಿತ್ತು. ಭಾರತದ ಬಾವುಟವನ್ನು
ಹಾರಿಸಬಾರದೆಂದು ಬ್ರಿಟಿಷ್ ಸರಕಾರ ನಿರ್ಬಂಧ ಹೇರಿತ್ತು. ದೇಶದ ಅನೇಕ ಭಾಗಗಳಿಂದ ಸ್ವಯಂಸೇವಕರುಗಳನ್ನು ಕರೆಸಿ ಕೊಂಡು ಪಟೇಲರು ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆ ಹೊರಟರು. ಮುಂದೆ ರಾಷ್ಟ್ರಭಕ್ತರು ಸಾರ್ವಜನಿಕವಾಗಿ ಧ್ವಜವನ್ನು ಹಾರಿಸಬಹುದೆಂದು ಅನುಮತಿಯನ್ನು ಕೂಡಾ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

1932ರ ಜನವರಿಯಿಂದ ಸುಮಾರು 16 ತಿಂಗಳುಗಳ ಕಾಲ ಪಟೇಲರು ಗಾಂಧಿಜಿಯವರೊಡನೆ ಯೆರವಾಡ ಸೆರೆಮನೆಯಲ್ಲಿ ಕೈದಿಯಾಗಿದ್ದರು. ಉಪ್ಪಿನ ಮೇಲೆ ಬ್ರಿಟಿಷ್ ಸರಕಾರ ವಿಧಿಸಿದ್ದ ಕರದ ವಿರುದ್ಧ ಪ್ರತಿಭಟಿಸಲು ಗಾಂಧಿಜಿ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿದ್ದರು. 1930ರ ಮಾರ್ಚ್ 12ರಂದು ಅವರು ಸಾಬರಮತಿ ಆಶ್ರಮದಿಂದ ಹೊರಟು 24 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿ ದಂಡಿಯ ಬಳಿ ಸಮುದ್ರ ದಡದಲ್ಲಿ ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಾಡಿದರು. ಈ ಹೋರಾಟ ದಲ್ಲಿಯೂ ಪಟೇಲ್‌ರು ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

1942ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿಯೂ ಇವರ ಪಾತ್ರ ತುಂಬಾ ಮುಖ್ಯವಾಗಿತ್ತು. ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಪ್ರತಿಯೊಂದು ಚಳುವಳಿಯಲ್ಲಿಯೂ ಭಾಗವಹಿಸಿ ತಮ್ಮ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಇವೆಲ್ಲವುಗಳು ಸ್ವಾತಂತ್ರ್ಯ ಪೂರ್ವದ ಘಟನೆಗಳಾದರೆ, ಸ್ವಾತಂತ್ರ್ಯ ನಂತರದ ಸವಾಲುಗಳಿಗೇನೂ ಕಡಿಮೆ ಇರಲಿಲ್ಲ. ಇವರಿಗೆ 1991ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.

Leave a Reply

Your email address will not be published. Required fields are marked *