Thursday, 28th November 2024

ತ್ರಿವೇಣಿ ಕೃತಿಗಳ ಮರು ಓದು

ಪುಸ್ತಕ ಪರಿಚಯ

ವಿಜಯಾ ಶ್ರೀಧರ್‌

ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ತ್ರಿವೇಣಿಯವರದು (1928-1963) ಒಂದು ವಿಶಿಷ್ಟವಾದ ಹೆಸರು.

ಸುಮಾರು ಅರ್ಧ ಶತಮಾನದ ಹಿಂದೆ ರಚಿಸಿದ ತಮ್ಮ ಚುಂಬಕ ಶಕ್ತಿಯ ಕಾದಂಬರಿಗಳಿಂದ ಎಲ್ಲಾ ವರ್ಗದ ಓದುಗರನ್ನು ಸೆರೆ ಹಿಡಿದವರು ತ್ರಿವೇಣಿ. ತಮ್ಮ 35 ವರ್ಷಗಳ ಅಲ್ಪಾಯುಷ್ಯದಲ್ಲಿ 21 ಕಾದಂಬರಿಗಳನ್ನು, 41 ಕತೆಗಳನ್ನು ಬರೆದು ಇಂದಿಗೂ ಹದಿಹರೆಯದವರಿಗೆ ಸಾಹಿತ್ಯ ಪ್ರೇಮವನ್ನು ಹುಟ್ಟಿಸಬಲ್ಲಂತಹ ಶಕ್ತಿಯನ್ನು ಪಡೆದಿದ್ದಾರೆ.

ಅವರ ಹಲವು ಕಾದಂಬರಿಗಳು ಜನಪ್ರಿಯತೆಯನ್ನು ಪಡೆದ ರೀತಿಯೇ ವಿಸ್ಮಯ ಹುಟ್ಟಿಸುವಂತಹದ್ದು. ಅವರ ಕಾದಂಬರಿಗಳ
ಕುರಿತು ಶಿವಮೊಗ್ಗದ ಅರ್ಚನಾ ಆರ್. ಅವರು ‘ತ್ರಿವೇಣಿ : ಮನ ಮಂಥನ’ ಸಂಶೋಧನಾ ಗ್ರಂಥ ಹೊರ ತಂದಿರುವುದು ವಿಶೇಷ
ಎನಿಸುತ್ತದೆ. ‘ತ್ರಿವೇಣಿ: ಮನ ಮಂಥನ’ ಕೃತಿಯನ್ನು ಡಾ ಅರ್ಚನಾ ಅವರು ತಮ್ಮ ಪಿ.ಹೆಚ್. ಡಿ. ಪ್ರಬಂಧಕ್ಕಾಗಿ ಬರೆದದ್ದು.

ತ್ರಿವೇಣಿಯವರ ಕಾದಂಬರಿಗಳಲ್ಲಿ ಮನೋವೈಜ್ಞಾನಿಕ ನೆಲೆಗಳನ್ನು ಗುರುತಿಸುವುದು ಈ ಅಧ್ಯಯನದ ಮುಖ್ಯ ಉದ್ದೇಶ. ಈ ಪುಸ್ತಕಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದಿರುವ ಮುನ್ನುಡಿ ಸಾಕಷ್ಟು ದೀರ್ಘವಾಗಿದ್ದು ಅಧ್ಯಯನಶೀಲರಾದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಂತಿದೆ.

ವಿಮರ್ಶಕರಾದ ಸಿ.ಎನ್. ರಾಮಚಂದ್ರನ್ ರವರ ಬೆನ್ನುಡಿಯ ಬೆಂಬಲ ಇದಕ್ಕಿದೆ. ಹದಿಹರೆಯದ ಯುವ ಜನರು ತ್ರಿವೇಣಿ  ಕಾದಂಬರಿಗಳಿಗೆ ಮಾರು ಹೋಗಿ, ಕಾದಂಬರಿಕಾರ್ತಿಯ ಸ್ತುತಿಯಲ್ಲಿ ತೊಡಗುವಂತೆ ಅರ್ಚನಾ ಮುಳುಗಿಲ್ಲ. ಮಹಿಳೆಯರ ಕಾದಂಬರಿ- ಸಾಹಿತ್ಯವನ್ನು ಕುರುಡರಂತೆ ಟೀಕಿಸುವುದೇ ವಿಮರ್ಶೆ ಎಂದು ಭಾವಿಸುವ ವಿಮರ್ಶಕರಂತೂ ಅರ್ಚನಾ ವರ್ತಿಸುವುದಿಲ್ಲ.

ಹಲವು ಆಕರಗಳಿಂದ ತ್ರಿವೇಣಿಯವರ ಬಾಲ್ಯ, ವಿದ್ಯಾಭ್ಯಾಸ, ಕೌಟುಂಬಿಕ ಪರಿಸರ, ತ್ರಿವೇಣಿಯವರು ವಾಸವಿದ್ದ ಮಂಡ್ಯ-
ಮೈಸೂರಿನ ಪ್ರಭಾವ, ವೈವಾಹಿಕ ಜೀವನ, ತ್ರಿವೇಣಿಯವರ ಅನಾರೋಗ್ಯ, ತಾಯ್ತನದ ಹಂಬಲ, ಅದರಿಂದಲೇ ಬಂದ
ಸಾವು ಎಲ್ಲವನ್ನೂ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ವಿಶೇಷವಾಗಿ ಶರಪಂಜರ, ಮುಚ್ಚಿದ ಬಾಗಿಲು, ದೂರದ ಬೆಟ್ಟ, ಬೆಕ್ಕಿನ ಕಣ್ಣುಗಳಲ್ಲಿ ಬಳಸಿದ ಮನೋವೈಜ್ಞಾನಿಕ ವಿಷಯಗಳ ಕುರಿತು ವಿವರವಾಗಿ ಚಿತ್ರಿಸಿದ್ದಾರೆ. ಅರ್ಚನಾ ಅವರ ಈ ಅಧ್ಯಯನದಲ್ಲಿ ಮನೋ ವಿಜ್ಞಾನಕ್ಕೇ ಸಂಬಂಧಪಟ್ಟ ದೀರ್ಘ ಅಧ್ಯಾಯವೂ ಇದೆ. ಮತ್ತೆ ತ್ರಿವೇಣಿ ಎಷ್ಟು ಕಲಾತ್ಮಕವಾಗಿ ಈ ಮನೋವೈದ್ಯಕೀಯ ಸಂಗತಿಗಳನ್ನು ಕಾದಂಬರಿಗಳಲ್ಲಿ ಬಳಸಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

ಏಳು ಅಧ್ಯಾಯಗಳಿರುವ ಈ ಗ್ರಂಥದಲ್ಲಿ ಸಾಹಿತ್ಯ ಮತ್ತು ಮನೋವಿಜ್ಞಾನದ ಸಂಬಂಧ, ತ್ರಿವೇಣಿ ಕಾದಂಬರಿಯಲ್ಲಿ ಅಂತರ್ಗತ ಮನೋವೈಜ್ಞಾನಿಕ ಸಿದ್ಧಾಂತಗಳು, ಕಾದಂಬರಿಯ ಸಾಹಿತ್ಯಕ ನೆಲೆಗಳು, ಸ್ತ್ರೀ ಸಂವೇದನೆ, ಸಂದರ್ಶನಗಳು, ಓದುಗರ ಅಭಿ
ಪ್ರಾಯಗಳು ಹೀಗೆ ವಿವರವಾಗಿ ಚರ್ಚಿಸಲಾಗಿದೆ.

ಈ ಗ್ರಂಥದಲ್ಲಿ ಬರುವ ‘ಯಾವ ಕಾರಣಗಳಿಗಾಗಿ ಹಿಂದೆ ತ್ರಿವೇಣಿಯವರನ್ನು ಪುರುಷ ವಿಮರ್ಶಕರು ಕಟುವಾಗಿ ಟೀಕಿಸುತ್ತಿದ್ದರೋ ಅದೇ ಕಾರಣಗಳಿಗಾಗಿ ಇಂದು ಕೆಲವು ಸ್ತ್ರೀವಾದಿ ವಿಮರ್ಶಕಿಯರು ತ್ರಿವೇಣಿಯವರನ್ನು ಟೀಕಿಸಿರುವುದು ಒಂದು ಕುತೂಹಲಕಾರಿ ಅಂಶ. ಅಂದು ಪುರುಷ ದ್ವೇಷಿಯೆಂದು ಮತ್ತು ಉಗ್ರ ಸ್ತ್ರೀವಾದಿಯೆಂದು ಪರಿಗಣಿಸಿದ್ದರೂ, ಇಂದು ಅದೇ ತ್ರಿವೇಣಿ ಅವರಲ್ಲಿ ಸಾಕಷ್ಟು ಸ್ತ್ರೀಪರ ಧೋರಣೆಗಳಿಲ್ಲವೆಂದು, ಅವರು ವಿವಾಹ ಮತ್ತು ಕುಟುಂಬ ಇತ್ಯಾದಿ ಕ್ಷೇತ್ರಗಳಲ್ಲಿ ಸಂಪ್ರ ದಾಯವಾದಿ ಯೆಂದು ರೂಢಿಗತ ವಿಚಾರಗಳಿಗೆ ಪುಷ್ಟಿ ಕೊಡುತ್ತಾರೆಂದೂ ಕೆಲ ವಿಮರ್ಶಕಿಯರು ವಾದಿಸುತ್ತಾರೆ’ ಎಂಬ ಪ್ಯಾರಾ, ಕಳೆದ ಅರ್ಧ ಶತಮಾನದಲ್ಲಿ ಸಮಾಜದ ಧೋರಣೆಗಳಲ್ಲಿ ಮತ್ತು ವಿಮರ್ಶೆಯ ಸ್ವರೂಪದಲ್ಲಿ ಆಗಿರುವ ಅಗಾಧ ಬದಲಾವಣೆಯನ್ನು ತೋರಿಸುತ್ತದೆ.

ಒಬ್ಬ ಸಾಹಿತಿಗೆ (ಮಹಿಳೆಯೋ, ಪುರುಷನಿಗೋ) ತೋರುವ ಅನಾದರ, ಆಸಡ್ಡೆಗಳಿಗಿಂತ ಕಟುವಾಗಿ ವಿಮರ್ಶಿಸಿದರೂ ಒಳಿತು ಮತ್ತು ನಾನಾ ಪ್ರಶಸ್ತಿ, ಬಹುಮಾನ ಕೊಡುವುದಕ್ಕಿಂತ ಸಹೃದಯತೆಯಿಂದ ಎರಡು ಒಳ್ಳೆಯ ಮಾತುಗಳನ್ನಾಡುವುದು ಮುಖ್ಯ
ಎಂದು ಸಾಹಿತ್ಯ ಪ್ರಿಯರು ತಿಳಿಯ ಬೇಕಾಗಿದೆ. ಈ ಪುಸ್ತಕದಲ್ಲಿ ಅರ್ಚನಾ, ಈ ರೀತಿ ತ್ರಿವೇಣಿ ಕುರಿತು ಮಾಡಿರುವ ಈ
ಅಧ್ಯಯನ, ಅವರ ಸಾಹಿತ್ಯದ ಮರು ಓದಿಗೆ ಪ್ರೇರಣೆ ನೀಡುವಂತಿದೆ.

ಸಾಹಿತ್ಯ ಪ್ರೇಮಿಗಳು ಇನ್ನೊಮ್ಮೆ ತ್ರಿವೇಣಿ ಕಾದಂಬರಿಗಳನ್ನು ಓದುವಂತೆ ಮಾಡುವಲ್ಲಿ ಇಂತಹ ಆತ್ಮೀಯ ಅಧ್ಯಯನಗಳು ವಹಿಸುವ ಪಾತ್ರ ಮಹತ್ವದ್ದು.