ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಬ್ಬ ವಯಸ್ಸಾದ ವ್ಯಕ್ತಿ, ಸಾಯುವ ಕ್ಷಣದಲಿದ್ದ. ಆತ ಕಣ್ಣು ತೆರೆದು, ‘ನನ್ನ ದೊಡ್ಡ ಮಗನೆಲ್ಲಿ?’ ಎಂದ. ಆಗ ಅವನ ಪತ್ನಿ, ‘ಅವನು ಇಲ್ಲೇ ನಿಮ್ಮ ಪಕ್ಕದ ನಿಂತಿದ್ದಾನೆ’ ಎಂದಳು. ‘ಎರಡನೆಯವನೆಲ್ಲಿ?’ ಎಂದು ಕೇಳಿದ, ‘ಆತನೂ ನಿಮ್ಮ ಬಳಿಯಲ್ಲಿಯೇ ಕುಳಿತಿದ್ದಾನೆ’ ಎಂದಳು . ಆತನ ಕಣ್ಣು ಮಂಜು ಮಂಜಾಗಿತ್ತು, ಸಂಜೆಯಾಗುತ್ತಾ ಬರುತ್ತಿತ್ತು, ಇನ್ನೇನು ಈಗಲೂ ಆಗಲೂ ಎನ್ನುವಸ್ಥಿತಿಯಲ್ಲಿದ್ದ.
ಆದರೂ, ಆತ ಹಾಗೂ ಹೀಗೂ ಕೊಸರಾಡುತ್ತಾ ಏಳಲು ಪ್ರಯತ್ನಿಸುತ್ತ ‘ಮೂರನೆಯವನೆಲ್ಲಿ?’ ಎಂದ. ಪತ್ನಿ
ತನ್ನ ಗಂಡ, ತನ್ನ ಎಲ್ಲ ಮಕ್ಕಳನ್ನೂ ಒಮ್ಮೆ ನೋಡ ಬಯಸುತ್ತಿದ್ದಾನೆ ಎಂದುಕೊಂಡು, ‘ನೀವು ಏಳಬೇಡಿ,
ಆತನೂ ನಿಮ್ಮ ಎಡ ಪಕ್ಕದಲ್ಲಿಯೇ ಇzನೆ, ಎಲ್ಲರೂ ಇಲ್ಲೇ ಇದ್ದೇವೆ, ಯಾರೂ ಎಲ್ಲೂ ಹೋಗಿಲ್ಲ’ ಎಂದಳು.
ಮುದುಕ ತಟ್ಟೆಂದು ಎದ್ದು ಕುಳಿತೇ ಬಿಟ್ಟ, ‘ಹಾಗಾದರೆ ಅಂಗಡಿಯಲ್ಲಿ ಯಾರಿದ್ದಾರೆ? ಅಂಗಡಿ ಮುಚ್ಚಿ ಎಲ್ಲರೂ ಇಲ್ಲಿ ಬಂದುಬಿಟ್ಟಿದ್ದೀರಲ್ಲ, ಅಂಗಡಿ ಕಥೆ ಏನು?’ ಎಂದು ಕೇಳಿದ.
ಈತ ಈಗಲೂ ಆಗಲೂ ಸಾಯುವ ಸ್ಥಿತಿಯಲ್ಲಿದ್ದಾನೆ, ಆತನ ಬಾಯಲ್ಲಿ, ರಾಮ ಕೃಷ್ಣ ಎಂದೊ, ಅಪ್ಪಾ ಅಮ್ಮಾ ಎಂದೋ ಬರುವುದರ ಬದಲು, ಅವನ ಬಾಯಲ್ಲಿ ತನ್ನ ಅಂಗಡಿಯದೇ ಮಾತು. ಎಲ್ಲರೂ ಇಲ್ಲಿ ಕುಳಿತುಬಿಟ್ಟರೆ, ಅಂಗಡಿಯಲ್ಲಿ ವ್ಯಾಪಾರ ಹೇಗೆ ನೆಡೆಯುವುದು? ಯಾರಿಗೂ ಅದರ ಚಿಂತೆಯೇ ಇಲ್ಲವಲ್ಲ ಎಂಬ ಯೋಚನೆ ಅವನಿಗೆ. ಜೀವಮಾನವಿಡಿ ಅವನ ಮನಸ್ಸಿನಲ್ಲಿ ಅಂಗಡಿ ಬಿಟ್ಟು ಬೇರೆ ವಿಷಯವೇ ಇರಲಿಲ್ಲ, ಸಾಯುವ ಕೊನೆ ಕ್ಷಣದಲ್ಲೂ ಕೂಡಾ ಅವನಿಗೆ ಅದೇ ಚಿಂತೆ. ನಾನು, ನನ್ನದು ಎಂಬುದರ ಮೇಲಿನ ವ್ಯಾಮೋಹ ಅವನನ್ನು
ಕೊನೆಘಳಿಗೆಯಲ್ಲೂ ಬಿಡಲೇ ಇಲ್ಲ.
ಹೌದಲ್ಲವೇ! ನಮ್ಮ ಜೀವನದಲ್ಲಿ ಯಾವ ಸಮಯದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎನ್ನುವುದು ನಮಗೆ ತಿಳಿಯದೆ ಹೋಗುತ್ತದೆ. ದೇಹದಲ್ಲಿ ಕಸುವಿದ್ದಾಗ ದುಡಿಯುವತ್ತ ಗಮನ ಕೊಡುತ್ತೇವೆ, ಹೆಚ್ಚು ಹೆಚ್ಚು ಆಸ್ತಿ ಗಳಿಸಬೇಕು ಮಕ್ಕಳಿಗೆ ಎಲ್ಲ ಅನುಕೂಲ ಮಾಡಿಕೊಡಬೇಕು. ನಾವು ಐಷಾರಾಮಿನಿಂದ ಬದುಕಬೇಕು ಇಷ್ಟು ಕನಸುಗಳಿರುತ್ತವೆ. ಆದರೆ ದುಡಿಯುವುದು ಸರಿ ಅದನ್ನು ಬಳಸುವುದನ್ನು ಕಲಿಯಬೇಕಲ್ಲವೇ? ದುಡಿಮೆಯ ಯಂತ್ರವಾಗಿ ಮಕ್ಕಳಿಗೆ ಸಮಯ ಕೊಡುವುದನ್ನು ಮರೆಯುತ್ತೇವೆ.
ನಾವು ಕೂಡ ನಮ್ಮ ಆರೋಗ್ಯದ ಕಾಳಜಿ ಮಾಡದೆ ಹಗಲು ರಾತ್ರಿ ದುಡಿಯುತ್ತಾ ಆರೋಗ್ಯವನ್ನು ಹಾಳು ಮಾಡಿ ಕೊಳ್ಳುತ್ತೇವೆ. ಒಂದಷ್ಟು ವರ್ಷಗಳಾದ ಮೇಲೆ ಸಾಕಷ್ಟು ಹಣವೆನೋ ಇರುತ್ತದೆ. ಆದರೆ ಮಕ್ಕಳು ಬೆಳೆದು ನಮ್ಮ ಪರಿಧಿಯ ಆಚೆ ನಡೆದು ಬಿಟ್ಟಿರುತ್ತಾರೆ. ಬೆಳೆದು ನಿಂತ ಮಕ್ಕಳಿಗೆ ನಮ್ಮ ಅಗತ್ಯ ಅಷ್ಟು ಇರುವುದೇ ಇಲ್ಲ. ಆಗ ಅವರಿಗಾಗಿ ಹಂಬಲಿಸುತ್ತೇವೆ. ಇಲ್ಲ ದುಡಿದ ಹಣವನ್ನೆಲ್ಲ ಐಷಾರಾಮಿಗೆ ಪ್ರಪಂಚ ನೋಡಲು ಬಳಸೋಣವೆಂದರೆ
ಅಷ್ಟು ಹೊತ್ತಿಗೆ ಆರೋಗ್ಯ ಕೈ ಕೊಟ್ಟು ಆಸ್ಪತ್ರೆ ವಾಸಕ್ಕೆ ಹಣ ಸುರಿಯುವಂತಾಗುತ್ತದೆ.
ಯಾವುದಕ್ಕೆ ಎಷ್ಟು ಸಮಯ ಕೊಡಬೇಕೋ ಅದನ್ನು ಮೊದಲು ತಿಳಿದುಕೊಳ್ಳಬೇಕು. ದುಡಿಯುವುದು ಸರಿ ಆದರೆ ಅದರ ಜೊತೆ ಜೊತೆಗೆ ಕುಟುಂಬಕ್ಕೆ ಮಕ್ಕಳಿಗೆ ಸ್ವಂತ ನಮಗಾಗಿ ಕೂಡ ಸ್ವಲ್ಪ ಸಮಯವಲ್ಲ ಮೀಸಲಾಗಿಡಬೇಕು. ಇಷ್ಟವಾದ ಸಾಹಿತ್ಯ, ಸಂಗೀತ ಆಸಕ್ತಿಕರ ವಿಷಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ದೇಹದ ಆರೋಗ್ಯಕ್ಕೆ ನಿತ್ಯ ವ್ಯಾಯಾಮ ನಡಿಗೆ ಕುಟುಂಬದವರ ಜೊತೆ ಕಾಲ ಕಳೆಯುವುದು ಬಹಳ ಮುಖ್ಯ. ಇವೆಲ್ಲವನ್ನೂ ಹಿತಮಿತವಾಗಿ ಜೀವನದಲ್ಲಿ ಅಳವಡಿಸಿಕೊಂಡಾಗ ಒಂದು ಸಮತೋಲನವಿರುತ್ತದೆ.
ಯಾವುದೋ ಒಂದು ವಿಷಯಕ್ಕೆ ಅತಿಯಾದ ಪ್ರಾಮುಖ್ಯತೆ ಕೊಟ್ಟಾಗ, ಜೀವನದಲ್ಲಿ ಬೇರೆ ಏನನ್ನು ಅನುಭವಿಸಲು
ನಮಗೆ ಸಾಧ್ಯವಾಗುವುದಿಲ್ಲ. ಬರಿ ಹಣ ಮಾಡುವುದೂ ಜೀವನವಲ್ಲ. ಇನ್ನಾದರೂ ಬದುಕಿನ ರೇಸಿನಲ್ಲಿ ಓಟ ಕಡಿಮೆ ಮಾಡಿ ಒಂದಿಷ್ಟು ನೋಟಕ್ಕೂ ಸಮಯ ಮಾಡಿ ಕೊಳ್ಳಿ. ನಿಮಗೆ ಇಷ್ಟವಾದ ಕೆಲಸಗಳಿಗೆ ನಿಮ್ಮ ಕುಟುಂಬ ದವರ ಜೊತೆ ಮಾತುಕತೆಗಳಿಗೆ ಬಿಡುವ ಮಾಡಿಕೊಳ್ಳಿ.
ಇದನ್ನೂ ಓದಿ: Roopa Gururaj Column: ತಲ್ಲಣಿಸದಿರು ಕಂಡ್ಯಾ, ತಾಳು ಮನವೇ…