Thursday, 24th October 2024

Roopa Gururaj Column: ಸೇಡಿನ ಬೆಂಕಿಯಲ್ಲಿ ನಾಶವಾದ ಸಂತತಿಗಳು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಸಲ, ಮಹಾರಾಜ ಕಾರ್ತವೀರ್ಯಾರ್ಜುನ, ತನ್ನ ದೊಡ್ಡ ಸೈನ್ಯದೊಡನೆ ಜಮದಗ್ನಿಗಳ ಆಶ್ರಮಕ್ಕೆ ಬಂದ. ಆಶ್ರಮದ ವಾತಾವರಣವನ್ನು ನೋಡಿ ಅವನಿಗೆ ಬಹಳ ಸಂತೋಷವಾಯಿತು. ಜಮದಗ್ನಿ ಅವನನ್ನೂ ಅವನ ಪರಿವಾರವನ್ನೂ ಆದರದಿಂದ ಸ್ವಾಗತಿಸಿದ. ‘ಎಲ್ಲರೂ ದಣಿದಿರುವಂತೆ ಕಾಣುತ್ತದೆ, ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿ, ಅಷ್ಟರಲ್ಲಿ ಊಟ ತಯಾರಾಗುತ್ತದೆ’ ಎಂದು ಹೇಳಿದ.

‘ಮುನಿಗಳೇ ನಾವು ಏನೂ ಮುನ್ಸೂಚನೆ ಕೊಡದೆ, ಬಂದಿದ್ದೇವೆ, ಇಷ್ಟೊಂದು ಜನಕ್ಕೆ ನೀವು ಹೇಗೆ ಊಟ ಹಾಕು ವಿರಿ?’ ಎಂದು ಕೇಳಿದ ರಾಜ. ‘ಅದರ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ, ನೀವೆಲ್ಲಾ ವಿಶ್ರಮಿಸಿಕೊಳ್ಳಿ, ಸ್ವಲ್ಪ ಸಮಯದಲ್ಲಿ ಊಟ ತಯಾರಾಗುತ್ತದೆ’ ಎಂದು ಹೇಳಿದ ಮುನಿ.

ಜಮದಗ್ನಿಗೆ ಇಂದ್ರನು ಕಾಮಧೇನು ಎನ್ನುವ ಹಸುವನ್ನು ಕಾಣಿಕೆಯಾಗಿ ಕೊಟ್ಟಿದ್ದ. ಆ ಹಸುವಿನ ಬಳಿ, ‘ಓ ತಾಯಿ, ಕಾಮಧೇನು, ನನ್ನ ಅತಿಥಿಗಳಿಗೆಲ್ಲಾ ಹಸಿದಿದ್ದಾರೆ, ಅವರಿಗೆ ಔತಣವನ್ನು ಒದಗಿಸಬೇಕೆಂದು ಪ್ರಾರ್ಥಿಸುತ್ತೇನೆ’ ಎಂದು ಜಮದಗ್ನಿ ಬೇಡಿಕೊಂಡ. ತಕ್ಷಣವೇ ಕಾಮಧೇನು ಉತ್ತಮ ಭೋಜನವನ್ನು ಕರುಣಿಸಿತು. ರಾಜ ಹಾಗೂ
ಅವನ ಪರಿವಾರದವರು ತೃಪ್ತಿಯಿಂದ ಊಟ ಮಾಡಿದರು ಕಾರ್ತವೀರ್ಯನಿಗೆ, ಕಾಮಧೇನು ಹಸುವನ್ನು ತಾನು
ಪಡೆಯಬೇಕೆಂದು ಅನಿಸಿತು. ‘ಮಹಾಮುನಿಗಳೆ, ಈ ಕಾಮಧೇನು ನನ್ನ ಅರಮನೆಯಲ್ಲಿದ್ದರೆ ಪ್ರತಿಯೊಬ್ಬರಿಗೂ
ಪ್ರಯೋಜನವಾಗುತ್ತದೆ, ದಯವಿಟ್ಟು ನನಗೆ ಈ ಹಸುವನ್ನು ಕೊಟ್ಟು ಬಿಡಿ’ ಎಂದು ಕೇಳಿದ.

‘ಮಹಾರಾಜ, ಇಂದ್ರನು ನನ್ನ ಆಶ್ರಮಕ್ಕೆ ಇದನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ, ಇದನ್ನು ನಾನು ಬೇರೆಯವರಿಗೆ ಕೊಡುವುದು ಸಾಧ್ಯವಿಲ್ಲ’ ಎಂದು ಹೇಳಿದರು ಮುನಿಗಳು. ರಾಜನ ಮನಸ್ಸು ಕಾಮಧೇನುವಿನ ಮೇಲೇ ಇತ್ತು. ರಾತ್ರಿ ಸಮಯದಲ್ಲಿ ಎಲ್ಲರೂ ಮಲಗಿದ್ದಾಗ ಕಾಮಧೇನುವನ್ನು ಕದ್ದುಕೊಂಡು ಹೊರಟು ಹೋದ. ಆ ಸಮಯದಲ್ಲಿ, ಪರಶುರಾಮ ಆಶ್ರಮದಲ್ಲಿ ಇರಲಿಲ್ಲ, ಕಠಿಣ ತಪಸ್ಸಿನಲ್ಲಿ ತೊಡಗಿದ್ದನು. ಅವನ ತಪಸ್ಸಿಗೆ ಮೆಚ್ಚಿ ಶಿವನು ಅವನಿಗೆ ಪ್ರತ್ಯಕ್ಷನಾಗಿ, ಅದ್ಭುತವಾದ ಒಂದು ಕೊಡಲಿಯನ್ನು ಕೊಟ್ಟನು. ನಂತರ ತನ್ನ ಆಶ್ರಮಕ್ಕೆ ಹಿಂತಿರುಗಿದಾಗ, ಕಾರ್ತವೀರ್ಯ, ಕಾಮಧೇನುವನ್ನು ಕದ್ದುಕೊಂಡು ಹೋದ ವಿಷಯ ಅವನಿಗೆ ತಿಳಿಯಿತು.

ಪರಶುರಾಮ ಕೋಪಿಷ್ಟನಾಗಿ, ಅವನ ಸೊಕ್ಕನ್ನು ಮುರಿಯಬೇಕೆಂದು, ತಕ್ಷಣ ಅವನಿದ್ದಲ್ಲಿಗೆ ಹೋದನು. ‘ಏ, ಕಾರ್ತ ವೀರ್ಯ, ಕೃತಘ್ನ, ನೀಚ, ನನ್ನ ತಂದೆ ನಿನಗೂ ನಿನ್ನ ಪರಿವಾರಕ್ಕೂ ಪ್ರೀತಿಯಿಂದ ಆದರದಿಂದ ಊಟ ಹಾಕಿದ್ದಕ್ಕೆ, ಅವರಿಗೇ ದ್ರೋಹ ಬಗೆದು, ಕಾಮಧೇನುವನ್ನು ಕದ್ದು ತಂದೆಯಾ? ನನ್ನ ಪರಶು, ನಿನ್ನ ತಲೆಯನ್ನು ತೆಗೆಯಲಿ’ ಎಂದು ಕೊಡಲಿಯಿಂದ ಅವನ ತಲೆಯನ್ನು ಕತ್ತರಿಸಿದನು.

ತಮ್ಮ ತಂದೆಯ ಮರಣದಿಂದ ಕೆರಳಿದ ಕಾರ್ತವೀರ್ಯನ ಮಕ್ಕಳು, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಪರಶುರಾಮ ಇಲ್ಲದ ಸಮಯವನ್ನು ನೋಡಿ, ತಮ್ಮ ಸೈನ್ಯ ಸಮೇತ ಜಮದಗ್ನಿ ಆಶ್ರಮದ ಮೇಲೆ ದಾಳಿ ಇಟ್ಟರು. ಜಮದಗ್ನಿಯನ್ನು ಕೊಂದು ಹಿಂತಿರುಗಿದರು.

ಹಿಂತಿರುಗಿ ಬಂದ ನಂತರ ತನ್ನ ತಂದೆಯ ಹತ್ಯೆಯ ವಿಷಯ ತಿಳಿದ ಪರಶುರಾಮ, ಕೋಪದಿಂದ ಕಾರ್ತವೀರ್ಯನ ಸಂತತಿಯನ್ನು ಮಾತ್ರವಲ್ಲದೆ, ಇಪ್ಪತ್ತೊಂದು ಬಾರಿ ಜಗತ್ತನೆಲ್ಲಾ ಸುತ್ತಿ ಇಡೀ ಕ್ಷತ್ರಿಯರನ್ನೆಲ್ಲಾ ಸಂಹಾರ ಮಾಡಿ ದನು. ದುರಹಂಕಾರದಿಂದ ಮೆರೆಯುತ್ತಿದ್ದ ಕ್ಷತ್ರಿಯ ರಾಜರೆಲ್ಲ ಇವನಿಂದ ಸಂಹಾರವಾದರು. ಅವರೆಲ್ಲರ ರಕ್ತದಿಂದ ಪಿತೃತರ್ಪಣ ಕೊಟ್ಟನು.

ಆಗಷ್ಟೇ, ವಿವಾಹ ಮಾಡಿಕೊಂಡು ಹಿಂದಿರುಗುತ್ತಿದ್ದ, ಶ್ರೀರಾಮನನ್ನು ನೋಡಿ, ಅವನಿಗೆ ಶರಣಾಗಿ, ವೈಷ್ಣವ
ಧನಸನ್ನು ಅವನಿಗೆ ಧಾರೆಯೆರದು, ಮಹೇಂದ್ರ ಪರ್ವತಕ್ಕೆ ಹೊರಡಲು ತೀರ್ಮಾನಿಸಿ, ‘ಹೇ ರಾಮ, ನನ್ನೆಲ್ಲಾ ತಪಶಕ್ತಿ ನಿನ್ನ ದೇಹವನ್ನು ಸೇರಲಿ, ಅದರಿಂದ ನೀನು ಜಗತ್ತಿಗೆ ಕಲ್ಯಾಣವನ್ನುಂಟುಮಾಡು’ ಎಂದು ಹೇಳಿ ತಪಸ್ಸಿಗೆ
ಹೊರಟು ಹೋದನು. ನಮಗೆ ಉಪಕಾರ ಮಾಡಿದವರಿಗೆ ಅಪಕಾರ ಮಾಡಿದರೆ, ಇಂದಲ್ಲ ನಾಳೆ ಅದರ ಪ್ರತಿ-ಲ ನಾವು ಅನುಭವಿಸಲೇಬೇಕು. ಅಷ್ಟೇ ಅಲ್ಲ ಮತ್ತೊಬ್ಬರು ನಮಗೆ ಮಾಡಿದ ತೊಂದರೆಗೆ ಕೋಪವನ್ನು ಹಿಡಿತಕ್ಕೆ ತೆಗೆದುಕೊಳ್ಳದೆ ಪ್ರತಿಕ್ರಿಯಿಸಿದರೆ, ಅದಕ್ಕೂ ತಕ್ಕ ಬೆಲೆಯನ್ನು ತರಬೇಕಾಗುತ್ತದೆ ಎಂದು ಮೇಲಿನ ಕಥೆಯಿಂದ
ತಿಳಿಯಬಹುದು.

ಇದನ್ನೂ ಓದಿ: Roopa Gururaj Column: ಉಪಕಾರ ಮಾಡಿ, ಅದನ್ನು ನೆನಪಿಸುತ್ತಿರಬೇಡಿ