Saturday, 23rd November 2024

Roopa Gururaj Column: ಒಳಿತನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಆನಂದ ದಿನವಿಡೀ ಊರೆಲ್ಲ ಸುತ್ತಿ ತಿರುಗಿ‌ ಗುಜರಿ ಸಾಮಗ್ರಿ ಸಂಗ್ರಹಿಸುತ್ತಿದ್ದ. ಸಾಯಂಕಾಲದ ಹೊತ್ತಿಗೆ ಅದನ್ನು ದೊಡ್ಡ ಗುಜರಿ ಅಂಗಡಿಗೆ ಹಾಕಿ ಬರುವ ಹಣದಲ್ಲಿ ತನ್ನ ಜೀವನ ಹೇಗೋ ನಡೆಸಿಕೊಂಡು ಹೊರಟಿದ್ದ. ಒಮ್ಮೆ ಆತ ಒಂದು ಮನೆಯಿಂದ ಹಳೆಯ ಗುಜರಿ ಕೊಂಡುಕೊಂಡ. ಅದರಲ್ಲಿ ಪಂಚಲೋಹದ ಡಬ್ಬವೊಂದು ಸಿಕ್ಕಿತು. ಹೀಗೇ ಮುಂದೆ ಹೋದಾಗ ಅಬ್ಬ ಮನೆಯಾತ ತಮ್ಮ ಮನೆಯ ಗುಜರಿ ಯನ್ನು ಕೊಡಲು ಅವನನ್ನು ಕರೆದರು. ಅವರ ಮನೆಯಲ್ಲಿನ ಬೇಡವಾದ ಎಲ್ಲ ಸಾಮಗ್ರಿಗಳನ್ನು ಒಂದು ಬೆಲೆ ಕಟ್ಟಿ ಕೊಂಡ. ಆ ಮನೆಯ ಮಾಲೀಕನಿಗೆ ಆನಂದನ ಗುಜರಿಯಲ್ಲಿದ್ದ ಪಂಚಲೋಹದ ಡಬ್ಬಿ ಆಕರ್ಷಸಿತು.

ಅದನ್ನಾತ ವಿಚಾರಿಸಿ 5 ರು.ಗೆ ಕೊಂಡುಕೊಂಡ. ಆದರೆ, ಅದರ ಮುಚ್ಚಳ ಬಹಳ ಗಟ್ಟಿಯಾಗಿ ಬೆಸೆದಿತ್ತು. ಏನು ಮಾಡಿದರೂ ತೆರೆದುಕೊಳ್ಳದ್ದರಿಂದ ಮರುದಿನ ಅದೇ ಹಾದಿಯಲ್ಲಿ ಬಂದ ಆನಂದನಿಗೆ ಮರಳಿ ಕೊಟ್ಟು ತಾನು ಕೊಟ್ಟ 5 ರು. ಹಿಂದಕ್ಕೆ ಪಡೆದ. ಆನಂದನು ದೊಡ್ಡ ಗುಜರಿ ಅಂಗಡಿ ಮಾಲೀಕನಿಗೆ ಅದನ್ನು ಮಾರಲು ಹೋದಾಗ ಅಲ್ಲೂ ಅದೇ ಸಮಸ್ಯೆ ಉಂಟಾಗಿ ಆ ಡಬ್ಬಿ ಅವನ ಬಳಿಯೇ ಉಳಿಯಿತು. ಮರುದಿನ ರವಿವಾರ ರಜೆಯ ದಿನ ವಾಗಿದ್ದರಿಂದ ಮಾರುಕಟ್ಟೆಗೆ ಬೇಗ ಹೋಗಿ ತನ್ನೆಲ್ಲ ಗುಜರಿಯೊಂದಿಗೆ ಆ ಡಬ್ಬಿಯನ್ನೂ ಮಾರಲು ಕುಳಿತ. ಗ್ರಾಹಕರು ಬೇಕಾದ ವಸ್ತು ಕೊಂಡೊಯ್ಯುತ್ತಿದ್ದರು. ಒಬ್ಬಾತ ಆ ಡಬ್ಬಿಯನ್ನು 5 ರು. ಗೆ ಕೊಂಡು ಹೋದ. ಆನಂದ ಕೈತೊಳೆದುಕೊಂಡು ಖುಷಿ ಪಟ್ಟ. ಆದರೆ ಆ ಗ್ರಾಹಕ ಪುನಃ ಸಂಜೆ ಬಂದು ಅದರ ಮುಚ್ಚಳ ತೆರೆಯಲು ಬರುತ್ತಿಲ್ಲ ಎಂದು ಮರಳಿಸಿ ತನ್ನ ಹಣ ಪಡೆದುಕೊಂಡ. ಆಗಂತೂ ಆನಂದನಿಗೆ ನಿರಾಸೆಯೇ ಆಯಿತು.

ತನ್ನ ಕಾಯಕದಲ್ಲಿ ಎಂದೂ ಹೀಗೆ ನಿರಾಸೆಗೊಂಡಿರದ ಆನಂದನಿಗೆ ಈ ಸಲ ಆ ಪಂಚಲೋಹದ ಡಬ್ಬಿಯಿಂದ ಕಿರಿ ಕಿರಿಯಾಗ ತೊಡಗಿತು. ಮನೆಗೆ ಬಂದವ ಸಿಟ್ಟಿನಿಂದ ಡಬ್ಬಿಯನ್ನು ಬೀಸಿ ನೆಲಕ್ಕೆ ಕುಕ್ಕಿ ಎಸೆದ. ಕೂಡಲೇ ಡಬ್ಬಿಯ ಬಾಯ್ತೆರೆದು ಅದರೊಳಗೆ ಸುತ್ತಿದ್ದ ಪುಟ್ಟ ಬಟ್ಟೆಯಲ್ಲಿ ಬಂಗಾರದ ತುಂಡು ಸಿಕ್ಕಿತು. ಆನಂದನು ಅಚ್ಚರಿ ಮತ್ತು ಗಾಭರಿಯಿಂದ ಬಿಟ್ಟ ಕಣ್ಣುಗಳಿಂದ ಕೆಲ ಕ್ಷಣ ನೋಡುತ್ತ ಇದ್ದುಬಿಟ್ಟ. ಆಮೇಲೆ ಆ ಡಬ್ಬಿಯನ್ನು ಯಾರ ಮನೆ ಯಿಂದ ಕೊಂಡಿದ್ದನೋ ಅವರನ್ನು ನೆನೆಯುತ್ತ ಪಾಪ…! ಇದು ಅವರಿಗೆ ತಿಳಿಯದ ವಿಷಯ. ಅವರ ಹಿರಿಯರು ತಮ್ಮ ಮನೆತನಕ್ಕೆ ಸಂಬಂಧಿಸಿದ ಸಂಪತ್ತು ಇದರಲ್ಲಿ ಕೂಡಿ ಇಟ್ಟಿರಬೇಕು.

ಇದನ್ನು ಅವರಿಗೆ ಹಿಂದಿರುಗಿಸುವುದೇ ಸರಿ ಎಂದು ನಿರ್ಧರಿಸಿ ಮರುದಿನ ಆ ಮನೆ ಹುಡುಕಿಕೊಂಡು ಹೊರಟ.
ಆ ಮನೆಯು ಬೀಗ ಹಾಕಿತ್ತು. ಪಕ್ಕದಲ್ಲಿ ವಿಚಾರಿಸಿದ, ಪ್ರಯೋಜನ ಆಗಲಿಲ್ಲ. ಅವರು ಊರೇ ಬಿಟ್ಟು ಹೋಗಿರುವ ರೆಂದು ತಿಳಿಯಿತು. ನಿರ್ವಾಹ ಇಲ್ಲದೇ ಪುನಃ ತನ್ನ ಮನೆಯ ಕಡೆ ಹಿಂದಿರುಗಿದ. ಭಗವಂತನ ಕೃಪೆ ಆಗದ ಹೊರತು ಸಮಯಕ್ಕೂ ಮುನ್ನ ಯಾರ ಭಾಗ್ಯವೂ ಬೆಳಗುವುದಿಲ್ಲ. ಅವನ ನಿಷ್ಠೆಯ ಕಾಯಕ ಅವನಿಗೆ ತಿಳಿಯದ ಒಂದು ಎತ್ತರದ ಸ್ಥಾನಕ್ಕೆ ತಲುಪಿಸಿತ್ತು. ಯಾವ ಪಂಚಲೋಹದ ಡಬ್ಬಿ ಮಾರಿ ಕೈ ತೊಳೆದುಕೊಳ್ಳಬೇಕು ಎಂದುಕೊಂಡಿ ದ್ದನೋ, ಅದು ಪುನಃ ಪುನಃ ಮರಳಿ ಇವನ ಕೈಗೇ ಸೇರುತ್ತಿತ್ತು. ಹಣೆಬರಹ ಅದೃಷ್ಟವಾಗಿ ಬಂದು ಅವನ ಮನೆ ಬಾಗಿಲು ಬಡಿಯುತ್ತಲೇ ಇತ್ತು.

ಆನಂದನು ಬಂಗಾರ ಅಂಗಡಿಯಲ್ಲಿ ಮಾರಿ ಬಂದ ಹಣದಲ್ಲಿ ಸ್ವಲ್ಪ ಜೀವನೋಪಾಯಕ್ಕೆ ಇಟ್ಟು ಕೊಂಡು, ಉಳಿದುದನ್ನು ತನ್ನ ವ್ಯಾಪಾರದಲ್ಲಿ ತೊಡಗಿಸಿದ. ಅವನ ನಿಷ್ಠೆ ಪ್ರಾಮಾಣಿಕತೆ, ಒಳ್ಳೆಯ ಮನಸ್ಸು, ಅವನಿಗೆ ಜೀವನದಲ್ಲಿ ದೊಡ್ಡ ಅದೃಷ್ಟವನ್ನೇ ತಂದು ಕೊಟ್ಟಿತು. ಯಾವುದೂ ನಮಗೆ ಸುಮ್ಮನೆ ಬರುವುದಿಲ್ಲ. ನಮ್ಮ ಒಳ್ಳೆಯ ಮನಸ್ಸು ಕೆಲಸಗಳಿಗೆ ಅದರ ಪ್ರತಿಫಲ ಕೆಟ್ಟ ಯೋಚನೆಗಳಿಗೆ ತಕ್ಕ ಪ್ರತಿಫಲ ದೊರೆಯದೆ ಇರುವುದಿಲ್ಲ.

ಇದನ್ನೂ ಓದಿ: Roopa Gururaj Column: ಸೇಡಿನ ಬೆಂಕಿಯಲ್ಲಿ ನಾಶವಾದ ಸಂತತಿಗಳು