Friday, 25th October 2024

Roopa Gururaj Column: ಸ್ವರ್ಗ- ನರಕದ ಯಾತ್ರೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಗ್ರಾಮದಲ್ಲಿ ವಾಸವಿದ್ದ ಸಾವಿತ್ರಿ ಎಂಬ ಮಹಿಳೆ ವಿಷ್ಣುವಿನ ಭಕ್ತಳಾಗಿದ್ದು ಜೀವನದುದ್ದಕ್ಕೂ ಒಳ್ಳೆಯ ಕೆಲಸಗಳನ್ನು ಮಾಡಿದ್ದ ಬದುಕಿದವಳು. ಕಾಲ ಉರುಳಿತು ಮಹಿಳೆಗೆ ವಯಸ್ಸಾಗಿ ಮರಣ ಹೊಂದಿದಳು. ಆಕೆ ಬೇಕಾದಷ್ಟು ಪುಣ್ಯ ಕಾರ್ಯಗಳನ್ನು ಮಾಡಿದ ಕಾರಣ ಸ್ವತಃ ಯಮನೇ ಅವಳನ್ನು ಕರೆದೊಯ್ಯುಲು ಭವ್ಯ ದಿವ್ಯ ವಾದ ರಥವನ್ನು ತಂದನು.

ಯಮನನ್ನು ಕಂಡz ಆಕೆ ಭಕ್ತಿಯಿಂದ ಅವನಿಗೆ ನಮಿಸಿ ಒಂದು ಬಿನ್ನಹ ಮಾಡಿದಳು, ಅದು ‘ನನ್ನನ್ನು
ವೈಕುಂಠಕ್ಕೆ ಕರೆದೊಯ್ಯುವ ಮೊದಲು ನರಕ ಮತ್ತು ಸ್ವರ್ಗದ ದರ್ಶನ ಮಾಡಿಸು’ ಎಂದಳು. ಅದನ್ನು ಒಪ್ಪಿ
ಆಕೆಯನ್ನು ನರಕದ ಕಡೆ ಕರೆದುಕೊಂಡು ಹೋಗಿ ರಥವನ್ನು ನಿಲ್ಲಿಸಿದನು. ನರಕ ನಿಜಕ್ಕೂ ನರಕದಂತೆ ಇತ್ತು. ಅಲ್ಲಿರುವವರೆಲ್ಲ ಹುಚ್ಚರಂತೆ, ರೋಗಿಷ್ಠರಂತೆ ಕಾಣುತ್ತಿದ್ದರು. ಹಸಿವು, ಬಾಯಾರಿಕೆ ಯಿಂದ ಬಳಲಿದ್ದರು. ಆಕೆ ಒಬ್ಬನ ಹತ್ತಿರ, ‘ಏಕೆ ನೀವೆಲ್ಲ ಹೀಗಿದ್ದೀರಿ ಎಂದು ಕೇಳಿದಳು. ಅಯ್ಯೋ ನಮಗೆ ತುಂಬಾ ಹಸಿವು ಬಾಯಾರಿಕೆ ತಿನ್ನಲು ಏನೂ ಇಲ್ಲ’ ಎಂದನು.

ಸುತ್ತಲೂ ನೋಡಿದಳು ಒಂದು ಎತ್ತರದ ಜಾಗದಲ್ಲಿ ದೊಡ್ಡ ಪಾತ್ರೆ ತುಂಬಾ ಹದವಾದ ಘಮಘಮ ಪಾಯಸ ಇಟ್ಟಿದ್ದರು. ಅದರ ಘಮ ಎಲ್ಲ ಕಡೆಗೂ ತುಂಬಿತ್ತು. ಮಹಿಳೆ ಕೇಳಿದಳು ‘ಏಕೆ ನೀವು ಪಾಯಸ ಸೇವಿಸುತ್ತಿಲ್ಲ?’ ಆತ ಹೇಳಿದ ‘ಏನು ಮಾಡೋದು, ತಿನ್ನಬೇಕು ಎಂಬ ಆಸೆ ಎಷ್ಟೇ ಪ್ರಯತ್ನಿಸಿದರೂ ಅದು ನಮ್ಮ ಕೈಗೆಟು‌ಕುತ್ತಿಲ್ಲ ಬಹಳ ಎತ್ತರದಲ್ಲಿದೆ’ ಎಂದು ಹಾರಿ, ಹಾರಿ ತೋರಿಸಿದ. ಆಕೆಗೆ ಬಹಳ ನೋವಾಯಿತು.

‘ಅಯ್ಯೋ ದೇವರೇ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಆಯ್ತಲ್ಲ’ ಎಂದುಕೊಂಡು ರಥ ಏರಿದಳು. ಯಮ ರಥವನ್ನು ಸ್ವರ್ಗದ ಮುಂದೆ ನಿಲ್ಲಿಸಿದ. ಆಕೆ ರಥದಿಂದ ಇಳಿದು ಸ್ವರ್ಗದೊಳಗೆ ಹೋದಳು. ನೋಡುತ್ತಾಳೆ, ಅವರೆಲ್ಲ ಬಹಳ ಖುಷಿ ಖುಷಿಯಾಗಿ ನೃತ್ಯ- ಹಾಡು- ಹಾಸ್ಯ ಲಾಸ್ಯ ಮಾಡಿಕೊಂಡು ಸಂತೋಷವಾಗಿ ಓಡಾಡು ತ್ತಿದ್ದರು. ಹತ್ತಿರ ಹೋಗಿ ಆಕೆ ಕೇಳಿದಳು? ‘ನೀವೆಲ್ಲ ಇಷ್ಟೊಂದು ಖುಷಿಯಾಗಿದ್ದೀರಲ್ಲ ಅದು ಹೇಗೆ?’ ಎಂದಳು.

ಅವರು ಹೇಳಿದರು ‘ನಮಗೆ ಇಲ್ಲಿ ಯಾವುದಕ್ಕೂ ಕಮ್ಮಿಇಲ್ಲ ಎಲ್ಲವೂ ಇದೆ’ ಎಂದರು. ‘ನಿಮಗೆ ಆಹಾರ ಎಲ್ಲಿ ಸಿಗುತ್ತದೆ’ ಎಂದು, ತಲೆಯೆತ್ತಿ ನೋಡಿದಳು ಅರೆ, ನರಕದಲ್ಲಿ ಇದ್ದಂತೆ ಇಲ್ಲೂ ದೊಡ್ಡ ಪಾತ್ರೆ ತುಂಬಾ ಪಾಯಸ ವನ್ನು ಅಟ್ಟಣಿಗೆ ಮೇಲೆ ಇಟ್ಟಿದ್ದಾರೆ. ಮಹಿಳೆಗೆ ಆಶ್ಚರ್ಯವಾಯಿತು. ‘ಇದೇ ನಿದು ನರಕದಲ್ಲೂ ಇದೇದ್ದಾ
ಪಾಯಸವಿದೆ, ಸ್ವರ್ಗದಲ್ಲೂ ಇದೆ ಪಾಯಸ ಎರಡೂ ಕಡೆ ಅಷ್ಟೇ ಎತ್ತರದಲ್ಲಿ ಇಟ್ಟಿದ್ದಾರೆ.

ಆದರೆ ನರಕದಲ್ಲಿ ಹಸಿವಿನಿಂದ ಒದ್ದಾಡುತ್ತಿದ್ದಾರೆ. ಸ್ವರ್ಗದವರು ಆನಂದವಾಗಿದ್ದಾರೆ ಇದಕ್ಕೆ ಕಾರಣವೇನು? ಎಂದು ಅಲ್ಲಿದ್ದ ಒಬ್ಬನನ್ನು ಕೇಳಿದಳು. ಅಷ್ಟು ಎತ್ತರದಲ್ಲಿರುವ ಪಾಯಸವನ್ನು ನೀವು ಹೇಗೆ ತಿನ್ನುವಿರಿ?’ ಕೇಳಿದಳು, ಆತ ಹೇಳಿದ. ‘ಪಾಯಸ ಮೇಲೆ ಇದೆ. ಆದರೆ ನಾವೆಲ್ಲ ಯೋಚಿಸಿ ಒಬ್ಬರ ಮೇಲೊಬ್ಬರು ಹತ್ತಿ ನಿಂತು ಪಾಯಸವನ್ನು ಅಂತೂ ಒಂದಿಷ್ಟು ಕೆಳಗಿಳಿಸಿ ಎಲ್ಲರೂ ಹಂಚಿಕೊಂಡು ತಿನ್ನುತ್ತೇವೆ’ ಎಂದರು.

ಭೂಮಿಯ ಮೇಲೂ ಮನುಷ್ಯರಾದ ನಾವು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಹಂಚಿಕೊಂಡು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಾಗ ಸ್ವರ್ಗ ಸಮಾನವಾಗಿ ಬದುಕಬಹುದು. ಆದರೆ ಎಲ್ಲ ಸೌಲಭ್ಯಗಳು ನಮ್ಮೊಬ್ಬರಿಗೇ ಸಿಗಬೇಕು ಎನ್ನುವಂತಹ ಸ್ವಾರ್ಥ ನಮ್ಮಲ್ಲಿ ಮನೆ ಮಾಡಿದಾಗ, ಸುಖ ಸಂತೋಷಗಳು ಕಣ್ಣಿಗೆ ಕಾಣುವ ಮರೀಚಿಕೆ
ಗಳಾಗುತ್ತವೆಯೇ ಹೊರತು ಅನುಭವಿಸಲು ಕೈಗೆಟಕುವುದಿಲ್ಲ.

ಕಾಲ್ಪನಿಕ ಕಥೆಯಾದರೂ ಮೇಲಿನ ಕಥೆ ನಮಗೆ ಕೊಡುವ ಪಾಠ ಬಹಳ ದೊಡ್ಡದು. ನಮ್ಮ ಮನಸ್ಸು ಪರಿಶುದ್ಧ ವಾಗಿದ್ದಾಗ ಎಲ್ಲಿದ್ದರೂ ಸುಖ ಶಾಂತಿ, ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯ. ಸ್ವರ್ಗ ನರಕ ನಾವೇ ಸೃಷ್ಟಿಸಿ ಕೊಳ್ಳುವ ಲೋಕಗಳು. ಇನ್ನಾದರೂ ಮನುಷ್ಯರಾಗಿ ಬದುಕಿ ನಮಗೂ ನಮ್ಮ ಸುತ್ತಲಿನವರಿಗೂ ಬದುಕನ್ನು ಸಹನೀಯವಾಗಿಸೋಣ.

ಇದನ್ನೂ ಓದಿ: Roopa Gururaj Column: ಹಸಿದು ಬಳಲಿದ ಕೃಷ್ಣನಿಗೆ ದಿನವಿಡೀ ನೈವೇದ್ಯ…