Thursday, 21st November 2024

Roopa Gururaj Column: ವಾಯು, ಸೂರ್ಯರಿಗೆ ಮೂಡಿದ ಯಾರು ಮುಖ್ಯ ? ಎಂಬ ಗೊಂದಲ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಸಲ ಗಾಳಿಗೆ ತಾನೇ ಎಲ್ಲರಿಗಿಂತ ಬಲಿಷ್ಠ ಎಂಬ ಅಹಂಕಾರ ಉಂಟಾಯಿತು. ತಾನು ಇಲ್ಲದಿದ್ದರೆ ಯಾವ ಜೀವ ಜಂತುಗಳೂ ಪ್ರಕೃತಿಯಲ್ಲಿ ಜೀವಿಸುತ್ತಲೇ ಇರಲ್ಲಿಲ್ಲ. ಹಾಗಾಗಿ ಪಂಚಭೂತಗಳಲ್ಲಿ ತಾನೇ ಎಲ್ಲರಿಗಿಂತ ಬಲಿಷ್ಠನೆಂದು ಜಂಬ ಪಡುತ್ತಿತ್ತು. ‘ಗಾಳಿ ಸೂರ್ಯನ ಬಳಿ ಹೋಗಿ ನಾನೇ ಎಲ್ಲರಿಗಿಂತ ಬಲಿಷ್ಠ, ನಾನಿಲ್ಲದಿದ್ದರೆ ಪ್ರಕೃತಿಯಲ್ಲಿ ಯಾರೂ ಕೂಡಾ ಬದುಕುತ್ತಿರಲಿಲ್ಲ’ ಎಂದು ಜಂಬ ಕೊಚ್ಚುತ್ತಾ ಹೇಳಿತು. ಆಗ ಸೂರ್ಯ, ‘ನಾವೆಲ್ಲರೂ ಸಮಾನರೇ, ಇಲ್ಲಿ ಯಾರೂ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ, ಪ್ರಕೃತಿಯಲ್ಲಿ ನಾವೆಲ್ಲರೂ ಸಮಾನರೆ’ ಎಂದು ಹೇಳಿದ. ಗಾಳಿ ಸೂರ್ಯನ ಮಾತನ್ನು ಒಪ್ಪಲೇ ಇಲ್ಲ ಈ ವಿಚಾರದಲ್ಲಿ ಸೂರ್ಯನಿಗೂ ಗಾಳಿಗೂ ವಾದ ನಡೆಯಿತು. ಗಾಳಿ
ನಾನೇ ಎಲ್ಲರಿಗಿಂತ ಬಲಶಾಲಿ ಶ್ರೇಷ್ಠ ಎಂದು ವಾದಿಸಿತು.

ಇದು ಇಬ್ಬರು ಸ್ನೇಹಿತರ ನಡುವಿನ ವಾದ ವಿವಾದವಾದ್ದರಿಂದ ಅದು ಅಷ್ಟಕ್ಕೇ ನಿಲ್ಲಲೇ ಇಲ್ಲ. ಇಬ್ಬರೂ ಸೋಲಲು ಒಪ್ಪಲೇ ಇಲ್ಲ. ದೀರ್ಘಕಾಲದ
ಚರ್ಚೆಯ ನಂತರ ಇಬ್ಬರೂ ಒಂದು ತೀರ್ಮಾನಕ್ಕೆ ಬಂದರು. ಬರೀ ವಾದ ವಿವಾದಗಳಿಂದ ಯಾವ ಉದ್ದೇಶವುವೂ ಈಡೇರುವುದಿಲ್ಲ ತಮ್ಮ
ಹೇಳಿಕೆಯನ್ನು ಸಮರ್ಥಿಸಲು ಏನಾದರೂ ಪ್ರಯೋಗಗಳನ್ನು ಮಾಡಬೇಕು ಎಂದು ಇಬ್ಬರೂ ನಿಶ್ಚಯಿಸಿದರು. ದಾರಿಯಲ್ಲಿ ಒಬ್ಬ ಪ್ರಯಾಣಿಕ ನಡೆದು ಹೋಗುತ್ತಿರುವುದನ್ನು ನೋಡಿದ ಸೂರ್ಯನಿಗೆ ಒಂದು ಒಳ್ಳೆಯ ಆಲೋಚನೆ ಹೊಳೆಯಿತು. ಗಾಳಿಯೊಂದಿಗೆ ಸೂರ್ಯ ಆ ಮನುಷ್ಯನ ಮೇಲೆ ನಮ್ಮ ಶಕ್ತಿಯನ್ನು ಪ್ರಯೋಗಿಸೋಣ. ಯಾರು ಅವನ ಅಂಗಿಯನ್ನು ಬಿಚ್ಚುವಂತೆ ಮಾಡುವರೊ ಅವರು ಗೆದ್ದಂತೆ ಮೊದಲ ಅವಕಾಶ ನಿನಗೆ ಎಂದು ಗಾಳಿಗೆ ಹೇಳಿದ.

ಈಗ ಮೊದಲ ಅವಕಾಶ ಗಾಳಿಯದಾಯ್ತು. ಅದು ಅತಿ ಶೀತಲವಾದ ಗಾಳಿಯನ್ನು ಜೋರಾಗಿ ಬೀಸಿತು. ರಭಸವಾಗಿ ಬೀಸಿದಷ್ಟೂ ಆ ಮನುಷ್ಯ
ಗಡ ಗಡ ನಡುಗುತ್ತಾ ಅಂಗಿಯನ್ನು ಇನ್ನಷ್ಟು ಹತ್ತಿರವಾಗುವಂತೆ ಎಳೆದುಕೊಳ್ಳತೊಡಗಿದ. ಎತರದ ಉಪಾಯಗಳನ್ನೂ ಗಾಳಿ ಮಾಡಿತು. ಆ
ಮನುಷ್ಯನ ಅಂಗಿ ರಭಸಕ್ಕೆ ಕಿತ್ತು ಬರುವಷ್ಟು ಜೋರಾಗಿ ಬೀಸಿತು ಗಾಳಿ. ಅದು ಜೋರಾಗಿ ಬೀಸಿದಷ್ಟೂ, ಆತ ಅಂಗಿಯನ್ನು ತನ್ನ ಕೈಗಳಿಂದ
ಗಟ್ಟಿಯಾಗಿ ಒತ್ತಿ ಹಿಡಿದುಕೊಂಡ. ಅದರ ಪ್ರಯತ್ನವೆಲ್ಲ ವ್ಯರ್ಥವಾಯಿತು. ಗಾಳಿಗೆ ಈ ಕೆಲಸ ತನ್ನಿಂದ ಸಾಧ್ಯವಿಲ್ಲವೆಂದು ಅನಿಸತೊಡಗಿತು. ಅದು ಬೇಸರ ಹಾಗೂ ಅವಮಾನದಿಂದ ತನ್ನ ಪ್ರಯತ್ನವನ್ನು ಕೈಬಿಟ್ಟಿತು.

ಈಗ ಸೂರ್ಯನ ಸರದಿ. ಸೂರ್ಯ ಒಂದು ಕ್ಷಣ ಮರೆಯಾದಂತೆ ಮಾಡಿದ, ಮತ್ತೆ ಮೋಡದ ಪರದೆಯನ್ನು ಸರಿಸಿ, ಹೊರಬಂದು ತನ್ನ
ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳಕಿನ ಪ್ರಕಾಶವನ್ನು ಬೀರಿದ. ಬರು ಬರುತ್ತಾ, ಆ ಮನುಷ್ಯನಿಗೆ ಬಿಸಿಲಿನ ತಾಪದ ಅನುಭವ
ಜಾಸ್ತಿಯಾಗುತ್ತಾ ಹೋಯಿತು. ಸೂರ್ಯನ ಪ್ರಕಾಶ ಅವನನ್ನು ಸುಡುವಂತೆ ಮಾಡಿತು. ಮೊದಲು ಅವನು ತನ್ನ ಅಂಗಿಯ ಗುಂಡಿಯನ್ನು
ಬಿಚ್ಚಿದ, ನಂತರ ಅಂಗಿಯನ್ನೇ ಕಳಚಿದ. ಆಗಲೂ ಅವನು ಬೆವರತೊಡಗಿದ. ಒಂದು ಮರದ ನೆರಳಿನಲ್ಲಿ ಹೋಗಿ ಕುಳಿತು, ತನ್ನ ಅಂಗಿಯಿಂದಲೇ
ಗಾಳಿ ಬೀಸಿಕೊಳ್ಳ ತೊಡಗಿದ. ಆಗ ಗಾಳಿ ಸೂರ್ಯನೇ ತನಗಿಂತ ಬಲಿಷ್ಠ ನೆಂದು ಒಪ್ಪಿಕೊಂಡಿತ್ತು. ಆಗ ಸೂರ್ಯ ಪೆಚ್ಚಾದ ವಾಯುವಿನ ಮುಖವನ್ನು ನೋಡಿ ಅವನನ್ನು ಸಮಾಧಾನ ಪಡಿಸುತ್ತಾ ಗೆಳೆಯ ಬೇಸರಪಡಬೇಡ. ನಮ್ಮ ನಮ್ಮಲ್ಲಿ ಯಾರೂ ಹೆಚ್ಚಲ್ಲ ಕಡಿಮೆಯೂ ಅಲ್ಲ
ಎಂದು ನಿನಗೆ ಅರ್ಥ ಮಾಡಿಸಲು ನಾನು ಹೀಗೆ ಮಾಡಬೇಕಾಯಿತು. ನಡಿ ಈಗ ಭಗವಂತ ನಮಗೆ ನೀಡಿದ ಕೆಲಸವನ್ನು ಮಾಡೋಣ ಎಂದು
ಮುನ್ನಡೆಯಿತು.

ಮನೆಯಲ್ಲಿರುವ ಕುಟುಂಬ ಸದಸ್ಯರಲ್ಲಿ ಈ ರೀತಿಯ ಗೊಂದಲಗಳು ಕೆಲವೊಮ್ಮೆ ಉಂಟಾಗುತ್ತವೆ. ಗಂಡ ಹೆಚ್ಚೋ, ಹೆಂಡತಿ ಹೆಚ್ಚೋ
ಅಥವಾ ಮನೆಯಲ್ಲಿರುವ ಹಿರಿಯರ, ಮಕ್ಕಳ ಉಪಸ್ಥಿತಿ ಮುಖ್ಯವೋ ಎಂದು. ಒಂದು ಕುಟುಂಬವೆಂದರೆ ಎಲ್ಲರೂ ಸೇರಿದರೆ ಮಾತ್ರ ಅದು
ತನ್ನ ರೂಪ ಪಡೆಯುತ್ತದೆ. ಅಲ್ಲಿ ಎಲ್ಲರೂ ಮುಖ್ಯವಾಗುತ್ತಾರೆ. ಪ್ರತಿಯೊಬ್ಬರ ಪಾತ್ರವೂ ವಿಭಿನ್ನ ವಿಶಿಷ್ಟ. ಯಾರು ಇಲ್ಲದಿದ್ದರೂ ಆ
ಕುಟುಂಬದ ಚಿತ್ರಕ್ಕೆ ಮಸಿಬಳೆದಂತೆ. ಎಲ್ಲರೂ ಒಂದಾಗಿ ನಗುನಗುತ್ತಾ ಇದ್ದಾಗಲೇ ಅಲ್ಲಿ ಸಂತೋಷ.

ಇದನ್ನೂ ಓದಿ: #RoopaGururaj