ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಂದೂರಿನಲ್ಲಿ ಕೃಷ್ಣಾಬಾಯಿ ಎಂಬ ಹೆಸರಿನ ವೃದ್ಧೆ ಒಂದು ಗುಡಿಸಿಲನಲ್ಲಿ ಇರುತ್ತಿದ್ದಳು. ಅವಳು ಶ್ರೀಕೃಷ್ಣ
ಪರಮಾತ್ಮನ ಪರಮ ಭಕ್ತಳಾಗಿದ್ದಳು. ವಾಸ್ತವದಲ್ಲಿ ಅವಳ ಹೆಸರು ಸುಖಿ ಬಾಯಿ ಎಂದಾಗಿತ್ತು. ಆದರೆ ಕೃಷ್ಣನ ಪರಮ ಭಕ್ತಳಾಗಿದ್ದರಿಂದ ಊರವರೆಲ್ಲ ಕೃಷ್ಣಾಬಾಯಿ ಎನ್ನುತ್ತಿದ್ದರು. ಆ ಊರಿನ ಮನೆಮನೆಯ ಅಡುಗೆ ಕೆಲಸ, ಕಸ ಮುಸುರೆ ಅವಳ ಕಾಯಕವಾಗಿತ್ತು.
ಅವಳು ನಿತ್ಯವೂ ಹೂವಿನ ಹಾರ ಮಾಡಿ ಎರಡು ಹೊತ್ತು ಕೃಷ್ಣನಿಗೆ ತೊಡಿಸುತ್ತಿದ್ದಳು. ತಾನು ಬಿಡುವಾಗಿದ್ದಾಗ
ಗಂಟೆಗಟ್ಟಲೆ ಕೃಷ್ಣನೊಂದಿಗೆ ಮಾತನಾಡುತ್ತಿದ್ದಳು. ಇದನ್ನು ನೋಡಿ ಊರ ಜನರು ಅವಳಿಗೆ ಮರುಳು ಎಂದು
ತಿಳಿದಿದ್ದರು. ಒಂದು ರಾತ್ರಿ ಶ್ರೀ ಕೃಷ್ಣನು ಅವಳ ಕನಸಲ್ಲಿ ಬಂದು ‘ನಾಳೆ ಈ ಊರಲ್ಲಿ ಭೂಕಂಪವಾಗುತ್ತದೆ. ನೀನು ಈ ಊರು ಬಿಟ್ಟು ಬೇರೆ ಊರಿಗೆ ಹೋಗು’ ಎಂದು ಹೇಳಿದ.
ಇನ್ನೇನು ಲೋಕ ರಕ್ಷಕನೇ ಈ ಮಾತು ಹೇಳಿದ ಮೇಲೆ ಕೃಷ್ಣಾಬಾಯಿ ಹೊರಡುವ ಸಿದ್ಧತೆ ನಡೆಸಿ ತನ್ನ ಎಲ್ಲ ಸಾಮಗ್ರಿಗಳನ್ನು ಕಟ್ಟಿಕೊಳ್ಳತೊಡಗಿದಳು. ಆಮೇಲೆ ಊರವರಿಗೂ ಕೂಡ ಈ ವಿಷಯ ತಿಳಿಸಿದಳು. ಆದರೆ ಊರಿನ
ಜನ ಆ ಮುದುಕಿಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮೊದಲೇ ಅವಳು ಕೃಷ್ಣನೊಂದಿಗೆ ಮಾತನಾಡು ವುದು ಕಂಡು ಅವಳಿಗೆ ಅರಳೋ ಮರಳೋ ಎನ್ನುತ್ತಿದ್ದ ಜನ ಅವಳ ಮಾತು ಕೇಳಿ ಅಪಹಾಸ್ಯ ಮಾಡಿ ನಕ್ಕರು. ನಗುವವರು ನಗಲಿ, ಉಳಿದುಕೊಳ್ಳುವವರು ಉಳಿಯಲಿ. ಇದು ನನ್ನ ಕೃಷ್ಣನ ಆದೇಶ, ನಾನಂತೂ ಅದನ್ನು ಪಾಲಿಸುವೆ. ಎಂದುಕೊಂಡು ಒಂದು ಎತ್ತಿನ ಗಾಡಿ ತರಿಸಿ, ಅದರಲ್ಲಿ ಮನೆಯಲ್ಲಿಯ ಎಲ್ಲ ಸಾಮಗ್ರಿ ಗಳನ್ನು ಹಾಕಿಸಿ, ತನ್ನ ಕೃಷ್ಣನ ಮೂರ್ತಿ ಕೈಯಲ್ಲಿ ಹಿಡಿದು ಮುದುಕಿ ಮುದುಕಿ ನಡೆದೇಬಿಟ್ಟಳು. ಅವಳನ್ನು ನೋಡಿ ಎಂಥ ಮೂರ್ಖತನ ಎಂದು ಜನ ನಗತೊಡಗಿದರು.
ಇನ್ನು ತನ್ನ ಊರಿನ ಸೀಮೆ ದಾಟಿ ಬೇರೆ ಊರಿನ ಸೀಮೆ ಪ್ರವೇಶಿಸುವವಳಿದ್ದಳು ಅಷ್ಟರಲ್ಲಿ ಹಿಂದಿನಿಂದ ಶ್ರೀಕೃಷ್ಣನ ಧ್ವನಿ ಬಂತು ‘ಅರೆ ಹುಚ್ಚಿ ಹಿಂತಿರುಗಿ ಹೋಗು. ನಿನ್ನ ಗುಡಿಸಲಲ್ಲಿ ಮರೆತು ಬಂದ ಆ ಸೂಜಿಯನ್ನು ತೆಗೆದು ಕೊಂಡು ಬಾ. ಅದರಿಂದಲೇ ನೀನು ನನಗೆ ಹೂವಿನ ಮಾಲೆ ಮಾಡಿ ಹಾಕುತ್ತಿದ್ದೆ..!’ ಈ ಮಾತನ್ನು ಕೇಳಿ ಕೃಷ್ಣಬಾಯಿ ಬೇಸರಗೊಂಡಳು.
ನನ್ನಿಂದ ಇಷ್ಟು ದೊಡ್ಡ ತಪ್ಪು ಹೇಗಾಯಿತು. ಇನ್ನು ನಾನು ನನ್ನ ಕೃಷ್ಣನಿಗೆ ಮಾಲೆಯಾದರೂ ಹೇಗೆ ಮಾಡಿ
ಹಾಕ ಬ..!? ಅವಳು ಕೂಡಲೇ ಎತ್ತಿನಗಾಡಿಯವನನ್ನು ತಡೆದು ನಿಲ್ಲಿಸಿ ‘ನಾನು ಮರಳಿ ಬರುವವರೆಗೂ ಇ ಇರು..!’
ಎಂದು ಕಾಯಲು ಹೇಳಿ ತನ್ನ ಗುಡಿಸಿಲಿನತ್ತ ಅವಸರ ಅವಸರವಾಗಿ ಹೊರಟು ಬಂದಳು. ಊರವರೆಲ್ಲ ಅವಳ ಹುಚ್ಚುತನಕ್ಕೆ ಅಪಹಾಸ್ಯ ಮಾಡಿ ನಗುವುದೇ ಆಯಿತು. ಕೃಷ್ಣಾಬಾಯಿ ತನ್ನ ಗುಡಿಸಲಲ್ಲಿ ಕಸದಲ್ಲಿ ಸಿಲುಕಿಕೊಂಡ
ಸೂಜಿಯನ್ನು ಹುಡುಕಿ ತೆಗೆದುಕೊಂಡು ಹುಚ್ಚೆಯಂತೆ ಎತ್ತಿನಗಾಡಿಯ ಬಳಿ ಓಡಿದಳು.
ಗಾಡಿಯವ ಕೇಳಿದ ‘ಅಜ್ಜಿ, ನೀನ್ಯಾಕೆ ಇಷ್ಟು ಚಿಂತೆಯಲ್ಲಿ ಇದ್ದಿ..?’ ಕೃಷ್ಣಾಬಾಯಿ ಅವನ ಜೊತೆ ಹೆಚ್ಚು ಮಾತು ಬೆಳೆಸದೆ ‘ಸರಿ ಈಗ ನೀನು ಮೊದಲು ಈ ಊರಿನ ಸೀಮೆ ದಾಟು..!’ ಎಂದು ಹೇಳಿ ಅವಸರ ಮಾಡಿದಳು.
ಅವನು ಕೂಡ ಅಷ್ಟೇ ಅವಸರದಿಂದ ಎತ್ತಿನಗಾಡಿ ಓಡಿಸಿದ. ಆದರೇನು… ಅವರು ಆ ಊರಿನ ಸೀಮೆ ದಾಟಿ ಮುಂದೆ ಬರುವುದೇ ತಡ, ಆ ಊರು ಭೂಕಂಪದಿಂದ ಅಲ್ಲೋಲ ಕಲ್ಲೋಲವಾಯಿತು. ಎಲ್ಲಿಂದಲೋ ಪ್ರವಾಹದಂತೆ ಬಂದ ನೀರು ಆ ಊರನ್ನೇ ನುಂಗಿ ಹಾಕಿತು. ಎತ್ತಿನ ಗಾಡಿಯವನೂ ಕೂಡ ಕೃಷ್ಣ ಭಕ್ತನಾಗಿದ್ದ. ಹೀಗಾಗಿ ಯೋಗಾ ಯೋಗ ದಂತೆ ಭಗವಂತನು ಅವನ ರಕ್ಷಣೆಯನ್ನೂ ಮಾಡಿದ್ದ. ಭಗವಂತನನ್ನು ನಂಬಿದರೆ ಅವನು ನಮ್ಮ ಬದುಕಿನ ಸಣ್ಣ ಸಣ್ಣ ವಿಷಯಗಳನ್ನೂ ಕೂಡ ಸರಿಪಡಿಸಿ ಜೀವನ ಸುಂದರವಾಗಿಸುತ್ತಾನೆ. ಅವನಿಗೆ ನೂರು ಪ್ರಾರ್ಥನೆಗಳ ಅಗತ್ಯವಿಲ್ಲ. ನಮ್ಮ ಸಮರ್ಪಣೆಯೊಂದೇ ಸಾಕು.
ಇದನ್ನೂ ಓದಿ: #RoopaGururaj