ಒಂದೊಳ್ಳೆ ಮಾತು
ರೂಪಾ ಗುರುರಾಜ್
ಪೂರ್ವ ಯುಗದಲ್ಲಿ ಒಬ್ಬ, ತನ್ನ ಪತ್ನಿ ಮಕ್ಕಳ ಜೊತೆ ನೆಲೆಸಿದ್ದನು. ಮನೆಯಲ್ಲಿ ಒಂದು ಹಸು ಇದ್ದು ಅದು ಕೊಡುವ ಹಾಲಿನಿಂದ ಮೊಸರು, ತುಪ್ಪ-ಬೆಣ್ಣೆ, ಎಲ್ಲ ಕುಟುಂಬಕ್ಕಾಗುತ್ತಿತ್ತು. ಹಸು ಹಾಲು ಕೊಡುವುದು ನಿಲ್ಲಿಸಿದ ಕೂಡಲೇ ಮನೆಯವನು ಅದನ್ನು ಕಾಡಿಗೆ ದೂಡಿದನು. ಕಾಡಿಗೆ ಬಂದ ಗೋವು ಹಸಿವೆ, ಬಾಯಾರಿಕೆಯಿಂದ
ಬಳಲಿತು, ಹಾಗೆ ಹೋಗುತ್ತಾ ಒಂದು ಶಿವನ ದೇವಸ್ಥಾನಕ್ಕೆ ಹೋಯಿತು. ಈ ಸ್ವಾರ್ಥಿ ಮನುಷ್ಯ ನನ್ನಿಂದ ಉಪಯೋಗವಾಗುವವರೆಗೆ ಬಳಸಿಕೊಂಡು ಈಗ ನನ್ನನ್ನು ಕಾಡಿಗೆ ದುಡಿದ್ದಾನೆ, ನನಗೆ ನೀನೇ ದಿಕ್ಕು ಎಂದು ನಿಂತು ಪ್ರಾರ್ಥಿಸಿತು, ಭಗವಂತನ ಅಗೋಚರ ಶಕ್ತಿಯ ಪ್ರೇರಣೆ ಯಿಂದ ದೂರದ ಕಾಡಿಗೆ ಹೋಗಿ ನೆಲೆ ಕಂಡುಕೊಂಡಿತು.
ಒಂದು ದಿನ ಕಟ್ಟಿಗೆ ತರಲು ಒಬ್ಬ ಮಹಿಳೆ ಬಂದಳು.
ಹಸುವನ್ನು ನೋಡಿದಳು ಹಸು ಗರ್ಭಿಣಿಯಾಗಿತ್ತು. ಕೆಲವೇ ದಿನಗಳಲ್ಲಿ ಕರು ಹಾಕುತ್ತದೆ. ನಾನು ಹಸುವನ್ನು ಮನೆಗೆ
ಕರೆದುಕೊಂಡು ಹೋದರೆ ಮನೆಗೆ ಬೇಕಾದಷ್ಟು ಹಾಲು ಸಿಗುತ್ತದೆ ಮತ್ತು ಮಾರಿ ಹಣ ಸಂಪಾದನೆ ಮಾಡಬಹುದು ಎಂದು ಯೋಚಿಸಿ, ಅದನ್ನು ಕರೆದೊಯ್ಯಲು ತನ್ನ ಗಂಡನನ್ನು ಕರೆ ತರಲು ಹೋದಳು. ಆದರೆ ಅವಳು ಗಂಡ ನೊಂದಿಗೆ ಬರುವ ಹೊತ್ತಿಗೆ ಆ ಹಸು ಅಲ್ಲಿ ಇರಲಿಲ್ಲ ಬೇರೆ ಕಡೆ ಹೋಗಿತ್ತು.
ಹಸು ತನ್ನ ಕರು ಹುಟ್ಟುವ ಸಮಯಕ್ಕೆ ಸುರಕ್ಷಿತ ಜಾಗದಲ್ಲಿ ಕರು ಹಾಕಿತು. ಅದು ಕರು ಹಾಕಿದ ಸ್ವಲ್ಪ ಹೊತ್ತಿಗೆ, ಅದೇ ಮಹಿಳೆ ಕಟ್ಟಿಗೆ ತರಲು ಕಾಡಿಗೆ ಬಂದಳು, ಹಸು ಕರು ಹಾಕಿರುವುದನ್ನು ನೋಡಿದಳು. ಇದು ಈ ಹಿಂದೆ ನಾನು ನೋಡಿದ ಹಸು. ಈಗ ಕರು ಹಾಕಿದೆ ಹಸು ಮತ್ತು ಕರುವನ್ನು ಮನೆಗೆ ಕರೆದೊಯ್ಯುವೆ ಎಂದು ಸಂತೋಷದಿಂದ
ಅಂದು ಕೊಂಡು ತನ್ನ ಗಂಡನನ್ನು ಕರೆ ತರಲು ಹೊರಟಳು.
ಹಾಗೆ ಹೊರಟಿದ್ದ ಮಹಿಳೆಗೆ ಹಸು ಹೇಳಿತು. ‘ಅಕ್ಕ ನನಗೆ ಸ್ವಲ್ಪ ಸಹಾಯ ಮಾಡು. ಈಗ ತಾನೆ ಹುಟ್ಟಿದ ನನ್ನ ಕರು ಕೆಳಗೆ ಬಿದ್ದು ಮಣ್ಣುಮೆತ್ತಿ ಗಲೀಜಾಗಿದೆ, ಅದು ಕಾಲೂರಿ ನಡೆಯಲು ಎಂಟು ತಿಂಗಳು ಬೇಕು. ಕೆಳಗೆ ಬಿದ್ದ ನನ್ನ ಕರುವನ್ನು ಎತ್ತಿ ನನ್ನ ಬೆನ್ನ ಮೇಲೆ ಹಾಕು, ನಾನು ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗಿ ಅದಕ್ಕೆ ನಡೆಯಲು
ಬರುವವರೆಗೆ ನೋಡಿಕೊಳ್ಳಬೇಕು’ ಎಂದಿತು. ಆದರೆ ಮಹಿಳೆ ಕರುವನ್ನು ನೋಡಿದಳು. ಆಗಿನ್ನು ಹುಟ್ಟಿದ ಅದರ ಮೈಯೆಲ್ಲ ಗಲೀಜಾಗಿತ್ತು. ಗೋವಿಗೆ ಹೇಳಿದಳು ‘ಛೀ ಛೀ ಇಷ್ಟು ಗಲೀಜಾದ ನಿನ್ನ ಮಗುವನ್ನು ನಾನು ಮುಟ್ಟಲಾರೆ ನನಗೆ ಅಸಹ್ಯ’ ಎಂದು ನಿರಾಕರಿಸಿದಳು.
ಅಸಹಾಯಕವಾದ ಹಸುವಿಗೆ ಕೋಪ ಬಂದಿತು. ‘ನೀವು ಮನುಷ್ಯರು ಉಪಯೋಗ ಸಿಗುವ ತನಕ ಬಳಸಿಕೊಳ್ಳುತ್ತೀರಿ, ನಿನ್ನ ಮಗು ಹುಟ್ಟಿದ ಕೂಡಲೇ ನಡೆಯುತ್ತದೆ ಎಂದು, ಅದಕ್ಕೆ ನಿನಗೆ ಇಷ್ಟು ಅಹಂಕಾರ. ನನ್ನ ಕರು ಹುಟ್ಟಿದ ಎಂಟು ತಿಂಗಳಿಗೆ ತನ್ನ ಕಾಲ ಮೇಲೆ ನಿಲ್ಲುತ್ತದೆ. ಆದರೆ ಈಗ ನಾನು ಶಾಪ ಕೊಡುವೆ, ಇನ್ನು ಮುಂದೆ ನಿಮಗೆ ಹುಟ್ಟಿದ ಮಗು ಎದ್ದು ನಿಲ್ಲಲು ಎಂಟು ತಿಂಗಳು ಆಗುತ್ತದೆ, ಇಲ್ಲಿಯ ತನಕ ಹುಟ್ಟಿದ ನನ್ನ ಕರುಗಳು ನಿಲ್ಲಲು
ಎಂಟು ತಿಂಗಳು ಬೇಕಾಗಿತ್ತು.
ಇನ್ನು ಮುಂದೆ ಪ್ರಾಣಿ ಸಂಕುಲದಲ್ಲಿ ಮರಿ ಮತ್ತು ಕರುಗಳು ಹುಟ್ಟಿದ ಕೂಡಲೇ ಎದ್ದು ತನ್ನ ಕಾಲ ಮೇಲೆ ತಾನೇ
ನಿಲ್ಲುತ್ತದೆ’. ಈ ರೀತಿ ಗೋವು ಮಹಿಳೆಗೆ ಕೊಟ್ಟ ಶಾಪದಿಂದಾಗಿ ಮನುಷ್ಯರಿಗೆ ಹುಟ್ಟಿದ ಮಕ್ಕಳು ಎದ್ದು ನಿಲ್ಲಲು 8- 10 ತಿಂಗಳು ಬೇಕಾಗುತ್ತದೆ. ಪ್ರಾಣಿಗಳಿಗೆ ಹುಟ್ಟಿದ ಮರಿ- ಕರುಗಳು, ಕೆಲವೇ ಸಮಯದಲ್ಲಿ ಎದ್ದು ನಿಂತು ಓಡಾಡು ತ್ತವೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೆ ಎನ್ನುವಂತೆ, ತಾನು ಸೃಷ್ಟಿಸಿದ ಜೀವಗಳನ್ನು ಭಗವಂತ ತಾನೇ ರಕ್ಷಿಸುತ್ತಾನೆ.
ಇದನ್ನೂ ಓದಿ: #RoopaGururaj