Thursday, 21st November 2024

Roopa Gururaj Column: ಭೀಷ್ಮರಿಗೆ ಶಾಪ ನೀಡಿದ ಓತಿಕ್ಯಾತ !

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿ ಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯ ನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದ ವ್ಯಾಸರು ನಮಗೆ ಕರುಣಿಸಿದ್ದಾರೆ. ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 32 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರ ವಾಗುತ್ತದೆ.

ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕ ಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರ ನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ. ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ.

‘ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ ಇಡೀ ಜಗತ್ತಿನ ದೈವ ಯಾರು? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಮಸ್ತ ಪಾಪ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು’? ಈ ಎಲ್ಲ ಪ್ರಶ್ನೆಗಳಿಗೂ
ಭೀಷ್ಮಾಚಾರ್ಯರು ಶ್ರೀವಿಷ್ಣು ಸಹಸ್ರನಾಮವೆಂದು ಒಂದೇ ಉತ್ತರ ಹೇಳುತ್ತಾರೆ. ಅದಕ್ಕೆ ತಮ್ಮ ಜೀವನದ ಪ್ರಸಂಗ ವೊಂದನ್ನು ಈ ರೀತಿಯಾಗಿ ವಿವರಿಸುತ್ತಾರೆ.

‘ನಿಮ್ಮನ್ನು ನಾಶಮಾಡಲೆಂದೇ ದುರ್ಯೋಧನನು ಅರಗಿನ ಅರಮನೆಯಲ್ಲಿ ಉಳಿಯುವಂತೆ ಮಾಡಿ ರಾತ್ರಿ ಯಲ್ಲಿ ಅದಕ್ಕೆ ಬೆಂಕಿ ಇಡಿಸಿದ್ದ. ಆದರೆ ವಿದುರನ ದೂರದೃಷ್ಟಿ ನಿಮ್ಮನ್ನೇನೋ ಮೃತ್ಯುದವಡೆಯಿಂದ ಪಾರಾಗಿಸಿತ್ತು. ನಿಮಗೆ ಏನು ಆಗಿಲ್ಲವೆಂದು ತಿಳಿದು ಎಲ್ಲಕ್ಕಿಂತ ಹೆಚ್ಚು ಸಂತೊಷವಾಗಿದ್ದು ನನಗೆ. ಮುಂಜಾನೆ ಕೈಯಂದು ಊರು ಗೊಲು ಹಿಡಿದು ಗಂಗಾ ತಾಯಿಯೊಂದಿಗೆ ಈ ಖುಷಿಯ ಸಂಗತಿಯನ್ನು ಹಂಚಿಕೊಳ್ಳಲು ಸಾಗುತ್ತಿದ್ದ ನನಗೆ ಮನಸಿನ ತುಂಬಾ ನೀವುಗಳೇ ಆವರಿಸಿಬಿಟ್ಟಿದ್ದಿರಿ.

ನೀವು ಅನುಭವಿಸಿದ ಕಷ್ಟಕ್ಕೆ ಮರುಗುತ್ತ ಹೆಜ್ಜೆಹಾಕುತ್ತಿದ್ದ ನಾನು ಊರಿ ನಡೆಯುತ್ತಿದ್ದ ಕೊಲಿನ ತುದಿಗೆ ಆಕಸ್ಮಿಕ ವಾಗಿ ಓತಿಕ್ಯಾತವೊಂದು ಸಿಲುಕಿ ನರಳಿತು. ಆಲೊಚನಾಸರಣಿಗೆ ಭಂಗವಾಗಿದ್ದಕ್ಕೆ ಗೊಣಗಿದ ನಾನು ಕೊಲಿಗೆ ಸಿಲುಕಿದ ಆ ಓತಿಕ್ಯಾತವನ್ನು ಬೀಸಿ ಎಸೆದು ಮುಂದೆ ನಡೆದೆ. ಮುಳ್ಳುಪೊದೆಯ ಮೆಲೆ ಬಿದ್ದ ಅದು ರೊದಿಸುತ್ತ, “ಅಯ್ಯಾ! ಮಹಾನುಭಾವರೇ, ಸ್ವಲ್ಪ ನಿಲ್ಲಿ. ನನ್ನನ್ನು ಬೀಸಿ ಎಸೆದು ಸಂಬಂಧವೇ ಇಲ್ಲದಂತೆ ಹೊಗುತ್ತಿದ್ದಿರಲ್ಲ, ಇದು ಸರಿಯೆ? ಎಂದಾಗ ನಾನು ಇದರಲ್ಲಿ ನನ್ನದೇನು ತಪ್ಪಿದೆ? ನನ್ನ ಕೊಲಿಗೆ ಸಿಲುಕಿದ್ದು ನೀನೇ ತಾನೆ?!” ಎಂದಾಗ ಹೌದು! ಸಿಲುಕಿದ್ದು ನಾನೇ. ಆದರೆ ನರಳುತ್ತಿದ್ದ ನನ್ನ ಸ್ಥಿತಿಯನ್ನು ನೊಡಿಯೂ ಮುಳ್ಳಿನ ಪೊದೆಯ ಮೆಲೆ ಎಸೆದಿರಲ್ಲ, ಇದು ನೀವು ತಿಳಿದೂ ಮಾಡಿದ ತಪ್ಪಲ್ಲವೇ? ಹಾಗಾಗಿ ನೀವೂ ನಿಮ್ಮ ಅಂತ್ಯಕಾಲಕ್ಕೆ ಶರಶಯ್ಯೆಯಲ್ಲಿ ನನ್ನಂತೆ ನರಳಿ ಸಾಯುವಂತಾಗಲಿ’ ಎಂದು ಶಪಿಸಿತು.

ನನಗೆ ಆಗ ನನ್ನ ತಪ್ಪಿನ ಅರಿವಾಗಿತ್ತು. ಕ್ಷಮೆ ಬೇಡುತ್ತ ಆ ಮುಳ್ಳಿನ ಬೇಲಿಯಿಂದ ಓತಿಕ್ಯಾತವನ್ನು ಮೆಲೆತ್ತಿ ಕಾಪಾಡಲು ಧಾವಿಸಿದರು. ಆದರೆ ಕಾಲ ಮಿಂಚಿತ್ತು. ರಕ್ತಸ್ರಾವ ಗೊಂಡ ಅದು ಅದಾಗಲೇ ಪ್ರಾಣ ಬಿಟ್ಟಿತು!

ಭೀಷ್ಮಾಚಾರ್ಯರಿಗೆ ವಿಷ್ಣುಸಹಸ್ರನಾಮದ ಶಕ್ತಿ ಯಿಂದ ಮೃತ್ಯುವನ್ನೂ ಸಹ ದೂರ ಇಟ್ಟಿದ್ದರು. ಅಷ್ಟೇ ಅಲ್ಲ ಅವರ ಭಕ್ತಿಯ ಶಕ್ತಿಯಿಂದ ಶ್ರೀಕೃಷ್ಣ ಪರಮಾತ್ಮ ಅವರು ಮಲಗಿದ್ದ ಕಡೆಗೆ ಬಂದು ದರ್ಶನ, ಸ್ಪರ್ಶನ ಭಾಗ್ಯ ನೀಡಿದ. ‘ನ ವಾಸುದೇವ ಭಕ್ತಾನಾಮ್ ಅಶುಭಂ ವಿದ್ಯತೇಕ್ವಚಿತ್’ ಇದನ್ನು ಪಾರಾಯಣ ಮಾಡುವವರು, ಪರಿಹರಿಸಲಾಗದ ಪರಿಪರಿಯ ಕಷ್ಟಗಳಿಂದ ಬಿಡುಗಡೆ ಹೊಂದುತ್ತಾರೆ. ಅಷ್ಟೇ ಅಲ್ಲ, ವಾಸುದೇವನ ಭಕ್ತರಿಗೆ ಅಶುಭ ವೆಂಬುದೇ ಇರುವುದಿಲ್ಲ.

ಇದನ್ನೂ ಓದಿ: ‌Roopa Gururaj Column: ದಯೆಯೇ ಧರ್ಮದ ಮೂಲ