Thursday, 21st November 2024

Roopa Gururaj Column: ನಮ್ಮ ಜೀವನದ ಅತ್ಯಮೂಲ್ಯ ಆಸ್ತಿ ತಾಯಿ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಮ್ಮೆ ಒಬ್ಬ ತನ್ನ ಮನೆಯ ಹಸು ಕರುವನ್ನು ಕರೆದುಕೊಂಡು ರಾಜನ ಆಸ್ಥಾನ ಸಭೆಗೆ ಬಂದನು. ಹಸು -ಕರು ಇದರಲ್ಲಿ ವಿಶೇಷ ಎಂದರೆ, ಅಲ್ಲಿಗೆ ತಂದಿದ್ದ ಹಸು- ಕರು (ತಾಯಿ- ಮಗು) ನೋಡಲು ಒಂದೇ ತರ ಇದ್ದವು. ಕರು ತಾಯಿಯಷ್ಟೇ ಬೆಳದಿದೆ. ಗಾತ್ರದಲ್ಲಿ ಯಾವುದು ತಾಯಿ? ಯಾವುದು ಕರು? ಎಂದು ನೋಡಿದರೆ ಗೊತ್ತಾಗುತ್ತಿರಲಿಲ್ಲ. ಎರಡು ಅವಳಿ- ಜವಳಿ ಎನ್ನುವಂತಿದ್ದವು.

ಹಸು ಕರುವಿನ ಮಾಲಿಕ, ರಾಜನತ್ತ ನೋಡಿ, ‘ಪ್ರಭುಗಳೇ ನಿಮ್ಮ ಸಭೆಯಲ್ಲಿ ಇವುಗಳಲ್ಲಿ ತಾಯಿ ಯಾವುದು, ಕರು ಯಾವುದು ಎಂದು ಯಾರಾ‌ ದರೂ ಹೇಳುವರೇ?’ ಎಂದು ಕೇಳಿದ. ರಾಜನು ನೋಡುತ್ತಾನೆ ಹಸು- ಕರು ಎರಡು ಒಂದೇ ತರ ಇದ್ದು ಯಾವುದೇ ವ್ಯತ್ಯಾಸ ಕಾಣಲಿಲ್ಲ ಸಭೆಯಲ್ಲಿ ಯಾರು ಹೇಳಲು ಮುಂದಾಗಲಿಲ್ಲ. ರಾಜನು ಮಂತ್ರಿಗಳ ಕಡೆ ತಿರುಗಿ ನೀವು ಹೇಳುವಿರಾ? ಎಂದು ಕೇಳಿದ. ಮಂತ್ರಿ ಸ್ವಲ್ಪ
ಆಲೋಚಿಸಿ ಪ್ರಭು ನನಗೆ ಒಂದು ದಿನ ಸಮಯ ಬೇಕು ಎಂದನು, ರಾಜ ಒಪ್ಪಿದ.

ಹಸು ಕರು ತಂದ ಮಾಲೀಕನಿಗೆ ‘ಈ ಒಂದು ದಿನ ಹಸು- ಕರು ಅರಮನೆಯ ಇರಲಿ, ನಾಳೆ ಕರೆದುಕೊಂಡು ಹೋಗು’ ಎಂದು ಮಂತ್ರಿ ಹೇಳಿದ. ಅದರಂತೆ ಹಸು-ಕರುವನ್ನು ಅರಮನೆಯಲ್ಲಿ ಬಿಟ್ಟು ಅವನು ಹೊರಟನು. ಮಾರನೇ ದಿನದ ಸಭೆಗೆ ಮಂತ್ರಿ ಹಸು ಕರುವನ್ನು ತಂದನು. ಮತ್ತು ಅವೆರಡಕ್ಕೂ ಬೇರೆ ಬೇರೆಯಾಗಿ ಮೇವು ಮತ್ತು ಕುಡಿಯಲು ನೀರು ಇಡಲಾಯಿತು. ಎರಡು ಹಸುಗಳು ಮೇವು ತಿಂದು ನೀರು ಕುಡಿದ ಮೇಲೆ ಮಂತ್ರಿ, ಅವುಗಳ ಹತ್ತಿರ ಬಂದು, ಒಂದನ್ನು ಮುಟ್ಟಿ ಇದು ತಾಯಿ ಹಸು- ಇದರ ಕರು ಎಂದು ಇನ್ನೊಂದನ್ನು ಮುಟ್ಟಿ ತೋರಿಸಿ ಹೇಳಿದರು. ಹಸು ಕರುವಿನ ಮಂತ್ರಿಗಳ ಮಾತನ್ನು ಮಾಲೀಕ ಒಪ್ಪಿದ. ‘ತಾಯಿ ಹಸು ಮತ್ತು ಅದರ ಕರು ಎಂದು ನೀವು ಹೇಗೆ ಗುರುತಿಸಿದಿರಿ?’ ರಾಜ, ಮಂತ್ರಿ ಯನ್ನು ಕೇಳಿದ. ಮಂತ್ರಿಗಳು ಉತ್ತರ ಏನು ಹೇಳುತ್ತಾರೋ ತಿಳಿಯಲು ಸಭಿಕರು ಹಾಗೂ ಹಸು- ಕರುವಿನ ಮಾಲಿಕ, ಕಾತುರದಿಂದ ಕಾಯುತ್ತಿದ್ದರು.

ಮಂತ್ರಿ ಹೇಳುತ್ತಾ, ‘ಇಂದು ಬೆಳಗ್ಗೆಯಿಂದ ಹಸು- ಕರುವಿಗೆ ಮೇವಾಗಲಿ, ಕುಡಿಯಲು ನೀರಾಗಲಿ ಕೊಟ್ಟಿರಲಿಲ್ಲ. ಅವುಗಳಿಗೆ ತುಂಬಾ ಹಸಿವು ಬಾಯಾರಿಕೆ ಆಗಿತ್ತು. ತುಂಬಾ ಹೊತ್ತಿನ ನಂತರ ಎರಡರ ಮುಂದೆ ಮೇವು, ನೀರು ಇಟ್ಟಾಗ, ತಾಯಿ ಹಸು ಬಾಯಿ ಹಾಕಿ ಮೇವನ್ನು ತಿನ್ನದೇ, ಪಕ್ಕದ ಕರುವನ್ನು ನೋಡುತ್ತಿತ್ತು. ಕರು ತನ್ನ ಆಹಾರವನ್ನು ಗಬ ಗಬ ತಿಂದು ಮುಗಿಸಿ, ತಾಯಿ ಹಸುವಿನ ಮೇವಿಗೆ ಬಾಯಿ ಹಾಕಿ
ತಿನ್ನತೊಡಗಿತು. ತಾಯಿ ಹಸು ತನ್ನ ಮೇವು ತಿನ್ನುವುದನ್ನು ನಿಲ್ಲಿಸಿ, ಕರು ತಿನ್ನುವುದನ್ನು ನೋಡುತ್ತಾ ನಿಂತಿತು. ಹಾಗೂ ಎಲ್ಲ ಮೇವನ್ನು ಅದಕ್ಕೆ ತಿನ್ನಲು ಬಿಟ್ಟಿತು. ಇದಲ್ಲವೇ ತಾಯಿ ಪ್ರೀತಿ’ ಎಂದನು ಸಭೆಯಲ್ಲ ಅವನ ಬುದ್ಧಿವಂತಿಕೆ ಮೆಚ್ಚಿ ಕೊಂಡಾಡಿದರು. ನಮ್ಮಿಡಿ ಜೀವನದಲ್ಲಿ ನಮ್ಮನ್ನು ತಾಯಿಯಂತೆ ಪ್ರೀತಿಸುವ ಜೀವ ಮತ್ತೊಂದು ಇರಲಾರದು. ಅದೇನೆ ಕಷ್ಟ ಬಂದರೂ ಅದೆಂಥ ಸಂಕಟದಲ್ಲಿದ್ದರೂ ತಾಯಿ ಮೊದಲು ತನ್ನ ಮಕ್ಕಳಿಗೆ ಎಲ್ಲ ಮಾಡಿ ನಂತರ ತನ್ನ ಆರೈಕೆ ಮಾಡಿಕೊಳ್ಳುತ್ತಾಳೆ.

ಮಕ್ಕಳು ಬೆಳೆಯುತ್ತಾ ಹೋದಂತೆ ತಾಯಿಯ ಬಗ್ಗೆ ಉದಾಸೀನದ ಮಾತುಗಳನ್ನಾಡುತ್ತಾ, ‘ನಿನಗೇನೂ ತಿಳಿದಿಲ್ಲ ನೀನು ಸದಾ ನಮ್ಮ ತಪ್ಪುಗಳನ್ನ ಕಂಡು ತಿದ್ದುವೆ’ ಎಂದು ಮೂಗು ಮುರಿಯುತ್ತಾರೆ. ಆದರೂ ತಾಯಿ ಪಟ್ಟು ಬಿಡದೆ ಮಕ್ಕಳನ್ನು ನಿರಂತರವಾಗಿ ತಿದ್ದುತ್ತ ಅವರು ಸಮಾಜಮುಖಿಯಾಗಿ ಬದುಕಲು, ಕುಟುಂಬದಲ್ಲಿ ಒಳ್ಳೆಯವರಾಗಿ ಎಲ್ಲರಿಗೂ ತಗ್ಗಿ ಬಗ್ಗಿ ನಡೆಯುವಂತೆ ಮಕ್ಕಳನ್ನು ಬೆಳೆಸುತ್ತಾಳೆ. ಯಾರ ಮುಂದೆ ಸುಳ್ಳು ಹೇಳಿದರು ತಾಯಿಯ ಮುಂದೆ ಸುಳ್ಳು ಹೇಳಿ ನೀಗಿಸಿಕೊಳ್ಳಲು ಸಾಧ್ಯವಿಲ್ಲ. ತಾಯಿ ದೇವರಿಗೆ ಸುಳ್ಳು ಹೇಳಿ ಯಾರೂ ಉದ್ಧಾರವೂ ಆಗುವುದಿಲ್ಲ.

ಇದನ್ನೂ ಓದಿ: #RoopaGururaj