Wednesday, 18th September 2024

Roopa_Gururaj_Column: ದಾನ ಸ್ವೀಕರಿಸಲು ತಾನೇ ಬಂದ ಭಗವಂತ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಬ್ಬ ಅಜ್ಜಿ ಕೂಲಿ ಕೆಲಸ ಮಾಡಿ ಕಾಲಯಾಪನೆ ಮಾಡುತ್ತಿದ್ದಳು. ಅವಳ ಬಹಳ ಕಾಲದ ಬಯಕೆ ಸಾಯುವ ಮುನ್ನ ಒಮ್ಮೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಬರುವುದು. ಅದಕ್ಕಾಗಿ ಅವಳು ದಿನವೂ ಸಂಪಾದನೆಯ ಒಂದಷ್ಟು ಭಾಗವನ್ನು ಕೂಡಿಡುತ್ತಿದ್ದಳು. ಇನ್ನೇನು ತಿರುಪತಿಗೆ ಹೋಗಲು ಬೇಕಾದಷ್ಟು ಹಣ ಸಂಗ್ರಹವಾಯಿತು ಎನ್ನುವಾಗ, ಆ ಊರಿನಲ್ಲಿ ಹಿಂದೆಂದೂ ಕಂಡರಿಯದ ಕ್ಷಾಮ ಬಂತು.

ಮಕ್ಕಳು ಮರಿಗಳು ಹೊಟ್ಟೆಗಿಲ್ಲದೆ ಕಂಗಾಲಾದುವು, ಜಾನುವಾರುಗಳು ಮೇವು ಇಲ್ಲದೆ ಹಸಿವೆಯಿಂದ ಬಳಲು ತ್ತಿದ್ದವು. ಅಜ್ಜಿಗೆ ಯಾಕೋ ತಿರುಪತಿಗೆ ಹೋಗೋದು ಬೇಡ ಅನಿಸಿತು. ಅವಳು ಕೂಡಿಟ್ಟ ಹಣವನ್ನೆ ಖರ್ಚು
ಮಾಡಿ ಊರಿಗೆಲ್ಲ ಉಣಬಡಿಸಿದಳು. ಮತ್ತೆ ಕೆಲವು ವರ್ಷಗಳವರೆಗೆ ಹಣ ಸಂಗ್ರಹಿಸುತ್ತಾ ಇದ್ದಹಾಗೆ ಮತ್ತೊಮ್ಮೆ ಊರಿನಲ್ಲಿ ಕ್ಷಾಮ ಬಂತು. ಮತ್ತೆ ಅಜ್ಜಿ ತನ್ನ ದುಡ್ಡನ್ನೆಲ್ಲ ಖರ್ಚುಮಾಡಿ ಊರವರಿಗೆಲ್ಲ ಉಣಬಡಿಸಿದಳು. ಇದೇ ರೀತಿ ಮೂರನೆಯ ಬಾರಿಯೂ ಆಯಿತು. ಮತ್ತೆ ಅಜ್ಜಿ ಊರವರಿಗೆ ಉಣಬಡಿಸುತ್ತಿದ್ದಾಗ ಯಾರೋ ಅಜ್ಜಿಯನ್ನು ಉದ್ದೇಶಿಸಿ ಹೇಳಿದರು- ‘ಅಜ್ಜಿ ನಿನಗೆ ವಯಸ್ಸಾಗುತ್ತಾ ಬಂತು, ಇನ್ನು ನೀನು ದುಡಿದು ಹಣ ಸಂಪಾದನೆ ಮಾಡ ಲಾರೆ, ಇನ್ನು ಹೇಗೆ ತಿಮ್ಮಪ್ಪನ ದರ್ಶನ ಮಾಡಬ?’ ಅಜ್ಜಿ ಅವನನ್ನು ಹೊರಗೆ ಊಟ ಮಾಡುತ್ತಿದ್ದ
ಬಡವರನ್ನು, ಮೇವು ತಿನ್ನುತ್ತಿದ್ದ ಜಾನುವಾರುಗಳನ್ನು ತೋರಿಸಿ ಹೇಳಿದಳು- ‘ಹುಚ್ಚಪ್ಪಾ ತಿಮ್ಮಪ್ಪನೇ ಸಾಕ್ಷಾತ್
ನನ್ನ ಮನೆಯಲ್ಲಿ ಊಟ ಮಾಡುತ್ತಿರುವಾಗ, ನಾನು ಅವನನ್ನು ಕಾಣಲು ತಿರುಪತಿಗೆ ಯಾಕೆ ಹೋಗಬೇಕು?’
ಎಂದಳು ಮುದುಕಿ ನಗುತ್ತಾ.

ನಾವೆಲ್ಲರೂ ಕೂಡ ಭಗವಂತನನ್ನು ಯಾತ್ರೆಗಳಲ್ಲಿ ದೂರದ ದೇವಸ್ಥಾನಗಳಲ್ಲಿ, ಕಾಣುವ ಪ್ರಯತ್ನ ಮಾಡುತ್ತೇವೆ. ಅವನನ್ನು ಹರಕೆಗಳ ಮೂಲಕ, ಹುಂಡಿಗೆ ಹಾಕುವ ದುಡ್ಡಿನ ಮೂಲಕ ಮೆಚ್ಚಿಸಲು ಪ್ರಯತ್ನಿಸುತ್ತೇವೆ. ಆದರೆ ಎಂದಿಗೆ ನಾವು ಭಗವಂತನನ್ನು ನಮ್ಮ ಸುತ್ತಲಿರುವ ಜೀವಿಗಳಲ್ಲಿ ಕಾಣಲು ಪ್ರಾರಂಭ ಮಾಡುತ್ತೇವೆಯೋ, ಅಂದಿಗೆ ನಾವಿರುವ ಸ್ಥಳವೇ ತೀರ್ಥಕ್ಷೇತ್ರವಾಗುತ್ತದೆ. ಒಮ್ಮೆ ಯೋಚಿಸಿ ನೋಡಿ ಅಗತ್ಯವಿರುವ ಬಡವರಿಗೆ, ಹಸಿವಿನಿಂದ
ಬಳಲುತ್ತಿರುವವರಿಗೆ ಹೊಟ್ಟೆ ತುಂಬ ಊಟ ಹಾಕಿದಾಗ ಸಿಗುವ ಸಂತೋಷ ಸಂತೃಪ್ತಿ, ದೇವಾಲಯದಲ್ಲಿ ದೇವರ
ಮುಂದೆ ಬಾಗಿದಾಗ ಸಿಗುವ ಸಂತೃಪ್ತಿಯಷ್ಟೇ ಸಮನಾದದ್ದು.

ಭಗವಂತನ ಪೂಜೆ, ಧ್ಯಾನ, ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗುವುದು ಬಹಳ ಮುಖ್ಯ. ಅದರಲ್ಲಿ ಎರಡು ಮಾತಿಲ್ಲ. ಆದರೆ ಭೂಮಿಯ ಮೇಲೆ ಸಾವಿರಾರು ಮನುಷ್ಯರು ಹಸಿವಿನಿಂದ ಕಂಗೆಟ್ಟು ಕುಳಿತಿರುವಾಗ ಎಲ್ಲವೂ ಇರುವ ಭಗವಂತನಿಗೆ ಚಿನ್ನದ ಕಿರೀಟ, ವಜ್ರ ವೈಢೂರ್ಯಗಳನ್ನ ಸಮರ್ಪಿಸಿ ಕೃತಜ್ಞತಾ ಭಾವದಿಂದ ನಮಿಸುವುದು ಎಷ್ಟು ಸರಿ? ಎನ್ನುವ ಭಾವ ಮೂಡುತ್ತದೆ. ನಾವೆಲ್ಲ ವಿದ್ಯಾವಂತರು, ನಾವು ಯೋಚಿ‌ ಸುವ ಪರಿಯನ್ನು, ಭೂಮಿಯಲ್ಲಿ ಇದರ ಮನುಷ್ಯರೊಡೆಗೆ ನಮ್ಮ ಧೋರಣೆಯನ್ನು ಸ್ವಲ್ಪ ಬದಲಾಯಿಸಿ ಕೊಂಡರೂ ಸಾಕಲ್ಲವೇ? ನಮ್ಮಂತೆ ಒಬ್ಬೊಬ್ಬರು ಈ ರೀತಿ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸ ತೊಡಗಿದಾಗ ಅದೆಷ್ಟೋ ಜೀವಗಳ ಹಸಿವು ನೀಗುತ್ತದೆ. ಅದೆಷ್ಟು ಜೀವಗಳು ಸಮಾಧಾನದ ನಿಟ್ಟುಸಿರನ್ನು ಬಿಡುವಂತಹಾಗುತ್ತದೆ.

ಇಂತಹ ಒಂದು ಪ್ರಪಂಚವನ್ನು ನಾವೆಲ್ಲರೂ ಸೇರಿ ಕಟ್ಟಬೇಕು. ಇಂದಿನ ದಿನಗಳಲ್ಲಿ ನಾವೆಲ್ಲರೂ ವಿದ್ಯಾವಂತರಾಗಿ, ನಮ್ಮ ಅಜ್ಜಿ ತಾತಂದಿರ ಕಾಲಕ್ಕಿಂತ ಹೆಚ್ಚು ಆರ್ಥಿಕವಾಗಿ ಸಮರ್ಥರಾಗಿದ್ದೇವೆ. ಮೊದಲಿಗಿಂತ ನಮ್ಮ ಖರ್ಚು ವೆಚ್ಚಗಳು ಮತ್ತು ದುಡಿಯುವ ಶಕ್ತಿ ಹೆಚ್ಚಾಗಿದೆ. ಅಂತೆಯೇ ಅನಗತ್ಯ ಖರ್ಚುಗಳು ಕೂಡ ಹೆಚ್ಚಾಗಿವೆ. ಮನೆಯಲ್ಲಿ ಬೇಕು ಬೇಡವೋ ಕಪಾಟಿನ ತುಂಬಾ ಬಟ್ಟೆಗಳ ರಾಶಿ, ೧೦೦ ರೀತಿಯ ಅಲಂಕಾರಿಕ ವಸ್ತುಗಳು, ತಿನ್ನಲಿ ತಿನ್ನದೇ ಇರಲಿ ತುಂಬು ತುಳುಕುತ್ತಿರುವ ಫ್ರಿಡ್ಜ್. ಇನ್ನಾದರೂ ದುಡಿದ ಹಣವನ್ನು, ಆ ಹಣದಿಂದ ಕೊಳ್ಳುವ ವಸ್ತುಗಳನ್ನು ಹೆಚ್ಚು ಜಾಣ್ಮೆಯಿಂದ ಬಳಸೋಣ. ಕೊಳ್ಳುಬಾಕತನಕ್ಕೆ ಮರುಳಾಗದೆ ಸಂತೃಪ್ತಿಯಿಂದ ಬದುಕಿ ಇತರರಿಗೂ
ನೆರವಾಗೋಣ. ಎಲ್ಲರಿಗೂ ಗಣೇಶನ ಹಬ್ಬದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *