Thursday, 28th November 2024

Roopa_Gururaj_Column: ಮತ್ತೊಬ್ಬರನ್ನು ಅನುಕರಿಸಿ ಏನೂ ಸಾಧಿಸಲಾಗದು

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ರೈತನ ಬಳಿ ಒಂದು ಕತ್ತೆ ಹಾಗೂ ಒಂದು ನಾಯಿ ಇತ್ತು. ರೈತ ಹೊಲದ ಕೆಲಸ ಮುಗಿಸಿ ಮನೆಗೆ ಬಂದಾಗ ಅವನನ್ನು ನೋಡಿ ನಾಯಿ ಕುಣಿಯುತ್ತ ಅವನ ಬಳಿಗೆ ಓಡಿ ಬಂದು, ಅವನ ಮೈ ಮೇಲೆ ಹತ್ತಿಕೊಂಡು ಅವನನ್ನು ಮುದ್ದಿಸುತ್ತಿತ್ತು. ರೈತನೂ ಅದನ್ನು ಎತ್ತಿಕೊಂಡು ಮುದ್ದಿಸುತ್ತಿದ್ದ. ಇದನ್ನು ನೋಡು ತ್ತಿದ್ದ ಕತ್ತೆಗೆ, ನಾಯಿಯನ್ನು ಕಂಡು ಹೊಟ್ಟೆಕಿಚ್ಚು ಆಗುತ್ತಿತ್ತು.

ರೈತ ಕತ್ತೆಯನ್ನೂ ಕೂಡ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಅದಕ್ಕೆ ಹೊಟ್ಟೆ ತುಂಬಾ ಹುಲ್ಲು, ಕಾಳು ಕಡ್ಡಿಗಳನ್ನು ಕೊಟ್ಟು, ಬಿಡುವಾದಾಗ ಪ್ರೀತಿಯಿಂದ ಅದರ ಮೈ ನೇವರಿಸುತ್ತಾ, ಮಾಲಿಶು ಮಾಡುತ್ತಿದ್ದ. ಇಷ್ಟಾದರೂ ಕತ್ತೆಗೆ, ಅವನು ನಾಯಿಯನ್ನು ಮುದ್ದಿಸುವಷ್ಟು ತನ್ನನ್ನು ಮುದ್ದಿಸುವುದಿಲ್ಲವೆಂಬ ಬೇಸರವಿತ್ತು. ನಾಯಿಯನ್ನು ಎತ್ತಿ ಕೊಂಡು ಮುದ್ದಿಸುವ ಹಾಗೆ ಅವನು ತನ್ನನ್ನೂ ಮುದ್ದಿಸಲಿ ಎಂಬ ಆಸೆ ಅದಕ್ಕೆ. ತನ್ನ ಯಜಮಾನ ನಾಯಿ ಯನ್ನು ಅಷ್ಟೊಂದು ಮುದ್ದಿಸಲು ಕಾರಣ, ಅದರ ಕುಣಿದಾಟವೇ ಇರಬೇಕು! ನಾನು ಅದೇ ರೀತಿ ಕುಣಿದಾಡಿದರೆ, ಯಜಮಾನ ನನ್ನನ್ನು ಕೂಡಾ ಅದಕ್ಕಿಂತ ಜಾಸ್ತಿ ಮುದ್ದಿಸುತ್ತಾನೆ ಎಂದು ಯೋಚಿಸಿತು.

ಒಂದು ದಿನ ಯಜಮಾನ ತನ್ನ ಕೆಲಸ ಮುಗಿಸಿ ಮನೆಗೆ ಬಂದಾಗ, ನಾಯಿ ಮಾಡುವ ಹಾಗೆ, ತಾನೂ ಕುಣಿಯುತ್ತ ಅವನೊಟ್ಟಿಗೆ ಮನೆಯ ಒಳಗೆ ಹೋಯಿತು. ಇದರ ಕುಣಿದಾಟದಿಂದ ಮನೆಯ ಹಜಾರದೊಳಗಿದ್ದ ಸಾಮಾನು ಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದು ಹೋದವು. ಯಜಮಾನ ಇದಕ್ಕೇನಾಯಿತು ಎಂದು ಆಶ್ಚರ್ಯದಿಂದ
ನೋಡುತ್ತಿದ್ದಾಗ, ಕತ್ತೆ ಅವನ ಹತ್ತಿರ ಬಂದು ನಾಯಿ ಅವನ ಮೇಲೆ ಎರಗುವಂತೆ ತಾನು ಕೂಡಾ ತನ್ನ ಮುಂಗಾ ಲನ್ನು ಎತ್ತಿ, ಅವನ ತೊಡೆಯ ಮೇಲಿಟ್ಟಿತು. ಯಜಮಾನ ನೋವಿನಿಂದ ಚೀರುತ್ತಾ, ತನ್ನ ಆಳನ್ನು ಕರೆದು ‘ಈ ಕತ್ತೆಗೆ, ಹುಚ್ಚು ಹಿಡಿದಿರಬೇಕು!

ಇದನ್ನು ಊರ ಹೊರಗಿನ ಕಾಡಿನೊಳಗೆ ಬಿಟ್ಟು ಬಾ’ ಎಂದು ಆಜ್ಞೆ ಮಾಡಿದ. ಅವನು ಅದನ್ನು ಎಳೆದುಕೊಂಡು ಕಾಡಿನೊಳಗೆ ಬಿಟ್ಟು ಬಂದ. ಕತ್ತೆ ಮುಖ ಸಪ್ಪೆಗೆ ಮಾಡಿಕೊಂಡು ದುಃಖದಿಂದ ತನಗೆ ತಾನೇ ಹೇಳಿಕೊಂಡಿತು, ತಾನು ದುರಾಸೆಯಿಂದ ನಾಯಿಯಂತೆ ಯಜಮಾನನನ್ನು ಮುದ್ದಿಸಲು ಹೋಗಿ, ಅವನಿಗೆ ನೋವನ್ನುಂಟು
ಮಾಡಿ, ಅವನ ಪ್ರೀತಿಯನ್ನು ಕಳೆದುಕೊಂಡು ಬಿಟ್ಟೆ.

ಅವನು ನಾಯಿಯಷ್ಟೇ ತನ್ನನ್ನು ಕೂಡ ಪ್ರೀತಿಸುತ್ತಿದ್ದ, ದುರಾಸೆಯಿಂದ ನನಗೆ ನಾನೇ ಕಷ್ಟವನ್ನು ತಂದು
ಕೊಂಡು ಬಿಟ್ಟೆನಲ್ಲ, ಎಂದು ಪೇಚಾಡತೊಡಗಿತು. ನಿಜವೇ ಅಲ್ಲವೇ! ಜೀವನದಲ್ಲಿ ಯಾರದ್ದೇ ಏಳಿಗೆಯನ್ನ ನೋಡಿ ನಾವು ಕೂಡ ಅವರಂತಾಗಲು ಆಶಿಸುತ್ತೇವೆ. ಆದರೆ ಅವರಂತೆ ಎಂದರೆ, ಅವರಂತೆ ಜೀವನದಲ್ಲಿ ಕಷ್ಟಪಡುವುದು, ನಿಷ್ಠೆಯಿಂದ ಬದುಕುವುದು. ಅದನ್ನು ಬಿಟ್ಟು ನಾವು ಕೇವಲ ಅವರ ಬಾಹ್ಯ ಹಾವ ಭಾವ, ನಡವಳಿಕೆ, ವಸ್ತ್ರ ಇವುಗಳನ್ನು ಮಾತ್ರ ಅನುಸರಿಸಲು ಪ್ರಾರಂಭಿಸುತ್ತೇವೆ.

ಯಾರಾದರೂ ಯಶಸ್ವಿಯಾಗಲು ಅದಕ್ಕೆ ಹಲವಾರು ವರ್ಷಗಳ ತಪಸ್ಸಿರುತ್ತವೆ. ಹಗಲು ರಾತ್ರಿ ಅವರು ಕಂಡ ಕನಸನ್ನು ನನಸಾಗಿಸಿಕೊಳ್ಳಲು ಶ್ರಮಿಸಿರುತ್ತಾರೆ. ನಾವು ಕೇವಲ ಅವರ ಯಶಸ್ಸಿನ ಒಂದು ಭಾಗವನ್ನು ಮಾತ್ರ ನೋಡಿ ಅಷ್ಟನ್ನು ಅನುಕರಿಸಿದರೆ ಏನೂ ಮಾಡಿದಂತಾಗುವುದಿಲ್ಲ. ಎಂದಿಗೆ ನಾವು ಸ್ವಂತಿಕೆಯನ್ನು ಉಳಿಸಿ ಕೊಂಡು ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಅದರ ಮೇಲೆ ಶ್ರಮಿಸುತ್ತೇವೋ ಆಗ ನಮಗೆ ನಮ್ಮ
ಜೀವನದ ಬೆಳಕು ಸಿಗುತ್ತಾ ಹೋಗುತ್ತದೆ.

ಮತ್ತೊಬ್ಬರಂತಾಗಲು ಅವರನ್ನು ಅನುಕರಿಸಲು ಪ್ರಯತ್ನಿಸಿದಾಗ, ನಾವು ನಮ್ಮತನವನ್ನೂ ಕಳೆದುಕೊಂಡು ತ್ರಿಶಂಕು ಸ್ವರ್ಗದಲ್ಲಿ ಸಿಲುಕಿಕೊಳ್ಳುತ್ತೇವೆ. ಅಲ್ಲಿ ನಾವ್ಯಾರೆಂದೇ ನಮಗೆ ತಿಳಿಯುವುದಿಲ್ಲ. ಬೇರೆಯವರಿಗೂ ನಮ್ಮ ಗುಣಗಳ ಪರಿಚಯವಾಗುವುದಿಲ್ಲ. ಜೀವನದಲ್ಲಿ ಏನೇ ಬಂದರೂ ನಮ್ಮ ಸ್ವಂತಿಕೆ ಉಳಿಸಿಕೊಳ್ಳಬೇಕು. ಮತ್ತೊಬ್ಬ ರನ್ನು ಅನುಕರಿಸಿ ನಾವು ಎಂದೂ ಬೆಳೆಯಲು ಸಾಧ್ಯವಿಲ್ಲ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಗಳು.