Saturday, 23rd November 2024

Roopa Gururaj Column: ಮಕ್ಕಳ ಬಗ್ಗೆ ಅತಿಯಾದ ಕಾಳಜಿ ಬೇಡ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ರಾಜನೊಬ್ಬ ಅತ್ಯಂತ ಸುರಕ್ಷಿತವಾಗಿರುವ ಸುಂದರವಾದ ಅರಮನೆಯೊಂದನ್ನು ಕಟ್ಟಿಸಿದ. ಮುಂದೆ ಎಂದಾದರೂ ತನಗೆ ಶತ್ರುಗಳಿಂದ ತೊಂದರೆಯಾಗಬಾರದೆಂಬ ಮುಂದಾಲೋಚನೆಯಿಂದ ತನ್ನ ರಕ್ಷಣೆಗಾಗಿ ಆತ ಅರಮನೆಗೆ ಒಂದೇ ಒಂದು ಬಾಗಿಲನ್ನು ಇಡಿಸಿದ. ಬಾಗಿಲ ಬಳಿ ಕಾವಲುಗಾರರನ್ನು ಇರಿಸಿದ.

ಇವನ ನೆರೆಯ ರಾಜ್ಯದ, ರಾಜನೊಬ್ಬ ಇವನು ಕಟ್ಟಿಸಿದ ಅರಮನೆಯನ್ನು ನೋಡಲೆಂದು ಬಂದ. ಆತ ಇವನು ಕಟ್ಟಿಸಿದ ಅರಮನೆಯನ್ನು ನೋಡಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ. ಇದು ಅತ್ಯಂತ ಸುರಕ್ಷಿತವಾಗಿದೆ. ಅರಮನೆಗೆ ಒಂದೇ ಬಾಗಿಲು ಇರುವುದರಿಂದ ಶತ್ರುಗಳಾರೂ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ, ಇರುವ ಒಂದೇಬಾಗಿಲ
ಬಳಿ ಸಾಕಷ್ಟು ಕಾವಲುಗಾರರೂ ಇರುವುದರಿಂದ ಅತ್ಯಂತ ಸುರಕ್ಷಿತವಾಗಿರುತ್ತದೆ. ತುಂಬಾ ನೆಮ್ಮದಿಯಿಂದ ಇರಬಹುದು.ತಾನೂ ಕೂಡಾ ಇಂತಹದೇ, ಒಂದು ಸುರಕ್ಷಿತ ಅರಮನೆಯನ್ನು ಕಟ್ಟಿಸಬೇಕೆಂದುಕೊಂಡ.

ಆತ ಅರಮನೆಯನ್ನು ನೋಡಿಕೊಂಡು, ತನ್ನ ರಾಜ್ಯಕ್ಕೆ ವಾಪಸ್ಸು ಹೊರಟ. ಆಗ ಆತನಿಗೆ ಈ ರಾಜ ಬೀಳ್ಕೊಡು ಗೆಯ ಸಮಾರಂಭವನ್ನು ಏರ್ಪಡಿಸಿದ. ಸಾಕಷ್ಟು ಜನರೆಲ್ಲರೂ ಸೇರಿದರು. ರಾಜ ಹೊರಡುವಾಗ, ನನಗೆ ಈ ಅರಮನೆ ಬಹಳ ಮೆಚ್ಚುಗೆಯಾಗಿದೆ, ಇಂತಹದೇ ಅರಮನೆಯನ್ನು ನಾನು ಕೂಡ ಕಟ್ಟಿಸುತ್ತೇನೆ ಎಂದು ಹೇಳಿದ. ಆಗ ಅಲ್ಲಿದ್ದ ವೃದ್ಧ ವ್ಯಕ್ತಿಯೊಬ್ಬ ಗ್ರಹಗಹಿಸಿ ನಗಲಾರಂಭಿಸಿದ.

ಆಗ ರಾಜ, ‘ನೀನೇಕೆ ಹೀಗೆ ನಗುತ್ತಿರುವೆ! ಏನಾಯಿತು?’ ಎಂದು ಕೇಳಿದ. ಆಗ ಈ ವ್ಯಕ್ತಿ ‘ನೀನು ಸಹ ಇಂತಹ ಅರಮನೆಯನ್ನು ಕಟ್ಟಲು ಬಯಸಿದರೆ, ಈ ರಾಜ ಮಾಡಿದ ತಪ್ಪನ್ನೇ ನೀನೂ ಮಾಡಬೇಡ’ ಎಂದ. ಆಗ ಈ ರಾಜ, ‘ಇದರಲ್ಲಿ ತಪ್ಪೇನಾಗಿದೆ?’ ಎಂದು ಕೇಳಿದ.

‘ಒಂದು ಕೆಲಸ ಮಾಡು, ನೀನು ಒಂದು ಬಾಗಿಲನ್ನೂ ಕೂಡಾ ಇರಿಸಬೇಡಾ,ಬಾಗಿಲೇ ಇಲ್ಲದ ಅರಮನೆಯನ್ನು ಕಟ್ಟಿಸು, ಆಗ ನೀನು ಸಂಪೂರ್ಣ ವಾಗಿ ಸುರಕ್ಷಿತವಾಗಿ ಒಳಗೆ ಒಬ್ಬನೇ ಭದ್ರತೆಯಿಂದ ಇರಬಹುದು’ ಎಂದು ಹೇಳಿದ ಆ ವ್ಯಕ್ತಿ. ‘ಆಗ ಅದು ಅರಮನೆ ಹೇಗಾಗುತ್ತದೆ? ಅದೊಂದು ಗೋರಿ ಎನಿಸುತ್ತದೆ ಅಷ್ಟೇ’ ಎಂದ
ರಾಜ.

‘ಈಗ ಈ ಅರಮನೆ ಕೂಡಾ ಗೋರಿಯಲ್ಲದೆ ಮತ್ತಿನ್ನೇನು? ಒಂದೇ ಬಾಗಿಲು ಅದಕ್ಕೂ ಕಾವಲುಗಾರರ ವ್ಯವಸ್ಥೆ, ಬೇರೆ ಯಾರ ಸಂಪರ್ಕವೂ ಇಲ್ಲ ಎಂದರೆ, ಯಾವುದೇ ರೀತಿಯ ಭಯವಿಲ್ಲ ಎಂದರೆ ಅದು ಗೋರಿ ಅಲ್ಲದೆ
ಮತ್ತಿನ್ನೇನು?’ ಎಂದ ವೃದ್ಧ ವ್ಯಕ್ತಿ. ಈ ರಾಜನಿಗೆ ವೃದ್ಧ ವ್ಯಕ್ತಿಯ ಮಾತು ನಿಜವೆನ್ನಿಸಿತು. ನಮ್ಮ ಜೀವನದ ಬಗ್ಗೆ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವುದು ಸರಿಯೇ. ಆದರೆ ಎಲ್ಲದಕ್ಕೂ ಅತಿಯಾಗಿ ಹೆದರಿಕೊಂಡು, ನಾವು
ಆತಂಕಗೊಂಡರೆ ಬದುಕುವುದು ಹೇಗೆ? ಒಮ್ಮೆ ಯೋಚಿಸಿ ನೋಡಿ, ನಮ್ಮ ಮಕ್ಕಳನ್ನು ಬೆಳೆಸುವಾಗ
ಅವರ ಬಗ್ಗೆ ಅತಿಯಾದ ಕಾಳಜಿಯನ್ನು ತೋರಿಸುತ್ತೇವೆ. ಹೆಜ್ಜೆ ಹೆಜ್ಜೆಗೂ ಅವರಿಗೆ ಎಲ್ಲಾ ಅನುಕೂಲವನ್ನು ಮಾಡಿಕೊಟ್ಟು, ಕೈಗೆ ಒಂದು ಮೊಬೈಲ್ ಅನ್ನು ಸಹ ಕೊಟ್ಟು ಎಲ್ಲಿ ಹೋಗಿ ಬರುತ್ತಾರೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಆದರೆ ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ಅರಿಯುವ ಪ್ರಯತ್ನ ಮಾಡಿದ್ದೇವೆಯೇ?; ನಾವು ಅನುಕೂಲ
ಮಾಡಿಕೊಟ್ಟಷ್ಟೂ ನಮ್ಮ ಮಕ್ಕಳು ಅದಕ್ಕೆ ತಮ್ಮನ್ನು ಹೊಂದಿಸಿಕೊಂಡು ಕಷ್ಟಪಡುವುದನ್ನೆ ಬಿಟ್ಟುಬಿಡುತ್ತಾರೆ.
ಹೆಜ್ಜೆ ಹೆಜ್ಜೆಗೂ ಸೌಲಭ್ಯಗಳಿರುವಾಗ ಮಕ್ಕಳು ಸ್ವತಂತ್ರವಾಗಿ ಯೋಚಿಸುವುದನ್ನೇ ಬಿಟ್ಟುಬಿಡುತ್ತಾರೆ. ಹಕ್ಕಿ ಮರಿಗೆ ಗೂಡಿನ ಸದಾಕಾಲ ಹುಳ ಹಪ್ಪಟೆ ಸಿಗುತ್ತಿದ್ದರೆ, ಅದು ಆಹಾರಕ್ಕಾಗಿ ಹಾರುವ, ಹುಡುಕುವ ಪ್ರಯತ್ನವನ್ನೇ ಬಿಟ್ಟುಬಿಡುತ್ತದೆ. ಎಂದಿಗೆ ತಾಯಿ ಅದನ್ನು ಗೂಡಿನಿಂದ ಹೊರ ತಳ್ಳುತ್ತದೆಯೋ, ಅಂದಿಗೆ ಮರಿಗಳು ಆಹಾರವನ್ನು ಅರಸಿ ಹೋಗಲು ಹಾರಲು ಪ್ರಯತ್ನಿಸುತ್ತದೆ.

ನಾವು ಕೂಡ ಒಂದು ಹಂತದವರೆಗೆ ನಮ್ಮ ಮಕ್ಕಳನ್ನು ಪೋಷಿಸಿ ಅನುಕೂಲ ನಂತರ ಅವರ ಜೀವನವನ್ನು ಅವರೇ ಬದುಕಿಕೊಳ್ಳಲು ಅವಕಾಶ ಕೊಡಬೇಕು. ಆಗ ಮಾತ್ರ ಅವರು ಸಂಪೂರ್ಣವಾಗಿ ತಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯ.