Wednesday, 27th November 2024

2020 ಕಲಿಸಿದ 20 ಜೀವನದ ಪಾಠಗಳು

ಶಿವಮೂರ್ತಿ.ಹೆಚ್

ನಾವು ಸಾಮಾನ್ಯವಾಗಿ ಹೊಸ ವರ್ಷವನ್ನು ಅವಲೋಕಿಸುವುದು ರೂಢಿ. ಆದರೆ 2020 ವಿಶಿಷ್ಟ, ವಿಚಿತ್ರ, ವಿಭಿನ್ನ, ವಿಶೇಷ ವರ್ಷ. ನಾಗರಿಕತೆಯ ಬಿರುಸಾದ ಓಟದಲ್ಲಿದ್ದ ಮನುಕುಲವನ್ನು ಒಮ್ಮೆಗೇ ಬ್ರೇಕ್ ಹಾಕಿ ನಿಲ್ಲಿಸಿ, ಇಷ್ಟು ದಿನದ ಪ್ರಗತಿಯ ಯಶಸ್ಸನ್ನು ಅವಲೋಕಿಸುವಂತೆ ಮಾಡಿದ ವರ್ಷವಿದು. ಮೊದಲ ಬಾರಿ ನಾವು ಕಂಡು ಹಿಡಿದ ಔಷಧಗಳು ಮತ್ತು ತಂತ್ರಜ್ಞಾನವು ಜನರ ಜೀವಗಳನ್ನು ಖಚಿತವಾಗಿ ರಕ್ಷಿಸಲು ವಿಫಲವಾಯಿತು. 2020ರ ಇಸವಿಯು ಪ್ರಕೃತಿಯ ಕೂಸಾದರೂ, ಇಡೀ ಪ್ರಕೃತಿಯನ್ನು ತನ್ನ ದುರಾಸೆಯಿಂದ ಹಾಳು ಮಾಡುತ್ತಿದ್ದಂತಹ ಜಗತ್ತಿನ ಬುದ್ಧಿಜೀವಿ ಎನಿಸಿಕೊಂಡ ಮಾನವರಿಗೆ 20 ಬುದ್ಧಿಯ ಪಾಠಗಳನ್ನು ಕಲಿಸಿತು.

1) ಮನೆಯೇ ಮಂತ್ರಾಲಯ: 2020 ಮಾನವರಿಗೆ ಕಲಿಸಿದ ಮೊದಲ ಪಾಠ. ಮನೆಯಿಂದ ಹೊರಗೆ ಯಾವಾಗಲೂ ತಿರುಗಾಡು ತ್ತಿದ್ದ ಮಾನವರಿಗೆ ಕರೋನ ವೈರಸ್ ಭಯದಿಂದಾಗಿ ಮನೆಯೊಳಗಿದ್ದರೆ ಸ್ವರ್ಗ, ಹೊರಗಡೆ ಕಾಲಿಟ್ಟರೆ ಜೀವನ ನರಕವೆಂದು ತಿಳಿಸಿ, ಮನೆಯ ಮಹತ್ವವನ್ನು ತಿಳಿಸಿತು.

2) ಪ್ರಕೃತಿಯಾಟದ ಮುಂದೆ ಮಾನವರದು ದೊಂಬರಾಟ: ಮಹಾತ್ಮ ಗಾಂಧಿಯವರು ಹೇಳುವಂತೆ ಪ್ರಕೃತಿ ಮಾನವರ ಆಸೆಗಳನ್ನು ಮಾತ್ರ ಪೂರೈಸುವುದೇ ವಿನಹ ದುರಾಸೆಗಳನ್ನಲ್ಲ. ನಗರೀಕರಣ, ಜಾಗತೀಕರಣಗಳಿಂದಾಗಿ ಮಾನವರು ಪ್ರಕೃತಿ ಯನ್ನು ಹಾಳುಗೆಡುತ್ತಿದ್ದಾರೆ. ಆದರೆ ಪ್ರಕೃತಿಯ ಮುಂದೆ ಮಾನವರು ಕುಬ್ಜರು, ಪ್ರಕೃತಿಯಾಟದ ಮುಂದೆ ಮಾನವರದು
ದೊಂಬರಾಟ ಎಂದು ಈ ವರ್ಷ ಹೇಳಿಕೊಟ್ಟಿತು.

3) ಮರಳಿ ಗೂಡಿಗೆ : ಮಾತೃಭೂಮಿ, ಜನ್ಮದಾತರು, ಧರ್ಮ, ಸಂಸ್ಕೃತಿ ಮರೆತು ವಿದ್ಯಾಭ್ಯಾಸ, ಹಣ ಗಳಿಕೆಯ ದುಡಿಮೆಗೆಂದು ವಿದೇಶಗಳಿಗೆ ಹಾರಿ ಹೋಗುತ್ತಿದ್ದವರಿಗೆ ವಿದೇಶಗಳಲ್ಲಿ ಪರದೇಶಿಗಳಾಗಿ ಸಂಕಷ್ಟಕ್ಕೊಳಗಾದ ಮರಳಿ ಗೂಡಿಗೆ ಬರಲು
ಹಾತೊರೆಯುವಂತೆ ಈ ವರ್ಷ ಮಾಡಿತು.

4) ಸ್ವಚ್ಚತೆಯ ಪಾಠ: ಮಾನವರು ಸ್ವಚ್ಛತೆಯ ವಿಷಯದಲ್ಲಿ ಅವಿವೇಕಿಗಳಂತೆ ವರ್ತಿಸುತ್ತಿದ್ದರು. ಸಿಕ್ಕ ಸಿಕ್ಕದ್ದನ್ನು ತಿನ್ನುವುದು, ಎಂಜಲನ್ನು ಸಹ ಹಂಚಿಕೊಳ್ಳುವುದು ಮಾಡುತ್ತಿದ್ದ ಮಾನವನಲ್ಲಿ, ತಮ್ಮ ಮನೆ, ನೆರೆಹೊರೆ, ನಗರ, ರಾಜ್ಯ, ದೇಶದ ಸ್ವಚ್ಛತೆಯ ಬಗ್ಗೆ ಹಾಗೂ ಪದೇ ಪದೇ ಕೈ ತೊಳೆಯುವ, ಮುಖಗವಸು ಬಳಕೆಯ ಬಗ್ಗೆ ಜಾಗೃತಿ ಮೂಡಿಸಿತು.

5)ಸ್ವಾತಂತ್ರ್ಯದ ಅರ್ಥ : ಪ್ರಾಣಿ ಪಕ್ಷಿಗಳನ್ನು ಬಂಧನ ದಲ್ಲಿಟ್ಟು ಮಜಾ ನೋಡುತ್ತಾ, ಸದಾ ಸ್ವೇಚ್ಛೆಯಿಂದ ಹಾರಾಡುತ್ತಿದ್ದ ಮಾನವರಿಗೆ ದಿಗ್ಬಂಧನವು ಪ್ರಾಣಿ ಪಕ್ಷಿಗಳ ಬಂಧನದ ಹಿಂಸೆಯ ನೋವುಗಳನ್ನು ತಿಳಿಸಿ, ಸ್ವಾತಂತ್ರ್ಯದ ಅರ್ಥದ ಅರಿವು ಮೂಡಿಸಿತು.

6) ಹಾಸಿಗೆಯಿದ್ದಷ್ಟು ಕಾಲು ಚಾಚು: ದುಂದುವೆಚ್ಚ ಮಾಡಿ ಜೀವನ ಸಾಗಿಸುತ್ತಿದ್ದವರಿಗೆ ಹಾಸಿಗೆಯಿದ್ದಷ್ಟು ಕಾಲು
ಚಾಚಬೇಕೆಂಬುವ ಹಿರಿಯರ ಮಾತನ್ನು ನೆನಪಿಸಿತು.

7) ಆಹಾರದ ಮಿತ ಬಳಕೆ: 2020ರಲ್ಲಿ ಆಹಾರವನ್ನು ವ್ಯರ್ಥವಾಗಿ ಚೆಲ್ಲದೇ, ಆಹಾರವನ್ನು ಹಿತಮಿತವಾಗಿ ಬಳಸುವುದನ್ನು, ಹಂಚಿಕೊಂಡು ತಿನ್ನಬೇಕೆಂಬುದನ್ನು ಕಲಿಸಿತು.

8) ಹಣಕ್ಕಿಂತ ಪ್ರಾಣ ಮುಖ್ಯ : ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದರೇನು, ಜೀವ ಹೋಗುವ ಸಮಯದಲ್ಲಿ ಪ್ರಯೋ ಜನಕ್ಕೆ ಬಾರದ ಹಣಕ್ಕಿಂತ ಪ್ರಾಣವೇ ಮುಖ್ಯವೆಂದು ತಿಳಿ ಹೇಳಿತು.

9) ಉಳಿತಾಯ ಶಿಕ್ಷಣ : ಇರುವುದರಲ್ಲಿ ಜೀವನ ಸಾಗಿಸುವುದರ ಜೊತೆಗೆ, ಭವಿಷ್ಯದ ದೃಷ್ಟಿಯಿಂದ ದುಡಿದ ಹಣ, ಆಹಾರ ಸಾಮಾಗ್ರಿಗಳನ್ನು ಕೂಡಿಡಬೇಕೆಂಬುವ ಉಳಿತಾಯ ಶಿಕ್ಷಣವನ್ನು ಕಲಿಸಿತು.

10) ಸಹಬಾಳ್ವೆ ಜೀವನ : ದೇಶ, ಧರ್ಮ, ಜಾತಿ, ಸಂಸ್ಕೃತಿ, ಭಾಷೆಗಳ ವಿಚಾರದಲ್ಲಿ ಸದಾ ಕಚ್ಚಾಡುತ್ತಿದ್ದ ಜನರಲ್ಲಿ ಸಹ ಬಾಳ್ವೆಯ ಮನೋಭಾವನೆಯನ್ನು ಮೂಡಿಸಿತು. ಕಷ್ಟಕಾಲದಲ್ಲಿ ನೆರೆವಿಗೆ ಬರುವವರು ನಮ್ಮ ವಿಶ್ವಾಸಿಗಳು ಎಂದು ಸಾರಿ ಸಾರಿ ಹೇಳಿತು.

11) ಸರಳ ಸಮಾರಂಭಗಳು : ಅಪಾರ ಹಣ ಖರ್ಚು ಮಾಡಿ, ದಾಂ ಧೂಂ ಎಂದು ಆಚರಿಸುತ್ತಿದ್ದ ಗೃಹ ಪ್ರವೇಶ, ಮದುವೆ, ಹುಟ್ಟು ಹಬ್ಬ, ಜಾತ್ರೆ ಮುಂತಾದ ಸಮಾರಂಭಗಳನ್ನು ಸರಳವಾಗಿ ಕೂಡ ಮಾಡಬಹುದೆಂಬುದನ್ನು ಕಲಿಸಿತು.

12) ಪಾಲಿಗೆ ಬಂದದ್ದು ಪಂಚಾಮೃತ : ತಾವು ಗಳಿಸಿದ ವಿದ್ಯಾರ್ಹತೆ, ಅನುಭವಕ್ಕಿಂತ ಜೀವನ ನಿರ್ವಹಣೆಗೆ ಸಿಗುವ ಕೆಲಸ ಗಳನ್ನು ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು ಮಾಡಲೇಬೇಕೆಂದು ಹೇಳಿಕೊಟ್ಟಿತು.

13) ಮನೆಯಡುಗೆ ಮಹತ್ವ : ಬಾಯಿ ರುಚಿಗಾಗಿ, ಕಡಿಮೆ ವೆಚ್ಚದ, ಫಾಸ್ಟ್ ಫುಡ್ ಗಳನ್ನು ದೇಹದ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದವರಿಗೆ ಮನೆಯಡುಗೆ ಶುಚಿ ರುಚಿಯ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದೆಂದು ಸಾರಿ ಹೇಳಿತು.

14)ಪಟ್ಟಣದಿಂದ ಹಳ್ಳಿಗೆಡೆಗೆ : ಪಟ್ಟಣದಲ್ಲಿದ್ದವರೆಲ್ಲ ಮತ್ತೆ ಹಳ್ಳಿಯ ಜೀವನವೇ ಉತ್ತಮವೆಂದು ತಿಳಿದು ಹಳ್ಳಿಗೆ ಮರಳಿ, ಮಣ್ಣಿನ ಮಕ್ಕಳಾಗುವಂತೆ ಮಾಡಿತು. ಕಲುಷಿತ ಗಾಳಿ, ನೀರಿನ ಪಟ್ಟಣಕ್ಕಿಂತ ಪರಿಶುದ್ಧ ಗಾಳಿ, ನೀರಿನ ವಾತಾವರಣದ ಹಳ್ಳಿಯೇ
ಉತ್ತಮವೆಂಬ ಅರಿವು ಮೂಡಿಸಿತು.

15) ಸಂಬಂಧಗಳ ಬೆಲೆ : ಯಾವಾಗಲೂ ಹಣ ಆಸ್ತಿ ಅಂತಸ್ತು ಎನ್ನುತ್ತಾ ರಕ್ತ ಸಂಬಂಧ ಮರೆತಿದ್ದವರಿಗೆ, ಸಂಬಂಧಗಳ ಬೆಲೆ ಯೇನೆಂಬುದನ್ನು ಅರ್ಥಮಾಡಿಸಿತು. ತಂದೆ ತಾಯಿ, ಬಂಧು ಬಳಗದವರ ಜೊತೆ ಕೂಡಿ ಬಾಳುವುದನ್ನು ಕಲಿಸಿತು.

16)ಯುದ್ಧೋನ್ಮಾದ ಅಡಗಿಸಿತು : ದೇಶ ದೇಶಗಳ ನಡುವೆ ರಾಜಕೀಯ, ಆರ್ಥಿಕ ವಿಚಾರಗಳಲ್ಲಿದ್ದ ಯುದ್ಧೋನ್ಮಾದವನ್ನು ಮದ್ದು ಗುಂಡುಗಳಿಲ್ಲದೇ ಸದ್ದು ಅಡಗಿಸಿತು.

17)ನಿಜ ದೇವರ ದರ್ಶನ : ಗುಡಿ, ಚರ್ಚ್, ಮಸೀದಿ, ಗುರುದ್ವಾರ, ಬಸದಿಗಳಲ್ಲಿ ಪೂಜಿಸಲ್ಪಡುತ್ತಿದ್ದ ದೇವರುಗಳ ಜೊತೆಗೆ ವೈದ್ಯರು, ಶುಶ್ರೂತರು, ಪೌರ ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು, ಸೈನಿಕರು, ಆರಕ್ಷಕರನ್ನು ನಿಜವಾದ ದೇವರಗಳೆಂದು ಸಾರಿ ಹೇಳಿತು.

18) ಮನೆಯೇ ಗ್ರಂಥಾಲಯ, ಚಿತ್ರಮಂದಿರ : ಲಾಕ್ ಡೌನ್ ದಿಗ್ಬಂಧನದ ಸಮಯದಲ್ಲಿ ಮನೆಯೊಳಗೆ ಬಂಧಿಯಾಗಿದ್ದ ಜನತೆಗೆ ಓದುವ, ಸೃಜನಾತ್ಮಕ ಆಲೋಚನೆ, ಮನೋರಂಜನೆಯನ್ನು ಕುಟುಂಬದ ಸದಸ್ಯರ ಜೊತೆಯಲ್ಲಿ ಕಂಡುಕೊಳ್ಳುವು ದನ್ನು ಕಲಿಸಿತು.

19) ಹಳೆ ಬೇರು ಹೊಸ ಚಿಗುರು: ಆಧುನಿಕತೆಯ ಭರಾಟೆಯಲ್ಲಿ ಅಜ್ಜ ಅಜ್ಜಿಯರ ಸಂಪರ್ಕದಿಂದ ದೂರವಾಗಿದ್ದ ಮಕ್ಕಳನ್ನು ಮತ್ತೆ ಒಂದಾಗುವಂತೆ ಮಾಡಿ, ಹಳೆ ಬೇರು ಹೊಸ ಚಿಗುರು ಸಮ್ಮಿಲನವಾಗಿಸಿ, ಕೂಡಿ ಬಾಳುವ ಆನಂದವನ್ನು ಕಲಿಸಿತು.

20) ಸಾಮರ್ಥ್ಯದ ಅರಿವು: 2020ರ ಇಸವಿಯು ಕಲಿಸಿದ ಅತಿ ಮುಖ್ಯವಾದ ಪಾಠ ಜೀವನದಲ್ಲಿ ಬರುವ ಪ್ರತಿಯೊಂದು
ಸವಾಲುಗಳನ್ನು ಎದುರಿಸುವ ಸಾಮರ್ಥ್ಯವು ನಮ್ಮೊಳಗಿದೆಂಬುದನ್ನು ಜಾಗೃತಗೊಳಿಸಿ, ಸಮಸ್ಯೆ, ಸವಾಲುಗಳೆದುರು ಹೋರಾಡುವ ಮನೋಸ್ಥೈರ್ಯವನ್ನು ತುಂಬಿ, ಬದುಕುವ ಕಲೆಯನ್ನು ಕಲಿಸಿತು.