ಸುರೇಶ ಗುದಗನವರ
ಪರಿಶ್ರಮ ಮತ್ತು ಸಾಧನೆ ಇದ್ದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಹಲವು ಉದಾಹರಣೆ ಗಳಿವೆ. ಗ್ರಾಮೀಣ ಹಿನ್ನೆಲೆಯಿಂದ ಬಂದವರು ಎಂಬ ಹಿಂಜರಿಕೆ ಇಲ್ಲದೇ, ಉನ್ನತ ಹುದ್ದೆಯನ್ನು ಗಳಿಸುವಲ್ಲಿ ಯಶಸ್ವಿ ಯಾದ ಯುವಕರೊಬ್ಬರ ಸಾಧನೆಯನ್ನು ಓದಿ ನೋಡಿ.
ತನ್ನ ಸಾಧನೆ, ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಇಪ್ಪತ್ತ್ಮೂರು ವರ್ಷದ ಈ ಯುವಕ ಭಾರತದ ಸೇನೆಯ ಲೆಪ್ಟಿನೆಂಟ್ ಹುದ್ದೆಗೆ ಇತ್ತೀಚೆಗೆ ನೇಮಕಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಇತರ ಯುವಕರಿಗೆ ಮಾದರಿಯಾಗಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಗ್ರಾಮೀಣ ಪರಿಸರದ ಯುವಕ ವಿನೋದ ಕಾಪಸಿ ದೇಶದ ಅತ್ಯುನ್ನತ ಪರೀಕ್ಷೆಯಲ್ಲೊಂದಾದ ಭಾರತೀಯ ಸೇನಾ ವಿಭಾಗದ ಸಿ.ಡಿ.ಎಸ್.ಇ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟ್
ಲೆಪ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
ವಿನೋದ ಕಾಪಸಿಯವರು ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದವರು. ತಂದೆ ಪ್ರಕಾಶ ಕಾಪಸಿ, ತಾಯಿ ಅನಿತಾ. ಕೃಷಿ ಕುಟುಂಬದಲ್ಲಿ ಬೆಳೆದ ವಿನೋದ, ಚಿಕ್ಕ ವಯಸ್ಸಿನಿಂದಲೂ ಕಲಿಕೆಯಲ್ಲಿ ಎಲ್ಲರಿ ಗಿಂತಲೂ ಮುಂದೆ. ಓದಿನಲ್ಲಷ್ಟೇ ಅಲ್ಲ, ಕ್ರೀಡೆಗೂ ಮಹತ್ವ ನೀಡುತ್ತಿದ್ದ ವಿವಿಧ ಆಟೋಟಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. 2007ರಲ್ಲಿ ಸೈನಿಕ ಶಾಲೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ವಿಜಯಪುರ ಸೈನಿಕ ಶಾಲೆಗೆ ಸೇರಿಕೊಳ್ಳುತ್ತಾರೆ.
2013ರವರೆಗೆ ಸೈನಿಕ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿ, ಅತೀ ಹೆಚ್ಚು ಅಂಕಗಳೊಂದಿಗೆ ಎಸ್.ಎಸ್ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದರು ವಿನೋದ.
ಚಿನ್ನದ ಪದಕ
ಪಿ.ಯು.ಸಿ ಅಧ್ಯಯನ ಮಾಡಲು ಧಾರವಾಡ ಜೆ.ಎಸ್.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಮೆರಿಟ್ ಆಧಾರದಲ್ಲಿ ಉಚಿತವಾಗಿ ಸೀಟು ಪಡೆದರು. 2015ರಲ್ಲಿ ಪಿ.ಯು.ಸಿ. ಯಲ್ಲಿ ಶೇಕಡಾ 95ರಷ್ಟು ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದರು. ಹಾಗೆಯೇ ಜೆ.ಎಸ್.ಎಸ್. ಪದವಿ ಕಾಲೇಜಿನಲ್ಲಿಯೇ ಓದು ಮುಂದುವರೆಸಿದ ವಿನೋದ ಬಿ.ಎ. ತರಗತಿಯಲ್ಲಿ ಇಂಗ್ಲೀಷ್ ಮತ್ತು ಅರ್ಥಶಾಸ್ತ್ರ ವನ್ನು ಆಯ್ಕೆ ಮಾಡಿಕೊಂಡರು.
ವಿನೋದರವರು 2018ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಂಬತ್ತನೇ ಸ್ಥಾನ ಪಡೆದಿದ್ದಲ್ಲದೇ ಇಂಗ್ಲೀಷ್ ಹಾಗೂ ಅರ್ಥಶಾಸ್ತ್ರ
ವಿಷಯಗಳಲ್ಲಿ ಎರಡು ಬಂಗಾರದ ಪದಕಗಳನ್ನು ಪಡೆದು, ಕಾಲೇಜಿನ ಕೀರ್ತಿ ಹೆಚ್ಚಿಸಿದರು. 2019ರಲ್ಲಿ ವಿನೋದ ಅವರು ಸಿ.ಡಿ.ಎಸ್.ಇ. ಪರೀಕ್ಷೆಯನ್ನು ಬರೆದು ತೇರ್ಗಡೆಯಾಗಿ ಭಾರತೀಯ ಸೇನೆಯ ಏಟ್ ಗೋರ್ಖಾ ರೆಜಮೆಂಟ್ಗೆ ಆಯ್ಕೆಯಾದರು. ನಂತರ ಒಂದು ವರ್ಷದವರೆಗೆ ಚೆನ್ನೈನಲ್ಲಿ ತರಬೇತಿ ಪಡೆದುಕೊಂಡರು. ತರಬೇತಿ ಮುಗಿಸಿದ ನಂತರ ತಂದೆ-ತಾಯಿಯವರಿಗೆ ಫೋನ್ ಮಾಡಿದಾಗ ಅವರು ‘ನೀನು ಕಲಿತ ಕಾಲೇಜಿಗೆ ಹೋಗಿ ನಿನ್ನ ಗುರುಗಳ ಆಶೀರ್ವಾದ ಪಡೆದು’ ಬರುವಂತೆ ತಿಳಿಸಿದರು.
ಇದು ವಿನೋದ ಅವರನ್ನು ಬಹುವಾಗಿ ಪ್ರಭಾವಿಸಿತು. ಅವರು ತಮ್ಮ ತರಬೇತಿ ಮುಗಿಸಿದ ಕೂಡಲೇ, ನೇರವಾಗಿ ತಮ್ಮ ಹುಟ್ಟೂ ರಿಗೆ ಹೋಗದೇ ತಮಗೆ ಉಚಿತ ಶಿಕ್ಷಣ ನೀಡಿದ ಧಾರವಾಡದ ಜೆ.ಎಸ್.ಎಸ್. ಕಾಲೇಜಿಗೆ ಯುನಿಫಾರ್ಮ್ನಲ್ಲೇ ಹೋಗಿ ಗುರು ವೃಂದಕ್ಕೆ ಧನ್ಯವಾದ ಅರ್ಪಿಸಿದರು. ಅಲ್ಲಿನ ಗುರು ವೃಂದ ಇವರನ್ನುಕಂಡು ತುಂಬು ಅಭಿಮಾನದಿಂದ ಸ್ವಾಗತಿಸಿದರು.
ಜೆ.ಎಸ್.ಎಸ್.ಸಂಸ್ಥೆಯ ವಿತ್ತಾಧಿಕಾರಿ ಡಾ.ಅಜಿತ್ ಪ್ರಸಾದದ ವಿನೋದ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು. ‘ಇದು ಸಂಸ್ಥೆಗೆ ಹೆಮ್ಮೆಯ ವಿಷಯ. ಅಲ್ಲದೇ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿ ನೀಡುವಂತಹ ಸಾಧನೆ. ನಿಮ್ಮಂತಹ ವಿದ್ಯಾರ್ಥಿಗಳು ಇಡೀ ವಿದ್ಯಾರ್ಥಿ ಕುಲಕ್ಕೇ ಹೆಮ್ಮೆ ತರುವಂತಹವರು ಮತ್ತು ಮುಂದಿನ ತಲೆಮಾರಿಗೆ ಸ್ಫೂರ್ತಿ ತುಂಬುವಂತಹವರು’ ಎಂದು ವಿನೋದರವರನ್ನು ಶ್ಲಾಘಿಸಿದರು. ತಮ್ಮ ಸೈನ್ಯದ ತರಬೇತಿ ಮುಗಿದು ನಂತರ ಮನೆಗೆ ತೆರಳದೆ ಬದುಕು ಕಟ್ಟಿಕೊಳ್ಳಲು ನೆರವಾದ ಜೆ.ಎಸ್.ಎಸ್. ಸಂಸ್ಥೆಯನ್ನು ಮೊದಲು ಕಾಣಲು ಬಂದ ಅವರ ಅಭಿಮಾನ ಎಲ್ಲರ
ಮೆಚ್ಚುಗೆಗೆ ಕಾರಣವಾಯಿತು.
ತಾವು ಓದಿದ ಶಾಲೆಗೆ ಭೇಟಿ ನೀಡಿದ ನಂತರ, ತಮ್ಮ ಊರಿಗೆ ಹೋಗಿ ತಮ್ಮ ಹೆತ್ತವರ ಆಶೀರ್ವಾದ ಪಡೆದರು. ‘ಪ್ರತಿಭೆ ಎನ್ನುವು ದು ಎಲ್ಲರಲ್ಲಿಯೂ ಇರುತ್ತದೆ. ಪ್ರಾಮಾಣಿಕವಾಗಿ ಅಧ್ಯಯನ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿ ಶ್ರಮಿಸಬೇಕು. ಓದಿನೊಂದಿಗೆ ಕ್ರೀಡೆಗೂ ಅಷ್ಟೇ ಮಹತ್ವ ನೀಡಿದಾಗ ಸಾಧನೆ ಸಾಧ್ಯ’ ಎಂದು ಲೆಪ್ಟಿನೆಂಟ್ ವಿನೋದ ಕಾಪಸಿ ಹೇಳುತ್ತಾರೆ. ಇವರ ಸಾಧನೆ ನಮ್ಮ ಯುವ ಸಮುದಾಯಕ್ಕೆ ಮಾದರಿಯಾಗಲಿ. ಭಾರತೀಯ ಸೇನೆಯಲ್ಲಿ ವಿನೋದರವರು ಇನ್ನೂ ಉತ್ತುಂಗಕ್ಕೇರಲಿ.