ಮಣ್ಣೆ ಮೋಹನ್
ಹಿಮಾಲಯ ಪರ್ವತ ಶ್ರೇಣಿಯಲ್ಲಿ ಪ್ರಾಕೃತಿಕವಾಗಿ ರೂಪುಗೊಂಡಿರುವ ಅಮರನಾಥ ಗುಹೆ ಮತ್ತು ಅಲ್ಲಿನ ನೈಸರ್ಗಿಕ ಹಿಮ ಲಿಂಗವನ್ನು ನೋಡುವ ಅನುಭವ ಎಂದರೆ ಅದು ಯಾತ್ರೆಯೂ ಹೌದು, ಪ್ರವಾಸವೂ ಹೌದು, ಅನಿರ್ವಚನೀಯ ಅನುಭವವೂ ಹೌದು.
ಅಮರನಾಥ ಎಂದರೆ ಚಿರಂಜೀವಿ ಎಂದರ್ಥ. ಅಮರನಾಥಕ್ಕೆ ಕೈಗೊಳ್ಳುವ ಪಯಣವು ಇತ್ತ ಯಾತ್ರೆಯೂ ಹೌದು, ಅತ್ತ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಪ್ರವಾಸವೂ ಹೌದು. ಸುಂದರ ಹಿಮ ಶಿಖರಗಳು, ಕಡಿದಾದ ಕಣಿವೆಗಳು, ಕಾಶ್ಮೀರದ ಹುಲ್ಲು ಗಾವಲು ಮತ್ತು ನೋಡುವ ಅಪರೂಪದ ಅವಕಾಶ ಅಮರನಾಥಕ್ಕೆ ಹೋಗುವಾಗ ಲಭಿಸುತ್ತದೆ.
ಐದು ಸಾವಿರ ವರ್ಷಕ್ಕಿಂತ ಹೆಚ್ಚು ಪುರಾತನವಾದ ಗುಹಾ ದೇವಾಲಯ ಇದು. ವರ್ಷದ ಒಂದು ನಿರ್ದಿಷ್ಟ ಅವಧಿಯಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುವ ಹಿಮಲಿಂಗ ಇಲ್ಲಿನ ದೇವರು. 60 ಅಡಿ ಉದ್ದದ, 30 ಅಡಿ ಅಗಲದ, 15 ಅಡಿ ಎತ್ತರದ, ದಕ್ಷಿಣ ದಿಕ್ಕಿನೆಡೆಗೆ ದ್ವಾರಹೊಂದಿ, ಸೂರ್ಯರಶ್ಮಿ ಒಳಪ್ರವೇಶಿಸಲು ಅಸಾಧ್ಯವಾದಂತಹ ಪ್ರಕೃತಿಸಿದ್ಧವಾದ ಈ ಗುಹೆಯಲ್ಲಿ, ಶಿವ ಪೀಠದ ಜತೆಯಲ್ಲಿ ಪಾರ್ವತಿ ಪೀಠ ಮತ್ತು ಗಣೇಶ ಪೀಠಗಳು ಸಹಾ ಹಿಮದಿಂದಲೇ ಸೃಷ್ಟಿ ಯಾಗುವುದು ಸೋಜಿಗ.
ಈ ಹಿಮಲಿಂಗ ಭೂಮಿಯನ್ನು ಸ್ಪರ್ಶಿಸದೆ, ತಳಭಾಗದಲ್ಲಿ ಬಟ್ಟೆಯನ್ನು ಆಚೀಚೆ ಸರಿಸುವಷ್ಟು ಜಾಗ ಹೊಂದಿರುತ್ತದೆ ಎಂಬ ವಿಚಾರವು ಮತ್ತಷ್ಟು ಸೋಜಿಗಕ್ಕೆ ಕಾರಣವಾಗಿದೆ. ಪುರಾಣ ಕಾಲದಿಂದಲೂ ನಮ್ಮ ಜನರಿಗೆ ಪರಿಚಿತವಾಗಿರುವ ಅಮರನಾಥ ಕ್ಷೇತ್ರವಿರುವುದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ. ಜಮ್ಮುವಿನಿಂದ 330 ಕಿ. ಮೀ. ದೂರದಲ್ಲಿ, ಶ್ರೀನಗರದಿಂದ 141 ಕಿ.ಮೀ. ಅಂತರದಲ್ಲಿರುವ ಈ ಗುಹೆ, ಸಮುದ್ರಮಟ್ಟದಿಂದ ಸುಮಾರು ಹದಿಮೂರು ಸಾವಿರ ಅಡಿಗಳ ಎತ್ತರದಲ್ಲಿದೆ.
ಸಾವಿರಾರು ವರ್ಷಗಳಿಂದ ಜನರ ದರ್ಶನಕ್ಕೆ ಲಭ್ಯವಿದ್ದ ಈ ಗುಹೆಗೆ, 11ನೇ ಶತಮಾನದಲ್ಲಿ ಸೂರ್ಯಮತಿಯೆಂಬ ರಾಣಿಯು ತ್ರಿಶೂಲವನ್ನು ಮತ್ತು ಪೂಜಾಸಾಮಗ್ರಿಗಳನ್ನು ಕಾಣಿಕೆಯಾಗಿ ನೀಡಿದ್ದಾಳೆ. 800 ವರ್ಷಗಳ ಹಿಂದೆ ರಚನೆಯಾದ ಕಲ್ಹಣ ಕವಿಯ ‘ರಾಜತರಂಗಿಣಿ’ ಕೃತಿಯಲ್ಲಿ ಇದರ ಉಲ್ಲೇಖವಿದೆ. ಕ್ರಿ.ಶ 1420 ರಿಂದ 1472 ರವರೆಗೆ ಕಾಶ್ಮೀರವ ನ್ನು ಆಳಿದ ಜೈನ-ಡಲ್- ಅಬದಿನ್ ಎಂಬ ಮಹಮ್ಮದಿಯ ರಾಜ ಅಮರನಾಥ ಯಾತ್ರೆ ಮಾಡಿದ ಎಂಬ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ಅಕ್ಬರನ
ಆಸ್ಥಾನದಲ್ಲಿದ್ದ ಅಬ್ದುಲ್ ಫಜಲ್ ಎಂಬ ಕವಿ, ಅಮರನಾಥ ಯಾತ್ರೆಯ ವೈಭವವನ್ನು ವರ್ಣಿಸಿದ್ದಾನೆ.
ಕ್ರಿ.ಶ 1658 ರಿಂದ 1707 ರವರೆಗೂ ಸುದೀರ್ಘ 49 ವರ್ಷಗಳ ಆಳ್ವಿಕೆ ನಡೆಸಿದ ಔರಂಗಜೇಬನ ಕಾಲದಲ್ಲಿ, ಕಾಶ್ಮೀರದ ಸುಬೇದಾರ ಅಲಿಮದ್ದಾಖಾನ್ ಎಂಬುವವನು ಅಮರನಾಥ ಯಾತ್ರಿಕರಿಗೆ ತೊಂದರೆ ಕೊಡಲು ಉದ್ದೇಶಿಸಿ, ಆನಂತರ ಅಮರನಾಥನ ಮಹಿಮೆಯನ್ನು ಕೇಳಿ ತಿಳಿದು, ಅಮರನಾಥ ಯಾತ್ರೆ ಮಾಡಿ, ಅಮರನಾಥನ ದರ್ಶನ ಪಡೆದು, ಧನ್ಯಭಾವ ಹೊಂದಿದ.
ಸ್ವಾಮಿ ವಿವೇಕಾನಂದರು 1898 ರಲ್ಲಿ ಸಿಸ್ಟರ್ ನಿವೇದಿತಾ ಮತ್ತು ಇತರ ಅನೇಕ ಶಿಷ್ಯರೊಂದಿಗೆ ಅಮರನಾಥ ಯಾತ್ರೆ ಮಾಡಿ ಸ್ಪೂರ್ತಿ ಪಡೆದಿದ್ದಾರೆ. 2011ರಲ್ಲಿ 6,33,000 ಜನರು ಈ ಯಾತ್ರೆ ಮಾಡಿದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ.
ಹಿಮದ ಅಡಿ ಕಣ್ಮರೆ
ನವೆಂಬರ್‌ನಿಂದ ಮೇ ತಿಂಗಳವರೆಗೆ ಈ ಪೂರ್ತಿ ಪ್ರದೇಶ ಹಿಮದ ಹಾಸಿನ ಅಡಿ ಕಣ್ಮರೆಯಾಗುತ್ತದೆ. ಜೂನ್ ಮಾಸದಲ್ಲಿ ಹಿಮ, ಹನಿ ರೂಪದಲ್ಲಿ ಗುಹೆಯೊಳಗೆ ಇಳಿದು ಹಿಮಲಿಂಗ ರೂಪುಗೊಳ್ಳುತ್ತದೆ. ಜುಲೈ ತಿಂಗಳಲ್ಲಿ ಬರುವ ಗುರು ಪೂರ್ಣಿಮೆಯಂದು ‘ಪ್ರಥಮ ಪೂಜನ್’ ನೊಂದಿಗೆ ಆರಂಭಗೊಳ್ಳುವ 45 ದಿನಗಳ ಯಾತ್ರೆ ಆಗಸ್ಟ್ ಮಾಸದಲ್ಲಿ ಬರುವ ಶ್ರಾವಣ ಪೂರ್ಣಿಮೆಯಂದು ಮುಕ್ತಾಯಗೊಳ್ಳುತ್ತದೆ.
ಪ್ರತಿ ಯಾತ್ರಿಯು ಮುಂಚಿತವಾಗಿ ಅಮರನಾಥ ಯಾತ್ರಾ ಸೈನ್ ಬೋರ್ಡ್ ನವರು ನೀಡುವ ಅನುಮತಿ ಪತ್ರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ, ಈ ಯಾತ್ರೆ ಮಾಡಲು ನಾವು ಸಮರ್ಥರಿದ್ದೇವೆ ಎಂಬ ಮೆಡಿಕಲ್ ಸರ್ಟಿಫಿಕೇಟ್ ನೊಂದಿಗೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಶಾಖೆಯೊಂದಕ್ಕೆ ಶುಲ್ಕ ಸಲ್ಲಿಸಿ, ಭಾರತೀಯ ಪ್ಯಾರಾಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ಅನುಮತಿ ಪತ್ರ ಪಡೆಯಬೇಕು.
ಊಟಕ್ಕೆ ರಕ್ಷಣೆ ನೀಡಿದ ಸೈನಿಕರು
ಅಮರನಾಥದ ಪಯಣದಲ್ಲಿ ಎಲ್ಲಕ್ಕಿಂತ ಮಿಗಿಲಾದದ್ದು ಭಾರತೀಯ ಸೇನೆಯ ಕೊಡುಗೆ. ಅವರಿಲ್ಲದಿದ್ದರೆ ನಾವು ಅಮರನಾಥ ಯಾತ್ರೆಗೆ ಹೋಗಲು ಸಾಧ್ಯವಿಲ್ಲ, ವಾಪಸ್ ಬರಲು ಸಾಧ್ಯವಿಲ್ಲ. ಜಮ್ಮುವಿನಿಂದ ಆರಂಭಗೊಂಡು ಹಾದಿಯುದ್ದಕ್ಕೂ ಅವರೇ ಶ್ರೀರಕ್ಷೆ. ರಸ್ತೆಯಲ್ಲಿ, ರಸ್ತೆಬದಿಯ ಕಾಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ನದಿ ಮಧ್ಯದ ಬಂಡೆಗಳ ಮೇಲೂ ನಿಂತು ಮಳೆ, ಗಾಳಿ, ಬಿಸಿಲು ಎನ್ನದೆ ಜನರನ್ನು ಕಾಯುವ ಆ ಪರಿ ನಿಜಕ್ಕೂ ಅಮೋಘ.
ಊಟಕ್ಕೆಂದು ನಾವು ರಸ್ತೆ ಬದಿ ಕುಳಿತುಕೊಳ್ಳುತ್ತಿದ್ದಂತೆಯೇ, ಕ್ಷಣಾರ್ಧದಲ್ಲಿ ಐದಾರು ಸೈನಿಕರು ನಮ್ಮನ್ನು ಸುತ್ತುವರಿದು ಊಟ ಮುಗಿಯುವವರೆಗೂ ರಕ್ಷಣೆ ಕೊಟ್ಟದ್ದು ನಮ್ಮ ನೆನಪಿನಲ್ಲಿ ಅಚ್ಚಳಿಯದೆ ನಿಂತಿದೆ. ಜಮ್ಮು – ಶ್ರೀನಗರ ಮಾರ್ಗ ಮಧ್ಯೆ ಸಿಗುವ ಉದಂಪುರ, ಅನಂತನಾಗ್, ಕುಪ್ವಾರಗಳ ದಾರಿಯಲ್ಲಿ ಉಗ್ರಗಾಮಿಗಳಿಂದ ರಕ್ಷಣೆಗಾಗಿ, ಹತ್ತು ಹದಿನೈದು ಯಾತ್ರಿಕರ ವಾಹನ ಗಳನ್ನು ಮಧ್ಯದಲ್ಲಿ ಇಟ್ಟುಕೊಂಡು, ಮುಂಬದಿ ಮತ್ತು ಹಿಂಬದಿಯಲ್ಲಿ ಮಿಲಿಟರಿ ವಾಹನಗಳು ಸಾಗುತ್ತಾ ಯಾತ್ರಿಕರನ್ನು ಗುರಿ
ತಲುಪಿಸುತ್ತವೆ.
ಕಾಲು ಹಾದಿಯಲ್ಲಿ ಜಾರಿಬಿದ್ದು ಗಾಯಗೊಂಡವರನ್ನು ಸುಸ್ತಾದವರನ್ನು, ಹೃದಯದ ತೊಂದರೆಯಿಂದ ನಲುಗಿದವರನ್ನು
ಕ್ಯಾಂಪ್‌ಗಳಿಗೆ ಹೊತ್ತೊಯ್ದು, ಅವರಿಗೆ ಶುಶ್ರೂಷೆ ಮಾಡುವ ಸೇನೆಯ ಕಾಯಕ ನಿಜಕ್ಕೂ ಶ್ಲಾಘನೀಯ. ಅಮರನಾಥ ಯಾತ್ರೆಯುದ್ದಕ್ಕೂ ನಾ ಕಂಡ ಹಿಮಾಲಯ ಪರ್ವತ ಶ್ರೇಣಿ, ಕಣಿವೆ, ಹುಲ್ಲುಗಾವಲು, ಹಿಮ ಶೀತಲ ನದಿಗಳು, ಅಲ್ಲಲ್ಲಿ ಜಲ
ಪಾತಗಳು, ಹಿಮದ ನಾನಾ ಸ್ವರೂಪಗಳು ಎಲ್ಲದರಲ್ಲೂ ಕೊನೆಗೆ ಗೋಚರಿಸಿದ್ದೇ ಗುಹೆಯಲ್ಲಿದ್ದ ಅಮರನಾಥನ ವಿಶ್ವರೂಪ. ಭಂ ಭಂ ಭೋಲೇ.
ಋಷಿಗಳು ಪತ್ತೆಹಚ್ಚಿದ ಗುಹೆ
ಸುಮಾರು 5000 ವರ್ಷಗಳ ಹಿಂದೆ ಹಿಮಾಲಯದಲ್ಲಿ ಸಂಚರಿಸುತ್ತಿದ್ದ ಕಶ್ಯಪ ಮುನಿಗಳು ಈಗಿರುವ ಅಮರನಾಥ ಗುಹೆಯ ಸ್ಥಳಕ್ಕೆ ಬರುತ್ತಾರೆ. ಆಗ ಇಡೀ ಅಮರನಾಥ ಕಣಿವೆ ಮಂಜಿನಿಂದ, ನೀರಿನಿಂದ ತುಂಬಿ ಮುಚ್ಚಿ ಹೋಗಿರುತ್ತದೆ. ಕಶ್ಯಪ ಮುನಿಗಳಿಗೆ ಆಗೋಚರ ಚೈತನ್ಯವೊಂದು ಅಡಗಿರುವ ಅನುಭವವಾಗಿ, ಅವರು ತಮ್ಮ ತಪೋಬಲದಿಂದ ಆ ಕಣಿವೆಯಲ್ಲಿದ್ದ ಹಿಮ ಮತ್ತು ನೀರನ್ನೆಲ್ಲ ಹೊರಹಾಕುತ್ತಾರೆ.
ಅವರಿಗೆ ಅಮರನಾಥ ಗುಹೆ ಗೋಚರವಾಗುವುದಿಲ್ಲ. ಆನಂತರ ಭೃಗು ಮಹರ್ಷಿಗಳು ಅದೇ ಹಾದಿಯಲ್ಲಿ ಸಂಚರಿಸುತ್ತ ಬರುತ್ತಾರೆ. ಅವರಿಗೂ ವಿಶೇಷ ಅನುಭೂತಿಯಾಗುತ್ತದೆ. ತಮ್ಮ ತಪಶ್ಶಕ್ತಿಯಿಂದ ಅಲ್ಲೆಲ್ಲ ಅನ್ವೇಷಿಸುತ್ತಾರೆ. ಆಗ ಅವರ ಕಣ್ಣಿಗೆ ಗೋಚರವಾಗುವುದೇ ಅಮರನಾಥ ಗುಹೆ. ಮುಂದೆ ಅನೇಕ ಋಷಿಮುನಿಗಳು, ತಪಸ್ವಿಗಳು, ಸಾಧು -ಸಂತರುಗಳು, ಈ ಕ್ಷೇತ್ರಕ್ಕೆ ಭೇಟಿ ಕೊಡುವುದರ ಮೂಲಕ ಅಮರನಾಥ ಯಾತ್ರೆಗೆ ಚಾಲನೆ ಸಿಗುತ್ತದೆ.
ಅಮರನಾಥಕ್ಕೆ 3 ದಾರಿಗಳು
1. ಶ್ರೀನಗರದಿಂದ 96 ಕಿ.ಮೀ. ದೂರದ ಪಹಲ್ಗಾಂವ್ ತಲುಪಿ ಅಲ್ಲಿಂದ ಚಂದನವಾರಿ, ಶೇಷನಾಗ್ ಸರೋವರ, ಮಹಾಗುಣಾಸ್ ಸ್ಟಾಪ್, ಪಂಚತಾರಣಿ, ಸಂಗಮದ ಮೂಲಕ 42 ಕಿಮೀ ಕ್ರಮಿಸಿ ಅಮರನಾಥ ಗುಹೆ ತಲುಪಬಹುದು.
2. ಶ್ರೀನಗರದಿಂದ 94 ಕಿ.ಮೀ. ದೂರದ ಬಾಲ್ ಟಾಲ್ ತಲುಪಿ ಅಲ್ಲಿಂದ ಡೊಮೆಲ್, ಬರಾರಿ ಎಂಬ ಸ್ಥಳಗಳನ್ನು ಹಾಯ್ದು, ಸಂಗಮದ ಮೂಲಕ ಅಮರನಾಥ ಗುಹೆಯನ್ನು ತಲುಪುವುದು.
17 ಕಿ.ಮೀ. ದೂರದ ಈ ಹಾದಿ ಕಠಿಣವಾದದ್ದು. ಇವೆರಡು ದಾರಿಗಳನ್ನು ನಡೆದು ಅಥವಾ ಕುದುರೆ ಅಥವಾ ಡೋಲಿಗಳಲ್ಲಿ ಕ್ರಮಿಸಬಹುದು. 3. ಸೋನ್ ಮಾರ್ಗ ಬಳಿ ಇರುವ ನೀಲ್ ಗ್ರಾತ್ ಹೆಲಿಪ್ಯಾಡ್‌ನಿಂದ ಹೆಲಿಕ್ಯಾಪ್ಟರ್ ನಲ್ಲಿ ಪಯಣಿಸಿ, ಪಂಚತಾರಿಣಿ ತಲುಪಿ ಅಲ್ಲಿಂದ ಆರು ಕಿ.ಮೀ. ಕಾಲುಹಾದಿ ಕ್ರಮಿಸಿ ಗುಹೆ ತಲುಪಬಹುದು. ಇಲ್ಲೂ ಕುದುರೆ ಅಥವಾ ಡೋಲಿಯ ವ್ಯವಸ್ಥೆ ಇದೆ. ಈ ಮೂರು ಮಾರ್ಗಗಳಲ್ಲಿ ಅಲ್ಲಲ್ಲಿ ದೇಶದ ನಾನಾ ರಾಜ್ಯಗಳ ಸಂಘ-ಸಂಸ್ಥೆಗಳು ಲಂಗೂರ್‌ಗಳನ್ನು ಅಂದರೆ ಟಾರ್ಪಲ್ ಗಳಿಂದ ಕುಟೀರಗಳನ್ನು ಸ್ಥಾಪಿಸಿ, ಉಚಿತವಾಗಿ ಸೇವೆಯ ರೂಪದಲ್ಲಿ ನಾನಾ ಬಗೆಯ ಊಟೋಪಚಾರದ ವ್ಯವಸ್ಥೆ
ಮಾಡಿರುತ್ತಾರೆ. ಆ ಸೇವೆಯ ಪರಿ ಮಹೋನ್ನತ.