Monday, 25th November 2024

ವೈವಿಧ್ಯಮಯ ಜೀವಿಗಳಿಗೆ ಆಶ್ರಯ – ಅಮೇಜಿಂಗ್‌ ಪೆಟ್‌ ಪ್ಲಾನೆಟ್‌

ಲಕ್ಷ್ಮೀಕಾಂತ್‌ ಎಲ್‌.ವಿ

ವಿವಿಧ ದೇಶಗಳ ಪ್ರಾಣಿ ಪಕ್ಷಿಗಳನ್ನು ಒಂದೇ ಜಾಗದಲ್ಲಿ ನೋಡುವ ಅವಕಾಶ ಇಲ್ಲಿದೆ. ಅಮಾಯಕ ಪ್ರಾಣಿಗಳನ್ನು ನೋಡುವ, ಮುಟ್ಟಿ ಮೈದಡವುವ ಮುದವೇ ವಿಶಿಷ್ಟ ಅನುಭವ.

ಆಫ್ರಿಕಾದ ಹೆಬ್ಬಾವು, ವಿವಿಧ ಜಾತಿಯ ಪಕ್ಷಿಗಳು, ವಿಧವಿಧದ ಗಿಳಿಗಳು, ಬಾತು ಕೋಳಿ, ವಿದೇಶದ ಕೋಳಿಗಳು, ವಿದೇಶದ ನವಿಲು, ಯೂರೋಪಿನ ಮುಂಗುಸಿ, ಮೊಲ, ಇಗ್ವಾನಾ ಎಂಬ ವಿಶೇಷ ಉಡಗಳು, ಸೈಬೀರಿಯಾದ ಮುಂಗುಸಿ ಮೊದಲಾದ ಐವತ್ತಕ್ಕೂ ಹೆಚ್ಚು ಬಗೆಯ ಪ್ರಾಣಿ ಪಕ್ಷಿಗಳನ್ನು ಒಂದೇ ಸೂರಿ ನಡಿಯಲ್ಲಿ, ಇಲ್ಲೇ ಸನಿಹದ ಊರೊಂದರಲ್ಲಿ ನೋಡಬಹುದು.

ಎಲ್ಲಿ ಅಂತೀರಾ? ನಿಮ್ಮೆಲ್ಲರ ಚಿತ್ತ ಮೈಸೂರಿನ ಮೃಗಾಲಯದತ್ತ ಹರಿಯುತ್ತದೆ ಅಲ್ವಾ. ಆದರೆ ನಾನೀಗ ಹೇಳಹೊರಟಿರುವುದು ಉತ್ತರ ಕನ್ನಡದ ಶಿರಸಿ-ಬನವಾಸಿ ರಸ್ತೆಯಲ್ಲಿರುವ ‘ಅಮೇಜಿಂಗ್ ಪೆಟ್ ಪ್ಲಾನೆಟ್’ ಕುರಿತು.

ಹಾದಿಬೀದೀಲಿ ಗಾಯವಾದ ಪ್ರಾಣಿ ಪಕ್ಷಿಗಳು ಬಹುತೇಕವಾಗಿ ಅನಾಥವಾಗಿ ಯೇ ಉಳಿದುಬಿಡುತ್ತವೆ. ಬಹುತೇಕವು ಸಾವಿನ ದಾರಿಗೆ ಸಾಗಿದ್ದನ್ನು ಕಾಣ ಬಹುದು. ಆದರೆ ಪೆಟ್ ಅಮೇಜಿಂಗ್ ಪ್ಲಾನೆಟ್‌ನಲ್ಲಿ ಮಾತ್ರ ಚಿಕಿತ್ಸೆಗಾಗಿ ಬಂದ ಗಾಯಗೊಂಡ ಪ್ರಾಣಿ ಪಕ್ಷಿಗಳು ಇದೀಗ ಪ್ಲಾನೆಟ್ ಸದಸ್ಯರಾಗಿಬಿಟ್ಟಿವೆ.

ಉದ್ಯಾನದಲ್ಲಿ ಪ್ರಾಣಿಗಳು
ಉತ್ತರ ಕನ್ನಡದ ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ಪೆಟ್ ಅಮೇಜಿಂಗ್ ಪ್ಲಾನೆಟ್ ರೂಪುಗೊಂಡಿದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಈ ಕೇಂದ್ರ ಆಶ್ರಯ ತಾಣವಾಗಿದೆ. ಪ್ರಾಣಿಗಳು ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದ ಸುದ್ದಿ ತಿಳಿದ ತಕ್ಷಣ ಅಲ್ಲಿಗೆ ಧಾವಿಸುವ ರಾಜೇಂದ್ರ ಸಿರ್ಸಿಕರ್ ಅವರು ಅವುಗಳಿಗೊಂದು ನೆಲೆ ಒದಗಿಸುವ ಉದ್ದೇಶದಿಂದ ಸೂರಜ್ ಸಿರ್ಸಿಕರ್ ನೇತೃತ್ವದ ಪದ್ಮ ಟ್ರಸ್ಟ್‌ ಅಡಿಯಲ್ಲಿ ಈ ಉದ್ಯಾನವನ್ನು ಆರಂಭಿಸಿದ್ದಾರೆ.

ಈ ಪುನವರ್ಸತಿ ಕೇಂದ್ರದಲ್ಲಿ ಈಗ ಕುದುರೆ, ಹಿಮದ ಚೀನಾ ಆಡು, ಅಮೆಜಾನ್ ಕಾಡಿನ ಗಿಳಿ, ಮೊಲ ಸೇರಿದಂತೆ ಹಲವು ಜೀವಿ ಗಳು ಚಿಕಿತ್ಸೆ ಪಡೆಯುತ್ತಿವೆ. ಹಲವಾರು ಪ್ರಾಣಿ ಪಕ್ಷಿಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿವೆ. ಹಲವು ಪ್ರಾಣಿ ಪಕ್ಷಿಗಳನ್ನು ಹೊರ ರಾಜ್ಯ ವಿದೇಶಗಳಿಂದಲೂ ತಂದಿದ್ದು ನೋಡುಗರಿಗೆ ಸಂತಸವನ್ನು ಉಂಟುಮಾಡುತ್ತಿದೆ.

ಪ್ಲಾನೆಟ್‌ನಲ್ಲಿ ದಶಕದಿಂದ ಅನಾಥ ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, 1,600ಕ್ಕೂ ಹೆಚ್ಚು ಆಕಳು, ನಾಯಿ, ಕುದುರೆ,
ಕಾಡುಬೆಕ್ಕು, ಪಾರಿವಾಳ, ಗೂಬೆ, ಕಾಗೆ ಎಲ್ಲವನ್ನೂ ಆರೈಕೆ ಮಾಡಲಾಗುತ್ತಿದೆ. ಈ ಮುಂಚೆ ನಿರ್ದಿಷ್ಟ ಜಾಗವಿಲ್ಲದ ಕಾರಣ
ಗಾಯಗೊಂಡ ಪ್ರಾಣಿಗಳಿಗೆ ರಸ್ತೆಯ ಮೇಲೆಯೇ ಚಿಕಿತ್ಸೆ ನೀಡಲಾಗುತ್ತಿತ್ತು; ಈ ಕೊರತೆ ನೀಗಿಸಲು ಪ್ಲಾನೆಟ್ ಆರಂಭಿಸಿದೆ
ಎಂದು ಸಿರ್ಸಿಕರ್ ಹೇಳುತ್ತಾರೆ.

ಚಿಕಿತ್ಸೆ ಪಡೆಯುವ ಪ್ರಾಣಿಗಳು ಗುಣಮುಖವಾದ ಮೇಲೆ ಪುನಃ ಅವುಗಳನ್ನು ನಿಸರ್ಗದ ಮಡಿಲಿಗೆ ಸೇರಿಸಲಾಗುತ್ತದೆ. ಇಲ್ಲಿ
ಆಶ್ರಯ ಪಡೆದಿರುವ ಪ್ರಾಣಿಗಳ ಸೇವೆಗೆ ನೆರವು ನೀಡುವವರು ಕಡಿಮೆ. ಹೀಗಾಗಿ ಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟ. ಆದ್ದರಿಂದ
ಉದ್ಯಾನದ ಪ್ರವೇಶಕ್ಕೆೆ 50 ರೂಪಾಯಿ ದರ ನಿಗದಿಪಡಿಸಿದ್ದು, ಈ ಹಣವನ್ನು ಪ್ರಾಣಿಗಳ ಚಿಕಿತ್ಸೆಗೆ ಹಾಗೂ ಆಹಾರಕ್ಕಾಗಿ ಬಳಸ ಲಾಗುತ್ತದೆ.

ಕುತ್ತಿಗೆಯ ಸುತ್ತ ಹೆಬ್ಬಾವು!
ಈ ಪ್ಲಾನೆಟ್ ಒಂಥರಾ ಮನಸ್ಸಿಗೆ ಮುದ ನೀಡುವ ಸ್ಥಳವೂ ಹೌದು. ಇಲ್ಲಿನ ಪ್ರಾಣಿಗಳ ಬಗ್ಗೆ ಮುಖ್ಯಸ್ಥರು ಮತ್ತು ಓರ್ವ
ಗೈಡ್ ಸುಂದರವಾದ ವಿವರಣೆ ನೀಡುತ್ತಾರೆ. ಪರಿಚಿತ ಅಲ್ಲದ ಹಲವು ಪ್ರಾಣಿ ಪಕ್ಷಿಗಳು ಇಲ್ಲಿ ಇರುವುದರಿಂದ, ಮಾರ್ಗ
ದರ್ಶಿಯ ಕಥನವನ್ನು ಕೇಳುವುದು ಮುದ ನೀಡುತ್ತದೆ. ಗಿಳಿಗಳು ಕೈಮೇಲೆ ಆಟ ಆಡುತ್ತವೆ. ಹೆಬ್ಬಾವನ್ನು ಹಿಡಿದುಕೊಂಡು ಕುತ್ತಿಗೆಗೆ ಸುತ್ತಿಕೊಳ್ಳಬಹುದು.

ಅದೇ ರೀತಿ ಗಿಣಿ ಹಾಗೂ ಪಾರಿವಾಳಗಳಿಗೆ ಆಹಾರಗಳನ್ನು ನಿಮ್ಮ ಕೈಯಿಂದಲೇ ಕೊಡಬಹುದು. ಅಲ್ಲದೇ ಇವುಗಳ ಜೊತೆ ಸೆಲ್ಪಿ ಕೂಡ ತೆಗೆಸಿಕೊಳ್ಳಬಹುದು. ಸಾಮಾನ್ಯ ಮೃಗಾಲಯಗಳಿಗಿಂತ ಇದು ವಿಭಿನ್ನವಾಗಿದೆ. ಬೇರೆ ಬೇರೆ ದೇಶದ, ಖಂಡಗಳ ಪಕ್ಷಿ, ಪ್ರಾಣಿಗಳನ್ನು ನೀವಿಲ್ಲಿ ನೋಡಬಹುದು. ಆದರೆ ಇವೆಲ್ಲವೂ ಕೂಡ ಅನಾಥ ಹಾಗೂ ಚಿಕಿತ್ಸೆಗೊಳಗಾದ ಪ್ರಾಣಿ ಪಕ್ಷಿಗಳು ಎಂಬುದು ವಿಶೇಷ.

ಶಿರಸಿಯ ಪ್ರವಾಸಿ ತಾಣ
ಸರ್ಕಾರದಿಂದ ಸಹಾಯಧನ ಪಡೆಯದೇ, ತನ್ನ ಸ್ವಂತ ಸಂಪನ್ಮೂಲಗಳ ಮೂಲಕ ಉತ್ತಮವಾಗಿ ಈ ಪೆಟ್ ಪ್ಲಾನೆಟ್
ನಡೆಯುತ್ತಿದೆ. ಶಿರಸಿಗೆ ಇದಕ್ಕಾಗಿಯೇ ಅಂತ ಬಂದು ಈ ವಿಶೇಷವಾದ ಪೆಟ್ ಪ್ಲಾನೆಟ್ ನೋಡುವಂತಹ ಒಂದು ಸುಂದರ
ಸ್ಥಳವಿದು. ಸರ್ಕಾರ ಹಾಗೂ ದಾನಿಗಳು ಈ ಪ್ಲಾನೆಟ್‌ಗೆ ಸಹಾಯ ಮಾಡಿದಲ್ಲಿ ಈ ಪೆಟ್ ಪ್ಲಾನೆಟ್ ರಾಜ್ಯಮಟ್ಟದಲ್ಲೂ ಹೆಸರು
ಮಾಡುವುದರಲ್ಲಿ ಸಂಶಯವಿಲ್ಲ. ಒಟ್ಟಾರೆ ಪ್ರಾಣಿಪ್ರಿಯ ವೈದ್ಯರೊಬ್ಬರ ಉತ್ಸಾಹದಿಂದ ಒಂದೆಡೆ ತೊಂದರೆಯಲ್ಲಿರೋ
ಪ್ರಾಣಿ ಪಕ್ಷಿಗಳಿಗೆ ಚಿಕಿತ್ಸೆ ಸಿಕ್ಕಿದೆ.

ಇನ್ನೊಂದೆಡೆ ಈ ಪ್ರಾಣಿಗಳನ್ನು ಕೇವಲ ಮೃಗಾಲಯದಲ್ಲಿ ಮಾತ್ರ ನೋಡಬೇಕಾಗಿತ್ತು; ಇದೀಗ ಇಲ್ಲಿಯೂ ನೋಡೋ ಸಂಭ್ರಮ ನೋಡುಗರದ್ದು. ಈ ವಿಶೇಷ ಪ್ರಯತ್ನ ಮಾಡ್ತಿರೋ ಸಿರ್ಸಿಕರ್ ಕಾರ್ಯ ಇತರರಿಗೂ ಮಾದರಿಯಾಗಿದೆ.