Monday, 25th November 2024

ಯುರೋಪಿನ ಆರಂಜರಿಗಳು

ಡಾ.ಉಮಾಮಹೇಶ್ವರಿ ಎನ್‌.

ಹದಿನೇಳನೆಯ ಶತಮಾನದಲ್ಲಿ ರೂಪುಗೊಂಡ ಆರೆಂಜರಿಗಳು ಯುರೋಪಿನ ಕೆಲವು ನಗರಗಳ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು. ಕಿತ್ತಳೆ ಮೊದಲಾದ ಹಣ್ಣುಗಳನ್ನು ಬೆಳೆಯಲು ಉಪಯೋಗವಾಗುವ ಆರೆಂಜರಿಗಳನ್ನು ನೋಡುವ ಅನುಭವ ವಿಶಿಷ್ಟ.

ಹಳದಿ ಬಣ್ಣದ ಹುಳಿ ಸಿಹಿ ರುಚಿಗಳ ಮಿಶ್ರ ರುಚಿ ಇರುವ ಕಿತ್ತಳೆ ಹಣ್ಣಿನ ಪರಿಮಳ- ಸ್ವಾದಕ್ಕೆ ಮಾರು ಹೋಗದವರು ಯಾರಿದ್ದಾರೆ? ಅದೇ ತರಹ ನಿಂಬೆಹಣ್ಣು ಮೂಸಂಬಿಗಳೂ ಊಟದ ಮೇಜಿನ ಮೇಲೆ, ಮನೆಮದ್ದುಗಳ ಸಾಲಿನಲ್ಲಿ ತಮ್ಮದೇ ಸ್ಥಾನ ಪಡಕೊಂಡಿವೆ. ಈ ಜಾತಿಯ ಹಣ್ಣುಗಳು ಹದಿ ನೇಳನೇ ಶತಮಾನದ ಮೊದಲು ಯುರೋಪ್‌ನಲ್ಲಿ ವ್ಯಾಪಕವಾಗಿ ಲಭ್ಯವಿರ ಲಿಲ್ಲ.

ಚಳಿಗಾಲದ ಕೆಲವು ತಿಂಗಳುಗಳಲ್ಲಿ ಹಿಮಪಾತದಿಂದಾಗಿ ಕಿತ್ತಳೆ ಹಾಗೂ ಆ ಜಾತಿಯ ಇತರ ಮರಗಳು ಬದುಕಿ ಹಣ್ಣು ನೀಡುವುದು ಕಷ್ಟ ಸಾಧ್ಯವಾಗಿತ್ತು. ಮೊದಲಿಗೆ ಕಹಿ ಸ್ವಾದವಿರುವ ಕಿತ್ತಳೆಗಳು ಯುರೋಪಿಗೆ ಪರಿಚಯಿಸಲ್ಪಟ್ಟವು. ನಂತರ ಸಿಹಿ ರುಚಿಯ ಕಿತ್ತಳೆಯ ಗಿಡಗಳೂ, ಅದೇ ಜಾತಿಯ ಇತರ ಸದಸ್ಯ ಸಸ್ಯಗಳೂ ಆಮದಾದವು.

ಪ್ರತಿಕೂಲ ಹವಾಮಾನದಲ್ಲಿ ಇವನ್ನು ಬೆಳೆಸಲು ಹಾಗೂ ಹಣ್ಣುಗಳನ್ನು ಪಡೆಯಲು ಹೊಸ ವಿಧಾನಗಳನ್ನು ಕಂಡು ಹಿಡಿಯ ಲಾಯಿತು. ಮರಗಳನ್ನು ಸ್ಥಳಾಂತರಗೊಳಿಸಬಹುದಾದ ಸಾಕಷ್ಟು ದೊಡ್ಡದಾದ ಕುಂಡಗಳಲ್ಲಿ ನೆಟ್ಟು ಬೆಳೆಸುವುದು. ಚಳಿಗಾಲ ಶುರುವಾಗುವ ಮೊದಲು ಅವುಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾದ ಬೆಚ್ಚನೆಯ ಕೋಣೆಗೆ ಸ್ಥಳಾಂತರಿಸುವುದು. ಸರಿಯಾದ ತಾಪಮಾನವನ್ನು ಕಾಯ್ದುಕೊಂಡಾಗ ಹಣ್ಣುಗಳ ಇಳುವರಿ ಸತತವಾಗಿ ಇರುತ್ತಿತ್ತು. ಚಳಿಗಾಲದಲ್ಲಿ ಕಿತ್ತಳೆ ಜಾತಿಯ ಮರಗಳ ಆರೈಕೆ ಮಾಡುವ ಸೌಧಗಳಿಗೆ ಆರೆಂಜರಿ ಎಂಬ ನಾಮಧೇಯ ಪ್ರಚಲಿತವಾಯಿತು.

ಅರಮನೆಯ ಅವಿಭಾಜ್ಯ ಅಂಗ
17 ರಿಂದ 19 ನೇ ಶತಮಾನಗಳ ಮಧ್ಯದಲ್ಲಿ ಯುರೋಪಿನ ಆಢ್ಯರ ಅರಮನೆ, ಬಂಗಲೆಗಳಲ್ಲಿ ಆರೆಂಜರಿಗಳು ಅವಿಭಾಜ್ಯ ಅಂಗ ವಾಗಿದ್ದವು. ಕಾಲಾಂತರದಲ್ಲಿ ಸಿಟ್ರಸ್ ಹಣ್ಣುಗಳ ಗಿಡಗಳಲ್ಲದೆ ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಆಮದಾದ ಅಪರೂಪದ ಗಿಡಗಳು ಇವುಗಳಲ್ಲಿ ಸ್ಥಾನ ಪಡಕೊಂಡವು.

ಕಿತ್ತಳೆ ಹಣ್ಣು ವಿರಳವಾಗಿದ್ದಾಗ, ತುಟ್ಟಿಯಾಗಿದ್ದಾಗ ಅತಿಥಿಗಳಿಗೆ ಕೊಡುವುದು ಶ್ರೀಮಂತರ ಮನೆಗಳಲ್ಲಿ ವಿಶೇಷವಾಗಿತ್ತು. ಹಣ್ಣುಗಳನ್ನು ಬಿಡಿಸಿ ಚಿಕ್ಕ ಚಿಕ್ಕ ತುಂಡುಗಳನ್ನು ಲೆಕ್ಕಮಾಡಿ ಕೊಡುತ್ತಿದ್ದುದೂ ಇದೆಯಂತೆ. ಆಮದಾಗುವ ಸಿಟ್ರಸ್ ಹಣ್ಣುಗಳು ಹಾಗೂ ಅನಾನಸುಗಳು ಯಥೇಚ್ಛವಾಗಿ ಹಾಗೂ ಅಗ್ಗವಾಗಿ ದೊರೆಯತೊಡಗಿದಾಗ ಈ ಸೌಧಗಳು ಅಲಂಕಾರಿಕ ಗಿಡಗಳನ್ನು ಇಡಲು ಉಪಯೋಗವಾದವು.

ಇಟೆಲಿಯ ರೆನಿಸೆನ್ಸ್‌ ಉದ್ಯಾನಗಳಲ್ಲಿ ಮೊದಲಿಗೆ ಇದರ ಆವಿಷ್ಕಾರವೆನ್ನ ಲಾಗುತ್ತದೆ. ಗಾಜು ತಯಾರಿಸುವ ಉದ್ಯಮ ಇಲ್ಲಿ ಮೊದಲು ಅಭಿವೃದ್ಧಿ ಆಗಿದ್ದರಿಂದ ಸಾಕಷ್ಟು ಗಾಜು ಹೊದಿಸಿದ ಆರೆಂಜರಿಗಳನ್ನು ನಿರ್ಮಿಸಲು ಲಭ್ಯವಾಯಿತು. ಇದರಿಂದಾಗಿ ಗಿಡಗಳಿಗೆ ಬೇಕಾಗುವ ಉಷ್ಣತೆಯನ್ನು ಆರೆಂಜರಿಗಳಲ್ಲಿ ಕಾಪಾಡಲು ಸಾಧ್ಯವಾಯಿತು. ಚಳಿ ಪ್ರದೇಶಗಳಲ್ಲಿ ಉಷ್ಣತೆಯ ಕೊರತೆಯಿಮದ ಗಿಡಗಳು ಕೊರಗುತ್ತಿದ್ದವು. ಆದ್ದರಿಂದ ಆರೆಂಜರಿಯಲ್ಲಿ ಹಣ್ಣಿನ ಗಿಡ ಬೆಳೆಸುವುದು ಸುಲಭ ಎನಿಸಿತು.

ಡಚ್ಚರೂ ಆರೆಂಜರಿಗಳ ಕಿಟಕಿಗಳಲ್ಲಿ ಗಾಜನ್ನು ಉಪಯೋಗಿಸತೊಡಗಿದರು. ಕೆಲವು ಆರೆಂಜರಿಗಳಲ್ಲಿ ಕಟ್ಟಿಗೆ ಬೆಂಕಿಯಿಂದ
ಉಷ್ಣತೆ ಕಾಪಾಡಿಕೊಂಡರೆ ಮತ್ತೆ ಕೆಲವು ಇದೇ ಕಟ್ಟಿಗೆಯನ್ನು ಉಪಯೋಗಿಸುವ ‘ಒಲೆ’ಗಳನ್ನು ಉಪಯೋಗಿಸಿ ಉಷ್ಣತೆ
ಕಾಪಾಡಿಕೊಂಡವು. ಹಣವಂತರ ಆಢ್ಯತೆಯ ಪ್ರತೀಕವಾಗಿ ಬಹಳಷ್ಟು ಆರೆಂಜರಿಗಳು ನಿರ್ಮಾಣವಾದವು. 19 ನೇ ಶತಮಾನದ ಮೊದಲ ಭಾಗದಲ್ಲಿ ಗಾಜಿನ ಛಾವಣಿಯಿಂದ ನೇರವಾಗಿ ಸೂರ್ಯನ ಬೆಳಕು ಕೊಠಡಿಗಳ ಒಳಕ್ಕೆ ಬೀಳುವಂತೆ ನೋಡಿಕೊಳ್ಳ ಲಾಯಿತು. ಈಗಿನ ಕಾಲದಲ್ಲಿ ಇದು ಸರಳವಾಗಿ ‘ಹಸಿರು ಮನೆ’ ಅಥವಾ ‘ಗ್ರೀನ್ ಹೌಸ್’ ಎಂದು ಕರೆಯಲ್ಪಡುತ್ತದೆ.

ಬಿಸಿಗಾಗಿ ಅಗ್ಗಿಷ್ಟಿಕೆ
ಇಟಲಿಯ ಪಡುವಾ ಎಂಬಲ್ಲಿ ಸಾ.ಶ.1545ರಲ್ಲೇ ಆರೆಂಜರಿಯನ್ನು ನಿರ್ಮಿಸಿದ ದಾಖಲೆಗಳಿವೆ. ಅವು ನೋಡಲು ಸರಳ ಕಟ್ಟಡ ಗಳು. ಆದರೆ ಹಣ್ಣಿನ ಗಿಡ ಬೆಳೆಸುವ ಜಾಗಗಳಾಗಿದ್ದವು. ಅಲ್ಲಿ ಬೆಚ್ಚನೆಯ ವಾತಾವರಣ ನಿರ್ಮಿಸಲು, ಅಗ್ಗಿಷ್ಟಿಕೆಯ ಬೆಂಕಿಯನ್ನು ಉರಿಸಲಾಗುತ್ತಿತ್ತು. ಇಂಗ್ಲೆಂಡಿನ ಮೊದಲ ಆರೆಂಜರಿಯು 1628ರಲ್ಲಿ ನಿರ್ಮಾಣಗೊಂಡಿತು.

ಲಂಡನ್‌ನಲ್ಲಿರುವ ಕಿಂಗ್‌ಸ್ಟನ್ ಅರಮನೆಯಲ್ಲಿ 1761ರಲ್ಲಿ ನಿರ್ಮಾಣಗೊಂಡ ಆರೆಂಜರಿಯು, ಇಂದು ಉಳಿದುಕೊಂಡಿರುವ ಅತಿ ಪುರಾತನ ಆರೆಂಜರಿ ಎನಿಸಿದೆ. ಇದನ್ನು ವಿನ್ಯಾಸಗೊಳಿಸಿದವರು ವಿಲಿಯಂಸ್ ಚೇಂಬರ್ಸ್ ಎಂಬಾತ. ಅದನ್ನು ನಿರ್ಮಿಸಿ ದಾಗ, ಬ್ರಿಟನ್‌ನಲ್ಲಿರುವ ಅತಿ ದೊಡ್ಡ ಗಾಜಿನ ಮನೆ ಅದಾಗಿತ್ತು. ಈ ರೀತಿಯ ಗ್ಲಾಸ್ ಹೌಸ್‌ಗಳು ಉಷ್ಣತೆಯನ್ನು ಕಾಪಾಡಲು ನೆರವಾಗುತ್ತಿದ್ದವು. ಈಗಿನ ಕಾಲದ ಆರೆಂಜರಿಯಲ್ಲಿ, ಹಣ್ಣಿನ ಗಿಡಗಳ ಜತೆಯಲ್ಲೇ, ಅಣಬೆಯನ್ನೂ ಬೆಳೆಯುವು ದುಂಟು.