Monday, 25th November 2024

ಸೈನಿಕರ ನೆಚ್ಚಿನ ರೈಲುಗಳು

ಮೇಜರ್ ಡಾ ಕುಶ್ವಂತ್ ಕೋಳಿಬೈಲು

ಏಪ್ರಿಲ್ ತಿಂಗಳಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿತ್ತು. ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು.

ಏಪ್ರಿಲ್ ತಿಂಗಳ ಹದಿನೇಳು ಮತ್ತು ಹದಿನೆಂಟರಂದು ಭಾರತೀಯ ರೈಲ್ವೆ, ಸೈನಿಕರ ತುರ್ತು ಪ್ರಯಾಣಕ್ಕಾಗಿ ಬೆಂಗಳೂರಿನಿಂದ ಜಮ್ಮುವಿಗೆ ಮತ್ತು ಅಸ್ಸಾಂ ರಾಜ್ಯಕ್ಕೆ ವಿಶೇಷ ರೈಲನ್ನು ನಿಯೋಜಿಸಿತ್ತು. ಅಸಲಿಗೆ ರೈಲ್ವೆೆ ಮತ್ತು ನಮ್ಮ ಸೇನೆಯ ಜುಗಲುಬಂದಿ ಇಂದು ನಿನ್ನೆಯದಲ್ಲ. ಭಾರತದ ರೈಲು ಜಾಲ ಬಹಳ ವಿಸ್ತಾರವಾಗಿ ಅನೇಕ ರಾಜ್ಯದಲ್ಲಿ ಹಬ್ಬಿಕೊಂಡಿದೆ.

ಪ್ರಸ್ತುತ ದಶಕದಲ್ಲಿ ವಾಯುಯಾನ ಹೆಚ್ಚು ಜನಪ್ರಿಯ ಮತ್ತು ಕೈಗೆಟುವಂತಿರುವ ಕಾರಣ ಸೈನಿಕರು ರಜೆಯ ಮೇಲೆ ಬರುವಾಗ
ವಾಯುಯಾನದ ಕಡೆಗೆ ಒಲವನ್ನು ತೋರುತ್ತಾರೆ. ಆದರೆ ಹಳಬರಲ್ಲಿ ಕೇಳಿ, ಜಮ್ಮುವಿನಿಂದ ಬೆಂಗಳೂರಿಗೆ ಬರಲು ಎರಡು
ಮೂರು ದಿನಗಳ ಕಾಲ ರೈಲಿನಲ್ಲಿ ಕುಳಿತವರೂ ಇದ್ದಾರೆ. ಕಳೆದ ಶತಮಾನದ ಉದ್ದಕ್ಕೂ ಭಾರತೀಯ ಸೇನೆಯ ದೇಶವ್ಯಾಪಿ
ಸಂಚಾರ ರೈಲುಗಳನ್ನು ಅವಲಂಬಿಸಿತ್ತು. ವಿಶ್ವಯುದ್ಧದ ಸಮಯದಲ್ಲಿ ಸೇನೆಯ ಒಂದು ಇಡೀ ರೆಜಿಮೆಂಟ್ ಒಂದು  ಟ್ರೈನಿ ನೊಳಗಡೆ ತುಂಬಿ ವಿಶ್ವಪರ್ಯಟನೆ ಮಾಡಿದ ದಿನಗಳನ್ನು ಜನರು ನೋಡಿದ್ದಾರೆ.

ಸೇನೆಯ ಸೇವೆಗಾಗಿ ವಿಶೇಷ ರೈಲನ್ನು ನಿಗದಿ ಪಡಿಸುವುದು ಬಹಳ ಹಳೆಯ ಸಂಪ್ರದಾಯ. ಈಗಲೂ ಒಂದು ರೆಜಿಮೆಂಟ್
ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವರ್ಗವಾಗುವ ಸಮಯದಲ್ಲಿ ಅಲ್ಲಿರುವ ಎಂಟುನೂರು ಸೈನಿಕರು ಮಾತ್ರ
ಹೋಗುವುದಿಲ್ಲ. ತಮ್ಮ ಸರಕು ಸರಂಜಾಮು, ರೆಜಿಮೆಂಟಿನ ಬೆಳ್ಳಿ ಸಾಮಾನು, ಗೌರವ ಫಲಕ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿ ಅವನ್ನು ಜೋಪಾನವಾಗಿ ರೈಲಿನ ಬೋಗಿಗಳಲ್ಲಿ ಸಾಗಿಸುತ್ತಾರೆ.

ಕರ್ನಾಟಕದವರು ರೈಲ್ವೆ ಪ್ರಯಾಣ ಮಾಡುವುದು ಕಮ್ಮಿ. ಅದರೆ ಉತ್ತರ ಭಾರತದ ಬಯಲು ಸೀಮೆಯವರು ರೈಲ್ವೆೆ ಪ್ರಯಾಣ ವನ್ನೇ ಅವಲಂಬಿಸಿದ್ದಾರೆ. ಬೆಟ್ಟಗುಡ್ಡ ಪ್ರದೇಶದ ಸೈನಿಕರಾದ ಕುಮಾವನೀ, ಗಡವಾಲ್ ಪ್ರದೇಶದವರು ಎಷ್ಟು ಹಿಂದುಳಿದ ಗ್ರಾಮೀಣ ಭಾಗದವರೆಂದರೆ ಅವರಲ್ಲಿ ಹೆಚ್ಚಿನವರು ರೈಲನ್ನು ನೋಡುವುದು ಸೇನೆಗೆ ಸೇರಿದ ನಂತರದ ದಿನಗಳಲ್ಲಿ.
ಟೆಲಿಪೋನ್ ಸಂಪರ್ಕ ಮತ್ತು ಸಾಮಾಜಿಕ ಜಾಲತಾಣಗಳು ಇಲ್ಲದ ಕಾಲಘಟ್ಟದಲ್ಲಿ ಅನೇಕ ಬಾರಿ ಒಟ್ಟಿಗೆ ಕೆಲಸ ಮಾಡಿದ್ದ
ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಆಗುತ್ತಿರಲಿಲ್ಲ.

ಜೀವನವೆಂಬ ನಿಲ್ದಾಣದಲ್ಲಿ ನಾವೆಲ್ಲ ಪ್ರಯಾಣಿಕರು ಎಂಬ ಮಾತಿದ್ದ ಸೇನೆಯಲ್ಲಿ ನಮ್ಮ ಸ್ನೇಹ ಹೆಚ್ಚೆಂದರೆ ರೈಲ್ವೆ ನಿಲ್ದಾಣದ ತನಕ ಎಂಬ ಮಾತುಗಳು ಚಾಲ್ತಿಯಲ್ಲಿದ್ದವು. ಸೈನಿಕರು ವರ್ಷಕ್ಕೆ ಎರಡು ಬಾರಿ ರಜೆಯಲ್ಲಿ ಊರಿಗೆ ಬರಲು ರೈಲು ಪ್ರಯಾಣ ಉಚಿತ. ರೆಜಿಮೆಂಟ್ ನೀಡುವ ವಾರೆಂಟ್ ಎಂಬ ಚೀಟಿಯನ್ನು ತೋರಿಸಿ ತಮಗೆ ಹಾಗು ತಮ್ಮ ಮನೆಯವರಿಗೆ ಟಿಕೆಟ್ ಮುಂಗಡವಾಗಿ ಬುಕ್ ಮಾಡುತ್ತಾರೆ. ಅನೇಕ ಬಾರಿ ಕೊನೆಯ ಕ್ಷಣದ ತನಕವೂ ಸೀಟು ವೈಟಿಂಗ್ ಲಿಸ್ಟಿನಲ್ಲಿದ್ದು ರಜೆಯಲ್ಲಿ ತೆರಳುವವರ ಎದೆಬಡಿತವನ್ನು ಹೆಚ್ಚಿಸುತ್ತಿರುತ್ತದೆ. ಒಂಟಿ ಪಯಣವಾಗಿದ್ದರೆ ಅನೇಕ ಬಾರಿ ಸೈನಿಕರು ಸೀಟಿಲ್ಲದೆ ನೆಲದ ಮೇಲೆ  ಕುಳಿತು ಪ್ರಯಾಣಿಸುವುದನ್ನು ನಾನು ನೋಡಿದ್ದೇನೆ. ಆದರೆ ಕುಟುಂಬದೊಂದಿಗೆ ಪ್ರಯಾಣಿಸುವಾಗ ಈ ಸಾಹಸ ಕಷ್ಟ. ಸೈನಿಕರ ರೈಲು ಪ್ರಯಾಣದಲ್ಲಿ ಸಹಕರಿಸಲು ಪ್ರಮುಖ ನಿಲ್ದಾಣದಲ್ಲಿ ಮೂವ್ಮೆಂಟ್ ಕಂಟ್ರೋಲ್ ಆಫೀಸ್ (ಎಂಸಿಒ) ಎಂಬ ಸೇನೆಯ ಕಚೇರಿ ಇರುತ್ತದೆ.

ರೈಲಿನಲ್ಲಿ ಪ್ರಯಾಣಿಸುವ ಸೈನಿಕರಿಗೆ ಯಾವದೇ ತೊಂದರೆಯಾದಲ್ಲಿ ಇವರು ನೆರವಿಗೆ ಬರುತ್ತಾರೆ. ಅವರ ಕೋಟಾದಲ್ಲಿ ಪ್ರತಿ ರೈಲಿನಲ್ಲಿ ಒಂದೆರಡು ಸೀಟುಗಳಿರುವ ಕಾರಣ ಕಡೇ ಘಳಿಗೆಯಲ್ಲಿ ತುರ್ತು ಕೆಲಸದ ಮೇಲೆ ರೈಲು ಹತ್ತುವವರಿಗೆ ಎಂಸಿಒ ಸಿಬ್ಬಂದಿ ದೇವದೂತರಿಗೆ ಸಮಾನ. ಮಿಲಿಟರಿವರ ಟ್ರಂಕಿನಲ್ಲಿ ಇರಬಹುದಾದ ರಮ್ ಬಾಟಲಿ ಕೂಡ ಹಲವಾರು ಬಾರಿ ರೈಲಿನಲ್ಲಿ ಸೀಟು ದಕ್ಕಿಸುವಲ್ಲಿ ಸಹಕಾರಿಯಾಗುವುದೆಂಬ ವಿಷಯ ಗೌಪ್ಯವೇನಲ್ಲ.

ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಯಾದ ಸಂದರ್ಭದಲ್ಲಿ ಸೇನೆಯ ಟ್ಯಾಂಕುಗಳು ಮತ್ತು ಮದ್ದು ಗುಂಡುಗಳನ್ನು
ಶೀಘ್ರವಾಗಿ ಭಾರತ ಪಾಕಿಸ್ತಾನದ ಪಶ್ಚಿಮ ಗಡಿಗೆ ತಲುಪಿಸಲು ಹಲವು ರೈಲುಗಳನ್ನು ಮೀಸಲಿಡಲಾಗುತ್ತಿತ್ತು. ಶಸ್ತ್ರಗಳನ್ನು ರೈಲಿ
ನಲ್ಲಿ ತುಂಬಿಕೊಂಡು ಗಡಿಗೆ ಸಾಗಿಸುವ ಪ್ರಕ್ರಿಯೆಯನ್ನು ಸೇನೆ ಪ್ರತಿವರ್ಷ ತಾಲೀಮು ನಡೆಸುತ್ತದೆ. ಯಾವ ರೈಲು ತಪ್ಪಿದರೂ
ಚಿಂತೆಯಿಲ್ಲ. ಆದರೆ ಯುದ್ಧದ ಸಮಯದಲ್ಲಿ ಯಾವುದೇ ಲೆಕ್ಕಾಾಚಾರ ತಪ್ಪುವಂತಿಲ್ಲ. ಯಾಕೆಂದರೆ ಅಲ್ಲಿ ಎರಡನೆಯ ಸ್ಥಾನ
ಪಡೆದವರಿಗೆ ಯಾವುದೇ ಬಹುಮಾನಗಳು ಇರುವುದಿಲ್ಲ.

ಕೊರಿಯಾ ಯುದ್ಧ
ರೈಲು ಮತ್ತು ಯುದ್ಧದ ವಿಷಯ ಬಂದಾಗ 1950ರಲ್ಲಿ ನಡೆದ ಸ್ವಾರಸ್ಯಕರವಾದ ಘಟನೆ ನೆನಪಿಗೆ ಬರುತ್ತದೆ. ಕೊರಿಯಾ ಯುದ್ಧ
ಉತ್ತುಂಗದಲ್ಲಿದ್ದ ಕಾಲ. ಭಾರತೀಯ ಸೇನೆಯ ಪ್ರಖ್ಯಾತ ಅರವತ್ತನೆಯ ಪ್ಯಾರ ಫೀಲ್ಡ್ ಹಾಸ್ಪಿಟಲ್ ಕರ್ನಲ್ ಡಾ ರಂಗರಾಜ್ ನೇತ್ರತ್ವದಲ್ಲಿ ಬ್ರಿಟಿಷ್ ಕಾಮವನ್‌ವೆಲ್ತ್‌ ಬ್ರಿಗೇಡಿಗೆ ಯುದ್ಧದಲ್ಲಿ ವೈದ್ಯಕೀಯ ನೆರವು ನೀಡಲು ನಿಯೋಜಿಸಲ್ಪಟ್ಟಿತ್ತು.

1950ರ ನವಂಬರ್ ತಿಂಗಳು. 60ನೇ ಪ್ಯಾರ ಫೀಲ್ಡ್‌ ಆಸ್ಪತ್ರೆ ಕೊರಿಯಕ್ಕೆ ಬಂದಿಳಿದು ಜಾಸ್ತಿ ದಿನಗಳಾಗಿರಲಿಲ್ಲ. ಅವರ ಸಾಗಾಟ
ಮತ್ತು ಪ್ರಯಾಣಕ್ಕೆ ವಾಹನಗಳೂ ನಿಗದಿಯಾಗಿರಲಿಲ್ಲ. ಕಮ್ಯುನಿಸ್ಟ್‌ ಸೇನೆಯ ಆಕ್ರಮಣ ಶುರುವಾದ ಕಾರಣ ತಾವು ನೆಲೆ ನಿಂತ ಜಾಗದಿಂದ ಹಿಮ್ಮೆಟ್ಟುವ ಸಮಯದಲ್ಲಿ ಕರ್ನಲ್ ಡಾ ರಂಗರಾಜ್ ನೇತೃತ್ವದ 60ನೇ ಪ್ಯಾರ ಫೀಲ್ಡ್ ಹಾಸ್ಪಿಟಲ್ ಕೈಗೊಂಡ ವಿನೂತನ ಕಾರ್ಯಚರಣೆ, ವಿಶ್ವದ ಮೆಚ್ಚುಗೆಯನ್ನು ಪಡೆಯಿತು. ತಮ್ಮ ವೈದ್ಯಕೀಯ ಸರಕು ಮತ್ತು ಯಂತ್ರಗಳನ್ನು ಅಲ್ಲಿಯೇ ಬಿಟ್ಟು ಹಿಂದೆ ಬಂದರೆ ತಮ್ಮ ಉಪಯುಕ್ತತತೆ ಇಲ್ಲವಾಗುವುದೆಂಬುದನ್ನು ಅರಿತ ಕರ್ನಲ್ ಡಾರಂಗರಾಜ್ ಮತ್ತು ಭಾರತೀಯ ಸೈನಿಕರು ತಮ್ಮ ಸಾಮಾನುಗಳನ್ನು ಅಲ್ಲಿನ ರೈಲು ನಿಲ್ದಾಣದಲ್ಲಿ ಅನಾಥವಾಗಿದ್ದ ಹಳೆಯ ರೈಲಿನಲ್ಲಿ ತುಂಬಿಕೊಂಡು ಸುರಕ್ಷಿತ ವಾದ ಪ್ರದೇಶಕ್ಕೆ ಹಿಂೆ ಸರಿದರು.

ಸಿಯೋಲ್ ನಗರದ ಹಾನ್ ನದಿಯ ಸೇತುವೆಯನ್ನು ಕಮ್ಯುನಿಸ್ಟ್‌ ಸೇನೆ ಉಡಾಯಿಸುವ ಕೆಲವೇ ಕ್ಷಣಗಳ ಹಿಂದಷ್ಟೆ ಕರ್ನಲ್ ರಂಗರಾಜ್ ತಂಡ ಇದ್ದ ರೈಲು ಸುರಕ್ಷಿತವಾಗಿ ವಾಪಾಸು ಮರಳಿತ್ತು. ಮುಂದಿನ ನಾಲ್ಕು ವರ್ಷಗಳ ಕಾಲ ಕೊರಿಯಾ ಯುದ್ಧದಲ್ಲಿ ಸೇನೆಗೆ ವೈದ್ಯಕೀಯ ನೆರವು ನೀಡಲು ಪ್ಯಾರ ಫೀಲ್ಡ್‌ ಹಾಸ್ಪಿಟಲ್ ತೋರಿಸಿದ ಶೌರ್ಯಕ್ಕೆ, ಅಲ್ಲಿ ಅವರು ಪಡೆದ ಎರಡು ಮಹಾವೀರ ಚಕ್ರ ಮತ್ತು ಆರು ವೀರ ಚಕ್ರಗಳು ಸಾಕ್ಷಿಯಾಗಿವೆ.