ಬಾಲಕೃಷ್ಣ ಎನ್.
ಕರ್ನಾಟಕದ ಹೆಮ್ಮೆಯ ಬಿಳಿಗಿರಿರಂಗನ ಬೆಟ್ಟಗಳಲ್ಲಿ ಪ್ರವಾಸಿಗರಿಗಾಗಿ ಹೊಸದೊಂದು ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ನಿಂತು 360 ಡಿಗ್ರಿ ನೋಟ ನೀಡುವ ‘ವರ್ಚುವಲ್ ರಿಯಾಲಿಟಿ ಹೆಡ್ ಸೆಟ್’ನ ಅವಕಾಶ ಇಲ್ಲಿ ದೊರೆಯಲಿದೆ. ಏನಿದು 360 ಡಿಗ್ರಿ ನೋಟ? ಓದಿ ನೋಡಿ.
ಯಾವ ದಿಕ್ಕಿಗೆ ನೋಡಿದರೂ ಗಿರಿ ಶಿಖರಗಳ ಜೋಡಣೆ, ದಿಗಿಲು ಹುಟ್ಟಿಸುವ ಕಾಡು ಮತ್ತು ಕಣಿವೆಗಳು. ಕಾನನದೊಳಗೆ ಪ್ರಾಣಿ-ಪಕ್ಷಿ ಸಂಕುಲದ ಲೋಕ. ಇವುಗಳ ನಡುವೆ ವಾಸಿಸುವ ಸೋಲಿಗರು. ಅದುವೇ ಬಿಳಿಗಿರಿರಂಗನ ಬೆಟ್ಟವೆಂಬ ವನ್ಯಜೀವಿ ಸಂರಕ್ಷಿತ ಪ್ರದೇಶ. ಬೆಟ್ಟದ ಪೂರ್ಣ ನೋಟ ಪ್ರವಾಸಿಗರಿಗೆ ಸಿಗಲಿದೆ 360 ಡಿಗ್ರಿನಲ್ಲಿ. 540 ಚದರ ಕಿ.ಮೀ. ವಿಸ್ತಾರವುಳ್ಳ ಈ ವನ್ಯಜೀವಿ ಸಂರಕ್ಷಿತ ಪ್ರದೇಶವು ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ನಡುವಿನ ಕೊಂಡಿಯಂತಿದ್ದು, ಈ ಸರಣಿಯು ಮುಂದೆ ಸತ್ಯಮಂಗಲ ರಕ್ಷಿತಾರಣ್ಯದೊಂದಿಗೆ ಬೆಸೆಯುತ್ತದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕು ಗಳಲ್ಲಿ ಹರಡಿಕೊಂಡಿರುವ ಈ ವನಪ್ರದೇಶದ ಮುಕುಟ ಮಣಿಯೇ ಬಿ.ಆರ್. ಹಿಲ್ಸ್. ಯಾವ ದಿಕ್ಕಿಗೆ ಹೋಗಿ ನೋಡಿದರೂ ಪ್ರಪಾತ, ಇಳಿಜಾರಿನ ತುಂಬಾ ದೊಡ್ಡ ಕಾನನ. ಅದನ್ನು ದಾಟಿ ಕಣ್ಣು ಹಾಯಿಸಿದರೆ ನೋಡಿದಷ್ಟೂ ಮುಗಿಯದ ಕಾಡು, ಬೆಟ್ಟ ಮತ್ತು ನೀಲಿ ನೀಲಿ ಅಂಬರ. ಸಂಪೂರ್ಣವಾಗಿ ಈ ಬೆಟ್ಟದ ಸೊಬಗು ಕಾಣಲು ಈಗ ಒಂದು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.
ವಿಶೇಷ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಬಿಳಿಗಿರಿರಂಗನಾಥ ಹುಲಿ ಯೋಜನೆ (ಬಿ.ಆರ್.ಟಿ.) ವ್ಯಾಪ್ತಿಯ ವಿವಿಧ ಪ್ರದೇಶ ಸೌಂದರ್ಯವನ್ನು 360 ಡಿಗ್ರಿ ಸುತ್ತಳತೆ ನೋಟವನ್ನು (ವರ್ಚುವಲ್ ರಿಯಾಲಿಟಿ ಹೆಡ್ ಸೆಟ್) ವಿಶೇಷ ಕನ್ನಡಕದ ಮೂಲಕ ಒಂದೆರಡು ತಿಂಗಳಲ್ಲೆ ಕಣ್ತುಂಬಿಕೊಳ್ಳಬಹುದು. ಇದೇ ಮೊದಲ ಬಾರಿಗೆ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನ ದ ಸ್ಪರ್ಶ ನೀಡಲಾಗುತ್ತಿದೆ. ಆಧುನೀಕರಣದ ಮೂಲಕ ಬಿ.ಆರ್. ಟಿ.ಗೆ ಹೊಸ ಆಯಾಮ ಕಲ್ಪಿಸಲು ಅರಣ್ಯಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಬಿಳಿಗಿರಿ ರಂಗನಬೆಟ್ಟದಲ್ಲಿರುವ ಮಾಹಿತಿ ಕೇಂದ್ರದಲ್ಲಿ ಇದನ್ನು ಇಡಲಾಗುವುದು. ಬೆಟ್ಟಕ್ಕೆ ಬರುವ ಭಕ್ತರು, ಪ್ರವಾಸಿಗರು ಕನಿಷ್ಠ ಶುಲ್ಕ ನೀಡಿ, ಹತ್ತು ನಿಮಿಷಗಳ ಕಾಲಾವಧಿಯ ಇರುವ 360 ಡಿಗ್ರಿ ಸುತ್ತಳತೆಯ ಈ ವರ್ಚುವಲ್ ರಿಯಾಲಿಟಿ ಹೆಡ್ ಸೆಟ್ ಮೂಲಕ ಬಿಳಿಗಿರಿಯ ಬೆಟ್ಟ ಶ್ರೇಣಿಯ ನೋಟವನ್ನು, ವೈಶಾಲ್ಯವನ್ನು ಕಣ್ತುಂಬಿಕೊಳ್ಳಬಹುದು.
ಸಾಮಾನ್ಯವಾಗಿ ಯಾವುದೇ ದೃಶ್ಯವನ್ನು ಒಂದೊಂದೇ ಕೋನದಲ್ಲಿ ಪ್ರತ್ಯೇಕವಾಗಿ ಫೋಟೋ ಮೂಲಕ ಸೆರೆ ಹಿಡಿದು ಕೊಳ್ಳುತ್ತೇವೆ. ಆದರೆ ಒಂದು ಪ್ರದೇಶದ ಸುತ್ತಲಿನ ಪರಿಸರವನ್ನು ಒಂದೇ ಫೋಟೊದಲ್ಲಿ ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಒಂದು ಕಟ್ಟಡವನ್ನು ಮುಂಭಾಗದಿಂದ ಮಾತ್ರ ನೋಡಬಹುದು. ಆದರೆ ಎಡ, ಬಲ ಬದಿ ಮತ್ತು ಹಿಂಬದಿ ಯಲ್ಲಿರುವ ದೃಶ್ಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ ನೂತನ ತಂತ್ರಜ್ಞಾನದಿಂದ ಕೂಡಿರುವ ಹೆಡ್ ಸೆಟ್ (ಕನ್ನಡಕ ಮಾದರಿ) ಹಾಕಿಕೊಂಡು ಅದರಲ್ಲಿರುವ ಬಟನ್ ತಿರುಗಿಸುತ್ತ ಹೋದಂತೆ 360 ಡಿಗ್ರಿ ವ್ಯಾಪ್ತಿಯ ಎಲ್ಲಾ ದೃಶ್ಯಗಳು ಕಾಣುತ್ತವೆ.
ನೈಜ ದೃಶ್ಯಾನುಭವ ಸಿಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಿಆರ್‌ಟಿ ವ್ಯಾಪ್ತಿಯ ಜೋಡಿಗೆರೆ, ಬಯಲೂರು ಪ್ರದೇಶಗಳ ಶೂಟಿಂಗ್ ನಡೆದಿದ್ದು, ಎಡಿಟಿಂಗ್ ಮಾಡಿ ಹೆಡ್‌ಸೆಟ್‌ಗೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ ಪ್ರದೇಶಗಳ ಶೂಟಿಂಗ್
ನಡೆಯುತ್ತಿದ್ದು, ಸದಸ್ಯದಲ್ಲೇ ಎಲ್ಲವೂ ಲಭ್ಯವಾಗಲಿದೆ.
ಸೋಲಿಗರ ಪಾಲಿನ ದೇವರು
ಬಿಳಿಗಿರಿರಂಗನ ಬೆಟ್ಟದ ಮೂಲ ನಿವಾಸಿಗಳು ಸೋಲಿಗರ ಅಧಿದೇವತೆ ರಂಗನಾಥ. ದಟ್ಟ ಕಾಡಿನ ನಡುವೆ ಬದುಕುತ್ತಿರುವ
ಇವರಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುತ್ತಿರುವುದು ಇವನೆ. ದೇವಾಲಯದಲ್ಲಿರುವ ಬೃಹತ್ ಗಾತ್ರದ ರಂಗನಾಥನ ಚಪ್ಪಲಿಯ ಆಶೀರ್ವಾದವೊಂದಿದ್ದರೆ ಮತ್ತೇನೂ ಬೇಡ.
ದೇವಾಲಯದಲ್ಲಿರುವ ಒಂದು ಅಡಿ, ಒಂಬತ್ತು ಇಂಚಿನ ಪೂರ್ಣ ಚರ್ಮದ ಪಾದುಕೆಗಳನ್ನು ತಲೆಗೆ ಮಟ್ಟಿಸಿಕೊಂಡು ಆಶೀರ್ವಾದ ಪಡೆದರೆ ಕಾಡುಪ್ರಾಣಿ ಗಳಿಂದ ರಕ್ಷಣೆ. ಸೋಲಿಗರ ಹಿತ ಕಾಯುವಲ್ಲಿ ಅರಣ್ಯಾಧಿಕಾರಿಗಳು ಚೂಣಿಯಲ್ಲಿದ್ದಾರೆ.
250 ಬಗೆಯ ಪಕ್ಷಿ ಸಂಕುಲ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪದ ಸೂಕ್ಷ್ಮ ವನ್ಯಜೀವಿಗಳಿವೆ. 250ಕ್ಕೂ ಹೆಚ್ಚು ಅಪರೂಪದ ಪಕ್ಷಿಗಳಿವೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಅಪರೂಪದ ಸಸ್ಯ ಪ್ರಭೇದಗಳಿವೆ. ‘ದೊಡ್ಡಸಂಪಿಗೆ’ಯಂಥ ಅಪರೂಪದ ಪವಿತ್ರ ಮರ, ಪೋಡುಗಳ ಸೋಲಿಗರ ಆದಿವಾಸಿ ಬದುಕು, ಕೆ.ಗುಡಿಯ ಆನೆ ಕ್ಯಾಂಪ್, ಬೆಟ್ಟದ ರಂಗನ ದರ್ಶನ ಇವೆಲ್ಲ ಒಟ್ಟಿಗೆ ಸಿಗುವುದು ಈ ಬೆಟ್ಟದಲ್ಲಿ ಮಾತ್ರ. ಆದರೆ, ಒಂದೇ ದಿನದಲ್ಲಿ ಹೋಗಿ ಬರುವವರಿಗೆ ಇಲ್ಲಿ ಹೆಚ್ಚಿನದನ್ನು ನೋಡುವ ಅವಕಾಶ ಕಡಿಮೆ.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಪರೂಪದ ಪಕ್ಷಿ ಸಂತತಿ ಇದೆ. ಇದರ ಬಗ್ಗೆ ಸಂಶೋಧನೆ ನಡೆಸ ಲಾಗುತ್ತಿದೆ. ಬಿಳಿಗಿರಿರಂಗನಾಥನ ಬೆಟ್ಟದಲ್ಲಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ವಲಸೆ ಬಂದ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇಲ್ಲಿನ ಪಕ್ಷಿಗಳ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಮತ್ತು ಸಂಶೋಧನೆ ನಡೆಸಲು ತಜ್ಞರಿಗೆ ಅವಕಾಶ ಮಾಡಿಕೊಡಲಾಗಿದೆ.
ಈ ಮರ ಸೋಲಿಗರ ಈಶ್ವರ
ಬಿಳಿಗಿರಿ ರಂಗನ ಬೆಟ್ಟದ ದೇವಸ್ಥಾನದಿಂದ 20 ಕಿ.ಮೀ. ದೂರದಲ್ಲಿರುವ ಮರವು ಸೋಲಿಗರ ಆರಾಧ್ಯ ಸ್ಥಾನ. 600 ವರ್ಷಗಳಷ್ಟು ಹಳೆಯದಾಗಿರುವ 20 ಮೀಟರ್ ವಿಸ್ತಾರದ43 ಮೀಟರ್ ಎತ್ತರದ ಸಂಪಿಗೆ ಮರ ಇದು. ಇದನ್ನು ಸೋಲಿಗರು ಈಶ್ವರ ಎಂದೇ ಪೂಜಿಸುತ್ತಾರೆ. ಮಹಾಶಿವರಾತ್ರಿ ದಿನ ಇಲ್ಲಿ ವಿಶೇಷ ಹಬ್ಬ. ಇದನ್ನು ನೋಡಬೇಕಾದರೆ ಟ್ರೆಕ್ಕಿಂಗ್ ಮೂಲಕವೇ ಸಾಗಬೇಕು.
ಏನಿದೆ ಈ ಬೆಟ್ಟದಲ್ಲಿ?
ಯಳಂದೂರು ತಾಲೂಕು ಪಟ್ಟಣವನ್ನು ದಾಟಿ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ರಕ್ಷಿತಾರಣ್ಯಕ್ಕೆ ಪ್ರವೇಶ. ಅಲ್ಲಿಂದ ಮುಂದೆ ಹತ್ತಾರು ಕಿ.ಮೀ.ಗಳ ದೂರ ಕುರುಚಲು ಕಾಡು, ನೀರಿನ ಮಡು, ಎತ್ತರೆತ್ತರ ಏರೋ ರಸ್ತೆ. ಇಲ್ಲಿ ನಡಿಗೆಯಲ್ಲಿ ಒಬ್ಬೊಬ್ಬರೇ ಸಾಗುವುದು ಸಾಧ್ಯವೇ ಇಲ್ಲ. ಅಲ್ಲಲ್ಲಿ ಜಿಂಕೆಗಳು, ಕಾಡೆಮ್ಮೆಗಳು ಸಾಗುತ್ತಿರುತ್ತವೆ.
ಕಾಡಾನೆಗಳು ಕೂಡ ಧುತ್ತನೆ ಪ್ರತ್ಯಕ್ಷವಾಗುತ್ತವೆ. ನೂರಾರು ಮಂಗಗಳು, ಥರಥರದ ಹಕ್ಕಿಗಳು ದಾರಿಯುದ್ದಕ್ಕೂ ಸ್ವಾಗತಿಸುತ್ತವೆ. ಅಕ್ಕಪಕ್ಕದಲ್ಲಿ ದೊಡ್ಡದೊಡ್ಡ ಹುತ್ತಗಳು! ಬಿ.ಆರ್. ಹಿಲ್ಸ್ ರಕ್ಷಿತಾರಣ್ಯದಲ್ಲಿ ಸಾವಿರಕ್ಕೂ ಅಧಿಕ ಸಸ್ಯ ಪ್ರಭೇದಗಳು, 25ಕ್ಕೂ ಅಧಿಕ ಬಗೆಯ ಸಸ್ತನಿಗಳು, 22 ಜಾತಿಯ ಸರೀಸೃಪಗಳು, 145 ಬಗೆಯ ಚಿಟ್ಟೆಗಳು, 274 ಜಾತಿಯ ಹಕ್ಕಿಗಳಿವೆ ಎಂಬ ಲೆಕ್ಕ ಇದೆ.
ಇಲ್ಲಿ ಹುಲಿ ಸಂರಕ್ಷಣಾ ವನವೂ ಇದೆ.
ಪಕ್ಷಿಗಳ ಲೋಕ ನೋಡೋಣ ಬಾ..
ಮತ್ತೊಂದು ವಿಶೇಷವೆಂದರೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಹಕ್ಕಿಹಬ್ಬ’ ಆಗಮಿಸುತ್ತಿದೆ. ಇದು ಬಿಳಿಗಿರಿರಂಗನಾಥ ಬೆಟ್ಟದಲ್ಲಿ ನಡೆಯುವ ಏಳನೇ ಆವೃತ್ತಿಯ ಹಕ್ಕಿಹಬ್ಬ. ಜನವರಿ 5 ರಿಂದ 7 ರವರೆಗೆ ಕರ್ನಾಟಕ ಅರಣ್ಯ ಇಲಾಖೆ ‘ಹಕ್ಕಿ ಹಬ್ಬ’ ಆಯೋಜಿಸಿದೆ. ಪಶ್ಚಿಮಘಟ್ಟವ್ಯಾಪ್ತಿಗೊಳಪಡುವ ಈ ಜಿಲ್ಲೆಯಲ್ಲಿ ಸಾಕಷ್ಟು ಜೀವ ಪ್ರಬೇಧಗಳಿವೆ. ಅವುಗಳಲ್ಲಿ ಬಗೆ ಬಗೆಯ ಹಕ್ಕಿಗಳು ಕೂಡ ಪ್ರಮುಖವಾಗಿದೆ.
ದಾರಿಯ ಬದಿಯಲ್ಲಿ ಬಣ್ಣ ಬಣ್ಣದ ಹಕ್ಕಿಗಳು ಹಾರಾಡುತ್ತಿದ್ದು, ಮನ ಸೂರೆಗೊಳ್ಳುತ್ತಿದೆ. ಈಗಾಗಲೇ ರಂಗನತಿಟ್ಟು, ದಾಂಡೇಲಿ, ಬಳ್ಳಾರಿ, ಮಂಗಳೂರು, ಚಿಕ್ಕಬಳ್ಳಾಪುರ ಮತ್ತು ಕಾರವಾರದಲ್ಲಿ ಆಯೋಜಿಸಲಾಗಿದ್ದ ‘ಹಕ್ಕಿ ಹಬ್ಬ’ ಯಶಸ್ವಿಯಾಗಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಬೆಸೆಯುವ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದಲ್ಲಿ ಮೊದಲ ಬಾರಿಗೆ ‘ಹಕ್ಕಿ ಹಬ್ಬ’ ಯೋಜಿಸ ಲಾಗುತ್ತಿದೆ. ‘ಹಕ್ಕಿ ಹಬ್ಬ’ದಲ್ಲಿ ಅಪರೂಪದ ಹಕ್ಕಿಗಳ ವೀಕ್ಷಣೆ ಹಾಗೂ ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.