ಬಳಕೂರು ವಿಎಸ್ ನಾಯಕ
ಧ್ಯಾನಾಸಕ್ತರಾಗಿ ಕುಳಿತಿರುವ ಗಾಂಧಿ, ನಗುವನ್ನು ಬೀರುವ ಗೌತಮ ಬುದ್ಧ, ರಾಧಾಕೃಷ್ಣ, ಶಿವಾಜಿ, ಬಸವಣ್ಣ, ಗುರು ರಾಘ ವೇಂದ್ರ, ಶ್ರೀ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಅಂಬೇಡ್ಕರ್ ಶಿಲ್ಪ – ಹೀಗೆ ಒಂದೇ ಎರಡೇ – ಅಲ್ಲಿ ತೆರಳಿದರೆ ಸಾಕು ಭಾವ ಪರವಶರಾಗುತ್ತೇವೆ.
ಇಂತಹ ವಿಭಿನ್ನ ಕಲಾಕೃತಿ ಶಿಲ್ಪಕಲಾಕೃತಿಗಳನ್ನು ರಚಿಸಿದವರು ಕಲಾವಿದರಾದ ಕೃಷ್ಣ ನಾಯಕ್. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿಯವರಾದ ಕೃಷ್ಣ ನಾಯಕ್ ಅವರಿಗೆ ಬಾಲ್ಯದಿಂದಲೇ ಕಲೆಯ ಬಗ್ಗೆೆ ಅಪಾರ ಆಸಕ್ತಿ. ಮನೆಯ ಮುಂದಿನ ಶರಾವತಿ ನದಿ, ಅಲ್ಲಿಯ ಬೆಟ್ಟಗುಡ್ಡಗಳೆಲ್ಲ ಇವರಿಗೆ ಸ್ಫೂರ್ತಿ ತುಂಬಿದವು. ಇವೆಲ್ಲವೂ ಕಲಾ ವಸ್ತುವನ್ನಾಗಿಸಿಕೊಂಡ ಇವರು ವಿಭಿನ್ನ ಶಿಲ್ಪಕಲಾಕೃತಿಗಳನ್ನು ತಯಾರಿಸಿ ಕೌಶಲ ಮೆರೆದಿದ್ದಾರೆ.
ಸಿಮೆಂಟ್ ಸ್ಫೂರ್ತಿ ಇಡಗುಂಜಿಯಲ್ಲಿ ಇರುವಾಗ ಇವರ ತಂದೆಯಿಂದ ಪ್ರೇರಿತರಾದ ಇವರು ರಚಿಸಿದ ಸಿಮೆಂಟ್ ಡಿಸೈನ್ ಇನ್ನಿ ತರ ಮಾದರಿಗಳಿಂದ ಆಕರ್ಷಿತರಾಗಿ ತಾವು ಕೂಡ ಇಂತಹ ಕಲಾಕೃತಿಗಳನ್ನು ರಚಿಸುವ ಆಸಕ್ತಿ ಹೊಂದಿದ್ದರು. ಜಿಎಲ್ ಭಟ್ಟ ರವರ ಹತ್ತಿರ ಕಲೆಯ ಪಾಠ ಪಡೆದರು. ಕೆನರಾ ಬ್ಯಾಂಕ್ ಕರಕುಶಲ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪಡೆದರು. ಅಲ್ಲಿ ಕಲ್ಲು ಮತ್ತು ಮರದ ಕೆತ್ತನೆಯ ತರಬೇತಿ ಪಡೆದ ನಂತರ ಕುವೆಂಪು ಕಲಾಶಾಲೆಯಲ್ಲಿ ಐದು ವರ್ಷಗಳ ಕಾಲ ಅಧ್ಯಯನ ಮಾಡಿದ್ದು ಬಹಳ ಸಹಾಯವಾಯಿತು.
ಮೊದಲು ಮರ ಮತ್ತು ಕಲ್ಲಿನ ಕೆತ್ತನೆಯಲ್ಲಿ ಕಾರ್ಯ ಆರಂಭಿಸಿದರು. ಆದರೆ ಅವರನ್ನು ಆಕರ್ಷಿಸಿದ್ದು ಶಿಲ್ಪಕಲೆ. ಕೃಷ್ಣ ನಾಯಕ್ ರವರು ಬೆಂಗಳೂರಿನ ನಾಗರ ಭಾವಿಯಲ್ಲಿ ಕ್ರಿಶ್ ಆರ್ಟ್ ವರ್ಲ್ಡ್ ಎಂಬ ಕಲಾ ಗ್ಯಾಲರಿಯನ್ನು ಆರಂಭಿಸಿ, ಇಲ್ಲಿ ತಾವು ರಚಿಸಿದಶಿಲ್ಪಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಂಭಾಗದಲ್ಲಿ
ಬುದ್ಧ, ಬಸವಣ್ಣ, ಅಂಬೇಡ್ಕರ್ ಶಿಲ್ಪಗಳು, ರವೀಂದ್ರ ಕಲಾ ಕ್ಷೇತ್ರದ ಮುಂಭಾಗದಲ್ಲಿ ಇರುವ ಬುದ್ಧನ ಶಿಲ್ಪ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಮುಂಭಾಗದ ಗಣೇಶನ ಶಿಲ್ಪ ಮೊದಲಾದವುಗಳನ್ನು ರಚಿಸಿದ್ದಾರೆ.
ಕರ್ನಾ ಟಕದ ಸಂಸ್ಕೃತಿಯನ್ನು ಬಿಂಬಿಸುವ ಉಬ್ಬು ಶಿಲ್ಪಗಳು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಶಿಲ್ಪ ಮತ್ತು ಬಾಲಗಂಗಾಧರ ಸ್ವಾಮೀಜಿಯವರ 9 ಅಡಿ ಎತ್ತರದ ಶಿಲ್ಪ ರಚಿಸಿದ್ದಾರೆ. ಸುಮಾರು 25 ವರ್ಷ ಗಳಿಂದ ಕಲಾ ಸೇವೆ ಮಾಡುತ್ತಿರುವ ನಾಯಕ್ ಅವರ ಸಾಧನೆ ಅಪರೂಪದ್ದು. ಮೊದಲು ಮಣ್ಣಿನಲ್ಲಿ ಕಲಾಕೃತಿಯನ್ನು, ನಂತರ
ಫೈಬರ್ನಲ್ಲಿ ತಯಾರಿಸಿ, ಕಂಚಿನಲ್ಲಿ ಶಿಲ್ಪವನ್ನು ರೂಪಿಸಬೇಕಾದರೆ, ಸುಮಾರು ಆರರಿಂದ ಎಂಟು ತಿಂಗಳುಗಳ ಪರಿಶ್ರಮದ
ಅಗತ್ಯವಿದೆ ಎನ್ನುತ್ತಾರೆ ಕೃಷ್ಣ ನಾಯಕ್. ಅವರ ಕಲಾಭಿಯಾನಕ್ಕೆ ಶುಭವಾಗಲಿ.