ಬಿ.ಶೋಭಾ ಅರಸ ತೆಕ್ಕಟ್ಟೆ
ನೆಲ ಮಟ್ಟದಿಂದ 260 ಅಡಿ ಆಳದಲ್ಲಿರುವ ವಿಶಾಲವಾದ ಈ ಗುಹೆಗಳಲ್ಲಿ ನಡೆದಾಡುವಾಗ ಸಣ್ಣಗೆ ದಿಗಿಲು ಹುಟ್ಟುತ್ತದೆ ಮತ್ತು ವಿಸ್ಮಯವೂ ಎನಿಸುತ್ತದೆ. ಇದು ಭಾರತದ ಅತ್ಯಂತ ದೊಡ್ಡ ಗುಹೆ.
ಮನೆಯಿಂದ ಹೊರಗೆ ಹೋಗಲಾಗದ ಲಾಕ್‌ಡೌನ್ ಕಾಲದಲ್ಲಿ ಗೂಗಲ್‌ನಲ್ಲಿ ಪ್ರವಾಸಿ ತಾಣಗಳನ್ನು ನೋಡುತ್ತಿದ್ದಾಗ ಭಾರತದ ಅತ್ಯಂತ ದೊಡ್ಡ ಗುಹೆ ಬುರ್ರಾ ಗುಹೆ ಎಂದು ಗಮನಿಸಿದ್ದೆ. ವಾಹನಗಳ ಸಂಚಾರಕ್ಕೆ ಅನುಮತಿ ದೊರಕಿದ ಕೂಡಲೆ ನಮ್ಮ ಪಯಣ, ಅರಕು ಕಣಿವೆಗಳಲ್ಲಿ ಇರುವ ಬುರ್ರಾ ಗುಹೆಗಳತ್ತ ಸಾಗಿತು. ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ 90ಕಿ.ಮೀ. ದೂರದಲ್ಲಿರುವ ಬುರ್ರಾ ಗುಹೆಗೆ ರಸ್ತೆ ಮಾರ್ಗ ಹಾಗೂ ರೈಲು ಮಾರ್ಗವಿದೆ.
ರೈಲಿನಲ್ಲಿ ಸುಮಾರು ಮೂವತ್ತು ಸುರಂಗಗಳನ್ನು ಹಾದುಹೋಗುವ ರೋಮಾಂಚನವಿರುತ್ತಾದರೂ ಪ್ರಯಾಣದ ಅವಧಿ ಹೆಚ್ಚಾಗಿರುವುದರಿಂದ ನಾವು ವಿಶಾಖಪಟ್ಟಣಂನಿಂದ ಬಾಡಿಗೆ ಕಾರಿನಲ್ಲಿ ಹೊರಟೆವು. ಅರಕು ಕಣಿವೆಯ ಅನಂತಗಿರಿಯ ಬೆಟ್ಟಗಳ ಸಾಲುಗಳ ರಮ್ಯ ನೋಟ ಅದ್ಭುತವಾಗಿದೆ. ನಮ್ಮ ಪಶ್ಚಿಮ ಘಟ್ಟಕ್ಕಿಂತ ಸುದೂರ ಮತ್ತು ವಿಶಾಲವಾದ ಘಟ್ಟಗಳನ್ನು ಹೊಂದಿದ್ದು ಎಣಿಸಲಾರದಷ್ಟು ಗಿರಿಶ್ರೇಣಿಗಳಿವೆ. ಅದಕ್ಕೇ ಇದನ್ನು ಅನಂತಗಿರಿ ಎಂದು ಕರೆಯುತ್ತಾರೆ ಎಂದೆನಿಸಿತು. ಘಾಟಿಯ
ರಸ್ತೆಗಳು ಬಹಳಷ್ಟು ಕೆಟ್ಟು ಹೋಗಿದ್ದು ಪ್ರಯಾಣ ಕಷ್ಟಕರವಾಗಿದ್ದರೂ ನಮ್ಮ ಚಾಲಕ ಅಲ್ಲಿಯ ಬುಡಕಟ್ಟು ಜನರ ಕತೆಗಳನ್ನು ಹೇಳುತ್ತಿದ್ದುದರಿಂದ ಪ್ರಯಾಣ ಸ್ವಲ್ಪ ಸಹ್ಯವಾಯಿತು. ಅರಕು ಕಣಿವೆಯ ಬುಡಕಟ್ಟು ಜನರ ಜೀವನ, ಹಳ್ಳಿಗಳು, ಜನಪದ
ನೃತ್ಯ ಎಲ್ಲವೂ ವಿಶಿಷ್ಟ.
ದನಗಾಹಿ ಕಂಡು ಹಿಡಿದ ಗುಹೆ
ಇಲ್ಲಿ ಹೆಚ್ಚಾಗಿ ಬುಡಕಟ್ಟು ಜನರಿದ್ದು, ಒರಿಯಾ ಭಾಷೆಯಲ್ಲಿ ‘ಬುರ್ರಾ’ ಎಂದರೆ ರಂಧ್ರ ಎಂಬ ಅರ್ಥವಿದೆ. ಒಮ್ಮೆ ಒಬ್ಬ ದನಗಾಹಿಯ ಒಂದು ಹಸು ಅನಂತಗಿರಿಯ ಒಂದು ಬೆಟ್ಟದ ತಪ್ಪಲಿನಲ್ಲಿರುವ ರಂಧ್ರದೊಳಗೆ ಬಿದ್ದಿತಂತೆ. ಬಿದ್ದ ಸ್ವಲ್ಪ ಹೊತ್ತಿ ನಲ್ಲೇ ಅದರ ಕೂಗು ಕೇಳಿತಂತೆ. ಆ ರಂಧ್ರದೊಳಗೆ ದಾರಿಮಾಡಿಕೊಂಡು ಹೋದಾಗ ಲಿಂಗದ ಆಕಾರದ ಒಂದು ಬಂಡೆಯ ಮೇಲೆ ಹಸು ಬಿದ್ದಿತ್ತಂತೆ. ಲಿಂಗರೂಪಿಯ ಶಿವನೇ ಗೋವನ್ನು ರಕ್ಷಿಸಿದ್ದಾನೆಯೆಂದು ತಿಳಿದು ಅದನ್ನು ಪೂಜಿಸಲು ಪ್ರಾರಂಭಿಸಿದರಂತೆ ಎಂಬ ಕಥೆ ಹೇಳಿದ ನಮ್ಮ ವಾಹನ ಚಾಲಕ.
ಬ್ರಿಟಿಷ್ ಭೂಗರ್ಭಶಾಸ್ತ್ರಜ್ಞ ವಿಲಿಯಂ ಕಿಂಗ್ ಎಂಬುವವನು 1807ರಲ್ಲಿ ಈ ಸ್ಥಳದಲ್ಲಿರುವ ಸರ್ವೇ ಮಾಡಿ, ಗುಹೆಯ ಮಾಹಿತಿ ಯನ್ನು ಸರಕಾರಕ್ಕೆ ಸಲ್ಲಿಸಿದ. ಆತ ಸರ್ವೇ ಆಫ್ ಇಂಡಿಯಾ ಪರವಾಗಿ ಇಲ್ಲೆಲ್ಲಾ ಸಾಕಷ್ಟು ಪರಿಶೀಲನೆ ನಡೆಸಿದ.
ಮಿಲಿಯಾಂತರ ವರುಷಗಳಿಂದ ಸತತವಾಗಿ ನೀರಿನ ಕೊರೆತದಿಂದ ಈ ಗುಹೆಯುಂಟಾಗಿದೆ. ಈ ಬೆಟ್ಟದಲ್ಲಿ ಗುಹೆಯ ಮೇಲ್ಬಾಗ ದಲ್ಲಿ ಗೋಸ್ತಾನಿ ಎಂಬ ನದಿ ಹರಿಯುತ್ತಿದ್ದು ಅದರ ನೀರು ಗುಹೆಯೊಳಗೆ ಜಿನುಗಿ ಸುಣ್ಣದ ಕಲ್ಲಿನ ಅನೇಕ ಆಕಾರಗಳ
ಬಂಡೆಗಳು ನಿರ್ಮಾಣವಾಗಿವೆ.
ಇಲ್ಲೂ ಕಾಫಿ ತೋಟ
ಬುರ್ರಾ ಗುಹೆಗಳಿಗೆ ಸಾಗುವ ದಾರಿಯುದ್ದಕ್ಕೂ, ಘಾಟಿಯ ಇಕ್ಕಡೆಗಳಲ್ಲೂ ಕಾಫಿತೋಟಗಳಿವೆ. ಆಂಧ್ರ ಸರ್ಕಾರವು ಇವುಗಳ ಉಸ್ತುವಾರಿಯನ್ನು ಅಲ್ಲಿನ ಬುಡಕಟ್ಟು ಪಂಗಡಗಳಿಗೆ ವಹಿಸಿದೆಯಂತೆ. ಅವರೇ ಅದರ ನಿರ್ವಹಣೆ ಮಾಡುತ್ತಾರಂತೆ.
ಕರ್ನಾಟಕದಲ್ಲಿದ್ದಂತೆ ಈ ಕಾಫೀ ತೋಟಗಳಿಗೆ ಒಬ್ಬ ಮಾಲಿಕನಲ್ಲ ಎಂದು ನಮ್ಮ ಚಾಲಕ ಹೇಳಿದ. ಇಲ್ಲಿನ ಕಾಫೀ ಬೀಜಗಳ ವಸ್ತುಸಂಗ್ರಹಾಲಯ ಅರಕ್ಕು ಪಟ್ಟಣದಲ್ಲಿ ಮಾಡಿದ್ದಾರೆ. ದಾರಿಯುದ್ದಕ್ಕೂ ಅನೇಕ ಬಂಡೆಗಳ ಮೇಲೆ ‘ಜೀಸಸ್ ಕಮಿಂಗ್ ಸೂನ್’ ಎಂಬ ಫಲಕಗಳನ್ನು ತೋರಿಸಿ ಇಲ್ಲಿಯ ಕೆಲವು ಬುಡಕಟ್ಟು ಜನರೀಗ ಕ್ರಿಶ್ಚಿಯನ್ರಾಗಿ ಮತಾಂತರ ಹೊಂದಿದ್ದಾರೆ ಎಂದು ಹೇಳಿದ
ನಮ್ಮ ವಾಹನ ಚಾಲಕ.
ಗುಹೆಯ ದ್ವಾರ ಅಗಲವಾಗಿದ್ದು ಒಳಗೆ ಇಳಿಯಲು ಮೆಟ್ಟಲುಗಳ ವ್ಯವಸ್ಥೆ ಇದೆ. ಮೆಟ್ಟಲು ಗಳನ್ನು ಇಳಿಯುತ್ತಾ ಹೋದಂತೆ ಅದರ ಅಗಾಧ ವಿಸ್ತಾರ ಭಯಹುಟ್ಟಿಸುವಂತೆ ಕಾಣುತ್ತದೆ. ಸುಮಾರು 330 ಅಡಿ ಅಗಲ ಮತ್ತು ನೆಲಮಟ್ಟದಿಂದ 260 ಅಡಿ ಆಳವಾದ ಈ ಗುಹೆಯಲ್ಲಿ ಸುಣ್ಣದ ಕಲ್ಲಿನಿಂದ ನಿರ್ಮಿತವಾದ ಅನೇಕ ಬಂಡೆಗಳು ನೈಸರ್ಗಿಕ ಸ್ತಬ್ಧಚಿತ್ರಗಳಂತೆ ತೋರುತ್ತವೆ. ಅವುಗಳಲ್ಲಿ ಕೆಲವು ಶಿವ, ಪಾರ್ವತಿ, ತಾಯಿ ಮಗು, ಬಸವ, ಋಷಿಯ ಗಡ್ಡ, ಮಾನವನ ಮೆದುಳು, ಅಣಬೆಗಳ ರಾಶಿ, ಮೊಸಳೆ,
ದೇವಾಲಯದಂತೆ ಗೋಚರಿಸುತ್ತದೆ.
ನಮ್ಮ ಕಲ್ಪನೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಇಲ್ಲಿ ಚಿತ್ರಗಳನ್ನು ನೋಡಬಹುದು. ಗುಹೆಯೊಳಗೆ ಬೆಳಕಿನ ವ್ಯವಸ್ಥೆ ಚೆನ್ನಾಗಿಲ್ಲದಿರುವುದರಿಂದ ನೈಜ ಸೌಂದರ್ಯ ಸವಿಯಲು ಸಾಧ್ಯವಾಗಲಿಲ್ಲ. ಗುಹೆಯ ಒಳಗೆ ನೀರಿನ ಜಿನುಗು ಇದ್ದರೂ
ಎಲ್ಲೂ ಜಾರುವಂತಿರದೆ ಓಡಾಡಲು ತೊಂದರೆ ಯಾಗಲಿಲ್ಲ. ಒಳಗಿನ ಹವೆ ತಂಪಾಗಿದ್ದು ಸಾವಿರಾರು ಜನರಿದ್ದರೂ ಉಸಿರು ಕಟ್ಟುವಂತಿರಲಿಲ್ಲ. ಗುಹೆಯ ಪ್ರತಿಯೊಂದು ಭಾಗಕ್ಕೂ ಓಡಾಡಲು ಮೆಟ್ಟಲುಗಳಿವೆ. ಕೆಲವು ಕಡೆ ಸಣ್ಣ ದಾರಿಯಿದ್ದು ಬಗ್ಗಿ ಹೋಗುವಂತಿದ್ದರೆ ಕೆಲವಡೆ ತಲೆಯೆತ್ತಿ ಗುಹೆಯ ವಿಶಾಲ ವೈಭವವನ್ನು ನೋಡಲು ಅವಕಾಶವಿದೆ.
ವಿಶೇಷವಾಗಿ ಕಾಣುವ ಬಂಡೆಗಳ ಬಳಿ ಕೂಡಲೆ ಛಾಯಾಚಿತ್ರ ತೆಗೆದುಕೊಡುವ ಛಾಯಾಗ್ರಾಹಕರಿದ್ದರು. ಲಿಂಗಾಕಾರದ ಶಿವನನ್ನು ಪೂಜಿಸುವ ವ್ಯವಸ್ಥೆಯೂ ಇದೆ. ಶಿವರಾತ್ರಿಯಂದು ಅಲ್ಲಿಯ ಬುಡಕಟ್ಟು ಜನರು ಶಿವನಿಗೆ ಪೂಜೆ ಮಾಡಿ ಜಾತ್ರೆ
ಮಾಡುತ್ತಾರೆ. ಗುಹೆಯೊಳಗೆ ಒಂದು ಫಲಕವಿದ್ದು ಅದರಲ್ಲಿ ‘ಇದರ ಮೇಲೆ ರೈಲ್ವೆ ಹಳಿಯಿದೆ’ ಎಂದು ಬರೆದಿದ್ದಾರೆ. ಈ ಗುಹೆಯ ಮೇಲ್ಬಾಗದಲ್ಲಿ ರೈಲು ಸಂಚಾರ, ವಾಹನಗಳ ಸಂಚಾರ, ಗೋಸ್ತಾನಿ ನದಿ ಎಲ್ಲವೂ ಇದೆ ನಾವು ಇದರೊಳಗೆ ಸುಮಾರು 250 ಅಡಿ ಆಳದಲ್ಲಿದ್ದೇವೆ ಎಂದು ನೆನೆಸಿಕೊಂಡಾಗ ಮೈಝುಂ ಎಂದಿತು.
ಬಿಂದುವಿನಿಂದ ಸಿಂಧು
ಈ ಗುಹೆಯನ್ನು ಆಸಕ್ತಿಯಿಂದ ಸಂಪೂರ್ಣವಾಗಿ ನೋಡಲು ನಾಲ್ಕರಿಂದ ಐದು ಗಂಟೆಗಳು ಬೇಕು. ಗುಹೆಯೊಳಗೆ ಹೋದಷ್ಟೂ ವಿಶಾಲವಾಗಿ, ರುದ್ರ ರಮಣೀಯವಾಗಿ ತೋರುತ್ತದೆ. ಗುಹೆಯ ಕೊನೆಯಲ್ಲಿ ಮೇಲಿನ ಸಂದಿನಿಂದ ಒಂದೊಂದೇ ಬಿಂದು ನೀರು ಕೆಳಗೆ ಬಿದ್ದು ಕೆಳಗೆ ಪುಟ್ಟ ಕಾಲುವೆಯಾಗಿ ಹರಿಯುವುದನ್ನು ನೋಡುವಾಗ ಮನಸ್ಸಿನಲ್ಲಿ ಬಿಂದುವಿನಿಂದ ಸಿಂಧುವಿನಡೆಗೆ ಎಂಬ ಭಾವ ಮೂಡುತ್ತದೆ. ಪ್ರಕೃತಿಯ ಈ ಚಮತ್ಕಾರ ಅಬ್ಬಾ! ಎಂಬ ವಿಸ್ಮಯ ಹುಟ್ಟಿಸುತ್ತದೆ.
ಬ್ಯಾಂಬೂ ಚಿಕನ್ ಎಂಬ ಖಾದ್ಯ!
ಪಾರ್ಕಿಂಗ್ ಸ್ಥಳದಿಂದ ಗುಹೆಯ ಪ್ರವೇಶ ದ್ವಾರಕ್ಕೆ ಹೋಗುವಾಗ ರಸ್ತೆಯ ಎರಡೂ ಬದಿಗಳಲ್ಲಿ ‘ಬ್ಯಾಂಬೂ ಚಿಕನ್’ ಮಾರಾಟ
ಮಾಡುವ ಗೂಡಂಗಡಿಗಳಿದ್ದವು. ಬಿದಿರಿನ ಕೊಳವೆಯಲ್ಲಿ ಚಿಕನ್ ತುಂಡುಗಳಿಟ್ಟು ಬೆಂಕಿಯಲ್ಲಿ ಸುಟ್ಟು ಮಾಡುವ ಖಾದ್ಯ
ಇಲ್ಲಿಯ ಬುಡಕಟ್ಟು ಜನರ ಒಂದು ವಿಶೇಷ ಖಾದ್ಯ. ಇಜ್ಜಲಿನ ಬೆಂಕಿಯಲ್ಲಿ ಸುಡುವಾಗ ಅದು ಪಡೆಯುವ ಹೊಗೆಸಹಿತ ರುಚಿಯು ಸ್ಥಳೀಯ ವೈಶಿಷ್ಟ್ಯ ಎನಿಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಿಂದ 90 ಕಿಮೀ ದೂರದಲ್ಲಿರುವ ಬುರ್ರಾ ಗುಹೆಗಳಿಗೆ ರಸ್ತೆ ಸಂಪರ್ಕ ಚೆನ್ನಾಗಿದೆ. ಒಂದು ಕಿಮೀ ಹತ್ತಿರದ ತನಕ ತಲುಪಿಸುವ ರೈಲು ಸಂಪರ್ಕವೂ ಇದೆ.