Wednesday, 27th November 2024

ಕ್ಯಾನನ್‌ನಿಂದ ಹೊಸ ಸಾಹಸ

ಅಜಯ್ ಅಂಚೆಪಾಳ್ಯ

ಕ್ಯಾಮೆರಾ ಕ್ಷೇತ್ರದ ದೈತ್ಯ ಸಂಸ್ಥೆ ಕ್ಯಾನನ್ ಹೊಸ ಸಾಹಸಗಳಿಗೆ ಕೈ ಹಾಕುತ್ತಿದೆ. ಜತೆಗೆ, ತನ್ನ ಬಳಕೆದಾರರಿಗೆ ವಿನೂತನ ಎನಿಸುವ
ಸೌಲಭ್ಯಗಳನ್ನು ಒದಗಿಸುತ್ತಿದೆ.

ಹೊಸ ಮತ್ತು ಅತ್ಯಾಧುನಿಕ ಕ್ಯಾಮೆರಾಗಳನ್ನು ಬಿಡುಗಡೆ ಮಾಡುತ್ತಲೇ ಇರುವ ಕ್ಯಾನನ್ ಇಂದು ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ಉಪಗ್ರಹಗಳನ್ನು ಬಳಸಿ ನೀವೇ ಚಿತ್ರ ಕ್ಲಿಕ್ ಮಾಡಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ಒದಗಿಸಿಕೊ
ಟ್ಟಿದೆ!

ಇಂಟರ್ಯಾಕ್ಟಿವ್ ಸೈಟ್ ಬಳಸುವ ಮೂಲಕ, ಆಗಸದಲ್ಲಿ ಭೂಮಿಯನ್ನು ಸುತ್ತುತ್ತಿರುವ ಉಪಗ್ರಹದ ಸಹಾಯದಿಂದ, ನೀವೇ ಭೂಮಿಯ ಕೆಲವು ಭಾಗಗಳ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಆ ಚಿತ್ರಗಳು ಉತ್ತಮ ರಿಸೊಲ್ಯೂಷನ್ ಹೊಂದಿರುವುದು ವಿಶೇಷ. ಇದೆಲ್ಲಾ ಹೇಗೆ ಸಾಧ್ಯ! ಇದಕ್ಕೆ ಕ್ಯಾನನ್ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದೆ.

ಜೂನ್ 2017ರಲ್ಲಿ ಕ್ಯಾನನ್ ಸಂಸ್ಥೆಯು ತಾನೇ ಒಂದು ಉಪಗ್ರಹವನ್ನು ಆಗಸಕ್ಕೆ ಹಾರಿಸಿದೆ. ಸಿಇ ಸ್ಯಾಟ್1 ಉಪಗ್ರಹವನ್ನು
ಕ್ಯಾನನ್ ಭೂಮಿಯ ಕಕ್ಷೆಯಲ್ಲಿ ಸುತ್ತಿಸುತ್ತಿದ್ದು, ಆ ಪುಟಾಣಿ ಉಪಗ್ರಹದಲ್ಲಿ 5ಡಿ ಮಾರ್ಕ್ 3 ಡಿಎಸ್‌ಎಲ್‌ಆರ್ ಕ್ಯಾಮೆರಾ ಇದೆ. ಈ ಕ್ಯಾಮೆರಾಕ್ಕೆ 3720 ಎಂಎಂ ಟೆಲೆಸ್ಕೋಪ್ ಅಳವಡಿಸಲಾಗಿದ್ದು, ನ್ಯೂಯಾರ್ಕ್, ದುಬೈ, ಬಹಾಮಾಸ್ ಮೊದಲಾದ ಪ್ರದೇಶಗಳ ಹೈ ರೆಸೊಲ್ಯೂಷನ್ ಫೋಟೋಗಳನ್ನು ಆ ಕ್ಯಾಮೆರಾ ಚಿತ್ರಿಸಬಲ್ಲದು.

ಭೂಮಿಯಿಂದ ಸುಮಾರು 600 ಕಿಮೀ ಎತ್ತರದಲ್ಲಿ ಹಾರಾಡುವ ಈ ಉಪಗ್ರಹವು, ಗಂಟೆಗೆ 17,000 ಮೈಲಿ ವೇಗದಲ್ಲಿ  ಚಲಿಸುತ್ತಿದ್ದು, ಭೂಮಿಯನ್ನು ಒಂದೂವರೆ ಗಂಟೆಯ ಅವಧಿಯಲ್ಲಿ ಸುತ್ತಬಲ್ಲದು. ಕ್ಯಾನನ್ ಒದಗಿಸಿರುವ ಇಂಟರ್ಯಾಕ್ಟಿವ್ ವೆಬ್‌ಸೈಟ್‌ನ ಉಪಯೋಗವನ್ನು ಪಡೆಯುವ ಆಸಕ್ತರು, ಭೂಮಿಯ ಯಾವ ಭಾಗ ಬೇಕೋ ಆ ಭಾಗದ ಚಿತ್ರಗಳನ್ನು ಆಯ್ದು,
ಕ್ಲಿಕ್ ಮಾಡುವ ಅನುಭವ ಪಡೆಯಬಹುದು! ಆದರೆ, ಸದ್ಯಕ್ಕೆ ಆ ಚಿತ್ರಗಳು ಲೈವ್ ಆಗಿರುವುದಿಲ್ಲ.

ಈಗಾಗಲೇ ಚಿತ್ರೀಕರಣ ಮಾಡಿರುವ ಚಿತ್ರಗಳನ್ನು ಪಡೆಯಲು ಸಾಧ್ಯ. ಆಯ್ದ ಭಾಗಗಳ ಹೈ ರೆಸೊಲ್ಯೂಷನ್ ಚಿತ್ರಗಳನ್ನು ಕ್ಯಾನನ್ ಅಲ್ಲಿ ಸಂಗ್ರಹಿಸಿಟ್ಟಿದ್ದು, ಅದನ್ನು ಕ್ಲಿಕ್ಕಿಸುವವರಿಗೆ ಲೈವ್ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಕ್ಯಾನನ್‌ಗೆ ಏನು ಲಾಭ? ಛಾಯಾಚಿತ್ರಣ ಕ್ಷೇತ್ರದಲ್ಲಿ ಹೊಸ ಅನುಭವವನ್ನು ಒದಗಿಸಿಕೊಡಬಲ್ಲ ಈ ಅಭಿಯಾನದಿಂದ,
2030ರ ಹೊತ್ತಿಗೆ ಒಂದು ಬಿಲಿಯ ಡಾಲರ್ ವ್ಯವಹಾರ ಮಾಡುವ ನಿರೀಕ್ಷೆಯನ್ನು ಕ್ಯಾನನ್ ಇಟ್ಟುಕೊಂಡಿದೆ!