Monday, 25th November 2024

ಸ್ನೇಹದ ಜತೆ ಬಾಂಧವ್ಯದ ಕಥೆ ಹೇಳುವ ಚಡ್ಡಿದೋಸ್ತ್

ಚಂದನವನದಲ್ಲಿ ಹೊಸಬರ ಹೊಸ ಪ್ರಯೋಗಗಳು ಮುಂದುವರಿಯುತ್ತಲೇ ಇವೆ. ಪ್ರೇಕ್ಷಕರು ಮೆಚ್ಚುವ ಸಿನಿಮಾ ನೀಡಬೇಕು ಎಂಬ ಹಂಬಲ ಹೊತ್ತು ಚಿತ್ರ ರಂಗಕ್ಕೆ ಬರುವ ಕೆಲವು ನಿರ್ಮಾಪಕ, ನಿರ್ದೇಶಕರು ಇದರಲ್ಲಿ ಯಶಸ್ವಿ ಯಾಗಿದ್ದಾರೆ. ಆ ಸಾಲಿಗೆ ಸೇರುವ ಚಿತ್ರವೇ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ. ಶೀರ್ಷಿಕೆ ಕೇಳಿದಾಕ್ಷಣ ಅಯ್ಯೋ.. ಇದೇನಿದು ಟೈಟಲ್ ಹೀಗಿದೆಯಲ್ಲ. ಇದು ಕಾಮಿಡಿ ಕಥೆಯ ಚಿತ್ರವೇ ಇರಬೇಕು ಎಂದುಕೊಳ್ಳುತ್ತಾರೆ. ಆದರೆ ಟೈಟಲ್‌ಗಿಂತ ಭಿನ್ನವಾದ ಕಥೆ ಚಡ್ಡಿದೋಸ್ತ್ ಚಿತ್ರದಲ್ಲಿದೆ.

ಸ್ನೇಹಿತರ ಸವಾಲು
ಸಮಾಜದ ಕಣ್ಣಲ್ಲಿ ನಾಯಕರಿಬ್ಬರೂ ಕ್ರಿಮಿನಲ್ ಆಗಿದ್ದರೂ ಅವರ ನಡುವಿನ ಸ್ನೇಹ ಸಂಬಂಧ ಉತ್ತಮವಾಗಿರುತ್ತದೆ. ಎಷ್ಟೋ ಘಟನೆಗಳು ಸಣ್ಣ ಸಣ್ಣ ಕಾರಣ ಗಳಿಂದ ಜರುಗುತ್ತವೆ, ಆದೇ ರೀತಿ ಇಲ್ಲೂ ಆಗುತ್ತದೆ. ಇವರಲ್ಲಿ ಕ್ರಿಮಿನಲ್ ಯಾರು, ನಿಜವಾದ ಇನೋಸೆಂಟ್ ಯಾರು ಎಂಬುದೇ ಚಿತ್ರದ ಸಸ್ಪೆನ್ಸ್. ಸ್ನೇಹ ಸಂಬಂಧ, ಪ್ರೀತಿ, ಪ್ರೇಮ, ರಾಜಕೀಯ. ಕ್ರೈಂ ಮತ್ತು ಈಗಿನ ಪೊಲೀಸ್ ವ್ಯವಸ್ಥೆ ಹೇಗೆ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಆಸ್ಕರ್ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ. ಚಿತ್ರ ಸೆವೆನ್ ರಾಜ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿದ್ದು, ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ಬಂಡವಾಳ ಹೂಡಿದ್ದಾರೆ. ಜತೆಗೆ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಆ ಮೂಲಕ ಬಹಳ ದಿನಗಳ ನಂತರ ಚಿತ್ರರಂಗಕ್ಕೆ ರೀ ಎಂಟ್ರಿಕೊಟ್ಟಿದ್ದಾರೆ. ಆಸ್ಕರ್ ಕೃಷ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರೊಂದಿಗೆ ನಾಯಕನಾಗೂ ನಟಿಸಿದ್ದಾರೆ. ಹಿಂದೆ ಮನಸಿನ ಮರೆಯಲಿ ಎಂಬ ಪ್ರೇಮಕಥೆಯ ಸಿನಿಮಾ ನಿರ್ದೇಶಿಸಿದ್ದ ಕೃಷ್ಣ ಅವರ ನಿರ್ದೇಶನದ ಮತ್ತೊಂದು ಮಾಸ್ ಎಂಟರ್‌ಟೈನರ್ ಚಿತ್ರ ಇದಾಗಿದೆ.

ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಈ ಚಿತ್ರದ ನಾಯಕಿಯಾಗಿ ಮಲಯಾಳಿ ಬೆಡಗಿ ಗೌರಿ ನಾಯರ್ ಕಾಣಿಸಿ ಕೊಂಡಿದ್ದಾರೆ.